ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಿದೆ. CWMA ಆದೇಶದ ಬಳಿಕ ಸುಪ್ರೀಂಕೋರ್ಟ್ ಕೂಡ ಮಧ್ಯಪ್ರವೇಶ ಮಾಡಲು ನಿರಾಕರಿಸಿದ ಕಾರಣಕ್ಕೆ ಕರ್ನಾಟಕ ಅನಿವಾರ್ಯವಾಗಿ ನೀರನ್ನು ಹರಿಸುತ್ತಿದೆ. ನೀರನ್ನು ಹರಿಸದೆ ರೈತರ ಪರವಾಗಿ ನಿಲ್ಲುವ ನಿರ್ಧಾರ ಹೊರಬೀಳಬಹುದು ಎಂದೇ ಎಲ್ಲರೂ ಊಹಿಸಿದ್ದರು. ಆದರೆ ಶುಕ್ರವಾರ ತಡ ರಾತ್ರಿ ಸಚಿವ ಸಂಪುಟ ಮುಗಿಸಿ ಹೊರಬಂದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್, ಕಾವೇರಿ ನೀರಿನ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಿದ್ದೇವೆ. ನಾವು ಹರಿಸದೆ ಇದ್ದರೂ ಮೂರೂವರೆ ಸಾವಿರ ನೀರು ನದಿಗೆ ಹೋಗುತ್ತದೆ. ನಾವು ರೈತರ ಹಿತವನ್ನು ಸದಾ ಕಾಲ ನಾವು ರೈತರ ಹಿತಕ್ಕಾಗಿಯೇ ಕೆಲಸ ಮಾಡುತ್ತೇವೆ. ಟೀಕೆ ಮಾಡುವವರು ಟೀಕೆ ಮಾಡಲಿ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.
ಮಂಡ್ಯದಲ್ಲಿ ಇಂದು ಬಂದ್ ಆಚರಣೆ, ಸಂಘ ಸಂಸ್ಥೆಗಳ ಬೆಂಬಲ
ಕಾವೇರಿ ನೀರು ವಿಚಾರದಲ್ಲಿ ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಖಂಡಿಸಿ ಇಂದು ಮಂಡ್ಯ ಜಿಲ್ಲಾ ಬಂದ್‌ಗೆ ರೈತ ಸಂಘಟನೆಗಳು ಕರೆ ನೀಡಿವೆ. ರೈತರ ಹೋರಾಟಕ್ಕೆ ಹತ್ತಾರು ಸಂಘ ಸಂಸ್ಥೆಗಳು ಸಾಥ್ ನೀಡಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು, ವರ್ತಕರು ಸೇರಿದಂತೆ ಸ್ವಯಂಪ್ರೇರಿತ ಬಂದ್ ಆಚರಣೆ ನಡೆಯಲಿದೆ. ಇತ್ತ ರೈತರ ಹೋರಾಟವನ್ನು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ತೀರ ತುಚ್ಛವಾಗಿ ಕಂಡಿದ್ದು, ಪ್ರತಿಭಟನೆ ಬಂದ್ನಿಂದ ಯಾವುದೇ ಪ್ರಯೋಜನ ಆಗಲ್ಲ ಎಂದಿದ್ದಾರೆ. ಆದರೆ ಮಂಡ್ಯ ಉಸ್ತುವಾರಿ ಸಚಿವರೂ ಆಗಿರುವ ಎನ್. ಚಲುವರಾಯಸ್ವಾಮಿ ಹೋರಾಟ ಮಾಡುವುದು ರೈತರೂ ಸೇರಿದಂತೆ ಸಾರ್ವಜನಿಕರ ಹಕ್ಕು, ಪ್ರಜಾಪ್ರಭುತ್ವ ದಲ್ಲಿ ಬಂದ್ ಮಾಡಲು ಹಕ್ಕಿದೆ. ಇದು ತಪ್ಪು ಅಂತ ಹೇಳಲು ಆಗಲ್ಲ. ನಿಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತೆ, ಶಾಂತವಾಗಿ ಸಹಕರಿಸಿ ಎಂದು ರೈತರಲ್ಲಿ ವಿನಂತಿ ಮಾಡಿದ್ದಾರೆ
ಅಮಿತ್ ಷಾ ಜೊತೆಗೆ ಕಾವೇರಿ ಸಂಕಷ್ಟದ ಬಗ್ಗೆ HDK ಚರ್ಚೆ..

