ಬೆಂಗಳೂರು : ವಿರೋಧ ಪಕ್ಷದವರು ನಮ್ಮನ್ನು ಟೀಕೆ ಮಾಡುತ್ತಿದ್ದರು. ನಮ್ಮಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆದಿಯಾಗಿ ಕರ್ನಾಟಕದ ವಿರೋಧ ಪಕ್ಷದವರು ಇದನ್ನು ಜಾರಿ ಮಾಡಿದರೆ ಖಜಾನೆ ಖಾಲಿ ಆಗುತ್ತದೆ, ಅಭಿವೃದ್ಧಿ ಕೆಲಸಕ್ಕೆ ಹಣವಿರುವುದಿಲ್ಲ ಎಂದು ಟೀಕಿಸುತ್ತಿದ್ದರು. ಆದರೆ ನಾವು ಯಾವುದೇ ಟೀಕಗಳಿಗೆ ಸೊಪ್ಪು ಹಾಕದೇ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿ ಎಲ್ಲಾ ಗ್ಯಾರಂಟಿಗಳನ್ನು, ಭರವಸೆಗಳನ್ನು ಈಡೇರಿಸುವಂತಹ ಕೆಲಸವನ್ನು ಮಾಡಿದ್ದೇವೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ಇಂದು ಒಂದು ಮಹತ್ವದ ದಿನ, ಬಿ.ಕೆ. ಹರಿಪ್ರಸಾದ್ ನೂತನ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಇಲ್ಲಿಯವರೆಗೆ ಡಿಕೆಶಿ ಅವರು ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಕೆ. ಹರಿಪ್ರಸಾದ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಲ್ಲದೆ ನಿರ್ಗಮಿತ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ನಾನು ಈ ರಾಜ್ಯದ ವಿರೋಧ ಪಕ್ಷದ ನಾಯಕನಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ ಶಿವಕುಮಾರ್ ಈ ರಾಜ್ಯದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಈ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದೇವೆ. ಪ್ರಣಾಳಿಕೆಯಲ್ಲಿ ಕೊಟ್ಟಿರುವಂತಹ ಭರವಸೆಗಳನ್ನು ಈಡೇರಿಸುವಂತ ಪ್ರಾಮಾಣಿಕ ಕೆಲಸವನ್ನು ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಮತ್ತು ಸ್ಥಳೀಯ ನಾಯಕರಾದ ನಾವೆಲ್ಲಾ ತೀರ್ಮಾನ ಮಾಡಿದ್ದಂತಹ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಕಳೆದ ಮೂರು ವರ್ಷಗಳಿಂದ 1 ಲಕ್ಷದ 40 ಸಾವಿರಕ್ಕೂ ಹೆಚ್ಚೂ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ನನ್ನ ಪ್ರಯತ್ನಗಳಿಗೆ ಡಿ.ಕೆ ಶಿವಕುಮಾರ್ ಕೂಡ ಅಧ್ಯಕ್ಷರಾಗಿ ಹೆಗಲಿಗೆ ಹೆಗಲುಕೊಟ್ಟು ದುಡಿದಿದ್ದಾರೆ. ನಾವು ಅನೇಕ ಹೋರಾಟಗಳನ್ನು ಮಾಡಿ ಪಕ್ಷ ಸಂಘಟನೆ ಮಾಡಿ 2023ರಲ್ಲಿ ಶಿವಕುಮಾರ್ ಅವರು ಅಧ್ಯಕ್ಷರಾಗಿ, ನಾನು ವಿರೋಧ ಪಕ್ಷದ ನಾಯಕನಾಗಿ 136 ಸ್ಥಾನವನ್ನು ಗೆದ್ದಿದ್ದೆವು. ಇದು ಬರೀ ನಮ್ಮಿಬ್ಬರ ಗೆಲುವಲ್ಲ, ಬದಲಿಗೆ ನಿಮ್ಮೆಲ್ಲರ ಪ್ರಯತ್ನದಿಂದ, ಇಲ್ಲಿ ಆಸೀನರಾಗಿರುವ ನಾಯಕರುಗಳು, ಕಾರ್ಯಕರ್ತ ಬಂಧುಗಳಿಂದ ನಾವು ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಇವತ್ತು ಹರಿಪ್ರಸಾದ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿರುವ ಸೋನಿಯಾ ಗಾಂಧಿಯ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ವೇಣುಗೋಪಾಲ್, ರಣ್‌ದೀಪ್ ಸಿಂಗ್ ಸುರ್ಜೇವಾಲ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೈಕಮಾಂಡ್ ಸಹಕಾರವನ್ನು ಸ್ಮರಿಸಿದ್ದಾರೆ.
