1932ರಲ್ಲಿ ಬ್ರಿಟೀಷ್ ವಸಾಹತು ಆಳ್ವಿಕೆಯ ಸಂದರ್ಭದಲ್ಲಿ ಸ್ಥಾಪನೆಯಾದ ಭಾರತೀಯ ವಾಯುಪಡೆ (ಐಎಎಫ್) ಇದೇ ಅಕ್ಟೋಬರ್ 8 ರಂದು ತನ್ನ 91ನೆಯ ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸಿದೆ. ಎರಡನೆ ಮಹಾಯುದ್ಧದಲ್ಲಿ ಭಾರತದ ಯೋಧರ ದಕ್ಷತೆ, ಕ್ಷಿಪ್ರ ಕಾರ್ಯಾಚರಣೆ ಮತ್ತು ಸಾಹಸವನ್ನು ಪುರಸ್ಕರಿಸಿದ್ದ ವಸಾಹತು ಆಡಳಿತವು ಈ ಸಂಸ್ಥೆಯನ್ನು ರಾಯಲ್ ಎಂಬ ಬಿರುದು ನೀಡುವ ಮೂಲಕ ಗೌರವಿಸಿತ್ತು. 1945ರಲ್ಲಿ ರಾಯಲ್ ಇಂಡಿಯನ್ ಏರ್‌ಫೋರ್ಸ್ ಎಂದು ಮರುನಾಮಕರಣ ಹೊಂದಿತ್ತು. ಆದರೆ ಸ್ವಾತಂತ್ರ್ಯಾನಂತರ ಭಾರತ ಸರ್ಕಾರವು ರಾಯಲ್ ಎಂಬ ವಸಾಹತು ಸೂಚಕ ಪದವನ್ನು ಕೈಬಿಟ್ಟು ಐಎಎಫ್ ಹೆಸರಿನಲ್ಲೇ ಒಂಬತ್ತು ಯಶಸ್ವಿ ದಶಕಗಳನ್ನು ಪೂರೈಸಿದೆ. 91ನೆಯ ಸಂಸ್ಥಾಪನಾ ದಿನಾಚರಣೆಯ ವೈಶಿಷ್ಟ್ಯ ಎಂದರೆ ಈಗ ಐಎಎಫ್ ಹೊಸ ಪತಾಕೆಯನ್ನು ಪಡೆದುಕೊಂಡಿದೆ.
ವಾಯುಪಡೆಯ ಮೌಲ್ಯಗಳನ್ನು ಹಾಗೂ ಧ್ಯೇಯೋದ್ದೇಶಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಹೊಸ ಪತಾಕೆಯನ್ನು ಸಿದ್ಧಪಡಿಸಲಾಗಿದ್ದು, ಪತಾಕೆಯ ಬಲ ಮೂಲೆಯಲ್ಲಿ ಐಎಎಫ್ ಲಾಂಛನವನ್ನು ಬಿಂಬಿಸಲಾಗಿದೆ. ನೀಲಿ ಬಣ್ಣದ ಹೊಸ ಪತಾಕೆಯಲ್ಲಿ ತ್ರಿವರ್ಣ ಧ್ವಜ, ಐಎಎಫ್ ಲಾಂಛನದೊಂದಿಗೆ ಭಾರತೀಯ ಧ್ವಜದ ವೃತ್ತಾಕಾರದ ವಿನ್ಯಾಸವನ್ನು ಚಿತ್ರಿಸಲಾಗಿದ್ದು, ಈ ಹೊಸ ಪತಾಕೆಯನ್ನು ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅನಾವರಣಗೊಳಿಸಿದ್ದಾರೆ. ರಾಷ್ಟ್ರದ ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ಹಾಗೂ ಭೌಗೋಳಿಕ ಗಡಿ ರಕ್ಷಣೆಯ ನಿಟ್ಟಿನಲ್ಲಿ ಐಎಎಫ್ ತನ್ನ ಕೌಶಲ್ಯ ಮತ್ತು ಸಮರ್ಪಣಾ ಗುಣಗಳನ್ನು ಅನೇಕ ಸಂದರ್ಭಗಳಲ್ಲಿ ಪ್ರದರ್ಶಿಸಿದ್ದು, ಈ ಗಳಿಗೆಗಳನ್ನು ಸ್ಮರಿಸುವುದಕ್ಕಾಗಿ ಐಎಎಫ್ ದಿನಾಚರಣೆಯನ್ನು ಅಕ್ಟೋಬರ್ 8ರಂದು ಆಚರಿಸಲಾಗುತ್ತದೆ.
