ಅಪ್ರಾಪ್ತ ಶಾಲಾ ಬಾಲಕಿಯೊಬ್ಬಳು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಆಕೆಯನ್ನು ಹಿಂಬಾಲಿಸಿ ಅಟ್ಟಿಸಿಕೊಂಡು ಹೋಗಿ ವಿಡಿಯೋ ಚಿತ್ರೀಕರಣ ಮಾಡುವ ದೃಶ್ಯವೊಂದು ಎಲ್ಲೆಡೆ ಹರಿದಾಡುತ್ತಿದೆ. ಮತ್ತೊಂದು ದೃಶ್ಯದಲ್ಲಿ ಶಿವಮೊಗ್ಗದಲ್ಲಿ ಹತ್ತನೆ ತರಗತಿ ವಿದ್ಯಾರ್ಥಿನಿಯೊಬ್ಬರು ತಮಗೆ ಮಾತನಾಡಲು ಇಷ್ಟವಿಲ್ಲ ಎಂದರೂ ಕನ್ನಡ ಸುದ್ದಿಮನೆಗಳು ಆಕೆಯನ್ನು ಪೀಡಿಸುತ್ತಿರುವುದು ಕಂಡುಬರುತ್ತಿದೆ. ಮಾಧ್ಯಮವನ್ನು ಪ್ರತಿನಿಧಿಸುವ ಆ ಛಾಯಾಗ್ರಾಹಕನಿಗೆ ಆಸಕ್ತಿ ಇದ್ದುದು ಆ ಅಮಾಯಕ, ಅಸಹಾಯಕ ಬಾಲಕಿಯ ಕುಂದುಕೊರತೆಗಳ ಬಗ್ಗೆ ಅಲ್ಲ ಅಥವಾ ಆಕೆಯನ್ನು ಕಾಡಬಹುದಾದ ನಿತ್ಯ ಜೀವನದ ಜಂಜಾಟಗಳೂ ಅಲ್ಲ. ಆ ಬಾಲಕಿ ಬಡಕುಟುಂಬದಿಂದ ಬಂದಿದೆಯೋ ಅಥವಾ ಶ್ರೀಮಂತಿಕೆಯಲ್ಲಿ ಮೆರೆಯುತ್ತಿದೆಯೋ ಎನ್ನುವುದು ಮಾಧ್ಯಮ ಪ್ರತಿನಿಧಿಗೆ ಪ್ರಶ್ನೆಯಾಗಲೇ ಇಲ್ಲ. ಅಥವಾ ಆ ಹುಡುಗಿ ಏನು ಸಾಧನೆ ಮಾಡಿರಬಹುದು ಎಂಬ ಕುತೂಹಲವೂ ಆತನನ್ನು ಕಾಡಿರಲಿಕ್ಕಿಲ್ಲ. ಅಟ್ಟಿಸಿಕೊಂಡು ಹೋಗಿ ವಿಡಿಯೋ ಚಿತ್ರೀಕರಣ ಮಾಡಲು ಆ ಮಾಧ್ಯಮ ಛಾಯಾಗ್ರಾಹಕನನ್ನು ಪ್ರಚೋದಿಸಿದ್ದು, ಆ ಎಳೆಯ ಹುಡುಗಿ ಧರಿಸಿದ್ದ ಹಿಜಾಬ್.
ಏಕೆಂದರೆ ಹಿಜಾಬ್ ಈಗ ಕೇವಲ ಮತೀಯ ಅಸ್ಮಿತೆಗಳನ್ನು ಗಟ್ಟಿಗೊಳಿಸುವ ಸಾಧನವಾಗಿ ಉಳಿದಿಲ್ಲ. ಅದು ಮಾಧ್ಯಮಗಳ ಟಿಆರ್ಪಿ ಏರಿಕೆಗೂ, ರಾಜಕೀಯ ಪಕ್ಷಗಳ ಮತಬ್ಯಾಂಕುಗಳ ಧೃವೀಕರಣಕ್ಕೂ, ರಾಜಕೀಯ ನಾಯಕರ ಜನಪ್ರಿಯತೆ (?)ಯ ಹೆಚ್ಚಳಕ್ಕೂ, ಧಾರ್ಮಿಕ ಸಂಸ್ಥೆಗಳ ಕ್ರೋಢೀಕರಣಕ್ಕೂ ಮೂಲ ಬಂಡವಾಳವಾಗಿ ಪರಿಣಮಿಸಿದೆ. ಯಾವುದೇ ರೀತಿಯಲ್ಲಿ ಯಾರಿಗೂ ತೊಂದರೆ ಮಾಡದೆ ತನ್ನ ಪಾಡಿಗೆ ಕೆಲವೇ ಹೆಣ್ಣುಮಕ್ಕಳ ನಿತ್ಯ ಉಡುಪಾಗಿದ್ದ ಒಂದು ವಸ್ತ್ರ ಇಂದು ಇಡೀ ಸಮಾಜವನ್ನೇ ವಿವಸ್ತ್ರಗೊಳಿಸಿ ಬೆತ್ತಲೆಯಾಗಿ ನಿಲ್ಲಿಸಿಬಿಟ್ಟಿದೆ. ಹಿಜಾಬ್ ತಯಾರಿಸುವ ಉದ್ಯಮಿಗಳಿಗಿಂತಲೂ ಈ ವಸ್ತ್ರವನ್ನು ಧರಿಸಿದ ಹೆಣ್ಣುಮಕ್ಕಳ ಬೆನ್ನು ಹತ್ತಿರುವ ಮಾಧ್ಯಮಗಳಿಗೆ, ಮತೀಯವಾದಿಗಳಿಗೆ ಮತ್ತು ಕ್ಷುದ್ರ ರಾಜಕೀಯ ನಾಯಕರಿಗೆ ಇದು ಲಾಭದಾಯಕವಾಗಿ ಪರಿಣಮಿಸಿದೆ.
