ಭಾಗ 9
“ ಒಬ್ಬ ಪುರುಷನಿಗೆ ಶಿಕ್ಷಣ ನೀಡಿದರೆ ಅದು ವ್ಯಕ್ತಿಯನ್ನು ಸುಶಿಕ್ಷಿತನನ್ನಾಗಿಸುತ್ತದೆ ಆದರೆ ಒಬ್ಬ ಮಹಿಳೆಗೆ ನೀಡುವ ಶಿಕ್ಷಣ ಅದು ಒಂದು ಕುಟುಂಬವನ್ನು, ದೇಶವನ್ನು ಸುಶಿಕ್ಷಿತಗೊಳಿಸುತ್ತದೆ ” ಅಮೆರಿಕದ ಮಾನವ ಹಕ್ಕು ಕಾರ್ಯಕರ್ತ ಮಾಲ್ಕಮ್ ಎಕ್ಸ್ ಮಾಡಿದ ಈ ಘೋಷಣೆ ಇಂದಿಗೂ ಸಹ ವಿವಿಧ ಸ್ವರೂಪಗಳಲ್ಲಿ ಧ್ವನಿಸುತ್ತಲೇ ಇದೆ. ಡಾ. ಬಿ.ಆರ್. ಅಂಬೇಡ್ಕರ್ ಸಹ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಲೇ “ ಒಂದು ಸಮುದಾಯದ ಪ್ರಗತಿಯನ್ನು ನಾನು ಅಳೆಯುವುದೇ ಆದರೆ , ಆ ಸಮಾಜದಲ್ಲಿ ಮಹಿಳೆಯರು ಸಾಧಿಸಿರುವ ಅಭಿವೃದ್ಧಿಯನ್ನು ಮಾನದಂಡವಾಗಿ ಪರಿಗಣಿಸುತ್ತೇನೆ ” ಎಂದು ಹೇಳಿದ್ದನ್ನು ಸ್ಮರಿಸಬಹುದು. ಆಧುನಿಕ ಜಗತ್ತಿನ ಬಹುಪಾಲು ತತ್ವಶಾಸ್ತ್ರಜ್ಞರು, ತತ್ವಜ್ಞಾನಿಗಳು ಹಾಗೂ ಬೌದ್ಧಿಕ ವಲಯದ ಪುರೋಗಾಮಿ ಚಿಂತಕರು ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ಇತಿಹಾಸದುದ್ದಕ್ಕೂ ಗಮನಿಸಬಹುದು. ಭಾರತವೂ ಇದಕ್ಕೆ ಹೊರತಾದುದಲ್ಲ. ಮಹಿಳಾ ಸಾಕ್ಷರತೆಯಲ್ಲಿ ಭಾರತ ಸಾಕಷ್ಟು ಮುನ್ನಡೆ ಸಾಧಿಸಿದ್ದರೂ, ಅಕ್ಷರ ಜ್ಞಾನಕ್ಕೂ ಉನ್ನತ ಜ್ಞಾನಾರ್ಜನೆಗೂ ನಡುವೆ ಇರುವ ಕಂದರದಲ್ಲಿ ಮಹಿಳಾ ಸಮೂಹ ಕಳೆದುಹೋಗುತ್ತಲೇ ಇರುವುದನ್ನು ನಮ್ಮ ಸಾಂಸ್ಥಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಪ್ರಾಥಮಿಕ ಹಂತದಿಂದ ಪದವಿ ತರಗತಿಯವರೆಗೆ ನಡೆಯುವ ಮಹಿಳಾ ಶಿಕ್ಷಣ, ಉನ್ನತ ಶಿಕ್ಷಣದ ಹಂತದಲ್ಲಿ ನೇಪಥ್ಯಕ್ಕೆ ಸರಿದುಬಿಡುವ ವಿಡಂಬನೆಯನ್ನು ಇಂದಿಗೂ ಎದುರಿಸುತ್ತಲೇ ಇದ್ದೇವೆ.
