ಉಡುಪಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿಗೆ ಬರಬಾರದೆಂದು ಕೇಸರಿ ಧಾರಿ ವಿದ್ಯಾರ್ಥಿಗಳು ಮಾಡಿರುವ ಪ್ರತಿಭಟನೆ ರಾಜ್ಯದ ಬಹುತೇಕ ಹಿಜಾಬ್‌ಧಾರಿ ವಿದ್ಯಾರ್ಥಿನಿಯರಿಗೆ ಕಂಟಕವಾಗಿ ಪರಿಣಮಿಸಿದೆ. ಹಿಜಾಬ್ ಧರಿಸುವ ತಮ್ಮ ಹಕ್ಕಿನ ಕುರಿತು ಉಡುಪಿ ಕಾಲೇಜಿನ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ಹಂತದಲ್ಲಿದೆ.
ಈ ನಡುವೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ್ದು, ಕಾಲೇಜು ಅಭಿವೃದ್ಧಿ ಮಂಡಳಿ ನಿಗದಿಪಡಿಸಿದ ವಸ್ತ್ರಸಂಹಿತೆ ಅನುಸರಿಸಬೇಕು. ಯಾವುದೇ ವಿದ್ಯಾರ್ಥಿಗಳು ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಬರಬಾರದೆಂದು ಹೇಳಿದೆ.
ಅದಾಗ್ಯೂ, ಚಾಮರಾಜನಗರದಲ್ಲಿ ಹೇಳಿಕೆ ಕೊಟ್ಟಿದ್ದ ಸಚಿವ ಅಶ್ವತ್ಥ ನಾರಾಯಣ ಅವರು ಡಿಗ್ರಿ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಅನ್ವಯ ಆಗುವುದಿಲ್ಲ ಎಂದು ಹೇಳಿದ್ದರು.
ಅದರಂತೆ, ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದಾರೆ. ಆದರೆ, ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಉಲ್ಲೇಖಿಸಿ ಕಾಲೇಜು ಪ್ರಾಂಶುಪಾಲೆ ಶ್ರೀಜಾ ಅವರು ವಿದ್ಯಾರ್ಥಿನಿಯರನ್ನು ಹಿಜಾಬ್ ಧರಿಸಿ ತರಗತಿಗೆ ಪ್ರವೇಶವನ್ನು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನೀಡದ ಕಾರಣ ವಿದ್ಯಾರ್ಥಿನಿಯರು ತಮ್ಮ ಮನೆಗಳಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಮಂಗಳೂರು ವಿಶ್ವವಿದ್ಯಾಲಯದ ಕಛೇರಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಪ್ರಶ್ನಿಸಿದಾಗ, ವಸ್ತ್ರ ಸಂಹಿತೆ ಇರುವ ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ಇಲ್ಲ. ಶಿಕ್ಷಣ ಸಚಿವರು ಹೇಳಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದಾರೆ. ವಿಟ್ಲ ಸರ್ಕಾರಿ ಕಾಲೇಜಿನಲ್ಲಿ ನಡೆದ ಬಗ್ಗೆ ಪ್ರಶ್ನಿಸಿದಾಗ ಪ್ರಾಂಶುಪಾಲೆಯೊಂದಿಗೆ ಮಾತನಾಡಿ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತೇನೆ ಎಂದು ಅವರು ತಿಳಿಸಿ ಫೋನ್ ಕರೆ ಕಟ್ ಮಾಡಿದ್ದಾರೆ. ತದ ನಂತರ ಆ ಸಂಖ್ಯೆಗೆ ಮಾಡಿರುವ ಕರೆಯನ್ನು ಅವರು ಸ್ವೀಕರಿಸಿಲ್ಲ.
ಉನ್ನತ ಶಿಕ್ಷಣ ಸಚಿವರ ಹೇಳಿಕೆಯ ಆಧಾರದ ಮೇಲೆ ಕಾಲೇಜಿನ ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ ಅವರು, ʼನಮಗೆ ನಮ್ಮ ಮೇಲಿನ ಅಧಿಕಾರಿಗಳಿಂದ ಆದೇಶ ಬಂದಿದೆ. ಅದನ್ನಷ್ಟೇ ನಾವು ಪಾಲಿಸುತ್ತಿದ್ದೇವೆʼ ಎಂದು ತಿಳಿಸಿದ್ದಾರೆ. ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಅವರು, ಸೂಚನಾ ಫಲಕದಲ್ಲಿ ಹಾಕಿರುವ ಹೈಕೋರ್ಟ್ ಮಧ್ಯಂತರ ಆದೇಶದ ಪ್ರತಿಯನ್ನು ತೋರಿಸಿ, ನಾವು ಅದನ್ನಷ್ಟೇ ಫಾಲೋ ಮಾಡುತ್ತಿದ್ದೇವೆ. ಮಾಧ್ಯಮಗಳೊಂದಿಗೆ ಮಾತನಾಡದಂತೆ ನಮಗೆ ನಿರ್ಬಂಧವಿದೆ ಎಂದು ತಿಳಿಸಿದ್ದಾರೆ.