ಪ್ರಾಪಂಚಿಕ ಬದುಕಿನ ಪರಿವೆಯೇ ಇಲ್ಲದ ಒಬ್ಬ ಪುಟ್ಟ ಬಾಲಕಿಯನ್ನು ಅಟ್ಟಿಸಿಕೊಂಡು ಹೋದ ಮಾಧ್ಯಮ ಮಿತ್ರನಿಗೆ ತನ್ನ ಕ್ಯಾಮರಾದ ಮಸೂರಗಳ ಹಿಂದಿರುವ ಒಂದು ಮೌಲ್ಯಯುತ ನೆಲೆಯೂ ಅರ್ಥವಾಗಬೇಕಿತ್ತಲ್ಲವೇ ? ಹಾಗೆ ಅಟ್ಟಿಸಿಕೊಂಡು ಹೋಗಿ ಕ್ಲಿಕ್ಕಿಸಲು ಇವತ್ತಿನ ಮಾಧ್ಯಮ ಛಾಯಾಗ್ರಾಹಕರಿಗೆ ಸಾಕಷ್ಟು ಅವಕಾಶಗಳಿವೆ. ಬೀದಿ ಬದಿಯ ಕಸದ ರಾಶಿಯಲ್ಲಿ ಆಯುತ್ತಾ ಬದುಕು ಶೋಧಿಸುವ ಎಳೆ ಮಕ್ಕಳು, ತುಂಡುಬಟ್ಟೆ ಧರಿಸಿ ಅಥವಾ ಮೈಮುಚ್ಚಲಾಗದಂತಹ ಹರಿದ ಉಡುಪು ಧರಿಸಿ ತಿಪ್ಪೆಯೊಳಗಿನ ಮೌಲ್ಯಯುತ(?) ವಸ್ತುಗಳನ್ನು ಆಯುವ ಹಸುಳೆಗಳು, ಶಾಲಾ ಶಿಕ್ಷಣದಿಂದಲೂ ವಂಚಿತರಾಗಿ ತಮ್ಮ ಕುಟುಂಬಗಳು ಉಸಿರಾಡುವುದಕ್ಕೆ ನೆರವಾಗುವ ಬಾಲ ಕಾರ್ಮಿಕರು, ಬೀಡಿ ಉದ್ದಿಮೆಗಳಲ್ಲಿ, ಪಟಾಕಿ ಕಾರ್ಖಾನೆಗಳಲ್ಲಿ, ಹೋಟೆಲುಗಳಲ್ಲಿ, ಇಟ್ಟಿಗೆ ಗೂಡುಗಳಲ್ಲಿ, ಕಲ್ಲು ಗಣಿಗಳಲ್ಲಿ ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆಯುತ್ತಲೇ ಜೀವನ ಸಾಗಿಸುವ ಲಕ್ಷಾಂತರ ಹಸುಳೆಗಳು, ಹೀಗೆ “ಅಮೃತಕಾಲ”ದತ್ತ ದಾಪುಗಾಲು ಹಾಕುತ್ತಿರುವ “ಆತ್ಮನಿರ್ಭರ” ಭಾರತದಲ್ಲಿ ಒಪ್ಪೊತ್ತಿನ ಕೂಳಿಗಾಗಿ ಬೆವರು ಸುರಿಸುವ ಲಕ್ಷಾಂತರ ಹಸುಳೆಗಳು ನಮ್ಮ ನಡುವೆ ಇವೆ.

