ಸಾಂಸ್ಕೃತಿಕ ಸಂಸ್ಥೆಗಳು ಸರ್ವಾಧಿಕಾರದತ್ತ ವಾಲುವುದರಿಂದ ಸಮಾಜ ದಿಕ್ಕು ತಪ್ಪುತ್ತದೆ
ಹೆಚ್ಚು ಓದಿದ ಸ್ಟೋರಿಗಳು
ಪ್ರಜಾಪ್ರಭುತ್ವದ ಮೂಲ ಇರುವುದು ವಿಶಾಲ ಸಮಾಜದ ಆಂತರ್ಯದಲ್ಲಿ. ತಳಮಟ್ಟದ ಜನಸಾಮಾನ್ಯರು ತಮ್ಮ ನಿತ್ಯ ಬದುಕಿನಲ್ಲಿ ಎದುರುಗೊಳ್ಳುವ ಪ್ರತಿಯೊಂದು ಸಂದರ್ಭದಲ್ಲೂ, ದೈನಂದಿನ ಬದುಕಿನ ಪ್ರತಿಯೊಂದು ಚಟುವಟಿಕೆಯಲ್ಲೂ ಈ ಪ್ರಜಾತಂತ್ರದ ಮೌಲ್ಯಗಳು ಬೌದ್ಧಿಕ ನೆಲೆಯಲ್ಲಿ, ಭೌತಿಕ ನೆಲೆಯಲ್ಲಿ ವ್ಯಕ್ತವಾಗುತ್ತಲೇ ಇರುತ್ತವೆ. ಅಕ್ಷರ ಲೋಕದಿಂದಾಚೆಗಿನ ಒಂದು ಬೃಹತ್ ಜನಸಮುದಾಯದ ನಡುವೆಯೇ ಸಾಮಾಜಿಕ ಸಮಾನತೆ, ಸಮನ್ವಯ, ಸೌಹಾರ್ದತೆ ಮತ್ತು ಸೋದರತ್ವವನ್ನು ಬೆಳೆಸಲು ಯತ್ನಿಸುತ್ತಿರುವ ಭಾರತದಂತಹ ಶ್ರೇಣೀಕೃತ ಸಮಾಜದಲ್ಲಿ, ಅಕ್ಷರ ಲೋಕದ ಅಂತರಂಗದಲ್ಲೂ ವಿರೋಧಾಭಾಸಗಳು, ವೈರುಧ್ಯಗಳು ಹೇರಳವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸಾಮಾಜಿಕಾರ್ಥಿಕ ಸಮಾನತೆ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯ ಹಪಹಪಿಯ ನಡುವೆಯೇ ಸಮಾಜದ ಬಲಾಢ್ಯರೊಡನೆ ನಿತ್ಯ ಸೆಣಸಾಡಬೇಕಾದ ಒಂದು ಜಟಿಲ ಪರಿಸ್ಥಿತಿಯನ್ನು ಮಹಿಳೆಯರು, ದಲಿತರು, ಶೋಷಿತರು, ತುಳಿತಕ್ಕೊಳಗಾದವರು, ಅವಕಾಶವಂಚಿತರು ಮತ್ತು ಅಲ್ಪಸಂಖ್ಯಾತರು ಎದುರಿಸುತ್ತಲೇ ಬಂದಿದ್ದಾರೆ.
ಒಂದೆಡೆ ಆಡಳಿತಾರೂಢ ಸರ್ಕಾರಗಳು ಮಹಿಳಾ ಸಬಲೀಕರಣ, ಬಡತನ ನಿರ್ಮೂಲನೆ, ಅಸ್ಪೃಶ್ಯತೆ ನಿವಾರಣೆ, ಜಾತಿ ತಾರತಮ್ಯಗಳ ನಿವಾರಣೆಗಾಗಿ ವಿವಿಧ ಯೋಜನೆಗಳನ್ನು ಚಾಲ್ತಿಯಲ್ಲಿರಿಸುತ್ತಿದ್ದರೆ ಮತ್ತೊಂದು ಬದಿಯಲ್ಲಿ ಈ ಶೋಷಿತ, ದುರ್ಬಲ ವರ್ಗಗಳು ಎದುರಿಸುತ್ತಿರುವ ಅಸಮಾನತೆಯ ನೆಲೆಗಳು ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಸರ್ಕಾರದ ಆಡಳಿತ ನೀತಿಗಳು ಮತ್ತು ಸಬಲೀಕರಣದ ಯೋಜನೆಗಳು ಫಲಾನುಭವಿಗಳಿಗೆ ತಲುಪುವುದಕ್ಕೂ, ಈ ಯೋಜನೆಯು ಒಳಗೊಳ್ಳುವ ಜನಸಮುದಾಯಗಳು ತಮ್ಮ ನಿತ್ಯ ಬದುಕಿನಲ್ಲಿ ಸಾಮಾಜಿಕ ಘನತೆ ಮತ್ತು ಗೌರವದೊಂದಿಗೆ ಬಾಳುವುದಕ್ಕೂ ನಡುವೆ ಇರುವ ಅಂತರವನ್ನು ಗಮನಿಸದೆ ಹೋದರೆ, ಇಡೀ ಸಮಾಜವೇ ಭ್ರಮಾಧೀನವಾಗಿಬಿಡುತ್ತದೆ. ಸಾಂವಿಧಾನಿಕವಾಗಿ ಸರ್ಕಾರಗಳು ಕೈಗೊಳ್ಳುವ ಕ್ರಿಯಾಶೀಲ ಯೋಜನೆಗಳು ಸಾಕಾರಗೊಳ್ಳುವುದು ತಳಮಟ್ಟದ ವಾಸ್ತವ ಬದುಕಿನ ಚಿತ್ರಣದಲ್ಲಿ ಎನ್ನುವುದನ್ನು ಸರ್ಕಾರಗಳೂ, ಜನಪ್ರತಿನಿಧಿಗಳೂ ಗಮನಿಸುತ್ತಲೇ ಇರಬೇಕು.