ಇದನ್ನೂ ಓದಿ : ಕುಮಾರಸ್ವಾಮಿ ಕುಟುಂಬದ ಭೂಮಿ ವಿವಾದಕ್ಕೆ ನಿಖಿಲ್ ಉತ್ತರ; ಆಸ್ತಿ ವಿವರ ಬಹಿರಂಗ
ಹರಿಪ್ರಸಾದ್ ಅವರು ಕೆಳಹಂತದಿಂದ ಬಂದಿರುವವರು. ಸಾಮಾನ್ಯ ಕುಟುಂಬದಿಂದ ಬಂದಿರುವವರು. ಸಾಮಾನ್ಯ ಕಾರ್ಯಕರ್ತರಾಗಿ ಸುಮಾರು 1972 ಇಸವಿಯಲ್ಲಿ ಬಂದು ಇಲ್ಲಿಯವರೆಗೆ ಸುಮಾರು 5 ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ನಿಷ್ಠೆಯಿಂದ ಸೇವೆ ಮಾಡಿದ್ದಾರೆ. ಅವರು ವಿದ್ಯಾರ್ಥಿ ನಾಯಕನಾಗಿ, ಯುವ ಕಾಂಗ್ರೆಸ್‌ನ ನಾಯಕನಾಗಿ ಅನೇಕ ರಾಜ್ಯಗಳ ಉಸ್ತುವಾರಿಯನ್ನು ವಹಿಸಿಕೊಂಡು, ಸೇವಾದಳದ ಅಧ್ಯಕ್ಷನಾಗಿ ಸೇವೆ ಮಾಡಿದ್ದಾರೆ. ಅಂತವರು ಇಂದು ಬಹಳ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅವರ ನಿಷ್ಠೆ, ಸಿದ್ಧಾಂತಕ್ಕೆ ಬದ್ಧತೆ, ಕಾಂಗ್ರೆಸ್ ಕಾರ್ಯಕರ್ತನಾಗಿ ಅನೇಕ ಸ್ಥಾನಗಳಲ್ಲಿ ಕೆಲಸ ಮಾಡಿದ ಪರಿಣಾಮವಾಗಿ ಇವತ್ತು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಅವರಿಗೆ ಈ ನಿಟ್ಟಿನಲ್ಲಿ ನಾನು ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಹರಿಪ್ರಸಾದ್ ಅವರು ಸಿದ್ಧಾಂತಕ್ಕೆ ಬದ್ದರಾಗಿರುವುದರಿಂದ ಕಾಂಗ್ರೆಸ್ ಅನ್ನು ಬಲಪಡಿಸುವಂತಹ ಶಕ್ತಿಯಿದೆ. ಕಾಂಗ್ರೆಸ್‌ನ ಮೂಲ ಸಿದ್ಧಾಂತವೇನಿದೆ? ಸಂವಿಧಾನದ ಆಶಯಗಳೇನಿವೆ? ಅವುಗಳನ್ನು ಜಾರಿ ಮಾಡುವಂತಹ ಪ್ರಯತ್ನಗಳನ್ನು ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಇವತ್ತು 2014ರಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂತು, ಅವರು ಅಧಿಕಾರಕ್ಕೆ ಬಂದಮೇಲೆ ಈ ದೇಶದ ಬಹುತ್ವವನ್ನು ಹಾಳುಮಾಡುವಂತಹ ಪ್ರಯತ್ನವನ್ನು ಮಾಡಿದ್ದಾರೆ. ಭಾರತ ದೇಶ ಅನೇಕ ಜಾತಿ-ಧರ್ಮ, ಸಂಸ್ಕೃತಿಯಿಂದ ಕೂಡಿದೆ. ಈ ದೇಶದಲ್ಲಿ ನಾವು ಬಹುತ್ವವನ್ನು ಕಾಪಾಡುವಂತದ್ದು, ಗೌರವವನ್ನು ಕೊಡುವಂತಹದ್ದು ಅತ್ಯಂತ ಅವಶ್ಯವಾಗಿದೆ. ಭಾರತೀಯ ಜನತಾ ಪಕ್ಷದವರು ಧರ್ಮದ ಹೆಸರಿನಲ್ಲಿ , ಜಾತಿಯ ಹೆಸರಿನಲ್ಲಿ ಹಾಗೂ ಸಂಸ್ಕೃತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಹರಿಪ್ರಸಾದ್ ಅವರಿಗೂ ನಮ್ಮ ಕಾರ್ಯಕರ್ತರಿಗೂ ಇದೊಂದು ಸವಾಲು. ಇಂದು ದೇಶದ ಅನೇಕರಿಗೆ ಕಾಂಗ್ರೆಸ್‌ನ ಇತಿಹಾಸ ಗೊತ್ತಿಲ್ಲದೆ ಇರುವಂತಹದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಪಾತ್ರ ಏನು ಎಂಬುದು ಅರಿವಿಲ್ಲದಂತಹದ್ದು, ಸಂವಿಧಾನದ ಮೂಲ ಉದ್ದೇಶಗಳೇನೆಂದು ತಿಳಿದಿಲ್ಲದಿರುವುದು. ಇದನ್ನು ತಿಳಿಸುವ ಕೆಲಸ ನಿಮ್ಮಿಂದ ಆಗಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಬಿ.ಕೆ ಹರಿಪ್ರಸಾದ್ ಜೊತೆ ನಮ್ಮೆಲ್ಲಾ ಕಾರ್ಯಕರ್ತರು ನಿಲ್ಲಬೇಕೆಂದು ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದೇನೆ. ನಮ್ಮ ಸಿದ್ಧಾಂತವೇನಿದೆ, ಸಂವಿಧಾನದ ಮೂಲ ಆಶಯಗಳೇನಿವೆ? ಆ ಆಶಯಗಳನ್ನು, ಸಂವಿಧಾನವನ್ನು ಜಾರಿ ಮಾಡುವಂತಹ ಪ್ರಯತ್ನವನ್ನು ಮಾಡಬೇಕು. ಅಷ್ಟೆ ಅಲ್ಲದೇ ಇನ್ನೊಂದು ಹೆಜ್ಜೆ ಮುಂದಡಿಯಿಟ್ಟು ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ, ಬೂತ್ ಮಟ್ಟದಲ್ಲಿ ಶಿಬಿರಗಳನ್ನು ಮಾಡುವಂತಹ ಪ್ರಯತ್ನಗಳನ್ನು ಮಾಡಬೇಕು ಎಂದು ಕರೆ ನೀಡಿದ್ದಾರೆ.
ಇವತ್ತು ಸಂವಿಧಾನದ ಮೂಲ ಉದ್ದೇಶವನ್ನು ಈಡೇರಿಸುವಂತಹ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅದಕ್ಕಾಗಿ ನಾನು ಮುಖ್ಯಮಂತ್ರಿಯಾಗಿರುವಾಗ ಮಹದೇವಪ್ಪ ಸಮಾಜ ಕಲ್ಯಾಣ ಮಂತ್ರಿಯಾಗಿ ವಿದ್ಯಾರ್ಥಿಗಳು ನಿತ್ಯ ಸಂವಿಧಾನದ ಪೀಠಿಕೆಯನ್ನು ಓದುವಂತಹ ಕೆಲಸವನ್ನು ಮಾಡಿದ್ದೇವೆ. ಇದರ ಉದ್ದೇಶ ಸಂವಿಧಾನ ಎಲ್ಲರಿಗೂ ತಿಳಿಯಬೇಕು ಎನ್ನುವುದಾಗಿದೆ. ನಮ್ಮ ಸಮಾಜದಲ್ಲಿರುವ ಬಹುತ್ವವನ್ನು ಕಾಪಾಡುವ ಅಗತ್ಯವಿದೆ. ಹರಿಪ್ರಸಾದ್ ಆರ್‌ಎಸ್‌ಎಸ್‌ನ ವಿರುದ್ಧವಾಗಿ, ಬಿಜೆಪಿಯ ವಿರುದ್ಧವಾಗಿ ಹೋರಾಟದ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ನಿಫ್ಟಿ-ಸೆನ್ಸೆಕ್ಸ್‌ಗೆ ಸೋಮವಾರದ ಅಗ್ನಿಪರೀಕ್ಷೆ; ಏರಿಕೆಯಾಗುತ್ತಾ ಅಥವಾ ಕುಸಿತವಾಗುತ್ತಾ?