ಶಾಲಾ ಶಿಕ್ಷಣದ ಬಗ್ಗೆ ಯೋಚಿಸಲೂ ಶಕ್ತಿಯಿಲ್ಲದ ಕೋಟ್ಯಂತರ ಕುಟುಂಬಗಳು ನಮ್ಮ ಸುತ್ತಲೂ ಇವೆ. ಕೊಳೆಗೇರಿಗಳಲ್ಲಿ, ಶ್ರೀಮಂತರ ಗಗನಚುಂಬಿ ಕಟ್ಟಡಗಳ ಹಿಂಬದಿಯಲ್ಲಿ, ನವಿರಾದ ಹೆದ್ದಾರಿ ನಿರ್ಮಿಸುವ ಕಾರ್ಮಿಕರ ಕುಟುಂಬಗಳಲ್ಲಿ, ಎರಡು ಹೊತ್ತಿನ ಕೂಳು ಇಲ್ಲದೆಯೇ ತಮ್ಮ ಹೆತ್ತವರ ಕೊರಳಿಗೆ ನೇತು ಹಾಕಿಕೊಳ್ಳುವ ಲಕ್ಷಾಂತರ ಹಸುಳೆಗಳು ನಮ್ಮ ಸುತ್ತಲೂ ಇವೆ. ಈ ದೃಶ್ಯಗಳನ್ನು ಸೆರೆಹಿಡಿಯಲು ಅತ್ಯಾಧುನಿಕ ಕ್ಯಾಮರಾ ಅಥವಾ ಹಲವು ಪಿಕ್ಸೆಲ್ಗಳ ಮಸೂರಗಳ ಅವಶ್ಯಕತೆ ಇಲ್ಲ. ನಮ್ಮೊಳಗಿನ ಅಂತರ್ ದೃಷ್ಟಿಯೊಂದೇ ಸಾಕು. ಮಾಧ್ಯಮಗಳು, ವಿಶೇಷವಾಗಿ ದೃಶ್ಯ ಮಾಧ್ಯಮಗಳು ಇಂತಹ ಒಂದು ಅಂತರ್ ದೃಷ್ಟಿಯನ್ನು ಹೊಂದಿರಬೇಕು. ಈ ದೃಷ್ಟಿಯನ್ನು ಹೊಂದಿರಬೇಕಾದರೆ ಮೂಲತಃ ಮನುಜ ಸೂಕ್ಷ್ಮತೆ ಮತ್ತು ಸಂವೇದನೆ ಇರಬೇಕು. ಮಾಧ್ಯಮಗಳನ್ನು ಪ್ರತಿನಿಧಿಸುವವರಲ್ಲಿ ಸಾಮಾಜಿಕ ಪ್ರಜ್ಞೆ, ಸಾರ್ವತ್ರಿಕ ಅರಿವು ಮತ್ತು ಸಾರ್ವಜನಿಕ ಜವಾಬ್ದಾರಿ ಇರಬೇಕು.
ಮಾಧ್ಯಮ ಅಥವಾ ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಎಂದು ಪರಿಗಣಿಸುವ ಕಾರಣ ಎಂದರೆ, ಇತರ ಮೂರು ಸ್ತಂಭಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಇದು ಸಾರ್ವಜನಿಕರನ್ನು ಎಚ್ಚರಿಸಿ ವ್ಯವಸ್ಥೆಯನ್ನು ಎತ್ತಿಹಿಡಿಯಲು ಮುಂದಾಗಬೇಕಾಗುತ್ತದೆ. ಸಾರ್ವಜನಿಕ ಬದುಕಿನ ನಾಲ್ಕನೆಯ ಧ್ವನಿಯಾಗಿ ಮಾಧ್ಯಮ ಒಂದು ಪ್ರಬಲ ವಾಹಿನಿಯಾಗಿ ಜನಸಾಮಾನ್ಯರ ಬದುಕಿನ ಕನ್ನಡಿಯಂತೆ ಕಾಣಿಸಿಕೊಳ್ಳಬೇಕಾಗುತ್ತದೆ. ಆದರೆ ಇಂದು ಮಾಧ್ಯಮ ರಂಗ ತನ್ನೆಲ್ಲಾ ಅಂತಸತ್ವವನ್ನು ಕಳೆದುಕೊಂಡು ಬೆತ್ತಲೆಯಾಗಿ ನಿಂತುಬಿಟ್ಟಿದೆ. ಪುಟ್ಟ ಬಾಲಕಿಯನ್ನು ಅಟ್ಟಿಸಿಕೊಂಡು ಹೋದ ಛಾಯಾಗ್ರಾಹಕ ಈ ಬೆತ್ತಲೆ ಜಗತ್ತಿನ ಅಭಿವ್ಯಕ್ತಿಯಾಗಿ, ಪ್ರತಿನಿಧಿಯಾಗಿ ಕಾಣುತ್ತಾನೆ. ಈ ವ್ಯಕ್ತಿಯ ವಿರುದ್ಧ ಟಿವಿ ವಾಹಿನಿಯವರು ಅಥವಾ ಸರ್ಕಾರ ಕಾನೂನು ಕ್ರಮ ಜರುಗಿಸುವುದೋ ಇಲ್ಲವೋ ಹೇಳಲಾಗದು ಆದರೆ ಇಂತಹ ವಿಕೃತ ಮನಸ್ಸಿನ ಮಾಧ್ಯಮಗಳನ್ನು ನಿಯಂತ್ರಿಸಬೇಕಾದ್ದು ಪ್ರಜ್ಞಾವಂತ ಸಮಾಜದ ಕರ್ತವ್ಯ.