ಸಾಮಾಜಿಕ ವೈರುಧ್ಯಗಳ ನಡುವೆ
ಈ ವೈರುಧ್ಯದ ಸ್ಪಷ್ಟ ನಿದರ್ಶನವನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನಲ್ಲಿ ನಡೆದಿರುವ ಸಾಮಾಜಿಕ ಬಹಿಷ್ಕಾರದ ಘಟನೆಯಲ್ಲಿ ಗುರುತಿಸಬಹುದು. ಒಂದು ಇಡೀ ಸಮುದಾಯದ ಮೇಲೆ ಬಹಿಷ್ಕಾರ ಹೇರುವ ಹಕ್ಕು ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ಜಾತಿ ಸಂಘಟನೆಗಾಗಲೀ , ಧಾರ್ಮಿಕ ಸಂಸ್ಥೆಗಾಗಲೀ ಇರುವುದಿಲ್ಲ. ಆದರೂ ಜಾತಿ ಪಂಚಾಯತ್‌ಗಳು, ವಿಶೇಷವಾಗಿ ಉತ್ತರ ಭಾರತದ ಖಾಪ್ ಪಂಚಾಯತ್‌ಗಳು ಅನಧಿಕೃತವಾಗಿ ಇಂತಹ ಬಹಿಷ್ಕಾರ ನಿಷೇಧಗಳನ್ನು ಹೇರುತ್ತಲೇ ಬಂದಿವೆ. ಈ ಸಾಂಸ್ಥಿಕ ಸರ್ವಾಧಿಕಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಗಳೂ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎನ್ನುವುದು ವಾಸ್ತವ. ಕೊಳ್ಳೆಗಾಲದಲ್ಲಿ ಪರಿಶಿಷ್ಟ ಜಾತಿಯ ಯುವತಿಯನ್ನು ವಿವಾಹವಾದ ಕಾರಣಕ್ಕೆ ಉಪ್ಪಾರ ಸಮುದಾಯದ ಯುವಕನ ಕುಟುಂಬಕ್ಕೆ ಆ ಜಾತಿಯ ಮುಖಂಡರು ಸಾಮಾಜಿಕ ಬಹಿಷ್ಕಾರ ಹೇರಿರುವುದು ಸಾಕಷ್ಟು ವಿವಾದ ಸೃಷ್ಟಿಸಿದೆ. ಗ್ರಾಮದ ನ್ಯಾಯ ಪಂಚಾಯತಿಯಲ್ಲಿ ಅಂತರ್ಜಾತಿ ವಿವಾಹವಾದ ಯುವಕನ ಕುಟುಂಬಕ್ಕೆ ಆರು ಲಕ್ಷ ರೂಗಳ ದಂಡ ವಿಧಿಸಿರುವುದೂ ವರದಿಯಾಗಿದೆ. ಒಂದೆಡೆ ಸರ್ಕಾರವು ಅಂತರ್ಜಾತಿ ವಿವಾಹವಾಗುವ ದಂಪತಿಗಳಿಗೆ ಹಣಕಾಸು ನೆರವು ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವಂತೆಯೇ ಮತ್ತೊಂದು ಬದಿಯಲ್ಲಿ ಸಮಾಜದೊಳಗಿನ ಅಸಾಂವಿಧಾನಿಕ ಗುಂಪುಗಳು ಈ ರೀತಿ ಬಹಿಷ್ಕಾರ ಹೇರುವುದು, ದಂಡ ವಿಧಿಸುವುದು ಏನನ್ನು ಸೂಚಿಸುತ್ತದೆ ? ಸಂವಿಧಾನದ ಚೌಕಟ್ಟನ್ನು ಮೀರಿದ ನ್ಯಾಯ ವ್ಯವಸ್ಥೆ ನಮ್ಮ ಸಮಾಜದಲ್ಲಿ ಜಾರಿಯಲ್ಲಿದೆಯೇ ಎಂಬ ಪ್ರಶ್ನೆ ಇಡೀ ಸಮಾಜವನ್ನು ಕಾಡಲೇಬೇಕಿದೆ. ಸರ್ಕಾರಗಳೂ ಈ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕಿದೆ.