ಅವರ ಜೊತೆ ನಮ್ಮೆಲ್ಲಾ ಕಾರ್ಯಕರ್ತರು ಪ್ರಯತ್ನಕ್ಕೆ ಬರಬೇಕು. ಇದನ್ನು ಮಾಡಿದಾಗ ಮಾತ್ರ ನಾವು ಈ ದೇಶವನ್ನು ಉಳಿಸಲು, ಸಂವಿಧಾನವನ್ನು ಉಳಿಸಲು ಸಾಧ್ಯ. ಇಲ್ಲದೇ ಹೋದರೆ ಬಿಜೆಪಿಗರು ಸಾಮಾಜಿಕ ಜಾಲತಾಣದ ಮೂಲಕ ಸುಳ್ಳುಗಳನ್ನು ಹರಡಿ ಜನರನ್ನು ದಾರಿ ತಪ್ಪಿಸುವಂತಹ ಕೆಲಸವನ್ನು ಮಾಡುತ್ತಾರೆ. ಬಿಜೆಪಿಯವರು ಒಂದು ಧರ್ಮ – ಒಂದು ರಾಷ್ಟ್ರ – ಒಂದು ಚುನಾವಣೆ ಎಂಬ ಮಾತುಗಳನ್ನು ಹೇಳುತ್ತಾರೆ. ಬಿಜೆಪಿಯವರು ಸರ್ವಾಧಿಕಾರದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಯಾಕೆಂದರೆ ಆರ್‌ಎಸ್‌ಎಸ್‌ನ ಸಂಸ್ಥಾಪಕ ಹೆಗ್ಡೆವಾರ್ ಅವರು ತಮ್ಮ ಸ್ನೇಹಿತರನ್ನು ವಿದೇಶಕ್ಕೆ ಕಳುಹಿಸಿ ಇಟಲಿಯ ಮುಸಲೋನಿ, ಜರ್ಮನಿಯ ಹಿಟ್ಲರ್ ಅವರ ಆಡಳಿತನ್ನು ಈ ದೇಶದಲ್ಲಿ ಹುಟ್ಟುಹಾಕಲು ಪ್ರಯತ್ನವನ್ನು ಮಾಡಿದ್ದರು ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಬಿಜೆಪಿಯವರಿಗಾಗಲಿ, ಆರ್‌ಎಸ್‌ಎಸ್‌ನವರಿಗಾಗಲಿ ನಮ್ಮ ಸಂವಿಧಾನದ ಬಗ್ಗೆ ನಂಬಿಕೆಯಿಲ್ಲ. ಈ ದೇಶದಲ್ಲಿ ಸಂವಿಧಾನದ ವಿರೋಧಿಗಳು ಯಾರಾದರೂ ಇದ್ದರೆ ಅದು ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ. ಅದಕ್ಕಾಗಿ ಹಿಂದೂರಾಷ್ಟ್ರ ಮಾಡಲು ಮುಂದಾಗಿದ್ದಾರೆ. ಅದನ್ನು ಮಾಡಲು ನಮ್ಮ ಕಾರ್ಯಕರ್ತರು ಬಿಡಬಾರದು. ನಾವು ಯಾವಾಗಲೂ ಬಹುತ್ವದ ಪರವಾಗಿ ಇರುವಂತವರು. ಬಹುತ್ವವನ್ನು ರೂಪಿಸುವಂತಹ ಕೆಲಸವನ್ನು ಹಾಗೂ ಅದನ್ನು ಮುಂದುವರಿಸಿಕೊಂಡು ಹೋಗುವಂತಹ ಕೆಲಸ ನಮ್ಮದಾಗಿದೆ ಎಂದು ಹೇಳಿದ್ದಾರೆ.