ಐಎಎಫ್ ದಿನಾಚರಣೆಯ ಹಿನ್ನೆಲೆ
ಈ ವರ್ಷದ ಐಎಎಫ್ ದಿನಾಚರಣೆಯ ಮುಖ್ಯ ಥೀಮ್ “ ಐಎಎಫ್-ಗಡಿಯಾಚೆಗಿನ ವಾಯುಶಕ್ತಿ ” ಎಂದು ಹೇಳಲಾಗಿದ್ದು, ವಾಯಪಡೆಯ ಉತ್ಕೃಷ್ಟತೆ, ನಾವೀನ್ಯತೆಯನ್ನು ಬಿಂಬಿಸುವಂತಿದೆ. 1932 ರಿಂದ 1947ರವರೆಗೆ ವಸಾಹತು ಆಳ್ವಿಕೆಯ ಸುಪರ್ದಿಯಲ್ಲಿದ್ದ ಈ ಸಂಸ್ಥೆ ಸ್ವಾತಂತ್ರ್ಯಾನಂತರ ಭಾರತೀಯ ವಾಯುಪಡೆ (ಐಎಎಫ್) ಎಂದು ನಾಮಾಂಕಿತಗೊಂಡು ಕಾರ್ಯನಿರ್ವಹಿಸುತ್ತಿದೆ. 1947-48, 1965 ಹಾಗೂ 1971ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ, 1999ರ ಕಾರ್ಗಿಲ್ ಯುದ್ಧದಲ್ಲಿ ಐಎಎಫ್ ಪ್ರಮುಖ ಪಾತ್ರ ವಹಿಸಿತ್ತು. 1961ರಲ್ಲಿ ಗೋವಾ ಪ್ರದೇಶವನ್ನು ಭಾರತೀಯ ಒಕ್ಕೂಟಕ್ಕೆ ಸೇರ್ಪಡೆ ಮಾಡುವ ಸಂಘರ್ಷದಲ್ಲಿ ಐಎಎಫ್ ನೆರವಾಗಿತ್ತು. 1962ರಲ್ಲಿ ಚೀನಾ ವಿರುದ್ಧದ ಯುದ್ಧದಲ್ಲಿ ಭಾರತದ ಸಶಸ್ತ್ರ ಪಡೆಗಳಿಗೆ ಐಎಎಫ್ ಬೆಂಬಲ ನೀಡಿತ್ತು. 1984ರಲ್ಲಿ ಸಿಯಾಚಿನ್ ಹಿಮನದಿಯ ಆಕ್ರಮಣದಲ್ಲೂ ಐಎಎಫ್ ಸಕ್ರಿಯವಾಗಿತ್ತು.

1988ರಲ್ಲಿ ಶ್ರೀಲಂಕಾದ ತಮಿಳು ಈಲಂ ಸಂಘಟನೆ ʼ Peoples Liberation Organisation of Tamil Ealeḿ ಮಾಲ್ಡಿವ್ಸ್ ಸರ್ಕಾರವನ್ನು ಪದಚ್ಯುತಗೊಳಿಸಲು ಮುಂದಾದಾಗ ಭಾರತೀಯ ವಾಯುಪಡೆ ಮಧ್ಯಪ್ರವೇಶಿಸಿ ತಡೆದಿತ್ತು. ಹಲವು ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ದೇಶದ ನಾಗರಿಕರ ರಕ್ಷಣೆಗೆ ಧಾವಿಸುವ ಐಎಎಫ್ ಕಾರ್ಯಪಡೆಗಳು ಭೂಕಂಪ, ಪ್ರವಾಹ, ಭೂ ಕುಸಿತ ಮುಂತಾದ ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗೆಲ್ಲಾ ಸಂತ್ರಸ್ತ ಜನತೆಯ ನೆರವಿಗೆ ಧಾವಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹಾಗೂ ಕೆಂದ್ರ ಬಾಹ್ಯಾಕಾಶ ಇಲಾಖೆಯೊಂದಿಗೆ ಐಎಎಫ್ ತನ್ನ ಕಾರ್ಯ ನಿರ್ವಹಿಸುತ್ತದೆ. 1984ರಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದ ರಾಕೇಶ್ ಶರ್ಮ ಸ್ವತಃ ಐಎಎಫ್ ಪೈಲಟ್ ಆಗಿದ್ದರು. ಭಾರತದ ಬಾಹ್ಯಾಕಾಶ ವಲಯದ ಈ ಮಹತ್ಸಾಧನೆಯಲ್ಲಿ ಐಎಎಫ್ ಹೀಗೆ ಸಾಕ್ಷೀಭೂತವಾಗಿತ್ತು.