ಬಂಡವಾಳಶಾಹಿ ಅರ್ಥವ್ಯವಸ್ಥೆ ಸಮಾಜದ ಬೇರುಗಳನ್ನೇ ಕಲುಷಿತಗೊಳಿಸುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಎಲ್ಲ ಅಂಗಗಳೂ, ಅಂಗಸಂಸ್ಥೆಗಳೂ ಮಲಿನಗೊಳ್ಳುತ್ತಿವೆ. ಅಧಿಕಾರ ರಾಜಕಾರಣದ ಲೋಭ, ಅಸ್ಮಿತೆಯ ರಾಜಕಾರಣದ ಮತ್ಸರ ಮತ್ತು ಅಸೂಯೆ, ಸಾಂಸ್ಕೃತಿಕ ರಾಜಕಾರಣದ ಕ್ರೌರ್ಯ ಮತ್ತು ಮತೀಯ ರಾಜಕಾರಣದ ವಿಧ್ವಂಸಕತೆ ಇಂದು ಇಡೀ ಸಮಾಜವನ್ನು ದಿಕ್ಕು ತಪ್ಪಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಬದುಕಿನಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಕಾಪಾಡಬೇಕಾದ ಹೊಣೆಗಾರಿಕೆ ಮಾಧ್ಯಮಗಳ ಮೇಲಿರುತ್ತದೆ. ಆದರೆ ಮತೀಯವಾದ, ಮತಾಂಧತೆ ಮತ್ತು ಜಾತಿ ರಾಜಕಾರಣದ ಬಳ್ಳಿಗಳಿಂದ ಆವೃತವಾಗಿರುವ ಮಾಧ್ಯಮ ಜಗತ್ತು ಹಸಿವು, ದಾರಿದ್ರ್ಯ, ಬಡತನ ಮತ್ತಿತರ ಸಾರ್ವತ್ರಿಕ ಸಮಸ್ಯೆಗಳನ್ನೂ ತನ್ನ ಲಾಭಗಳಿಕೆಯ ಆಕರಗಳಂತೆ ಪರಿಗಣಿಸುತ್ತಿದೆ. ಇದರ ಒಂದು ತುಣುಕನ್ನು ಈಟಿವಿ ಭಾರತ್ ವಾಹಿನಿಯ ಆ ಛಾಯಾಗ್ರಾಹಕ ಪ್ರದರ್ಶಿಸಿದ್ದಾನೆ.
ನಾವು ಕಳೆದುಕೊಳ್ಳುತ್ತಿರುವುದಾದರೂ ಏನನ್ನು? ನಮ್ಮಿಂದಲೇ, ನಮ್ಮ ನಡುವಿನಿಂದಲೇ ಆಯ್ಕೆಯಾಗುವ ಜನಪ್ರತಿನಿಧಿಗಳು ತಾವು ಯಾವುದನ್ನು ಪ್ರತಿನಿಧಿಸುತ್ತಿದ್ದೇವೆ ಎನ್ನುವುದನ್ನೇ ಮರೆತಿದ್ದಾರೆ. ದೇಶದ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ನಾಯಕರು (?) ಸಮಾಜದ ಓರೆಕೋರೆಗಳನ್ನು ಸರಿಪಡಿಸಿ ಒಂದು ಸ್ವಸ್ಥ ಸಮಾಜದ ನಿರ್ಮಾಣದ ಕಾಲಾಳುಗಳಾಗುತ್ತಾರೆ ಎಂಬ ಭರವಸೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಲೇ ಇದೆ. ನೈತಿಕ ಮೌಲ್ಯಗಳನ್ನೂ ಕಳೆದುಕೊಂಡ, ಸಾಂವಿಧಾನಿಕ ಮೌಲ್ಯಗಳನ್ನೂ ಲೆಕ್ಕಿಸದ, ಸಾಮಾಜಿಕ ಮೌಲ್ಯಗಳನ್ನೂ ಕಡೆಗಣಿಸುವ ನೂರಾರು ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿ ಶಾಸನ ಸಭೆಗಳಿಗೆ ಕಳಿಸಿದ್ದೇವೆ. ಬಂಡವಾಳ ವ್ಯವಸ್ಥೆ ಮತ್ತು ಮಾರುಕಟ್ಟೆಯ ಪ್ರಲೋಭನೆಗೊಳಗಾಗಿರುವ ಈ ಜನಪ್ರತಿನಿಧಿಗಳು ಇಂದು ಮತೀಯ ಶಕ್ತಿಗಳ, ಮತಾಂಧ ಪಡೆಗಳ, ಫ್ಯಾಸಿಸ್ಟ್ ಸಂಘಟನೆಗಳ ಕಾಲಾಳುಗಳಾಗಿ, ಸಂವಿಧಾನದ ಅಡಿಪಾಯವನ್ನೇ ಅಲುಗಾಡಿಸುತ್ತಿದ್ದಾರೆ. ಈ ಪ್ರತಿನಿಧಿಗಳು ರೂಪಿಸುವ ಕಾಯ್ದೆ, ಕಾನೂನುಗಳು ಸಮಾಜವನ್ನು ಮುನ್ನಡೆಸುತ್ತವೆ. ಹಾಗಾಗಿಯೇ ಒಂದು ಹಿಜಾಬ್ ನಮ್ಮ ಇಡೀ ವ್ಯವಸ್ಥೆಯನ್ನು ವಿವಸ್ತ್ರಗೊಳಿಸಲು ಸಾಧ್ಯವಾಗಿದೆ.

