
ದಲಿತ ಉಪಪಂಗಡಗಳಿಗೆ ಒಳ ಮೀಸಲಾತಿ ಕೊಡುವ ವಿಚಾರವಾಗಿ ಮುಂದಿನ ತಿಂಗಳ ಮೇ ಮೊದಲ ವಾರ ಎಸ್‌ಸಿ ಸಮೀಕ್ಷೆ ನಡೆಯಲಿದೆ. ದತ್ತಾಂಶ ಸಂಗ್ರಹಕ್ಕೆ ‘ಮೊಬೈಲ್ ಆ್ಯಪ್’ ಬಳಕೆ ಮಾಡಲಿದ್ದು, ಶಿಕ್ಷಣ ಇಲಾಖೆಯ 55 ಸಾವಿರ ಸಿಬ್ಬಂದಿ ಬಳಕೆ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ.
ಒಳ ಮೀಸಲಾತಿ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ನೇತೃತ್ವದ ಆಯೋಗ ರಚನೆ ಮಾಡಿದ್ದು, ಮೇ ಮೊದಲ ವಾರದಿಂದ ರಾಜ್ಯದಾದ್ಯಂತ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ವಿವಿಧ ಅಂಶಗಳ ದತ್ತಾಂಶ ಸಂಗ್ರಹಕ್ಕೆ ಸಮೀಕ್ಷೆ ಮಾಡಲಾಗುತ್ತದೆ. ಇದೇ ಮೊದಲ ಬಾರಿಗೆ ಮೊಬೈಲ್ ತಂತ್ರಾಂಶದ ಮೂಲಕ ಸಮೀಕ್ಷೆ ನಡೆಸಲಿದ್ದಾರೆ.

ಸಮೀಕ್ಷೆಯಿಂದ ಯಾರೂ ಹೊರಗುಳಿಯಬಾರದು ಎಂಬ ಕಾರಣಕ್ಕೆ ಮೊದಲು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಯಾರಾದರು ಸಮೀಕ್ಷೆಯಲ್ಲಿ ಬಿಟ್ಟು ಹೋಗಿದ್ದರೆ ಅಂಥವರು ಮಾಹಿತಿ ನೀಡುವಂತೆ ಅನುಕೂಲ ಮಾಡಿಕೊಡಲು ಪಂಚಾಯಿತಿ ಮಟ್ಟದಲ್ಲಿ ತಾತ್ಕಾಲಿಕ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ.
ಈ ಎರಡೂ ಹಂತಗಳಲ್ಲಿ ಮಾಹಿತಿ ನೀಡಲು ಸಾಧ್ಯವಾಗದವರಿಗೆ ಆನ್‌ಲೈನ್ ವ್ಯವಸ್ಥೆ ಮಾಡಲಾಗುತ್ತದೆ. ಎರಡು ತಿಂಗಳ ಒಳಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿದ್ದು, ಸಮೀಕ್ಷೆಗೆ ಸಂಬಂಧಿಸಿದಂತೆ ಮುಂದಿನ ವಾರದಿಂದ ತರಬೇತಿ ಆರಂಭ ಆಗಲಿದೆ.
ಮೊದಲು ಜಿಲ್ಲಾ ಮಟ್ಟದ ಅಧಿಕಾರಿಗಳು ಆ ಬಳಿಕ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತರಬೇತಿ ಕೊಡಲಾಗುತ್ತದೆ. ಆ ಬಳಿಕ ಗಣತಿದಾರರಿಗೆ ತರಬೇತಿ ನೀಡಲು ನಿರ್ಧಾರ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ಮೊದಲ ವಾರದಲ್ಲಿ ಮನೆ ಮನೆ ಸಮೀಕ್ಷೆ ಆರಂಭ ಆಗಲಿದೆ.
ಸಮೀಕ್ಷೆಯ ಉಸ್ತುವಾರಿಯನ್ನು ಸಮನ್ವಯ ಸಮಿತಿ ನೋಡಿಕೊಳ್ಳಲಿದೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಆಗಿರುವ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರು, ಎಸ್‌ಸಿಎಸ್‌ಪಿ, ಟಿಎಸ್‌ಪಿ ನೋಡಲ್ ಏಜೆನ್ಸಿಯ ಸಲಹೆಗಾರ ಇ. ವೆಂಕಟಯ್ಯ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ, ನಿವೃತ್ತ ಐಎಎಸ್ ಅಧಿಕಾರಿ ಡಿ.ಎನ್. ನಾಯಕ್, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಬಿ.ಎಸ್. ಹಿರೇಮಠ್ ಸೇರಿ 14 ಮಂದಿಗೆ ಸ್ಥಾನ ಕೊಡಲಾಗಿದೆ.

ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರನ್ನು ಒಳಗೊಂಡ ಬಿಬಿಎಂಪಿ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಆಯಾ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಹಾಗೂ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ರಚನೆ ಮಾಡಲು ನಿರ್ಧಾರ ಮಾಡಲಾಗಿದೆ,
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳು ಪರಿಶಿಷ್ಟ ಜಾತಿಯ ಕುಟುಂಬಗಳ ಸಮೀಕ್ಷೆಯನ್ನು ಯಾವುದೇ ಲೋಪ ಇಲ್ಲದೆ ನಡೆಸಲು ಮೇಲುಸ್ತುವಾರಿ ವಹಿಸಿಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಸಮೀಕ್ಷೆಯ ಮೇಲ್ವಿಚಾರಣೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲು ತೀರ್ಮಾನ ಮಾಡಲಾಗಿದೆ.
