ಕೋವಿಡ್‌ ಲಸಿಕೆ ಹಾಕಿಸಿದ ಬಳಿಕ ಕಂಡುಬರುವ ʼಗಂಭೀರವಲ್ಲದʼ ಸಂಭಾವ್ಯ ಅಡ್ಡಪರಿಣಾಮಗಳಿವು!

ಭಾರತದಲ್ಲಿ ಇದುವರೆಗೂ ನೀಡಲಾಗುತ್ತಿದ್ದ ಕೋವಿಡ್‌ ವಿರೋಧಿ ಲಸಿಕೆಗಳಾದ ಕೋವಿಶೀಲ್ಡ್‌ ಹಾಗೂ ಕೊವಾಕ್ಸಿನ್‌ ಹೊರತಾಗಿ ಇದೀಗ ರಷ್ಯಾದಲ್ಲಿ ತಯಾರಾಗಿರುವ ಸ್ಪುಟ್ನಿಕ್‌ ವಿ ಕೋವಿಡ್‌ ಲಸಿಕೆ ನೀಡಿಕೆಗೂ ಚಾಲನೆ ನೀಡಲಾಗಿದೆ. ಶುಕ್ರವಾರ ಹೈದರಾಬಾದ್‌ನ ವ್ಯಕ್ತಿಯೊಬ್ಬರಿಗೆ ಈ ಲಸಿಕೆ ನೀಡಿ ಅಧಿಕೃತವಾಗಿ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಅದರೊಂದಿಗೆ, ದೇಶದಲ್ಲಿ ಒಟ್ಟು ಮೂರು ವಿಧದ ಕೋವಿಡ್‌ ಲಸಿಕೆಗಳ ನೀಡಿಕೆ ಚಾಲ್ತಿಯಲ್ಲಿದೆ.

ಕೋವಿಡ್‌ ಲಸಿಕೆಗಳ ಕುರಿತಂತೆ ಜನರಲ್ಲಿ ಅಪನಂಬಿಕೆ ಇರುವಂತೆಯೇ, ಲಸಿಕೆ ಪಡೆದುಕೊಂಡವರಲ್ಲಿ ಕಂಡು ಬಂದ ಕೆಲವು ಅಡ್ಡಪರಿಣಾಮಗಳ ಲಕ್ಷಣಗಳು ಲಸಿಕೆ ಕುರಿತಂತಹ ಭಯಕ್ಕೆ ಇನ್ನಷ್ಟು ಪುಷ್ಟಿ ನೀಡಿತ್ತು. ಆದರೆ, ಈ ಅಡ್ಡ ಪರಿಣಾಮಗಳು ಗಂಭೀರ ಅಪಾಯವಾದುದಲ್ಲ, ಸಾಮಾನ್ಯವಾದುದು ಎಂದು ತಜ್ಞರು ಹೇಳಿದ್ದಾರೆ. ಜಾಗತಿಕ ಲಸಿಕೆ ತಜ್ಞರೆ ಲಸಿಕೆ ಕುರಿತಂತೆ ಅಧ್ಯಯನ ನಡೆಸಿದ್ದು, ಅಡ್ಡ ಪರಿಣಾಮಗಳನ್ನು ಪಟ್ಟಿ ಮಾಡಿದ್ದಾರೆ. 

ಕೋವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಲಸಿಕೆಗಳನ್ನು ಹಾಕಿಸಿಕೊಂಡವರಲ್ಲಿ ಕಾಣಿಸಿಕೊಳ್ಳಬಹುದಾದ ;ಗಂಭೀರವಲ್ಲದʼ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

(ವಿ.ಸೂ: ಈ ಅಡ್ಡ ಪರಿಣಾಮಗಳು ಅಪಾಯಕಾರಿಯಲ್ಲ, ಸಾಮಾನ್ಯವಾದುದು ಹಾಗೂ ಪ್ರತಿಯೊಬ್ಬರಲ್ಲಿಯೂ ಅಡ್ಡಪರಿಣಾಮ ಉಂಟಾಗಬೇಕೆಂದಿಲ್ಲ)

ಕೊವ್ಯಾಕ್ಸಿನ್Covaxin

ನಿಷ್ಕ್ರಿಯಗೊಳಿಸಿದ ‘ಸಾರ್ಸ್‌–ಕೊವ್–2’ ಆಂಟಿಜೆನ್ ವೈರಸ್‌ ಬಳಸಿಕೊಂಡು ಕೊವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. (ಅಂದರೆ ಮೃತಪಟ್ಟ ವೈರಸ್‌ ಬಳಸಿಕೊಂಡು) ಈ ಲಸಿಕೆಯು, ಜೀವಂತ ವೈರಸ್ ದೇಹವನ್ನು ಬಾಧಿಸಿದಾಗ ಅದರ ವಿರುದ್ಧ ಹೋರಾಡಲು ಶರೀರವನ್ನು ಅಣಿಗೊಳಿಸುವ ಕೆಲಸ ಮಾಡುತ್ತದೆ.

ಈ ಲಸಿಕೆ ಹಾಕಿಸಿಕೊಂಡವರಲ್ಲಿ, ಚುಚ್ಚಿಸಿಕೊಂಡ ಜಾಗ ಕೆಂಪು ಬಣ್ಣಕ್ಕೆ ತಿರುಗುವುದು, ಬಾವು, ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಕೆಲವರಲ್ಲಿ ಜ್ವರ, ಶೀತ, ಅತಿಯಾಗಿ ಬೆವರುವುದು, ತುರಿಕೆ, ವಾಂತಿ, ತಲೆನೋವು ಕಾಣಿಸಿಕೊಳ್ಳಬಹುದು. ಆದರೆ, ಇದುವರೆಗೆ ಈ ಲಸಿಕೆ ಹಾಕಿಸಿಕೊಂಡವರಲ್ಲಿ ಯಾವುದೇ ಗಂಭೀರ ಅಡ್ಡಪರಿಣಾಮಗಳು ಕಾಣಿಸಿಕೊಂಡಿಲ್ಲ.