ಸಾರ್ವಜನಿಕರ ನಿತ್ಯ ಬದುಕಿನತ್ತ ಒಮ್ಮೆ ಕಣ್ಣಾಡಿಸಿದಾಗ ನಮ್ಮೆದುರು ಹಲವಾರು ಜ್ವಲಂತ ಸಮಸ್ಯೆಗಳು ಎದುರಾಗುತ್ತವೆ. ನವ ಉದಾರವಾದದ ಆರ್ಥಿಕ ನೀತಿಗಳು ಜನಸಾಮಾನ್ಯರ ಬದುಕನ್ನು ಅಸ್ಥಿರಗೊಳಿಸುತ್ತಿರುವುದರಿಂದ ಸಮಾಜದ ಎಲ್ಲ ಸ್ತರಗಳಲ್ಲೂ ದುಡಿಯುವ ವರ್ಗ ಬಿಕ್ಕಟ್ಟು ಅಂಗನವಾಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಅತಿಥಿ ಉಪನ್ಯಾಸಕರು, ಗಾರ್ಮೆಂಟ್ ನೌಕರರು, ಕಾರ್ಖಾನೆಗಳ ನೌಕರರು, ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರು ತಮ್ಮ ಭವಿಷ್ಯದ ಚಿಂತೆಯಲ್ಲಿರುವುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಕೋವಿದ್ 19 ಸೃಷ್ಟಿಸಿದ ಬಿಕ್ಕಟ್ಟುಗಳೊಂದಿಗೇ, ಸರ್ಕಾರಗಳು ಅನುಸರಿಸುತ್ತಿರುವ ಆರ್ಥಿಕ ನೀತಿಗಳ ಪರಿಣಾಮ ಇಡೀ ಶಿಕ್ಷಣ ವ್ಯವಸ್ಥೆಯೇ ಕುಸಿಯುತ್ತಿದೆ. ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ ಈ ಜಟಿಲ ಸಮಸ್ಯೆಗಳ ಚರ್ಚೆಯಾಗಬೇಕಿತ್ತು. ಆದರೆ ಹಿಜಾಬ್ನ ಮುಸುಕು ಎಲ್ಲರನ್ನೂ ಕತ್ತಲಲ್ಲಿರಿಸಿದೆ.