ಮತ್ತೊಂದು ಘಟನೆಯಲ್ಲಿ, ರಾಣೆಬೆನ್ನೂರು ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಗಳ ಎರಡು ಮನೆಗಳಿಗೆ ಸವರ್ಣೀಯರು ಬೆಂಕಿ ಹಚ್ಚಿರುವುದಾಗಿ ವರದಿಯಾಗಿದೆ. ತಡರಾತ್ರಿ ಮನೆಯಲ್ಲಿ ಜನರು ಮಲಗಿದ್ದ ವೇಳೆಯಲ್ಲೇ ಬೆಂಕಿ ಹಚ್ಚಿರುವ ದಾರುಣ ಘಟನೆ ಪ್ರಜ್ಞಾವಂತ ಸಮಾಜವನ್ನು ಬಡಿದೆಬ್ಬಿಸಬೇಕಿದೆ. ಗ್ರಾಮದಲ್ಲಿ ನಡೆಯುವ ದ್ಯಾಮವ್ವ ದೇವಿಯ ಜಾತ್ರೆ ಸಂದರ್ಭದಲ್ಲಿ ಮೆರವಣಿಗೆ ದಲಿತ ಕಾಲೋನಿಯ ಮೂಲಕ ಹಾದು ಹೋಗುವಾಗ ಚಿಕ್ಕ ಮಕ್ಕಳು, ಯುವಕರು ಕುಣಿಯಲು ಮುಂದಾಗಿದ್ದೇ ಈ ಘಟನೆಗೆ ಕಾರಣವಾಗಿದೆ. ಜಾತ್ರೆಗೆ ದಲಿತ ಕುಟುಂಬಗಳು ಸೇರುವಂತಿಲ್ಲ ಎಂಬ ಅಲಿಖಿತ ನಿರ್ಬಂಧವೂ ಈ ಗ್ರಾಮದಲ್ಲಿ ಜಾರಿಯಲ್ಲಿರುವುದು ನಮ್ಮ ಸಾಂವಿಧಾನಿಕ ಚೌಕಟ್ಟನ್ನೇ ಅಣಕಿಸುವಂತಿಲ್ಲವೇ ? ಸಂವಿಧಾನದ 17ನೆಯ ವಿಧಿ ಅಸ್ಪೃಶ್ಯತೆಯನ್ನು ನಿಷೇಧಿಸುತ್ತದೆ. 1955ರಲ್ಲೇ ಜಾರಿಯಾದ ಅಸ್ಪೃಶ್ಯತೆ (ಅಪರಾಧಗಳು) ಕಾಯ್ದೆಯು 1976ರಲ್ಲಿ ನಾಗರಿಕ ಹಕ್ಕುಗಳ ಕಾಯ್ದೆ ಎಂದು ರೂಪಾಂತರ ಹೊಂದಿದ್ದು ಇಂದಿಗೂ ಜಾರಿಯಲ್ಲಿದೆ. 2015ರಲ್ಲಿ ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಅಸ್ಪೃಶ್ಯತಾ ನಿವಾರಣೆ) ತಿದ್ದುಪಡಿ ಕಾಯ್ದೆಯನ್ನು ಸಹ ಜಾರಿಗೊಳಿಸಿದೆ.