ಅಕ್ಟೋಬರ್ 8ರಂದು ಆಚರಿಸಲಾಗುವ ಐಎಎಫ್ ದಿನಾಚರಣೆಯಂದು ವಾಯುಪಡೆಯ ಸಿಬ್ಬಂದಿಯನ್ನು ಅವರ ಶೌರ್ಯ, ಸಮರ್ಪಣಾ ಭಾವ ಹಾಗೂ ವೃತ್ತಿಪರ ದಕ್ಷತೆಗಾಗಿ ಗೌರವಿಸಲಾಗುತ್ತದೆ. ದೇಶದ ವಿವಿಧೆಡೆಗಳಲ್ಲಿ ಏರ್‌ಷೋಗಳನ್ನು ನಡೆಸುವ ಮೂಲಕ ತನ್ನ ನವನವೀನ ತಂತ್ರಜ್ಞಾನದ ಅನ್ವೇಷಣೆ ಹಾಗೂ ಪರಾಕ್ರಮವನ್ನು ಪ್ರದರ್ಶಿಸುತ್ತದೆ. ಈ ವರ್ಷ ಐಎಎಫ್ ಪೆರೇಡ್ ಪ್ರಯಾಗ್‌ರಾಜ್‌ನಲ್ಲಿರುವ ಬಮ್ರೌಲಿ ವಾಯುಪಡೆ ನಿಲ್ದಾಣದಲ್ಲಿ ನಡೆಸಲಾಗಿದ್ದು ತ್ರಿವೇಣಿ ಸಂಗಮದ ದಡದಲ್ಲಿ ಏರ್ ಷೋ ನಡೆಸಲಾಗಿತ್ತು. ಏರ್ ಷೋ ವೀಕ್ಷಿಸಲು ಲಕ್ಷಾಂತರ ಜನರು ನೆರೆದಿದ್ದುದು ಒಂದು ವಿಶೇಷ. ಈ ಬಾರಿಯ ವರ್ಷಾಚರಣೆಯ ಏರ್ ಷೋನಲ್ಲಿ ಹೆಲಿಕಾಪ್ಟರ್ ತಂಡವು ಒಂದು ಹೆಜ್ಜೆ ಮುಂದೆ ಹೋಗಿದ್ದು, ಐದು ಹೆಲಿಕಾಪ್ಟರ್‌ಗಳು ವಾಯುಸೇನಾ ಪ್ರದರ್ಶನವನ್ನು ಕೈಗೊಂಡಿದ್ದವು. 91 ವರ್ಷಗಳ ನಡಿಗೆಯಲ್ಲಿ ಪ್ರಪ್ರಥಮವಾಗಿ ಸಿ-295 ಸಾರಿಗೆ ವಾಯುನೌಕೆಯನ್ನು ಏರ್‌ಷೋ ಮೂಲಕ ಪ್ರದರ್ಶಿಸಲಾಯಿತು. ಇದೇ ವೇಳೆ ಪಾರಂಪರಿಕ ಎಮ್‌ಐಜಿ-21 ಬೈಸನ್ ವಾಯುನೌಕೆ ತನ್ನ ಅಂತಿಮ ಪ್ರದರ್ಶನವನ್ನೂ ನೀಡಿದೆ. 2025ರ ವೇಳೆಗೆ ಈ ವಾಯುನೌಕೆಯ ಬಳಕೆಯು ಕೊನೆಗೊಳ್ಳಲಿದೆ.