ಮಾಧ್ಯಮಗಳು ಸುದ್ದಿ ಕುತೂಹಲಿಗಳಾದಷ್ಟೂ ತಮ್ಮ ವಿವೇಚನೆಯನ್ನು ಕಳೆದುಕೊಳ್ಳುತ್ತವೆ. ಕದನ ಕುತೂಹಲಿಗಳಾದರೆ ವಿವೇಕವನ್ನೂ ಕಳೆದುಕೊಳ್ಳುತ್ತವೆ. ಕೋವಿದ್ 19ರ ಮೊದಲ ಅಲೆಯ ಸಂದರ್ಭದಲ್ಲೇ ಕನ್ನಡದ ಸುದ್ದಿಮನೆಗಳು ತಮ್ಮ ಈ ವಿಕೃತ ಮನೋಭಾವವನ್ನು ಪ್ರದರ್ಶಿಸಿವೆ. ರೋಚಕತೆ ಮತ್ತು ರೋಮಾಂಚಕಾರಿ ಸುದ್ದಿಯಿಂದ ಹೆಚ್ಚಿನ ಜಾಹೀರಾತು ಗಳಿಸಿ, ಟಿಆರ್ಪಿ ಹೆಚ್ಚಿಸಿಕೊಳ್ಳುವ ವಿದ್ಯುನ್ಮಾನ ಮಾಧ್ಯಮಗಳ ಈ ಬೌದ್ಧಿಕ ದಾರಿದ್ರ್ಯ ಮತ್ತು ಲಾಭಕೋರತನವೇ ಸಮಾಜದ ದಿಕ್ಕುತಪ್ಪಿಸುತ್ತಿವೆ. ಅಮಾಯಕ ಬಾಲಕಿಯನ್ನು ಅಟ್ಟಿಸಿಕೊಂಡು ಹೋಗುವ ಛಾಯಾಗ್ರಾಹಕನಿಗೆ ಮೂರು ತಿಂಗಳಿಂದ ಮುಷ್ಕರ ನಿರತರಾಗಿರುವ ಸಾವಿರಾರು ಅತಿಥಿ ಉಪನ್ಯಾಸಕರು, ತಮ್ಮ ಜೀವನ ಮತ್ತು ಜೀವನೋಪಾಯಕ್ಕಾಗಿ ಹೋರಾಡುತ್ತಿರುವ ಐಟಿಐ ಕಾರ್ಮಿಕರು, ಬಹುತೇಕ ಒಂದು ವರ್ಷದಿಂದಲೂ ತಮ್ಮ ಉದ್ಯೋಗ ಭದ್ರತೆಗಾಗಿ ಹೋರಾಡುತ್ತಿರುವ ನಂಜನಗೂಡಿನ ಎ ಟಿ ಅಂಡ್ ಎಸ್ ಕಾರ್ಮಿಕರು ಏಕೆ ಕಾಣುವುದಿಲ್ಲ ?
ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳು ಯುವ ಪೀಳಿಗೆಯ ದಿಕ್ಕು ತಪ್ಪಿಸುತ್ತಿವೆ. ಸಮಾಜದಲ್ಲಿ ಜಾತೀಯತೆ ಮತ್ತು ಮತಾಂಧತೆ ವಿಷವೃಕ್ಷಗಳಂತೆ ಬೆಳೆದು ನಿಂತಿದ್ದು ಸಾಮಾಜಿಕ ಸೌಹಾರ್ದತೆಯನ್ನು ಹಾಳುಗೆಡಹಲಾಗುತ್ತಿದೆ. ನಾಳೆಗಳ ಚಿಂತೆಯಲ್ಲಿರುವ ಲಕ್ಷಾಂತರ ಶ್ರಮಜೀವಿಗಳು ರಾಜ್ಯಾದ್ಯಂತ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಬದುಕಿನ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಕೋವಿದ್ ಸಂದರ್ಭದಲ್ಲಿ ತಮ್ಮ ಮೂಲ ನೆಲೆ ಮತ್ತು ಆದಾಯ ಮೂಲಗಳನ್ನು ಕಳೆದುಕೊಂಡ ಲಕ್ಷಾಂತರ ವಲಸೆ ಕಾರ್ಮಿಕ ಕುಟುಂಬಗಳು ಇಂದಿಗೂ ಸಹ ತಮ್ಮ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಡುವೆಯೇ ಏರುತ್ತಿರುವ ನಿತ್ಯಾವಶ್ಯ ವಸ್ತುಗಳ ಬೆಲೆಗಳಿಂದ ಮಧ್ಯಮ ವರ್ಗದ ಜನತೆಯೂ ತತ್ತರಿಸುವಂತಾಗಿದೆ. ಈ ಸನ್ನಿವೇಶದಲ್ಲಿ ಪತ್ರಿಕಾರಂಗ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಹೊಣೆಗಾರಿಕೆಯಾದರೂ ಏನು ? ಈ ಪ್ರಶ್ನೆ ಸಾರ್ವಜನಿಕರ ಮತ್ತು ಮಾಧ್ಯಮಗಳ ಪ್ರಜ್ಞೆಯನ್ನು ಕಾಡಲೇಬೇಕಿದೆ.