ಈ ಕಾಯ್ದೆ ಕಾನೂನುಗಳ ಹೊರತಾಗಿಯೂ ನಮ್ಮ ಸುಶಿಕ್ಷಿತ ಸಮಾಜದ ನಡುವೆಯೇ ಸಾಮಾಜಿಕ ಬಹಿಷ್ಕಾರ, ದಂಡ ವಿಧಿಸುವುದು, ದೇವಾಲಯ ಪ್ರವೇಶ ನಿಷೇಧ, ಅಂತರ್ಜಾತಿ ವಿವಾಹ ನಿಷೇಧ ಮತ್ತಿತರ ಅಸ್ಪೃಶ್ಯತೆಯ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಸರ್ಕಾರಗಳು ತಮ್ಮ ಯೋಜನೆಗಳ ಫಲಾನುಭವಿಗಳತ್ತ ನೋಡುವ ಮುನ್ನ, ಈ ಸಮುದಾಯಗಳಲ್ಲೇ ಅಸ್ಪೃಶ್ಯತೆ, ತಾರತಮ್ಯ, ದೌರ್ಜನ್ಯ, ಚಿತ್ರಹಿಂಸೆ ಮತ್ತು ಕ್ರೂರ ಬಹಿಷ್ಕಾರದಂತಹ ಚಟುವಟಿಕೆಗಳು ಇಂದಿಗೂ ನಿರ್ಭೀತಿಯಿಂದ ಜಾರಿಯಲ್ಲಿರುವುದನ್ನು ಗಮನಿಸಬೇಕಿದೆ. ಯೋಜನೆಗಳ ಫಲಾನುಭವಿಗಳಿಗೂ, ಈ ದೌರ್ಜನ್ಯಗಳನ್ನು ಎದುರಿಸುವ ಸಂತ್ರಸ್ತರಿಗೂ ನಡುವೆ ಇರುವ ಅಪಾರ ಅಂತರವನ್ನು ಗಮನಿಸದೆ ಹೋದರೆ ಭಾರತದ ಜಾತಿಪೀಡಿತ ಸಮಾಜದಲ್ಲಿ ಸಮಾನಾಂತರ ನ್ಯಾಯ ವ್ಯವಸ್ಥೆ ಮತ್ತು ನಿರ್ಬಂಧಕ ಕಾನೂನುಗಳು ಶಾಶ್ವತವಾಗಿ ಉಳಿದುಬಿಡುತ್ತವೆ. ಸಾಂವಿಧಾನಿಕವಾಗಿ ಸಾಮಾಜಿಕ ಸಮಾನತೆಯನ್ನು ಸಾಧಿಸಲು ಹತ್ತು ಹಲವಾರು ಕಾಯ್ದೆ ಕಾನೂನುಗಳಿದ್ದರೂ, ಇಂದಿಗೂ ಸಹ ಬಹುಸಂಖ್ಯೆಯ ಜನತೆಗೆ ಸಮಾನತೆ ಮತ್ತು ಸಮಾನಘನತೆ ಮರೀಚಿಕೆಯಾಗಿರುವುದು ವರ್ತಮಾನದ ದುರಂತ.
ಅಕ್ಷರ ಲೋಕದ ಜವಾಬ್ದಾರಿ
ಏಳು ದಶಕಗಳ ಸ್ವತಂತ್ರ ಆಳ್ವಿಕೆಯ ಈ ವೈಫಲ್ಯವನ್ನು ಎತ್ತಿತೋರುವುದಷ್ಟೇ ಅಲ್ಲದೆ ಸಮಾಜದ ಎಲ್ಲ ಸ್ತರಗಳಲ್ಲೂ ನುಸುಳಿರುವ ಮತ್ತು ಆಂತರಿಕವಾಗಿ ಉಲ್ಬಣಿಸುತ್ತಲೇ ಇರುವ ಅಸಮಾನತೆಯ ನೆಲೆಗಳನ್ನು ಗುರುತಿಸಿ ಒಂದು ಆರೋಗ್ಯಕರ ಸಮಾಜಕ್ಕೆ ಪೂರಕವಾದ ಮಾರ್ಗದರ್ಶನ ನೀಡುವ ಜವಾಬ್ದಾರಿ ಅಕ್ಷರ ಲೋಕದ ಮೇಲಿರುತ್ತದೆ. ಸಾಂಸ್ಥಿಕವಾಗಿ ಈ ಜವಾಬ್ದಾರಿಯನ್ನು ನಿರ್ವಹಿಲೆಂದೇ ಅಕ್ಷರ ಲೋಕದ ಪ್ರತಿನಿಧಿಗಳು ಕೆಲವು ಸಂಸ್ಥೆಗಳನ್ನೂ ಸ್ಥಾಪಿಸಿಕೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಅಕಾಡೆಮಿ, ಜನಪದ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಭಾಷಾ ಪ್ರಾಧಿಕಾರ, ರಂಗಾಯಣ ಇವೇ ಮುಂತಾದ ಸ್ವಾಯತ್ತ ಸಂಸ್ಥೆಗಳು ಜನಸಾಮಾನ್ಯರ ಆಶಯಗಳನ್ನು ಬಿಂಬಿಸುವ ಒಂದು ಉನ್ನತಾದರ್ಶದ ಬೌದ್ಧಿಕ ವೇದಿಕೆಗಳಾಗಿ ಕಾರ್ಯನಿರ್ವಹಿಸಬೇಕಿದೆ. ಕರ್ನಾಟಕದ ಮಟ್ಟಕ್ಕೆ ಹೇಳುವುದಾದರೆ ನೂರು ವರ್ಷದ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಈ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.