ಆದಾಗ್ಯೂ 2014-2021ರ ಅವಧಿಯಲ್ಲಿ ಮಹಿಳೆಯರ ಶಿಕ್ಷಣ ಪ್ರವೇಶಾತಿ ಪ್ರಮಾಣ ಶೇ 28ರಷ್ಟು ಹೆಚ್ಚಾಗಿದ್ದು ಒಟ್ಟು ಪ್ರವೇಶಾತಿಯ ಅನುಪಾತದಲ್ಲಿ ನೋಡಿದರೆ 2014ರಲ್ಲಿ ಶೇ 45ರಷ್ಟಿದ್ದುದು 2021ರಲ್ಲಿ ಶೇ 49ರಷ್ಟಾಗಿರುವುದು ಆಶಾದಾಯಕ ಬೆಳವಣಿಗೆ. ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಪ್ರವೇಶಾತಿ 2019-20ರ ಶೈಕ್ಷಣಿಕ ವರದಿಯಲ್ಲಿ ಮೊಟ್ಟಮೊದಲ ಬಾರಿ ನಾಲ್ಕು ಕೋಟಿ ದಾಟಿರುವುದೂ ಸಹ ಗಮನಾರ್ಹ ಸಾಧನೆ ಎಂದೇ ಹೇಳಬಹುದು. ಈ ಬೆಳವಣಿಗೆಯ ಹೊರತಾಗಿಯೂ ಚಿಂತೆಗೀಡುಮಾಡುವ ಅಂಶವನ್ನು 2019ರ ಯುನೆಸ್ಕೋ ಸಂಶೋಧನಾ ವರದಿಯೊಂದು ಸೂಚಿಸುತ್ತದೆ. ಜಗತ್ತಿನ ವಿಜ್ಞಾನ ಸಂಶೋಧಕರ ಪೈಕಿ ಶೇ 30ರಷ್ಟು ಮಹಿಳೆಯರಿದ್ದರೆ ಭಾರತದಲ್ಲಿ ಕೇವಲ ಶೇ 14ರಷ್ಟು ಮಹಿಳೆಯರು ಕಂಡುಬರುತ್ತಾರೆ. ದೇಶದ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿರುವ ವಿಜ್ಞಾನಿಗಳು ಮತ್ತು ವಿಜ್ಞಾನ ಬೋಧಕರ ಪೈಕಿ ಮಹಿಳೆಯರ ಪ್ರಮಾಣ ಶೇ 13ರಷ್ಟಿದೆ. ಲಿಂಗಾನುಪಾತವನ್ನು ಸರಿದೂಗಿಸಲು ಮಾಡಿದ ಹಲವು ತಜ್ಞ ಸಮಿತಿಗಳ ಶಿಫಾರಸುಗಳು 12 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿವೆ.
ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ವೇದಿಕೆಯ ವರದಿಯಲ್ಲಿ ಸೂಚಿಸುವಂತೆ 20 ವರ್ಷದ ಹಿಂದೆ ಭಾರತದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಬೋಧಕರ ಪ್ರಮಾಣ ಶೇ 15ರಷ್ಟಿತ್ತು 97 ಮೇಲ್ ಸ್ತರದ ವಿಜ್ಞಾನ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆಸಿದ ಸಮೀಕ್ಷೆಯ ಅನುಸಾರ ಮಹಿಳಾ ವಿಜ್ಞಾನಿ-ಬೋಧಕರ ಪ್ರಮಾಣ ಜೀವಶಾಸ್ತ್ರದಲ್ಲಿ ಶೇ 26, ಗಣಿತಶಾಸ್ತ್ರದಲ್ಲಿ ಶೇ 16 ಮತ್ತು ಇಂಜಿನಿಯರಿಂಗ್ ವಲಯದಲ್ಲಿ ಶೇ 9ರಷ್ಟಿದೆ. ವಿಜ್ಞಾನ ಹಾಗೂ ಇಂಜಿನಿಯರಿಂಗ್ ಸಮಾವೇಶಗಳಲ್ಲಿ ಉಪನ್ಯಾಸ ನೀಡುವ ಮಹಿಳೆಯರ ಸಂಖ್ಯೆಯನ್ನು ಗಮನಿಸಿದಾಗ 293 ಸಮಾವೇಶಗಳ ಪೈಕಿ 114ರಲ್ಲಿ ಮಹಿಳಾ ಭಾಷಣಕಾರರಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಮಹಿಳೆಯರಿಗೆ ಅತಿ ಹೆಚ್ಚು ಅವಕಾಶಗಳನ್ನು ಒದಗಿಸುವ ಮಾಹಿತಿ ತಂತ್ರಜ್ಞಾನ ಕ್ಷೇತ್ರ (ಐಟಿ) ಮಹಿಳೆಯರನ್ನು ಒಳಗೊಳ್ಳುವ ಪ್ರಕ್ರಿಯೆಗೆ ಚೇತೋಹಾರಿ ಚಅಲನೆ ನೀಡಿರುವುದಾದರೂ, ಪ್ರವೇಶ ಹಂತದಲ್ಲಿ ಶೇ 51ರಷ್ಟು ಮಹಿಳೆಯರಿದ್ದರೆ, ಮೇನೇಜರ್ ಅಥವಾ ಉನ್ನತ ಸ್ತರದಲ್ಲಿ ಈ ಪ್ರಮಾಣ ಶೇ 25ಕ್ಕೆ ಕುಸಿಯುತ್ತದೆ. ಅತ್ಯುನ್ನತ ಸ್ತರ ಹುದ್ದೆಗಳಲ್ಲಿ ಇದು ಶೇ 1ರಷ್ಟು ಮಾತ್ರ ಕಂಡುಬರುತ್ತದೆ.
