ಭಾರತೀಯ ರೈಲ್ವೇ ಇಲಾಖೆ ಮತ್ತೊಂದು ಹೊಸ ಮೈಲುಗಲ್ಲು ತಲುಪಿದೆ. ದೇಶದ ಚೊಚ್ಚಲ ಹವಾನಿಯಂತ್ರಿತ ಹೈಫೈ ರೈಲ್ವೇ ನಿಲ್ದಾಣವನ್ನು ನೈರುತ್ಯ ವಿಭಾಗದ ರೈಲ್ವೇ ಲೋಕಾರ್ಪಣೆ ಮಾಡಿದೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ಸಂಪೂರ್ಣ ಹವಾನಿಯಂತ್ರಿತ ರೈಲ್ವೇ ನಿಲ್ದಾಣವನ್ನು ನಿರ್ಮಿಸಿದ್ದು, ಇದಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಎಂದು ನಾಮಕರಣ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಿರ್ಮಾಣವಾದ ಈ ರೈಲು ನಿಲ್ದಾಣ ದೇಶದಲ್ಲೇ ಅತ್ಯಾಧುನಿಕ ನಿಲ್ದಾಣ ಎಂಬ ಹೆಗ್ಗಳಿಕೆ ಗಳಿಸಿದೆ. ನಿಲ್ದಾಣದ ಕಾಮಗಾರಿ ಮುಗಿದು ವರ್ಷವೂ ಕಳೆದಿತ್ತು. ಆದರೆ ಪ್ರಧಾನಿ ಮೋದಿ ಸಮಯ ಸಿಗದ ಹಿನ್ನಲೆ ಈ ರೈಲ್ವೆ ನಿಲ್ದಾಣಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿರ್ಲಿಲ್ಲ. ಆದರೀಗ ಮೋದಿ ಅನುಪಸ್ಥಿತಿಯಲ್ಲೇ ಮೊದಲ ರೈಲು ಹಳಿಗಿಳಿದಿದೆ.
ಫುಲ್ ಎಸಿ, ಡಿಜಿಟಲ್ ಸ್ಕ್ರೀನ್ ಬೋರ್ಡ್, ವಿಐಪಿ ಲಾಂಜ್ ನೋಡಿದರೆ ಇದು ಯಾವುದೋ ಏರ್ಪೋರ್ಟ್ ಇರ್ಬೇಕು ಅಂದುಕೊಳ್ಳೋದು ಸಹಜ. ಆದರೆ ಇದು ಏರ್ಪೋರ್ಟ್ ಅಲ್ಲ. ಬದಲಾಗಿ ಬೆಂಗಳೂರಿನಲ್ಲಿ ನಿರ್ಮಾಣವಾಗಿರೋ ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲು ನಿಲ್ದಾಣ. ಬೈಯ್ಯಪ್ಪನಹಳ್ಳಿಯಲ್ಲಿ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ನಿರ್ಮಾಣವಾಗಿ ವರ್ಷ ಕಳೆದಿತ್ತು. ಆದರೆ ಉದ್ಘಾಟನೆಗೆ ಪ್ರಧಾನಿ ಮೋದಿ ಸಮಯ ಸಿಗದೇ ರೈಲು ನಿಲ್ದಾಣದಲ್ಲಿ ಸಂಚಾರ ಆರಂಭವಾಗಿರಲಿಲ್ಲ. ಇದೀಗ ಈ ಅತ್ಯಾಧುನಿಕ ರೈಲು ನಿಲ್ದಾಣದಲ್ಲಿ ಮೊದಲ ಟ್ರೈನ್ ಸಂಚಾರ ಶುರು ಮಾಡಿದೆ.