ಜಾತಿಮತಗಳ ಹಂಗಿಲ್ಲದೆ, ಎಡಬಲದ ಪಂಥೀಯ ಸೋಂಕಿಲ್ಲದೆ ಅಕ್ಷರ ಲೋಕದ ಪರಿಚಾರಕರನ್ನು ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತಿಗಳ ಒಕ್ಕೂಟ ಎಂದು ಭಾವಿಸಲಾಗುವುದಿಲ್ಲ. ಸಾಹಿತ್ಯ ಲೋಕದ ಪರಿಚಾರಕರ ಮುಖೇನ ಕರ್ನಾಟಕದ ಜನಸಾಮಾನ್ಯರ ನಿತ್ಯ ಬದುಕಿನ ಸವಾಲುಗಳನ್ನು ಗುರುತಿಸುವ, ಸಮಸ್ಯೆಗಳನ್ನು ಎದುರಿಸುವ ಮತ್ತು ಒಂದು ಸೌಹಾರ್ದಯುತ ಸಮಾಜವನ್ನು ನಿರ್ಮಿಸಲು ಅತ್ಯವಶ್ಯವಾದ ಭೂಮಿಕೆಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಕಸಾಪ ಹೊತ್ತುಕೊಂಡುಬಂದಿದೆ. ಎಲ್ಲ ರೀತಿಯ ಅಪಸವ್ಯಗಳು, ಅಪಭ್ರಂಶಗಳು, ಅಡೆತಡೆಗಳನ್ನು ನಿವಾರಿಸಿಕೊಂಡು ಶತಮಾನಕ್ಕೂ ಹೆಚ್ಚು ಕಾಲ ಬದುಕುಳಿದಿರುವ ಕಸಾಪ ತನ್ನ ಜವಾಬ್ದಾರಿಯನ್ನು ಅರಿತಿದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದ್ದರೆ ಅಚ್ಚರಿಯೇನಿಲ್ಲ. ಸುತ್ತಲಿನ ಸಮಾಜದಲ್ಲಿ ಅಸಮಾನತೆ, ಶೋಷಣೆ, ದೌರ್ಜನ್ಯ, ಅಸ್ಪೃಶ್ಯತೆಯಂತಹ ಹೀನಾಚರಣೆಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ ದಿವ್ಯ ಮೌನ ವಹಿಸಿರುವ ಸಾಹಿತ್ಯ ಲೋಕದ ಪ್ರಧಾನ ವಲಯವನ್ನು ಕುಂಭಕರ್ಣ ನಿದ್ರೆಯಿಂದ ಎಚ್ಚರಿಸುವ ಜವಾಬ್ದಾರಿಯೂ ಕಸಾಪದ ಮೇಲಿದೆಯಲ್ಲವೇ ?
ಸಾಹಿತ್ಯ ಮತ್ತು ಅಕ್ಷರ ಲೋಕದ ಪರಿಚಾರಕರ ಒಕ್ಕೂಟ ಎಂದರೆ ಕೇವಲ ಸನ್ಮಾನ, ಸಮಾರಂಭ, ಹಾರ, ತುರಾಯಿ, ಜರತಾರಿ ಪೇಟಗಳಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳುವ ಸಂಸ್ಥೆಯಾಗಬಾರದಲ್ಲವೇ ? ಮೇಲೆ ಉಲ್ಲೇಖಿಸಿದಂತಹ ಹಲವು ಘಟನೆಗಳು ಪದೇಪದೇ ಸಂಭವಿಸುತ್ತಲೇ ಇದ್ದರೂ ಸಾಹಿತ್ಯದ ಪ್ರಧಾನ ಪರಿಚಾರಕರು ಏಕೆ ಮೌನ ವಹಿಸಿದ್ದಾರೆ ಎಂಬ ಜಿಜ್ಞಾಸೆ ಕಸಾಪವನ್ನು ಕಾಡಲೇಬೇಕಲ್ಲವೇ ? ಹಾಗೆ ಕಾಡಿದ್ದರೆ ತಮ್ಮ ನಿಷ್ಕ್ರಿಯತೆಯನ್ನೇ ನಿರ್ಲಿಪ್ತತೆ ಎಂದು ಭಾವಿಸಿ ಮೌನಕ್ಕೆ ಶರಣಾಗಿರುವ ಸಾಹಿತ್ಯಕ ಮನಸುಗಳನ್ನು ಬಡಿದೆಬ್ಬಿಸುವುದು ಸಾಹಿತ್ಯ ಪರಿಷತ್ತಿನ ಆದ್ಯತೆಯಾಗಬೇಕು. ಈ ಸಿಕ್ಕುಗಳ ನಡುವೆ ಸೃಷ್ಟಿಯಾಗುವ ಜನಮುಖಿ ಸಾಹಿತ್ಯಕ ಪ್ರಯತ್ನಗಳನ್ನು