ಬಂಡವಾಳಶಾಹಿ ಉದ್ಯಮಿಗಳ ಹಿಡಿತಕ್ಕೆ ಸಿಲುಕಿರುವ ಮಾಧ್ಯಮ ಸಮೂಹಗಳು, ಸುದ್ದಿಮನೆಗಳು ಈ ಸಮಸ್ಯೆಗಳನ್ನು ವಸ್ತುನಿಷ್ಠವಾಗಿ ಬಿಂಬಿಸುತ್ತವೆ ಎಂಬ ಭ್ರಮೆಯಲ್ಲಿರಬೇಕಿಲ್ಲ. ಆದರೆ ಈ ವಾಹಿನಿಗಳಲ್ಲಿ, ಮಾಧ್ಯಮ ಸಮೂಹಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ, ಪತ್ರಿಕೋದ್ಯೋಗಿಗಳಿಗೆ ವ್ಯಕ್ತಿಗತ ನೆಲೆಯಲ್ಲಾದರೂ ಸಾಮಾಜಿಕ ಪ್ರಜ್ಞೆ ಜಾಗೃತವಾಗಿರಬೇಕಲ್ಲವೇ ? ಮಾಧ್ಯಮ ವರದಿಗಾರರ ಕೈಯ್ಯಲ್ಲಿರುವ ಕ್ಯಾಮರಾಗಳು ಜನಸಾಮಾನ್ಯರ ನಿತ್ಯ ಬದುಕಿನ ಸಂಘರ್ಷಗಳನ್ನು ಸೆರೆಹಿಡಿಯುವಂತಾಗಬೇಕು. ಸಮಾಜದ ಆಂತರ್ಯದಲ್ಲಿ ಅಗೋಚರವಾಗಿರುವ ಸೂಕ್ಷ್ಮ ಬೇಗುದಿಯನ್ನು, ವೇದನೆಯನ್ನು ಹೊರಗೆಳೆಯಲು ನೆರವಾಗಬೇಕು. ಅನ್ನಾಹಾರ ಇಲ್ಲದೆ, ದುಡಿಮೆಯಿಲ್ಲದೆ, ಸೂರಿಲ್ಲದೆ, ನಾಗರಿಕ ಸೌಲಭ್ಯಗಳಿಲ್ಲದೆ ಸೊರಗಿ ಬೆಂಡಾಗುತ್ತಿರುವ ಲಕ್ಷಾಂತರ ಜೀವಗಳು ನಮ್ಮ ಸುತ್ತಲೂ ರುದ್ರ ನರ್ತನವಾಡುತ್ತಿರುವುದು ಈ ಕ್ಯಾಮರಾದ ಮಸೂರಗಳಲ್ಲಿ ಸೆರೆಯಾಗಬೇಕು.

ಈ ಕ್ಯಾಮರಾಗಳನ್ನು ಹೊತ್ತು ಊರೂರು ಅಲೆಯುವ, ಬೀದಿ ಬೀದಿ ಸುತ್ತುವ ಪತ್ರಿಕಾ ಛಾಯಾಗ್ರಾಹಕರಿಗೆ, ವರದಿಗಾರರಿಗೆ ಲೇಖನಿ ಮತ್ತು ಕ್ಯಾಮರಾ ಸಮಾಜಮುಖಿ ಸಾಧನಗಳಾಗಬೇಕೇ ಹೊರತು, ಆಳುವವರ ಪಾದ ತೊಳೆಯುವ ಪರಿಕರಗಳಾಗಬಾರದು. ಜಾತಿ, ಮತ ಮತ್ತು ಧರ್ಮದ ಅಸ್ಮಿತೆಗಳ ಚೌಕಟ್ಟಿನಲ್ಲಿ ಸಿಲುಕಿರುವ ಯುವ ಸಮುದಾಯ ಇಂದು ದಿಕ್ಕು ತೋರದಂತಾಗಿರುವುದು ಹಿಜಾಬ್ ವಿವಾದದ ಸಂದರ್ಭದಲ್ಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ನಾಳಿನ ಉಜ್ವಲ ಭವಿಷ್ಯಕ್ಕಾಗಿ ಹಾತೊರೆಯಬೇಕಾದ ಅಮಾಯಕ ಮನಸುಗಳಲ್ಲಿ, ಬಾಲ್ಯಾವಸ್ಥೆಯಲ್ಲೇ ಕೋಮು ದ್ವೇಷದ, ಮತದ್ವೇಷದ ವಿಷಬೀಜಗಳನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ಶಾಲಾ ಆವರಣವನ್ನು ಪ್ರವೇಶಿಸುವ ಮಾಧ್ಯಮದ ಕ್ಯಾಮರಾ ಕಣ್ಣುಗಳಿಗೆ ಅಲ್ಲಿನ ಮಕ್ಕಳ ಶೈಕ್ಷಣಿಕ ಸಮಸ್ಯೆಗಳು, ಕೊರತೆಗಳು ಮತ್ತು ಬೇಕು ಬೇಡಗಳು ಕಾಣಿಸಬೇಕಲ್ಲವೇ ? ಅಕ್ಷರಹೀನ ಮಕ್ಕಳು ಇಂದಿಗೂ ಅವಕಾಶವಂಚಿತರಾಗಿಯೇ ಬಡತನದ ಬೇಗೆಯಲ್ಲಿ ವಸ್ತ್ರಹೀನರಾಗಿ ಬೆತ್ತಲೆ ತಿರುಗುತ್ತಿರುವುದು ಈ ಕ್ಯಾಮರಾಗಳಲ್ಲಿ ಸೆರೆಯಾಗಬೇಕಿತ್ತಲ್ಲವೇ ?