ಈ ವರ್ಷದ ವಾಯುಪಡೆ ದಿನಾಚರಣೆಯ ಮತ್ತೊಂದು ವೈಶಿಷ್ಟ್ಯವೆಂದರೆ ಪ್ರಪ್ರಥಮ ಬಾರಿ ಮಹಿಳಾ ಅಧಿಕಾರಿಯೊಬ್ಬರು ಪೆರೇಡ್‌ನ ಮುಂದಾಳತ್ವವನ್ನು ವಹಿಸಿದ್ದಾರೆ. ಕ್ಯಾಪ್ಟನ್ ಶಲೀಜಾ ಧಮಿ ಈ ಗೌರವಕ್ಕೆ ಪಾತ್ರರಾಗಿದ್ದು, ಈಕೆ ಭಾರತೀಯ ವಾಯುಪಡೆಯ ಯುದ್ಧಘಟಕವನ್ನು ಮುನ್ನಡೆಸಿದ ಮೊಟ್ಟಮೊದಲ ಮಹಿಳೆಯಾಗಿದ್ದಾರೆ. ಈ ವರ್ಷದ ಪೆರೇಡ್‌ನಲ್ಲಿ ಹೊಸದಾಗಿ ಸೇನೆಯಲ್ಲಿ ಸೇರಿರುವ ಅಗ್ನಿವೀರ್ ವಾಯು ಮಹಿಳೆಯರನ್ನೇ ಒಳಗೊಂಡ ಪ್ರತ್ಯೇಕ ಪಡೆಯನ್ನೂ ಸಹ ಒಳಗೊಳ್ಳಲಾಗಿತ್ತು. ಪ್ರಪ್ರಥಮವಾಗಿ ಐಎಎಫ್‌ನ ಗರುಡ ಯುದ್ಧಘಟಕವನ್ನು, 20 ವರ್ಷಗಳ ಕಾರ್ಯಾಚರಣೆಯನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರದರ್ಶಿಸಲಾಯಿತು. ಭಾರತೀಯ ವಾಯುಪಡೆಯ 16 ಸ್ಕ್ವಾಡ್ರನ್, 901 ಸಿಗ್ನಲ್ ಘಟಕ, ಹೆಲಿಕಾಪ್ಟರ್ ಘಟಕ ಹಾಗೂ 3 ಬೇಸ್ ರಿಪೇರ್ ಡಿಪೋ, ಈ ನಾಲ್ಕು ಘಟಕಗಳನ್ನು ಗೌರವಿಸಲಾಯಿತು.
ವಾಯುಪಡೆಯ ದೀರ್ಘನಡಿಗೆ
ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮತ್ತು ಸ್ಯಾಮ್ ಮಾನೆಕ್ ಷಾ ಮುಂತಾದವರ ಪರಂಪರೆಯನ್ನೇ ಮುಂದುವರೆಸಿಕೊಂಡು ಬಂದಿರುವ ಭಾರತೀಯ ವಾಯುಪಡೆಯ ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದೇಶದ ರಕ್ಷಣೆಗಾಗಿ ತಮ್ಮ ತನುಮನವನ್ನು ಅರ್ಪಿಸುವ ಮೂಲಕ ವಾಯುಪಡೆಯನ್ನು ಸದೃಢಗೊಳಿಸುತ್ತಲೇ ಬಂದಿದ್ದಾರೆ. ಸೇನೆ ಎಂದಾಕ್ಷಣ ಯುದ್ಧ, ರಣಾಂಗಣ, ಯುದ್ಧೋತ್ಸಾಹ ಹಾಗೂ ಯುದ್ಧೋನ್ಮಾದಗಳಿಗಷ್ಟೇ ಸೀಮಿತಗೊಳಿಸುವ ಉತ್ಕಟ ಉನ್ಮತ್ತತೆಯಿಂದಾಚೆಗೂ ಭಾರತೀಯ ಸೇನೆ ಮತ್ತು ವಾಯಪಡೆಗೆ ತನ್ನದೇ ಆದ ಅಸ್ತಿತ್ವ ಇರುವುದೇ ಆದರೆ ಅದನ್ನು ವಿಪತ್ತುಗಳ ಸಂದರ್ಭಗಳಲ್ಲಿ ಕೈಗೊಳ್ಳಲಾಗುವ ಕ್ಷಿಪ್ರ ಕಾರ್ಯಾಚರಣೆಗಳಲ್ಲಿ ಗುರುತಿಸಬೇಕಾಗುತ್ತದೆ. ಗಡಿ ರಕ್ಷಣೆ ಮತ್ತು ದೇಶದ ಅಖಂಡತೆ-ಸಾರ್ವಭೌಮತ್ವದ ಸಂರಕ್ಷಣೆಯೊಂದಿಗೇ ಭಾರತೀಯ ವಾಯುಪಡೆ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುವ ಸಾಮಾನ್ಯ ಜನರ ಪಾಲಿಗೆ ಆಪದ್ಬಾಂಧವನಂತೆ ಧಾವಿಸಿರುವುದನ್ನು ಗುರುತಿಸಬೇಕಾಗುತ್ತದೆ.

ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನೆಯಂತೆಯೇ ವಾಯುಪಡೆಯ ಬೆಳವಣಿಗೆಯಲ್ಲೂ ನಾವು ಭಾರತದ ಜ್ಞಾನ ವಾಹಿನಿಗಳಲ್ಲಿ ಪ್ರವಹಿಸುವ ದುಡಿಮೆಯ ಕೈಗಳ ಕೊಡುಗೆಯನ್ನು ಗುರುತಿಸಬೇಕಾಗುತ್ತದೆ. ತಮ್ಮ ಕೌಟುಂಬಿಕ ಬದುಕಿನ ಮಧುರ ಕ್ಷಣಗಳನ್ನೂ ಬದಿಗೊತ್ತಿ ದೇಶಸೇವೆಗೆ, ಜನಸೇವೆಗೆ ಸದಾ ಸನ್ನದ್ಧರಾಗಿರಬೇಕಾದ ವಾಯುಪಡೆಯ ಎಲ್ಲ ಸಿಬ್ಬಂದಿಗಳು, ವಿಶೇಷವಾಗಿ ವಾಯುಸೇನೆಯ ಪೈಲಟ್‌ಗಳು ತಮ್ಮ ಕಾರ್ಯಕ್ಷಮತೆ ಮತ್ತು ವೃತ್ತಿಪರ ದಕ್ಷತೆಯೊಂದಿಗೇ ಮನುಜ-ಸೂಕ್ಷ್ಮ ಸಂವೇದನೆಯನ್ನೂ ಬೆಳೆಸಿಕೊಂಡಿರುತ್ತಾರೆ. ಈ ಮನುಜ ಸೂಕ್ಷ್ಮತೆಯೇ ಅವರನ್ನು ಎಂತಹುದೇ ಅಪಾಯಕಾರಿ ಸನ್ನಿವೇಶಗಳಲ್ಲೂಸಾಮಾನ್ಯ ಜನರ ಪ್ರಾಣರಕ್ಷಣೆಗಾಗಿ ತಮ್ಮ ಜೀವ ಒತ್ತೆ ಇಟ್ಟು ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
ವಿದ್ಯುನ್ಮಾನ ಮಾಧ್ಯಮಗಳು ಬಿಂಬಿಸುವ ರಣೋತ್ಸಾಹ-ಯುದ್ಧೋನ್ಮಾದಗಳ ಆಚೆಗೂ ಭಾರತೀಯ ವಾಯುಪಡೆಯ ಸಿಬ್ಬಂದಿಗಳಲ್ಲಿ ಇರುವ ಜೀವ ಪ್ರೀತಿಯನ್ನು ಈ ಸಂಕೀರ್ಣ ಸನ್ನಿವೇಶಗಳಲ್ಲಿ ಕಾಣಲು ಸಾಧ್ಯ. ಭೌಗೋಳಿಕವಾಗಿ ದೇಶದ ರಕ್ಷಣೆಗಾಗಿ ಆಶಿಸುತ್ತಲೇ, ಆಂತರಿಕವಾಗಿ ದೇಶದ ಅಖಂಡತೆಯನ್ನು ಕಾಪಾಡಲು ಶ್ರಮಿಸುತ್ತಲೇ ತನ್ನ ಸಮರಶೀಲತೆಯನ್ನು ಹೊದ್ದುಕೊಂಡೇ ಶಾಂತಿಗಾಗಿ, ಯುದ್ಧರಹಿತ ಜಗತ್ತಿಗಾಗಿ ಸದಾ ಆಶಿಸುವ ತುಡಿತ ಬಹುಶಃ ವಾಯುಸೇನೆಯ ಸಿಬ್ಬಂದಿಗಳಲ್ಲೂ ಇದ್ದೇ ಇರುತ್ತದೆ. ಈ ಅಶಯಗಳನ್ನು ಹೊತ್ತುಕೊಂಡೇ ತಮ್ಮ ವೃತ್ತಿಧರ್ಮವನ್ನು ಪಾಲಿಸುತ್ತಾ, ಭಾರತೀಯ ವಾಯುಪಡೆಯ ಸೇವೆಯಲ್ಲಿ ನಿರತರಾಗಿರುವ ಸಮಸ್ತ ಸಿಬ್ಬಂದಿಗಳಿಗೂ 91ನೆಯ ವರ್ಷಾಚರಣೆಯ ಸಂಭ್ರಮ ಸಹಜವಾಗಿಯೇ ಅಪ್ಯಾಯಮಾನವಾಗುತ್ತದೆ. ದೇಶದ ನಾಗರಿಕರೂ ಸಹ ವಾಯುಪಡೆಯ ಸೇವೆ, ಕ್ಷಮತೆ ಮತ್ತು ಬದ್ಧತೆಯನ್ನು ಗೌರವಿಸುವುದು ಅಪೇಕ್ಷಣೀಯ. ಈ ತುಡಿತಗಳ ನಡುವೆಯೇ ಭಾರತೀಯ ವಾಯುಪಡೆ ತನ್ನ 91 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ವಿಚಾರ.
-೦-೦-೦-೦-