ಇಸ್ರೋ ಮತ್ತು ಮಹಿಳೆಯರು
ಈ ನಡುವೆಯೂ ಭಾರತದ ಮಹಿಳೆಯರಿಗೆ ಆಶಾದೀವಿಗೆಯಂತೆ ಕಾಣುವುದು ಸರ್ಕಾರಿ ಸಾಮ್ಯದ (Public Sector) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO). ಮಂಗಳಯಾನ ಹಾಗು ಚಂದ್ರಯಾನದಂತಹ ಮಹತ್ತರ ಸಾಧನೆಗಳ ಗರಿಮೆ ಇರುವ ಇಸ್ರೋ ಸಂಸ್ಥೆಯಲ್ಲಿ ಶೇ 27ರಷ್ಟು ಉನ್ನತ ಹುದ್ದೆಗಳನ್ನು (Executive positions) ಮಹಿಳೆಯರೇ ನಿರ್ವಹಿಸಿದ್ದಾರೆ. ನವದೆಹಲಿಯಲ್ಲಿರುವ Council of Scientific & Industrial Research ನ ಮಹಾನಿರ್ದೇಶಕಿಯಾಗಿ ಡಾ. ಎನ್. ಕಲೈಸೆಲ್ವಿ ಅಪೂರ್ವ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತೊಂದು ಪ್ರತಿಷ್ಠಿತ ವಿಜ್ಞಾನ ಸಂಸ್ಥೆ ಬೆಂಗಳೂರಿನಲ್ಲಿರುವ Indian Institute of Astrophysics ನಲ್ಲಿ ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂ ಅವರು ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಸ್ರೋ ಒಳಗೊಂಡಂತೆ ಹಾಗೂ ಬಾಹ್ಯಾಕಾಶ ವಿಜ್ಞಾನ ಸಂಶೋಧನೆಗೆ ಸಂಬಂಧಿಸಿದಂತೆ ಮಹಿಳಾ ವಿಜ್ಞಾನಿಗಳ ಸಾಧನೆಯ ಮೆಟ್ಟಿಲುಗಳನ್ನು ಸ್ಮರಿಸುವ ಕೆಲವು ಸಾಧಕಿಯರ ಹೆಜ್ಜೆ ಗುರುತುಗಳನ್ನು ನೆನೆಯುವುದು ಚಂದ್ರಯಾನದ ಸಂದರ್ಭದಲ್ಲಿ ಸೂಕ್ತ. ಹೀಗೆ ಗುರುತಿಸುತ್ತಲೇ ಈ ಮಹಿಳೆಯರು ತಮ್ಮ ಕೌಟುಂಬಿಕ ಬದುಕಿನ ಹಲವು ಕಟ್ಟುಪಾಡುಗಳು ಮತ್ತು ನಿರ್ಬಂಧಗಳನ್ನು ನಿಭಾಯಿಸುತ್ತಲೇ, ಗೃಹಿಣಿಯರಾಗಿ ತಮ್ಮ ಕರ್ತವ್ಯವನ್ನು ಸರಿದೂಗಿಸುತ್ತಲೇ ಸಂಶೋಧನೆಯ ಮಾರ್ಗದಲ್ಲೂ ನಡೆದಿರುವುದನ್ನು ಗಮನಿಸಬೇಕಾಗುತ್ತದೆ. ಅಸಮಾನತೆಯ ನೆರಳಲ್ಲೇ ಸೊರಗುತ್ತಿರುವ ಕೋಟ್ಯಂತರ ಭಾರತೀಯ ಮಹಿಳೆಯರ ನಡುವೆಯೇ ಬೆಳಕಿನ ಕಿಂಡಿಗಳಂತೆ ಈ ಮಹಿಳೆಯರ ಸಾಧನೆಯನ್ನು ನಾವು ನೋಡಬೇಕಿದೆ. ಹಾಗೆಯೇ 2014ರ ಮುಂಚೆಯೂ ಭಾರತ ಎಂಬ ದೇಶವೊಂದಿತ್ತು ಎಂದು ಮಿಲಿನಿಯಂ ಪೀಳಿಗೆಗೆ ಮನವರಿಕೆ ಮಾಡಲು 75 ವರ್ಷಗಳ ಸ್ವತಂತ್ರ ನಡಿಗೆಯಲ್ಲಿ ಮಹಿಳಾ ಸಾಧಕಿಯರನ್ನೂ ಗುರುತಿಸುವುದ ವರ್ತಮಾನದ ತುರ್ತು.