ಈ ಲಸಿಕೆಯನ್ನು ಭಾರತ್‌ ಬಯೋಟೆಕ್‌ ಹಾಗೂ ಐಸಿಎಂಆರ್‌ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ಸ್ಪುಟ್ನಿಕ್ ವಿSputnik V 

ಹೊಸದಾಗಿ ಭಾರತದಲ್ಲಿ ಲಸಿಕೆ ಚಾಲನೆ ಆರಂಭಗೊಂಡಿರುವ ಸ್ಪುಟ್ನಿಕ್‌ ವಿಯನ್ನು ಸಾಮಾನ್ಯ ಶೀತ, ನೆಗಡಿಗೆ ಕಾರಣವಾಗುವ ‘ಎಡಿ26’, ‘ಎಡಿ5’ ಮತ್ತು ‘ಸಾರ್ಸ್‌–ಕೊವ್–2’ ವೈರಸ್‌ಗಳನ್ನು ಸಂಯೋಜಿಸಿ ಸಿದ್ಧಪಡಿಸಲಾಗಿದೆ. ಇದು ದೇಹವನ್ನು ಕೋವಿಡ್‌ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಗೆ ಪ್ರೇರೇಪಣೆ ನೀಡುತ್ತದೆ. ಈ ಲಸಿಕೆ ಹಾಕಿಸಿಕೊಂಡವರಲ್ಲಿ ತಲೆನೋವು, ಆಯಾಸ, ಚುಚ್ಚುಮದ್ದು ತೆಗೆದುಕೊಂಡ ಜಾಗದಲ್ಲಿ ನೋವು, ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆದರೆ, ಗಂಭೀರವಾದ ಯಾವುದೇ ಅಡ್ಡಪರಿಣಾಮಗಳು ಈವರೆಗೆ ಕಂಡುಬಂದಿಲ್ಲ. ವಿರಳಾತಿ ವಿರಳ ಪ್ರಕರಣಗಳಲ್ಲಿ ಲಸಿಕೆ ಹಾಕಿಸಿಕೊಂಡ ಕೆಲವರಲ್ಲಿ ಅಧಿಕ ರಕ್ತದೊತ್ತಡ, ರಕ್ತ ಹೆಪ್ಪುಗಟ್ಟುವಿಕೆ ಕಾಣಿಸಿಕೊಂಡಿದೆ. ಆದರೆ ಲಸಿಕೆ ಹಾಕಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂಬುವುದನ್ನು ದೃಢಪಡಿಸುವ ಯಾವ ಅಂಶಗಳೂ ಪತ್ತೆಯಾಗಿಲ್ಲ.

ಕೋವಿಶೀಲ್ಡ್Covishield

ಈ ಲಸಿಕೆಯನ್ನು ಆಕ್ಸ್‌ಫರ್ಡ್‌–ಆಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಸದ್ಯ 62 ದೇಶಗಳಲ್ಲಿ ಈ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಗುತ್ತಿದೆ. ಚಿಂಪಾಂಜಿಯಲ್ಲಿ ಜ್ವರಕ್ಕೆ ಕಾರಣವಾಗುವ ವೈರಸ್ಸೊಂದನ್ನು ನಿಷ್ಕ್ರಿಯಗೊಳಿಸಿ ಅದಕ್ಕೆ ಕರೊನಾ ವೈರಸ್‌ ಮಾದರಿಯ ಪ್ರತಿರೂಪವನ್ನು ಸೇರಿಸಿ ಅಭಿವೃದ್ಧಿಪಡಿಸಿರುವ ಲಸಿಕೆ ಇದು.

ಈ ಲಸಿಕೆ ಹಾಕಿಸಿಕೊಂಡಾಗ, ಇದನ್ನು ಕರೊನಾ ವೈರಸ್ ಎಂದು ಭಾವಿಸಿ ದೇಹವು ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ಕೊವ್ಯಾಕ್ಸಿನ್‌ ಅಡ್ಡ ಪರಿಣಾಮದಂತೆಯೇ ಈ ಲಸಿಕೆ ಪಡೆದ ಕೆಲವರ ಪೈಕಿಯೂ ಚುಚ್ಚುಮದ್ದು ಹಾಕಿಸಿಕೊಂಡ ಜಾಗದಲ್ಲಿ ಚರ್ಮ ಕೆಂಪಾಗುವಿಕೆ, ನೋವು, ಸಾಮಾನ್ಯ ಅಥವಾ ತೀವ್ರ ಜ್ವರ, ನಿದ್ದೆ ತೂಗುವುದು, ಉದಾಸೀನತೆ, ತೋಳು ಬಿಗಿಯಾಗುವುದು ಹಾಗೂ ದೇಹದಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಂತಹ ಗಂಭೀರ ಅಡ್ಡಪರಿಣಾಮಗಳು ವರದಿಯಾಗಿವೆ. ಆದರೆ ಅವು ತೀರಾ ವಿರಳಾತಿ ವಿರಳವಾಗಿದ್ದು ಅದಕ್ಕೆ ಬೇರೆ ಕಾರಣಗಳೂ ಇರಬಹುದೆಂದು ತಜ್ಞರು ಹೇಳಿದ್ದಾರೆ. ಹಾಗಾಗಿ ಇದಕ್ಕೂ ಭಯಪಡಬೇಕಾದ ಅವಶ್ಯಕತೆ ಇಲ್ಲ.

Inputs: DH

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...