ಇನ್ನು, ಕಾಲೇಜಿನ ಅಭಿವೃಧ್ಧಿ ಮಂಡಳಿ ನಿಗದಿಪಡಿಸಿರುವ ವಸ್ತ್ರ ಸಂಹಿತೆ ಮಾದರಿಯೇನು ಎಂಬ ಪ್ರಶ್ನೆಗೆ ಕಾಲೇಜಿನ ಕಡೆಯಿಂದ ಸಮರ್ಪಕವಾದ ಉತ್ತರ ದೊರೆತಿಲ್ಲ. ಕಾಲೇಜಿನ ಅಧಿಕೃತ ವೆಬ್‌ಸೈಟಿನಲ್ಲಿ ಸಮವಸ್ತ್ರ ಧರಿಸಬೇಕೆಂದು ಇದೆ ಎಂದು ಸಿಬ್ಬಂದಿ ಒಬ್ಬರು ತಿಳಿಸಿದಾಗ್ಯೂ, ಆ ಸಮವಸ್ತ್ರ ಯಾವ ಮಾದರಿಯದ್ದು, ಅದರಲ್ಲಿ ತಲೆ ಮುಚ್ಚಬಾರದು ಎಂದು ಉಲ್ಲೇಖಿಸಲಾಗಿದೆಯೇ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಸಿಕ್ಕಿಲ್ಲ. ವೆಬ್‌ಸೈಟಿನಲ್ಲಿ ಪ್ರಕಟಗೊಂಡಿರುವ ವಿದ್ಯಾರ್ಥಿಗಳಿಗೆ ನೀತಿ ಸಂಹಿತೆಯ 3ನೇ ನಿಯಮದಲ್ಲಿ “ಎಲ್ಲಾ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‌ನಲ್ಲಿ ಸಮವಸ್ತ್ರದಲ್ಲಿರಬೇಕು ಮತ್ತು ಅವರು ಕಾಲೇಜನ್ನು ಪ್ರತಿನಿಧಿಸುವಾಗ ಸಮವಸ್ತ್ರವನ್ನು ಧರಿಸಬೇಕು” ಎಂದಿದೆ. ಆದರೆ, ಆ ಸಮವಸ್ತ್ರ ಯಾವ ಮಾದರಿಯದ್ದು ಎನ್ನುವುದರ ಬಗ್ಗೆ ಸ್ಪಷ್ಟ ಉಲ್ಲೇಖಗಳಿಲ್ಲ.

ಅದೂ ಮಾತ್ರವಲ್ಲದೆ, ಮಂಗಳವಾರ ಚಾಮರಾಜನಗರದಲ್ಲಿ ಮಾತನಾಡಿದ್ದ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಅವರು ಸ್ಪಷ್ಟವಾಗಿ, ʼಡಿಗ್ರಿ ಕಾಲೇಜಿನಲ್ಲಿ ಹಿಜಾಬ್ ಗೆ ಯಾವ ನಿರ್ಬಂಧವಿಲ್ಲ, ಅಲ್ಲಿ ಹಾಕಬಹುದು, ಆದರೆ ಪಿಯು ಮತ್ತು ಶಾಲೆಗಳಲ್ಲಿ ನಿಗದಿ ಪಡಿಸಿದ ಸಮವಸ್ತ್ರ ಧರಿಸಬೇಕುʼ ಎಂದು ಹೇಳಿದ್ದಾರೆ.
ಅಶ್ವತ್ಥ ನಾರಾಯಣ ಅವರ ಈ ಹೇಳಿಕೆಯನ್ನು ಬುಧವಾರದ ವಿಧಾನಸಭೆ ಅಧಿವೇಶನದ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಕುರಿತು ಸ್ಪಷ್ಟೀಕರಣ ಕೇಳಿದ್ದಾರೆ.
ಅದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವರು ತಮ್ಮ ಇಲಾಖೆಯ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಅದರಲ್ಲಿ ಇನ್ನು ನಮ್ಮ ಸ್ಪಷ್ಟೀಕರಣದ ಅಗತ್ಯವಿಲ್ಲ ಎಂದಿದ್ದಾರೆ. ಅಂದರೆ ಸಿಎಂ ಕೂಡಾ, ಅಶ್ವತ್ಥ ನಾರಾಯಣ ಅವರ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ, ಸಚಿವರು ಡಿಗ್ರಿ ಕಾಲೇಜಿನಲ್ಲಿ ಸಮವಸ್ತ್ರಕ್ಕೆ ಅವಕಾಶ ಇದೆ ಎಂದು ಹೇಳಿಕೆ ನೀಡಿದ ಒಂದು ದಿನದ ಬೆನ್ನಲ್ಲೇ, ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಅನುವು ಮಾಡಿಕೊಡದೆ ಇರುವುದು ಯಾವ ಆಧಾರದ ಮೇಲೆ ಎಂಬ ಪ್ರಶ್ನೆ ಉದ್ಭವವಾಗಿದೆ.