ಈ ಮಹಿಳಾ ವಿಜ್ಞಾನಿಗಳ ಪೈಕಿ ಪ್ರಧಾನವಾಗಿ ಕಾಣುವುದು ಡಾ. ರಿತು ಕರಿಧಾಲ್ ಶ್ರಿವಾಸ್ತವ. ಲಕ್ನೋ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪದವೀಧರೆಯಾಗಿ ಬೆಂಗಳೂರಿನ Indian Institute of Aero Science ನಿಂದ ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆದ ರಿತು ಕರಿಧಾಲ್ 1997ರಲ್ಲಿ ಇಸ್ರೋ ಸೇರಿ ಯುವ ವಿಜ್ಞಾನಿ ಪ್ರಶಸ್ತಿಯನ್ನು 2007ರಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಸ್ವೀಕರಿಸಿದ್ದರು. ರಿತು ಕರಿಧಾಲ್ ಮಾರ್ಸ್ ಆರ್ಬಿಟರ್ ಮಿಷನ್ನ ಉಪಕಾರ್ಯಾಚರಣೆ ನಿರ್ದೇಶಕರಾಗಿದ್ದು, ಇಸ್ರೋದ ಹಲವು ಯೋಜನೆಗಳಲ್ಲಿ ಪಾಲ್ಗೊಂಡಿದ್ದಾರೆ. 18 ತಿಂಗಳುಗಳ ಅವಧಿಯಲ್ಲಿ ಮಂಗಳಗ್ರಹವನ್ನು ಸೆರೆಹಿಡಿಯುವ ವೈಜ್ಞಾನಿಕ ಸಾಹಸ 2012ರಲ್ಲಿ ಇಸ್ರೋ ಕೈಗೊಂಡಾಗ ಕರಿಧಾಲ್ ಅದರ ಮುಂಚೂಣಿಯಲ್ಲಿದ್ದರು. ಭಾರತದ ರಾಕೆಟ್ ಮಹಿಳೆಯರು ಅಥವಾ ಬಾಹ್ಯಾಕಾಶ ಮಹಿಳೆಯರು ಎಂದು ಪರಿಗಣಿಸಲ್ಪಡುವ ಗುಂಪಿನಲ್ಲಿ ಪ್ರಮುಖರಾದ ಕರಿಧಾಲ್ ಬೆಂಗಳೂರಿನ Indian Institute of Science ನಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿರುವ ಕರಿಧಾಲ್ ತಮ್ಮ ಕುಟುಂಬದ ಕೆಲಸ ಮತ್ತು ವೃತ್ತಿಜೀವನವನ್ನು ನಿರ್ವಹಿಸಲು ಸಾಕಷ್ಟು ಶ್ರಮಿಸಿದ್ದಾರೆ. ಮಂಗಳಯಾನವು ತಮ್ಮ ಮೊದಲ ಅಂತರ್ ಗ್ರಹ ಕಾರ್ಯಾಚರಣೆಯಾಗಿದ್ದ ಸಮಯದಲ್ಲಿ ಮಗನಿಗೆ 11 ವರ್ಷ, ಮಗಳಿಗೆ 5 ವರ್ಷವಾಗಿತ್ತು. ಆದರೂ ಮನೆಯಲ್ಲಿದ್ದ ವೇಳೆಯಲ್ಲಿ ಮಕ್ಕಳೊಂದಿಗೆ ಬೆರೆತು ಅವರೊಡನೆ ಆನಂದದ ಕ್ಷಣಗಳನ್ನು ಕಳೆಯುತ್ತಿದ್ದುದಾಗಿ ಕರಿಧಾಲ್ ನೆನೆಯುತ್ತಾರೆ.
“ಉಪಗ್ರಹ ಉಡಾವಣೆಯ ಸಮಯದಲ್ಲಿ ವಿಜ್ಞಾನಿಗಳು, ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಮನೆಗೆ ಹೋಗುವ ಬಗ್ಗೆ ಯೋಚಿಸುವುದಿಲ್ಲ. ಮಿಷನ್ಗಳ ಸಮಯದಲ್ಲಿ ಅವರು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಗಬಹುದು. ಎದುರಿಸಿದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಬೇಕಿರುತ್ತದೆ. ಇಸ್ರೋದಲ್ಲಿ ಯಾವುದೇ ಲಿಂಗ ತಾರತಮ್ಯವಿಲ್ಲ. ನೇಮಕಾತಿ ಮತ್ತು ಪ್ರಚಾರ ನೀತಿಗಳು ನಮಗೆ ಏನು ತಿಳಿದಿದೆ ಮತ್ತು ನಾವು ಏನು ಕೊಡುಗೆ ನೀಡುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ನಾನು ಇಲ್ಲಿ ಮಹಿಳೆ ಎಂಬುದನ್ನು ಮರೆತುಬಿಡುತ್ತೇನೆ. ನೀವು ಮಹಿಳೆಯಾಗಿರುವುದರಿಂದ ನೀವು ಯಾವುದೇ ವಿಶೇಷ ಸ್ಥಾನಮಾನ ಪಡೆಯುವುದಿಲ್ಲ ಹಾಗೆಯೇ ತಾರತಮ್ಯಕ್ಕೂ ಒಳಗಾಗುವುದಿಲ್ಲ ನಿಮ್ಮನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ.” ಎಂದು ಹೆಮ್ಮೆಯಿಂದ ಹೇಳುತ್ತಾರೆ ರಿತು ಕರಿಧಾಲ್.