ಗುರುತಿಸಿ, ಉತ್ತೇಜಿಸಿ, ಮುನ್ನೆಲೆಗೆ ತರುವ ಪ್ರಯತ್ನಗಳಿಗೆ ಕಸಾಪ ವೇದಿಕೆಯಾಗಬೇಕು. ಸಾಹಿತ್ಯ ಸಮ್ಮೇಳನಗಳಲ್ಲಿ ಈ ಪ್ರಯತ್ನಗಳು ನಡೆದರೂ ಅವು ಕ್ಷಣಿಕ ರಂಜನೆಯ ಸರಕುಗಳಂತೆ ಮರೆಯಾಗಿಬಿಡುತ್ತವೆ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸ್ವಾಯತ್ತತೆ, ಬೌದ್ಧಿಕ ಸ್ವಾತಂತ್ರ್ಯ, ಸಾಂವಿಧಾನಿಕ ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು, ಕನ್ನಡ ಸಾಹಿತ್ಯ ವಲಯವನ್ನು ಕ್ರಿಯಾಶೀಲಗೊಳಿಸುವತ್ತ ಗಮನಹರಿಸಬೇಕಲ್ಲವೇ ? ಇದು ಸಾಧ್ಯವಾಗಬೇಕಾದರೆ ಕಸಾಪದಂತಹ ಸ್ವಾಯತ್ತ ಸಂಸ್ಥೆಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿ, ರಕ್ಷಿಸಿ, ಬೆಳೆಸಿ, ಪೋಷಿಸುವ ವಾತಾವರಣ ಸೃಷ್ಟಿಯಾಗಬೇಕು.
ಸಾಹಿತ್ಯ ಮತ್ತು ಪ್ರಜಾತಂತ್ರದ ನೆಲೆಗಳು
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಈ ಜವಾಬ್ದಾರಿಯನ್ನೇ ಮರೆತು ನಡೆಯುತ್ತಿರುವುದು ಢಾಳಾಗಿ ಕಾಣಿಸುತ್ತದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಷಿ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಕನ್ನಡದ ಮಹಿಳಾ ಲೋಕಕ್ಕೆ ಅಪೂರ್ವ ( !!! ) ಕೊಡುಗೆಯನ್ನು ನೀಡುವ ಮೂಲಕ ಹೊಸ ದಿಕ್ಕಿನತ್ತ ಸಾಗುವ ಸೂಚನೆಗಳನ್ನು ನೀಡಿದ್ದಾರೆ. ದೂರದರ್ಶನದ ಸಹಾಯಕ ನಿರ್ದೇಶಕಿ ನಿರ್ಮಲಾ ಎಲಿಗಾರ್ ಅವರನ್ನು ಕ್ಷುಲ್ಲಕ ಕಾರಣಗಳಿಗಾಗಿ ಅಮಾನತು ಮಾಡುವ ಮೂಲಕ ತಮ್ಮ ಅಪ್ರಜಾಸತ್ತಾತ್ಮಕ-ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದ್ದಾರೆ. ಹಾವೇರಿ ಸಮ್ಮೇಳನದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ ಎದ್ದುಕಾಣುವಂತಿದ್ದರೂ, ಮಹಿಳಾ ಸಾಹಿತಿಗಳು ಬದ್ಧತೆಯೊಂದಿಗೆ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದರು. ಆದರೆ ಈ ಸಂದರ್ಭದಲ್ಲಿ ಮಹಿಳಾ ಲೇಖಕಿಯರಿಗೆ ಸಮರ್ಪಕವಾದ ವಸತಿ ಸೌಲಭ್ಯ ಒದಗಿಸಿದೆ ಇದ್ದುದನ್ನು ಪ್ರಶ್ನಿಸಿದ ನಿರ್ಮಲಾ ಎಲಿಗಾರ್ ಅವರನ್ನು ಅಮಾನತು ಮಾಡಿರುವುದು ಈ ನಿರಂಕುಶ ಧೋರಣೆಯ ದ್ಯೋತಕವಾಗಿದೆ.