ಮಾಧ್ಯಮದ ಛಾಯಾಗ್ರಾಹಕರು ಅಟ್ಟಿಸಿಕೊಂಡು ಹೋಗಿ ಚಿತ್ರೀಕರಿಸುವುದೇ ಆದರೆ ರಾಜ್ಯಾದ್ಯಂತ ಶಿಕ್ಷಣ ವಂಚಿತರಾಗಿರುವ ಕೊಳೆಗೇರಿಯ ಲಕ್ಷಾಂತರ ಮಕ್ಕಳು ಕಾಣಲು ಸಾಧ್ಯ ಅಲ್ಲವೇ ? ಮಾಧ್ಯಮಗಳ ಹೊಣೆ ಇರುವುದು ಸಮಾಜದೊಳಗಿನ ಈ ಆಂತರಿಕ ಬೇಗುದಿಯನ್ನು ಸೆರೆಹಿಡಿಯುವಲ್ಲಿ. ತಾವು ಬರೆಯುವ ಅಥವಾ ಟೈಪಿಸುವ ವರದಿಗಳು ಇಂತಹ ಲಕ್ಷಾಂತರ ಶ್ರಮಿಕರ ಬದುಕಿನ ಒಳಬೇಗುದಿಗಳನ್ನು ಹೊರಹಾಕುವಂತಾದರೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಕೃಷ ದೇಹದ ಅಸಹಾಯಕ ಮಕ್ಕಳನ್ನು ಇವರ ಕ್ಯಾಮರಾಗಳು ಸೆರೆ ಹಿಡಿಯುವಂತಾದರೆ, ಆಳುವ ವರ್ಗಗಳಿಗೆ ವಾಸ್ತವ ಸನ್ನಿವೇಶವನ್ನು ಅರ್ಥಮಾಡಿಸುವುದೂ ಸಾಧ್ಯ ಅಲ್ಲವೇ ? ಈ ಸಾಮಾಜಿಕ ಜವಾಬ್ದಾರಿಯನ್ನೇ ಮರೆತು ಪತ್ರಿಕಾ ಕಾರ್ಯಕರ್ತರು, ಛಾಯಾಗ್ರಾಹಕರು ರೋಚಕ ಸುದ್ದಿಗಳಿಗಾಗಿ ಹಂಬಲಿಸುವುದು ಆತ್ಮದ್ರೋಹ ಎನಿಸುವುದಿಲ್ಲವೇ ? ಪ್ರತಿಯೊಬ್ಬ ಪತ್ರಿಕೋದ್ಯೋಗಿಯ ಮನದಲ್ಲೂ ಮೂಡಬೇಕಾದ ಪ್ರಶ್ನೆ ಇದು.
ಕಲುಷಿತವಾಗಿರುವ ಶಾಸಕಾಂಗ ಮತ್ತು ಕಾರ್ಯಾಂಗವನ್ನು ಶುದ್ಧೀಕರಿಸುವ ಗುರುತರ ಜವಾಬ್ದಾರಿ, ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಎನ್ನಲಾಗುವ ಮಾಧ್ಯಮಗಳ ಮೇಲಿದೆ. ಲಕ್ಷಾಂತರ ಜನರನ್ನು ಏಕಕಾಲಕ್ಕೆ ಪರಿಣಾಮಕಾರಿಯಾಗಿ ತಲುಪಬಹುದಾದ ವಿದ್ಯುನ್ಮಾನ ಮಾಧ್ಯಮಗಳನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಪತ್ರಿಕೋದ್ಯೋಗಿಯೂ, ಛಾಯಾಗ್ರಾಹಕನೂ ತನ್ನ ಈ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಿದೆ. ತಮ್ಮ ಜೇಬಿನಲ್ಲಿರುವ ಲೇಖನಿ, ಹೆಗಲಿಗೆ ನೇತಾಡುವ ಕ್ಯಾಮರಾ ಮತ್ತು ಅದರೊಳಗಿನ ಮಸೂರಗಳು, ಸಮಾಜದ ಸುಡುವಾಸ್ತವಗಳನ್ನು, ಕಡು ಸತ್ಯವನ್ನು, ವಿಕಾರಗಳನ್ನು, ಓರೆಕೋರೆಗಳನ್ನು ಹೊರಗಿನ ಪ್ರಪಂಚಕ್ಕೆ ತಿಳಿಸಲು ಬಳಸುವ ಸಾಧನಗಳು ಎನ್ನುವ ಕನಿಷ್ಠ ಪ್ರಜ್ಞೆ ಈ ಉದ್ಯಮದಲ್ಲಿರುವ ಪ್ರತಿಯೊಬ್ಬರಲ್ಲೂ ಇರಬೇಕಾಗುತ್ತದೆ.