ಮತ್ತೋರ್ವ ಮಹಿಳಾ ವಿಜ್ಞಾನಿ ನಂದಿನಿ ಹರಿನಾಥ್ ಇಸ್ರೋದ ಮಾರ್ಸ್ ಆರ್ಬಿಟರ್ ಮಿಷನ್ನಲ್ಲಿ ಮಿಷನ್ ಡಿಸೈನರ್, ಯೋಜನಾ ಮೇನೇಜರ್, ಉಪಕಾರ್ಯಾಚರಣೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಇಸ್ರೊ ಕೈಗೊಂಡ ಎಲ್ಲ ಕಾರ್ಯಾಚರಣೆಗಳಲ್ಲೂ ನಂದಿನಿ ಹರಿನಾಥ್ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಗಣಿತ ಶಿಕ್ಷಕಿಯಾದ ತಾಯಿ, ಭೌತಶಾಸ್ತ್ರದ ಬಗ್ಗೆ ಒಲವು ಹೊಂದಿದ್ದ ಇಂಜಿನಿಯರ್ ತಂದೆಯ ಪ್ರೋತ್ಸಾಹದೊಂದಿಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿಕೊಂಡ ನಂದಿನಿ ಬಾಹ್ಯಾಕಾಶ ವಿಜ್ಞಾನಿಯಾಗಿ ಬಯಸಿ ವೃತ್ತಿಪರ ಬದುಕಿಗೆ ಪ್ರವೇಶಿಸಿದಾಗ ಇಸ್ರೋ ಅವರಿಗೆ ಆಶ್ರಯ ನೀಡಿತ್ತು. ತಾವು ನೌಕರಿಗಾಗಿ ಸಲ್ಲಿಸಿದ ಏಕೈಕ ಅರ್ಜಿ ಅದಾಗಿತ್ತು ಎಂದು ಇಸ್ರೋ ಸಂಸ್ಥೆಯನ್ನು ಗೌರವದಿಂದ ನೆನೆಯುತ್ತಾರೆ. ವಿಜ್ಞಾನಿಗಳು ದಿನಕ್ಕೆ ಸುಮಾರು 10 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ಉಡಾವಣೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಅದು 12 ರಿಂದ 14 ಗಂಟೆಗಳವರೆಗೆ ಏರುತ್ತದೆ ಗಡುವುಗಳನ್ನು ಪೂರೈಸಲು ಅವರು ದೀರ್ಘಕಾಲ ಕೆಲಸ ಮಾಡಬೇಕಾಗುತ್ತದೆ ಎನ್ನುತ್ತಾರೆ ನಂದಿನಿ ಹರಿನಾಥ್.
ಚಂದ್ರಯಾನ -2ರ ಮೊದಲ ಮಹಿಳಾ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ ವನಿತಾ ಮುತ್ತಯ್ಯ ಚಂದ್ರಯಾನ -1ರಲ್ಲೂ ಯೋಜನಾ ನಿರ್ದೇಶಕರಾಗಿದ್ದರು. ಚಂದ್ರಯಾನ-2ರ ಮಿಷನ್ ಹುದ್ದೆಯನ್ನು ಸ್ವೀಕರಿಸಲು ವನಿತಾ ಅವರ ಮನವೊಲಿಸಿದ ಡಾ. ಎಂ. ಅಣ್ಣಾದೊರೈ ಹೇಳುವಂತೆ “ ವನಿತಾ ಅವರು ದತ್ತಾಂಶ ನಿರ್ವಹಣೆಯಲ್ಲಿ ಪರಿಣಿತರಾಗಿದ್ದುದೇ ಅಲ್ಲದೆ ಡಿಜಿಟಲ್/ಹಾರ್ಡ್ವೇರ್ ವಿಭಾಗದಲ್ಲಿ ನಿರಾಯಾಸವಾಗಿ ಕೆಲಸ ನಿರ್ವಹಿಸುವ ಪ್ರತಿಭೆ ಹೊಂದಿದ್ದರು”. ಯೋಜನಾ ನಿರ್ದೇಶಕಿಯಾಗಿ ದಿನಕ್ಕೆ 18 ಗಂಟೆಗಳ ಕೆಲಸ ಮಾಡಿದ ವನಿತಾ ಮುತ್ತಯ್ಯ 2006ರಲ್ಲಿ ಅತ್ಯುತ್ತಮ ಮಹಿಳಾ ವಿಜ್ಞಾನಿ ಪ್ರಶಸ್ತಿಗೂ ಭಾಜನರಾಗಿದ್ದರು. ತಮಿಳುನಾಡಿನ ಗಿಂಡಿಯಲ್ಲಿರುವ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿಯಾದ ವನಿತಾ ಅವರಿಗೆ ರುಚಿಯಾದ ತಿನಿಸುಗಳು, ಸುಗಂಧ ದ್ರವ್ಯ, ಸೀರೆಗಳಷ್ಟೇ ಪ್ರಿಯವಾದ ಮತ್ತೊಂದು ವಸ್ತು ಎಂದರೆ ಬಾಹ್ಯಾಕಾಶ ವಿಜ್ಞಾನ ಎಂದು ಅವರ ಸಹಪಾಠಿಗಳು ಹೇಳುವುದುಂಟು.