ಸರ್ ಎಮ್ ವಿ ನಿಲ್ದಾಣದಲ್ಲಿ ಟ್ರಯಲ್ ಬೇಸ್ಡ್ ರೈಲು ಸಂಚಾರ ಜೂನ್ 6ರಿಂದ ಆರಂಭವಾಗಿದೆ. ಜೂನ್ 6ರ ರಾತ್ರಿ 7.45ಕ್ಕೆ ಎರ್ನಾಕುಲಂಗೆ ಮೊದಲ ಟ್ರೈನ್ ಸಂಚಾರ ಆರಂಭಿಸಿದೆ. ಸದ್ಯ ಈ ನಿಲ್ದಾಣದಿಂದ 50 ಜೋಡಿ ಟ್ರೈನ್ ಗಳನ್ನು ಓಡಿಸೋ ಉದ್ದೇಶವನ್ನ ನೈರುತ್ಯ ರೈಲ್ವೆ ಹೊಂದಿದೆ. ಈ ನಿಲ್ದಾಣದಿಂದಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣದ ಮೇಲಿನ ಒತ್ತಡ ಕಮ್ಮಿಯಾಗಲಿದೆ ಎಂಬುದು ರೈಲ್ವೆ ಇಲಾಖೆ ಲೆಕ್ಕಾಚಾರ. ಹೀಗಾಗೇ ಈ ನಿಲ್ದಾಣವನ್ನ ಬರೊಬ್ಬರಿ 314 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಸದ್ಯ ಈ ನಿಲ್ದಾಣದ ದೇಶದಲ್ಲೇ ಮೊಟ್ಟ ಮೊದಲ ಸಂಪೂರ್ಣ ಹವಾನಿಯಂತ್ರಿತ ನಿಲ್ದಾಣ ಎಂಬ ಖ್ಯಾತಿಯನ್ನ ಹೊಂದಿದೆ. 4,200 ಚದರ ಮೀಟರ್ ವಿಸ್ತೀರ್ಣದ ಈ ರೈಲು ನಿಲ್ದಾಣದಲ್ಲಿ ಡಿಜಿಟಲ್ ಬೋರ್ಡ್ ಮೂಲಕ ರೈಲು ಸಂಚಾರದ ಪಕ್ಕಾ ಟೈಂನ ಮಾಹಿತಿ ಪ್ರಯಾಣಿಕರಿಗೆ ಸಿಗಲಿದೆ. 4 ಲಕ್ಷ ಲೀಟರ್ ನೀರಿನ ಮರುಬಳಕೆ ಘಟಕ, ವಿಐಪಿ ಲಾಂಜ್, ಫುಡ್ಕೋರ್ಟ್, 250 ಕಾರುಗಳು, 900 ಬೈಕ್ಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಈ ನಿಲ್ದಾಣದಲ್ಲಿವೆ. 7 ಫ್ಲಾಟ್ಫಾರಂಗಳನ್ನು ನಿಲ್ದಾಣ ಹೊಂದಿದ್ದು, ವಿಮಾನ ನಿಲ್ದಾಣವನ್ನೇ ನಾಚಿಸುವಂತೆ ನಿರ್ಮಾಣ ಮಾಡಲಾಗಿದೆ.
ಈ ನಿಲ್ದಾಣ ತಲುಪಲು ಜನರಿಗೆ ಸೂಕ್ತ ವ್ಯವಸ್ತೆ ಇಲ್ಲ ಎಂಬ ಆರೋಪ ಕೇಳಿಬಂದಿತ್ತು. ಬೈಯ್ಯಪ್ಪನಹಳ್ಳಿಯಿಂದ ಈ ಸರ್ ಎಂವಿ ಟರ್ಮಿನಲ್ ತಲುಪುವುದೇ ದೊಡ್ಡ ಸಾಹಸದ ಕೆಲಸ ಎನ್ನುವುದರಲ್ಲಿ ಅನುಮಾನ ಇಲ್ಲ. ಇದನ್ನ ಸರಿಪಡಿಸಲು ಬಿಎಂಟಿಸಿಯಿಂದ ಈ ರೈಲ್ವೆ ನಿಲ್ದಾಣಕ್ಕೆ ಹೆಚ್ಚುವರಿ ಬಸ್ ಸೇವೆಯನ್ನೂ ನಿಯೋಜಿಸಲಾಗಿದೆ. ಸದ್ಯ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು ಜನರಿಂದ ಹೇಗೆ ರೆಸ್ಪಾನ್ಸ್ ಬರುತ್ತೆ ಅನ್ನೋದನ್ನ ರೈಲ್ವೆ ಇಲಾಖೆ ಕಾತುರದಿಂದ ಕಾಯುತ್ತಿದೆ.