ತಮಗೆ ಅನ್ಯಾಯವಾದಾಗ ಪ್ರತಿರೋಧ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದೆ. ಈ ಹಕ್ಕು ಕಸಾಪದಂತಹ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗೂ ವಿಸ್ತರಿಸುತ್ತದೆ. ಪ್ರತಿರೋಧವನ್ನು ವ್ಯಕ್ತಪಡಿಸಲು ಯಾವುದೇ ವಿಧಾನ ಅಥವಾ ಮಾದರಿಯನ್ನು ರೂಪಿಸಲಾಗುವುದಿಲ್ಲ. ಪ್ರತಿ ವ್ಯಕ್ತಿಯೂ ತನ್ನದೇ ಆದ ರೀತಿಯಲ್ಲಿ ಮೌಖಿಕವಾಗಿ, ಭೌತಿಕವಾಗಿ, ಬೌದ್ಧಿಕ ನೆಲೆಯಲ್ಲಿ ಪ್ರತಿರೋಧಿಸುವ ಹಕ್ಕು ಪಡೆದಿರುವುದು ಸಹಜ. ಹಾಗೆಯೇ ನಿರ್ಮಲಾ ಎಲಿಗಾರ್ ತಮ್ಮ ಪ್ರತಿರೋಧವನ್ನು ಬಹಿರಂಗವಾಗಿಯೇ ತೋರಿದ್ದು ದೂರದರ್ಶನದಲ್ಲಿ ಕಸಾಪದ ಧೋರಣೆಯ ವಿರುದ್ಧ ಒಂದು ನಿಮಿಷದ ಮೌನಾಚರಣೆಯನ್ನೂ ಮಾಡಿದ್ದಾರೆ. ಇದನ್ನೇ ಮಹಾಪರಾಧ ಎಂದು ಪರಿಗಣಿಸಿರುವ ಮಹೇಶ್ ಜೋಷಿ ನಿರ್ಮಲಾ ಅವರು “ ಪರಿಷತ್ತಿನ ಘನತೆ ಗೌರವ ಮತ್ತು ಧ್ಯೇಯೋದ್ದೇಶಗಲಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ” ಎಂದು ಆರೋಪಿಸಿ, ಅವರನ್ನು ಅಮಾನತುಗೊಳಿಸಿ, ಅವರಿಗೆ ನೀಡಲಾಗಿದ್ದ ಪಂಕಜಶ್ರೀ ಸಾಹಿತ್ಯ ಪ್ರಶಸ್ತಿಯನ್ನು ಹಿಂಪಡೆದಿರುವುದು ಸರ್ವಾಧಿಕಾರದ ಪರಾಕಾಷ್ಠೆ ಎಂದಷ್ಟೇ ಹೇಳಲು ಸಾಧ್ಯ.
ನಿರ್ಮಲಾ ಎಲಿಗಾರ್ ಅವರಿಗೆ ಪ್ರಶಸ್ತಿ ಲಭಿಸಿರುವುದು ಅವರ ಸಾಹಿತ್ಯ ಕೃಷಿಗಾಗಿಯೇ ಹೊರತು, ಪರಿಷತ್ತಿನ ನಿಯಮಾವಳಿಗಳನ್ನು ಅನುಸರಿಸಬೇಕಾದ ಮಾನದಂಡಗಳಿಗಾಗಿ ಅಲ್ಲ. ಇಂತಹ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೇ ಕಸಾಪ ಶತಮಾನವನ್ನು ಪೂರೈಸಿದೆ. ಬಂಡಾಯದ ದನಿಗಳನ್ನು ಎದುರಿಸುತ್ತಲೇ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಪ್ರಪ್ರಥಮ ಬಾರಿಗೆ ಪರಿಷತ್ತಿನ ಇತಿಹಾಸದಲ್ಲಿ, ಸದಸ್ಯ ಸಾಹಿತಿಯೊಬ್ಬರಿಗೆ ನೀಡಿದ ಪ್ರಶಸ್ತಿಯನ್ನು ಹಿಂಪಡೆದಿರುವ ಮತ್ತು ಒಂದು ಪ್ರತಿರೋಧಕ್ಕೆ ಪ್ರತಿಯಾಗಿ ಅಜೀವ ಸದಸ್ಯತ್ವನ್ನು ಅಮಾನತುಗೊಳಿಸಿರುವ ಪ್ರಸಂಗಕ್ಕೆ ಮಹೇಶ್ ಜೋಷಿ ಕಾರಣರಾಗಿದ್ದಾರೆ. ಇಲ್ಲಿ ಪರಿಷತ್ತಿನ ಗೌರವ ಮತ್ತು ಘನತೆಗೆ ಚ್ಯುತಿ ತಂದಿರುವುದು ನಿರ್ಮಲಾ ಎಲಿಗಾರ್ ಅವರ ಪ್ರತಿರೋಧ ಅಲ್ಲ, ಕಸಾಪ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ.