ಗುಜರಾತ್ನ ರಾಜಕೋಟ್ ಪಟ್ಟಣದವರಾದ ಮಿನಾಲ್ ಸಂಪತ್ ಇಸ್ರೋ ಸಂಸ್ಥೆಯಲ್ಲಿ ಸಿಸ್ಟಮ್ಸ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಮತ್ತೋರ್ವ ಬಾಹ್ಯಾಕಾಶ ಮಹಿಲೆ. ಮಿನಾಲ್ ಮಂಗಳ ಯಾನದ ಸಂದರ್ಭದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಮಿನಾಲ್ 2007ರಲ್ಲಿ ಇಸ್ರೋ ಸಂಸ್ಥೆಯಿಂದ ಪ್ರತಿಷ್ಠಿತ ಯುವ ವಿಜ್ಞಾನಿ ಮೆರಿಟ್ ಪ್ರಶಸ್ತಿಗೆ ಭಾಜನರಾಗಿದ್ದರು. ಅವರಂತೆಯೇ ಕೇರಳದ ತಿರುವನಂತಪುರಂನ ವಿ.ಆರ್. ಲಲಿತಾಂಬಿಕಾ ತಮ್ಮ ಬಾಲ್ಯದಲ್ಲೇ ರಾಕೆಟ್ ಉಡಾವಣೆಯ ಪ್ರಯತ್ನಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿಯೇ ಬೆಳೆದವರು. ಕಾಲೇಜು ಉಪನ್ಯಾಸಕರಾಗಿ ತಮ್ಮ ವೃತ್ತಿ ಬದುಕನ್ನು ಆರಂಬಿಸಿದ ಲಲಿತಾಂಬಿಕಾ ಶೀಘ್ರದಲ್ಲೇ ಇಸ್ರೋದಲ್ಲಿ ವಿಜ್ಞಾನಿಯಾಗಿ ಗುರುತಿಸಲ್ಪಟ್ಟಿದ್ದರು. Advanced Launcher Technology ಯಲ್ಲಲಿ ಪರಿಣತಿ ಪಡೆದಿರುವ ಲಲಿತಾಂಬಿಕಾ ಇಸ್ರೋ ರಾಕೆಟ್ ಕಾರ್ಯಕ್ರಮಮ ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. 30 ವರ್ಷಗಳ ಸೇವಾವಧಿಯಲ್ಲಿ ಗಗನಯಾನ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 2013ರ ಮಂಗಳಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ ಬಿ.ಪಿ. ದಾಕ್ಷಾಯಿಣಿ ಕರ್ನಾಟಕದ ಭದ್ರಾವತಿಯ ನಿವಾಸಿ. ಸ್ಥಳೀಯ ಶಾಲಾ ಕಾಲೇಜಿನಲ್ಲೇ ಅಧ್ಯಯನ ನಡೆಸಿ ಬಿಎಸ್ಸಿ ಪದವಿ ಪಡೆದು ನಂತರ ಇಂಜಿನಿಯರಿಂಗ್ ಮಾಡಲು ಬಯಸಿದ ದಾಕ್ಷಾಯಿಣಿ ಬಾಹ್ಯ ಸಮಾಜದ ಕಟ್ಟುಪಾಡುಗಳನ್ನು ಲೆಕ್ಕಿಸದೆ ತಂದೆಯ ಪ್ರೋತ್ಸಾಹದೊಂದಿಗೆ ಬಾಹ್ಯಾಕಾಶ ಇಂಜಿನಿಯರಿಂಗ್ ಪದವಿ ಪೂರೈಸಿ ಇಸ್ರೋ ಸಂಸ್ಥೆಗೆ ಸೇರಿದ್ದರು
ಸಂಭ್ರಮದ ನಡುವೆ ವಿಷಾದ