ಬಿಜೆಪಿ ಜೆಡಿಎಸ್ ಮೈತ್ರಿ ಮಾತುಕತೆಗೆ ಅಮಿತ್ ಷಾ ಭೇಟಿ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಮಾತುಕತೆ ಬಳಿಕ ಮಾತನಾಡಿ, ಅಮಿತ್ ಷಾ ಅವರ ಬಳಿ ಕಾವೇರಿ ಬಗ್ಗೆ ಚರ್ಚಿಸಿದ್ದೇನೆ. ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯ ಸರ್ಕಾರದ ಅಸಡ್ಡೆ ಮಾಡಿದೆ. ಕನ್ನಡ ನಾಡಿನ ರೈತರು, ಜನರ ವಿಷಯದಲ್ಲಿ ಚೆಲ್ಲಾಟವಾಡಿದ್ದಾರೆ. ಒಂದು ಕಡೆ ನೀರಿನಲ್ಲ ಎಂದು ಸರ್ಕಾರ ಹೇಳುತ್ತೆ. ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿಸುತ್ತಾರೆ. ಸುಪ್ರೀಂಕೋರ್ಟ್ ಮುಂದೆ ಅರ್ಜಿಯನ್ನು ಹಾಕಿದ್ದಾರೆ. ರೈತರ ಹಿತರಕ್ಷಣೆ ಮಾಡುವ ಕೆಲಸ ಮಾಡಬೇಕು. ತಮಿಳುನಾಡಿಗೆ ನೀರು ಬಿಡಬೇಡಿ ಎಂದಿದ್ದೆ, ಆದರೂ ನೀರು ಬಿಟ್ಟರು. ನಮ್ಮಲ್ಲಿ ನೀರಾವರಿ ಸಚಿವರಿದ್ದಾರೆ, ಅವರಿಗೆ ನೀರಾವರಿ ಬಗ್ಗೆ ಏನೂ ಗೊತ್ತಿಲ್ಲ. ಚದರ ಅಡಿಗೆ ರೇಟ್ ಫಿಕ್ಸ್ ಮಾಡಿಕೊಂಡು ಕೂತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೆಸರು ಹೇಳದೆ ವ್ಯಂಗ್ಯ ಮಾಡಿದ್ದಾರೆ.
ಹೇಗಿರಲಿದೆ ಮಂಡ್ಯದಲ್ಲಿ ಬಂದ್.. ಯಾರೆಲ್ಲಾ ಬರ್ತಾರೆ..?
ಕಾವೇರಿ ನೀರಿಗಾಗಿ ಇಂದು ಮಂಡ್ಯದಲ್ಲಿ ಉಗ್ರ ಹೋರಾಟ ನಡೆಯಲಿದ್ದು, ತಮಿಳುನಾಡಿಗೆ ನೀರು ಹರೀತಿರೋದನ್ನು ಖಂಡಿಸಿ ಮಂಡ್ಯ ಬಂದ್‌ಗೆ ಕರೆ ಕೊಡಲಾಗಿದೆ. ರೈತ ಹಿತರಕ್ಷಣಾ ಸಮಿತಿ ಸೇರಿ ಕನ್ನಡಪರ ಸಂಘಟನೆಗಳು ಬಂದ್ ಆಚರಣೆ ಮಾಡಲಿವೆ. ಬೆಳಿಗ್ಗೆ 8 ಗಂಟೆಯಿಂದ ಹೋರಾಟ ಆರಂಭ ಆಗಲಿದೆ. ಮಂಡ್ಯದ ಸಂಜಯ ವೃತ್ತದಲ್ಲಿ ವಿವಿಧ ಸಂಘಟನೆಗಳು ಉರುಳುಸೇವೆ ಮಾಡಲಿದ್ದು, ಮುಖ್ಯ ರಸ್ತೆಗಳಲ್ಲಿ ಬೈಕ್ ಱಲಿ ನಡೆಸಲಿದ್ದಾರೆ. ಮಂಡ್ಯದಲ್ಲಿ ಕಾವೇರಿ ಹೋರಾಟಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾಗಿಯಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ರೈತರ ಜೊತೆಗೂಡಿ ಪ್ರತಿಭಟನೆ ಮಾಡಲಿದ್ದಾರೆ. ರೈತರ ಹೋರಾಟಕ್ಕೆ ಬಿಜೆಪಿ ನಾಯಕರು ಕೂಡ ಸಾಥ್ ನೀಡಲು ನಿರ್ಧಾರ ಮಾಡಿದ್ದು, ಪ್ರತಿಭಟನೆಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಬೆಳಗ್ಗೆ 10 ಗಂಟೆಗೆ ಭಾಗಿ ಆಗಲಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಡಿ.ಕೆ ಶಿವಕುಮಾರ್ ಹೇಳಿಕೆ ರೈತರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.
ಕೃಷ್ಣಮಣಿ