ನವದೆಹಲಿ : ಕೇಂದ್ರ ಸರ್ಕಾರವು (Central Government) ಜನನ ಮತ್ತು ಮರಣ ಪ್ರಮಾಣಪತ್ರಗಳ (Birth Death Certificate) ವಿತರಣಾ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ‘ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯ್ದೆ-2026’ ಹೆಸರಿನಲ್ಲಿ ಹೊಸ ನಿಯಮಗಳನ್ನು ಪರಿಚಯಿಸಲಾಗಿದ್ದು, ಇವು 2026ರ ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ.

ಇನ್ನು ಮುಂದೆ ಯಾವುದೇ ಜನನ ಅಥವಾ ಮರಣ ಸಂಭವಿಸಿದ 21 ದಿನಗಳ ಒಳಗಾಗಿ ಅಧಿಕೃತವಾಗಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಈ ನಿಗದಿತ 21 ದಿನಗಳ ಅವಧಿಯಲ್ಲಿ ನೋಂದಣಿ ಮಾಡಿಸಿದರೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
1-2 ವರ್ಷಗಳ ವಿಳಂಬಕ್ಕೆ ಮ್ಯಾಜಿಸ್ಟ್ರೇಟ್ ಅನುಮತಿ ಅಗತ್ಯ
ಜನನ ಅಥವಾ ಮರಣ ಸಂಭವಿಸಿ ಒಂದು ವರ್ಷದಿಂದ ಎರಡು ವರ್ಷಗಳ ಒಳಗೆ ನೋಂದಣಿ ಮಾಡಿಸಲು ಮುಂದಾದರೆ ಪ್ರಕ್ರಿಯೆ ಸಾಕಷ್ಟು ಕಠಿಣವಾಗಿರಲಿದೆ. ಇಂತಹ ಸಂದರ್ಭಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ), ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ರಿಂದ ಅಧಿಕಾರ ಪಡೆದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ರ ಆದೇಶ ಕಡ್ಡಾಯವಾಗಿರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಅರ್ಜಿಯ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡ ನಂತರವೇ, ನಿಗದಿತ ಶುಲ್ಕ ಪಾವತಿಸಿಕೊಂಡು ನೋಂದಣಿಗೆ ಅವಕಾಶ ನೀಡಲಾಗುತ್ತದೆ.

ಎರಡು ವರ್ಷ ಮೀರಿದರೆ ನ್ಯಾಯಾಲಯದ ಆದೇಶ ಕಡ್ಡಾಯ
ಘಟನೆ ನಡೆದು ಎರಡು ವರ್ಷಗಳು ಕಳೆದ ನಂತರ ನೋಂದಣಿ ಮಾಡಲು ಕೋರಿದರೆ, ಅದನ್ನು ಅತಿ ದೀರ್ಘ ವಿಳಂಬ ನೋಂದಣಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳಿಗೆ ಅತ್ಯಂತ ಕಠಿಣ ನಿಯಮಗಳನ್ನು ಅನ್ವಯಿಸಲಾಗುತ್ತಿದ್ದು, ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ನ್ಯಾಯಾಲಯದ ಅಧಿಕೃತ ಆದೇಶವಿಲ್ಲದೆ ಪ್ರಕ್ರಿಯೆ ಆರಂಭವಾಗುವುದೇ ಇಲ್ಲ. ನ್ಯಾಯಾಲಯದ ಆದೇಶ ಲಭಿಸಿದ ಬಳಿಕವಷ್ಟೇ ಮುಂದಿನ ನೋಂದಣಿ ಪ್ರಕ್ರಿಯೆ ನಡೆಯಲಿದ್ದು, ಹಿಂದಿನ ಘಟನೆಗಳನ್ನು ನೋಂದಾಯಿಸುವಲ್ಲಿ ಉತ್ತರದಾಯಿತ್ವ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಈ ಬಿಗಿ ಕ್ರಮ ಕೈಗೊಳ್ಳಲಾಗಿದೆ.
ವಿಳಂಬ ಮಾಡದೆ ತಕ್ಷಣ ನೋಂದಣಿ ಮಾಡಿಸಿಕೊಳ್ಳಲು ಸೂಚನೆ
ನಾಗರಿಕರು ಜನನ ಮತ್ತು ಮರಣಗಳನ್ನು ಸಕಾಲದಲ್ಲಿ ನೋಂದಾಯಿಸುವುದನ್ನು ಪ್ರೋತ್ಸಾಹಿಸಲು ಹಾಗೂ ಹಳೆಯ ದಾಖಲೆಗಳ ದುರುಪಯೋಗ ತಡೆಯಲು ಸರ್ಕಾರ ಈ ಬದಲಾವಣೆಗಳನ್ನು ತಂದಿದೆ. ನಿಮ್ಮ ಕುಟುಂಬದಲ್ಲಿ ಯಾರದ್ದಾದರೂ ಜನನ ಅಥವಾ ಮರಣ ಇದುವರೆಗೆ ಅಧಿಕೃತವಾಗಿ ನೋಂದಣಿಯಾಗದಿದ್ದರೆ, ತಡಮಾಡದೆ ಕೂಡಲೇ ಸ್ಥಳೀಯ ಜನನ-ಮರಣ ನೋಂದಣಾಧಿಕಾರಿ, ಪುರಸಭೆ, ಮಹಾನಗರ ಪಾಲಿಕೆ ಅಥವಾ ಸಂಬಂಧಿತ ಕಚೇರಿಯನ್ನು ಸಂಪರ್ಕಿಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಉತ್ತಮ. ಇಲ್ಲವಾದರೆ ಭವಿಷ್ಯದಲ್ಲಿ ಶಿಕ್ಷಣ, ಉದ್ಯೋಗ, ಆಸ್ತಿ ಹಕ್ಕು ಮತ್ತು ಇತರ ಸರ್ಕಾರಿ ಸೇವೆಗಳನ್ನು ಪಡೆಯುವಾಗ ಭಾರಿ ತೊಂದರೆ ಎದುರಾಗುವ ಸಾಧ್ಯತೆಯಿದೆ.
BREAKING : ನೇಪಾಳದಲ್ಲಿ ಭಾರಿ ಮಳೆ ಅಬ್ಬರ: ಪ್ರವಾಹ, ಭೂಕುಸಿತಕ್ಕೆ 21 ಮಂದಿ ಬಲಿ | NEPAL