ಚಂದ್ರಯಾನದ ಯಶಸ್ಸಿನ ಸಂಭ್ರಮದ ನಡುವೆಯೇ ಭಾರತದ ಬಾಹ್ಯಾಕಾಶ ನಡಿಗೆಯಲ್ಲಿ ಕಳೆದ ಮೂರು ನಾಲ್ಕು ದಶಕಗಳಿಂದ ಅಮೂಲ್ಯ ಸೇವೆ ಸಲ್ಲಿಸಿದ್ದ ವಿಜ್ಞಾನಿ ಡಾ. ವಲರ್ಮತಿ ಸೆಪ್ಟಂಬರ್ 3ರಂದು ಹೃದಯಾಘಾತದಿಂದ ನಿಧನರಾಗಿರುವುದು ದುಃಖಕರ ಸಂಗತಿ. ಇಸ್ರೋ ಕೈಗೊಂಡ ಯಾವುದೇ ಉಡಾವಣೆ ಇರಲಿ, ಇತರ ಕಾರ್ಯಕ್ರಮಗಳಿರಲಿ ವಲರ್ಮತಿ ಅವರ ಮಧುರ ಧ್ವನಿಯ ಮೂಲಕವೇ ಜನಮಾನಸವನ್ನು ತಲುಪುತ್ತಿತ್ತು. ಜುಲೈ 14ರ ಚಂದ್ರಯಾನ-3ರ ಉಡಾವಣೆಯ ಕೌಂಟ್ಡೌನ್ ವಿವರಣೆಯೇ ಅವರ ಕಡೆಯ ಕಾರ್ಯಕ್ರಮವಾಗಿತ್ತು. ಮೂಲತಃ ತಮಿಳುನಾಡಿನ ವಲರ್ಮತಿ ಜನಿಸಿದ್ದು 1959ರಲ್ಲಿ ಅರಿಯಲೂರು ಎಂಬ ಸಣ್ಣ ಪಟ್ಟಣದಲ್ಲಿ. ಅಲ್ಲಿಯೇ ವಿಜ್ಞಾನ ಪದವಿಯನ್ನೂ ಪಡೆದಿದ್ದರು. 1984ರಲ್ಲಿ ವಿಜ್ಞಾನಿಯಾಗಿ ಇಸ್ರೋ ಸೇರಿದ್ದರು. ಭಾರತದ ಮೊದಲ ದೇಶಿಯ Radar Imaging Satellite (RIS)ನ ಯೋಜನಾ ನಿರ್ದೇಶಕರಾಗಿ ವಲರ್ಮತಿ ಅವರು ಕಾರ್ಯನಿರ್ವಹಿಸಿದ್ದರು.
ಈ ಉಪಗ್ರಹವನ್ನು 2012ರ ಏಪ್ರಿಲ್ನಲ್ಲಿ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಈ ಇಡೀ ಯೋಜನೆಯನ್ನು ರೂಪಿಸಿ ಅದರ ಉಡಾವಣೆ ಸೇರಿದಂತೆ ಎಲ್ಲಾ ಜವಾಬ್ದಾರಿಯನ್ನು ವಲರ್ಮತಿ ಅವರು ಹೊತ್ತಿದ್ದರು. ಅದನ್ನು ಯಶಸ್ವಿಯಾಗಿ ಉಡಾವಣೆ ಪೂರ್ಣಗೊಳಿಸಿ ಮೆಚ್ಚುಗೆ ಕೂಡ ಪಡೆದಿದ್ದರು. 2015ರ ಸ್ವಾತಂತ್ರೋತ್ಸವ ದಿನದಂದು ವಲರ್ಮತಿ ಅವರು ಡಾ.ಅಬ್ದುಲ್ ಕಲಾಮ್ ಪ್ರಶಸ್ತಿಗೂ ಭಾಜನರಾಗಿದ್ದರು. ತಮಿಳುನಾಡು ರಾಜ್ಯ ಸರ್ಕಾರ ಸ್ಥಾಪಿಸಿರುವ ಈ ಪ್ರಶಸ್ತಿಯ ಮೊದಲ ಪ್ರಶಸ್ತಿ ಪುರಸ್ಕೃತರು ಎನ್ನುವ ಹಿರಿಮೆಯು ಅವರದ್ದು. ಅದೇ ವರ್ಷ ಮಿಸೈಲ್ ಮ್ಯಾನ್ ಅಬ್ದುಲ್ ಕಲಾಂ ಅವರು ನಿಧನರಾಗಿದ್ದರ ಸ್ಮರಣಾರ್ಥವಾಗಿ ಈ ಪ್ರಶಸ್ತಿ ಸ್ಥಾಪಿಸಲಾಗಿತ್ತು. ವಿಜ್ಞಾನಿಯಾಗಿ ಹೆಸರು ಮಾಡಿದ ಜತೆಗೆ ಅವರ ಧ್ವನಿಯಿಂದಲೂ ಚೆನ್ನಾಗಿ ಗುರುತಿಸಲಾಗುತ್ತಿತ್ತು. ಉಡಾವಣೆಯ ಎಲ್ಲಾ ಪ್ರಕಟಣೆಗಳನ್ನು ಅವರೇ ನೀಡುತ್ತಿದ್ದರು. ಕೌಂಟ್ಡೌನ್ ವೇಳೆ ನಿಖರವಾಗಿ ಮಾಹಿತಿ ನೀಡುತ್ತಿದ್ದುದು ಅವರ ವಿಶೇಷ. ಹಲವು ಕೌಂಟ್ಡೌನ್ಗಳ ಪ್ರಕಟಣೆಗಳನ್ನು ಅವರೇ ನೀಡಿದ್ದರು. ಈ ಧ್ವನಿ ಇನ್ನು ಇರುವುದಿಲ್ಲ ಎನ್ನುವುದು ವಿಷಾದದ ಸಂಗತಿ.