21ನೆಯ ಶತಮಾನದಲ್ಲೂ ಭಾರತೀಯ ಸಮಾಜ ತನ್ನ ಪ್ರಾಚೀನ ನಡವಳಿಕೆಗಳಿಂದ ಪಾರಾಗಿಲ್ಲ ಎನ್ನುವುದನ್ನು ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆಯ ಆಚರಣೆಗಳು ಪದೇಪದೇ ನಿರೂಪಿಸುತ್ತಲೇ ಇವೆ. ಈ ಸಾಮಾಜಿಕ ಪಿಡುಗುಗಳನ್ನು ಅಳಿಸಿಹಾಕುವ ದೊಡ್ಡ ಜವಾಬ್ದಾರಿ ಅಕ್ಷರ ಲೋಕದ ಮೇಲೆ, ವಿಶೇಷವಾಗಿ ಸಾಹಿತ್ಯ, ಕಲೆ, ರಂಗಭೂಮಿ ಮುಂತಾದ ಸಾಂಸ್ಕೃತಿಕ ಅಭಿವ್ಯಕ್ತಿಯ ಸಂಸ್ಥೆಗಳ ಮೇಲಿರುತ್ತದೆ. ಸಂಪೂರ್ಣ ಸ್ವಾಯತ್ತತೆ ಹೊಂದಿರುವ ಈ ಸಾಂಸ್ಕೃತಿಕ-ಸಾಹಿತ್ಯಕ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಅಮಾನವೀಯ-ಪ್ರಾಚೀನ-ಜೀವ ವಿರೋಧಿ ಮನಸ್ಥಿತಿಯನ್ನು ನಿವಾರಿಸುವ ಸಾಹಿತ್ಯಕ ಮನಸುಗಳಿಗೆ, ಅಭಿವ್ಯಕ್ತಿಗೆ ವೇದಿಕೆಯಾಗಿ ಒಂದು ಸುಂದರ ಸಮಾಜದ ನಿರ್ಮಾಣದ ಪರಿವ್ರಾಜಕ ಸಂಸ್ಥೆಯಾಗಬೇಕಿದೆ. ಈ ನಿಟ್ಟಿನಲ್ಲಿ ಸಂವೇದನಾಶೀಲ ಸಾಹಿತ್ಯ ಕೃಷಿಗೆ ಫಲವತ್ತಾದ ಭೂಮಿಕೆಯನ್ನು ಕಸಾಪ ಸೃಷ್ಟಿಸಬೇಕಿದೆ. ದುರಾದೃಷ್ಟವಶಾತ್ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ-ಸಮ್ಮಾನ-ಸನ್ಮಾನ-ಸಮ್ಮೇಳನಗಳಿಗಷ್ಟೇ ಸೀಮಿತವಾಗಿದೆ.
ನಾವು ಬದುಕಬೇಕಾದ ಸಮಾಜದಲ್ಲಿನ ಸಾಮಾಜಿಕ ಪಿಡುಗುಗಳನ್ನು, ಅಮಾನುಷ ಧೋರಣೆಗಳನ್ನು ಕಂಡೂಕಾಣದಂತಿರುವ ಸಾಹಿತ್ಯ ಲೋಕವನ್ನು ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇತರ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳು ಕರ್ನಾಟಕವನ್ನು “ ಸರ್ವ ಜನಾಂಗದ ಶಾಂತಿಯ ತೋಟ ”ದಂತೆ ಸಮಾನತೆ, ಸಮನ್ವಯ, ಸೌಹಾರ್ದತೆ, ಮಾನವೀಯತೆ ಮತ್ತು ಸಂವೇದನಾಶೀಲ ಸಮಾಜವಾಗಿ ನಿರ್ಮಿಸುವ ಕೈಂಕರ್ಯದಲ್ಲಿ ಮುಂಚೂಣಿಯಲ್ಲಿರಬೇಕಾಗುತ್ತದೆ. ಈ ತೋಟವನ್ನು ಕಾಪಾಡುವ ಮಾಲಿಗಳಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಆಡಳಿತ ವ್ಯವಸ್ಥೆಯಲ್ಲಿ, ಆಳ್ವಿಕೆಯ ನೆಲೆಗಳಲ್ಲಿ ಮತ್ತು ಬಾಹ್ಯ ಸಮಾಜದ ಎಲ್ಲ ಸ್ತರಗಳಲ್ಲೂ ಜಾತಿ-ಮತ-ಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಳ ನಿರಂಕುಶ ಧೋರಣೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕಸಾಪ ಮುಂತಾದ ಸಂಸ್ಥೆಗಳು ಈ ಧೋರಣೆಯನ್ನು ಹೋಗಲಾಡಿಸಲು ಶ್ರಮಿಸಬೇಕಾಗಿದೆ. ದುರಂತ ಎಂದರೆ ಕನ್ನಡ ಸಾಹಿತ್ಯ ಪರಿಷತ್ತು ಒಳಗೊಂಡಂತೆ ಎಲ್ಲ ಸಂಸ್ಥೆಗಳೂ ಸ್ವತಃ ಸರ್ವಾಧಿಕಾರಿ ಧೋರಣೆಗೆ ಬಲಿಯಾಗುತ್ತಿವೆ. ಇದನ್ನು ಕಾಲದ ದುರಂತ ಎನ್ನೋಣವೇ ?