ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy murder case) ಮಹತ್ವದ ಘಟ್ಟ ತಲುಪಿದ್ದು, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರದೂಷ್‌ನನ್ನು (Pradoosh) ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಪ್ರಕ್ರಿಯೆ ಬಿರುಸುಗೊಂಡಿದೆ. ಈ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಹಾಗೂ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಆತನನ್ನು ನಗರದ ಸೆಷನ್ಸ್ ಕೋರ್ಟ್‌ಗೆ ಕರೆತಂದು ಹಾಜರುಪಡಿಸಿದರು.

ಇತ್ತ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನ್ಯಾಯಾಧೀಶರು ಪ್ರಕರಣದ ವಿಚಾರಣೆ ಆರಂಭಿಸಿ ಆರೋಪಿಗಳ ಹಾಜರಾತಿ ಪರಿಶೀಲನೆ ನಡೆಸಿದರು. ಈ ವೇಳೆ ಕೆಲ ಆರೋಪಿಗಳು ಗೈರಾಗಿದ್ದರು. ಪ್ರದೂಷ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತಿದ್ದಂತೆಯೇ, ನಟ ದರ್ಶನ್ ಪರ ವಕೀಲರು ಆತನ ಮಾಫಿ ಸಾಕ್ಷಿ ಪ್ರಕ್ರಿಯೆಯನ್ನು ಮುಂದೂಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಿಚಾರವನ್ನು ಸಿಸಿಹೆಚ್ ನ್ಯಾಯಾಲಯದ ಗಮನಕ್ಕೆ ತಂದರು. ಹೈಕೋರ್ಟ್‌ನಲ್ಲಿ ತುರ್ತು ವಿಚಾರಣೆಗೆ ಮನವಿ ಮಾಡಲಾಗಿದ್ದು, ಅಲ್ಲಿಯವರೆಗೆ ಪ್ರದೂಷ್‌ನ ಹೇಳಿಕೆ ದಾಖಲಿಸಿಕೊಳ್ಳುವುದನ್ನು ಮುಂದೂಡಬೇಕೆಂದು ಮನವಿ ಮಾಡಿದರು.

ದರ್ಶನ್ ಪರ ವಕೀಲರ ಈ ಮನವಿಗೆ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳ ಇಂತಹ ಮನವಿಯನ್ನು ನ್ಯಾಯಾಲಯ ಈಗಾಗಲೇ ಶನಿವಾರವೇ ತಿರಸ್ಕರಿಸಿದೆ ಎಂದು ನೆನಪಿಸಿದ ಅವರು, ಪ್ರಕರಣದ ತ್ವರಿತ ವಿಚಾರಣೆಗೆ ಆರೋಪಿಗಳ ಪರ ವಕೀಲರೂ ಸಹಕರಿಸಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರ್ದೇಶಿಸಿದೆ ಎಂದು ಪ್ರಬಲವಾಗಿ ವಾದ ಮಂಡಿಸಿದರು. ಸದ್ಯ ನ್ಯಾಯಾಲಯದ ಆವರಣದಲ್ಲಿ ಎರಡೂ ಕಡೆಯ ವಕೀಲರ ನಡುವೆ ತೀವ್ರ ವಾದ-ಪ್ರತಿವಾದ ಮುಂದುವರಿದಿದೆ.