ಹೀಗೆ ಭಾರತೀಯ ಸಮಾಜದಲ್ಲಿ ತಾಂಡವಾಡುತ್ತಿರುವ ಮಹಿಳಾ ಅಸಮಾನತೆ, ಢಾಳಾಗಿ ಗೋಚರಿಸುತ್ತಿರುವ ಮಹಿಳಾ ದೌರ್ಜನ್ಯ, ಪ್ರಕಟವಾಗುತ್ತಲೇ ಇರುವ ತಾರತಮ್ಯಗಳ ನಡುವೆಯೇ ಸ್ವತಂತ್ರ ಭಾರತದ 75 ವರ್ಷಗಳ ಒಂದು ಹಿರಿಮೆಯಾಗಿ ಅಸಂಖ್ಯಾತ ಮಹಿಳಾ ವಿಜ್ಞಾನಿಗಳು ಈ ದೇಶದ ವೈಜ್ಞಾನಿಕ ಮುನ್ನಡೆಗೆ, ಬಾಹ್ಯಾಕಾಶ ಸಂಶೋಧನೆ ಹಾಗೂ ಅನ್ವೇಷಣೆಗಳಿಗೆ ಸಮಾನ ನೆಲೆಯಲ್ಲಿ ತಮ್ಮದೇ ಆದ ಬೌದ್ಧಿಕ ಕೊಡುಗೆ ನೀಡಿರುವುದನ್ನು ಚಂದ್ರಯಾನ-3ರ ಯಶಸ್ಸಿನ ಸಂದರ್ಭದಲ್ಲಿ ನೆನೆಯುವುದು ನಮ್ಮ ನೈತಿಕ ಕರ್ತವ್ಯ. ಭಾರತದ ಮಹಿಳೆ ಬೌದ್ಧಿಕವಾಗಿ ಅತ್ಯುನ್ನತ ಹಂತದಲ್ಲಿ ಆಶಾಕಿರಣಗಳಂತೆ ಕಾಣುತ್ತಿರುವಾಗಲೇ ಭೌತಿಕವಾಗಿ, ವಾಸ್ತವ ಜಗತ್ತಿನಲ್ಲಿ, ತಳಮಟ್ಟದಲ್ಲಿ ನಿರಂತರ ಶೋಷಣೆಗೊಳಗಾಗಿ ಮುದುಡಿ ಕುಳಿತಿರುವ ಒಂದು ಅಸಹಾಯಕ ಸಮೂಹವಾಗಿಯೂ ನಮಗೆ ಎದುರಾಗುತ್ತಿದ್ದಾಳೆ. ಈ ದ್ವಂದ್ವವನ್ನು ಮೀರಿ ಭಾರತ ಬೆಳೆಯುವುದೇ ಆದರೆ ನಮ್ಮ ಅಮೃತಕಾಲದ ನಡಿಗೆ ಸಾರ್ಥಕವಾಗುತ್ತದೆ. ಚಂದ್ರಯಾನ ಮತ್ತು ಮಣಿಪುರ ನಮಗೆ ಇದನ್ನೇ ಪದೇ ಪದೇ ನೆನಪಿಸುತ್ತದೆ.
(ಈ ಲೇಖನದ ಕೆಲವು ಮಾಹಿತಿ, ಅಭಿಪ್ರಾಯಗಳನ್ನು ಹಲವು ಮೂಲಗಳಿಂದ ಪಡೆಯಲಾಗಿದೆ. ವಿಶೇಷವಾಗಿ CFTRI ನಿವೃತ್ತ ವಿಜ್ಞಾನಿ ಇ. ರತಿರಾವ್ ಅವರ ಬರಹದಿಂದ ಪಡೆಯಲಾಗಿದೆ)
(ಇಸ್ರೋ-ಸಂಕೀರ್ಣ ಸಾಂಸ್ಥಿಕ ಸವಾಲುಗಳು – ಮುಂದಿನ ಭಾಗದಲ್ಲಿ)
ನಾ ದಿವಾಕ