ಹರಿಪ್ರಸಾದ್ ಆಯ್ಕೆ ಕೇವಲ ಚುನಾವಣೆಗೋಸ್ಕರ ಮಾಡಿರುವಂತದಲ್ಲ. 2028-29 ಚುನಾವಣೆಯಲ್ಲ, ಅದಕ್ಕಿಂತಲೂ ಮಿಗಿಲಾಗಿ ನಮ್ಮ ಪಕ್ಷದ ಸಿದ್ಧಾಂತ ಎಲ್ಲರಿಗೂ ತಿಳಿಯಬೇಕು. ಅನೇಕ ಜನರು ಜಾತ್ಯಾತೀತದ ಮೇಲೆ ನಂಬಿಕೆ ಇಲ್ಲದವರು ಇದ್ದಾರೆ. ಇದನ್ನು ಗಟ್ಟಿಗೊಳಿಸುವಂತಹ, ಪಕ್ಷದ ಸಿದ್ಧಾಂತವನ್ನು ಗಟ್ಟಿಗೊಳಿಸುವಂತಹ ಕೆಲಸವನ್ನು ಮಾಡಬೇಕು. ಈ ಕೆಲಸ ಹರಿಪ್ರಸಾದ್ ಅವರು ಮಾಡುತ್ತಾರೆ ಎನ್ನುವ ನಂಬಿಕೆ, ವಿಶ್ವಾಸ ನನಗಿದೆ ಎಂದು ನೂತನ ಅಧ್ಯಕ್ಷ ಹರಿಪ್ರಸಾದ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವರ ಹೋರಾಟವನ್ನು ನಾನು ನೋಡಿದ್ದೇನೆ. ಅವರು ಯಾವತ್ತೂ ಕೂಡ ಆರ್‌ಎಸ್‌ಎಸ್ ವಿರುದ್ಧವಾಗಿ, ಬಿಜೆಪಿಯ ವಿರುದ್ಧವಾಗಿ, ಕೋಮುವಾದಿಯ ವಿರುದ್ಧವಾಗಿ ಕೆಲಸ ಮಾಡುವಂತಹ ವ್ಯಕ್ತಿ ಎನ್ನುವುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದ್ದರಿಂದ ಇವತ್ತು ಪುನರ್‌ನಿರ್ಮಾಣ ಆಗಬೇಕು. ಮತ್ತು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಈ ದೇಶದಲ್ಲಿ, ಸಮಾಜದಲ್ಲಿ ಪ್ರಾರಂಭವಾಗಿ ನಾವು ದೇಶವನ್ನು ಮುಂದಕ್ಕೆಕೊಂಡೊಯ್ಯವ ಕೆಲಸವನ್ನು ಮಾಡಬೇಕು. ಅದಕ್ಕೆ ನಮ್ಮೆಲ್ಲಾ ಕಾರ್ಯಕರ್ತರು ಕೂಡ ನಮ್ಮ ಸಿದ್ಧಾಂತವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಬೇಕು. ಇದರಿಂದ ಬರೀ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ನೀಡುವುದರ ಜೊತೆಗೆ ಸಿದ್ಧಾಂತಕ್ಕೆ ಬದ್ಧತೆಯನ್ನು ಪ್ರದರ್ಶಿಸುವ ಕೆಲಸವನ್ನು ಮಾಡಬೇಕು. ಆ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಿ ಎಂದು ಸಿದ್ದರಾಮಯ್ಯ ನಿರೀಕ್ಷೆ ಹೊರಹಾಕಿದ್ದಾರೆ.
2028ರಲ್ಲಿ ಮತ್ತೊಮ್ಮೆ ನಾವೇ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪಿದೆ. ಇದರಿಂದ ಜನರಲ್ಲಿ ಖುಷಿಯಿದೆ. ಕರ್ನಾಟಕದಲ್ಲಿ 5 ಉಪಚುನಾವಣೆಗಳು ನಡೆದಿದೆ. 5 ಉಪಚುನಾವಣೆಗಳಲ್ಲಿ ನಾವು ಗೆಲುವು ಸಾಧಿಸಿರಬೇಕಾದರೆ, ಜನರ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ ಎಂದು ಅರ್ಥ. ನೀವೆಲ್ಲರೂ ಕೂಡ ಹರಿಪ್ರಸಾದ್ ಅವರ ನಾಯಕತ್ವದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಿ, 2028 ಹಾಗೂ 2029ರಲ್ಲೂ ಮತ್ತೊಮ್ಮೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ. 2029ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವ ಸಂಕಲ್ಪವನ್ನು ನೀವೆಲ್ಲರೂ ಮಾಡಬೇಕು. ಹರಿಪ್ರಸಾದ್ ಅವರ ನಾಯಕತ್ವದಲ್ಲಿ ಪಕ್ಷ ಸಧೃಡವಾಗಲಿ, ಬಲವಾಗಿ ಬೆಳೆಯಲಿ ಎಂದು ಆಶಿಸುತ್ತಾ, ನನ್ನ ಸಹಕಾರವನ್ನು ಸಂಪೂರ್ಣವಾಗಿ ಅವರ ಜೊತೆ ಧಾರೆ ಎರೆಯುತ್ತೇನೆ ಎಂದು ಸಿದ್ದರಾಮಯ್ಯ ಪಕ್ಷದ ನಾಯಕರಿಗೆ ಭರವಸೆ ನೀಡಿದ್ದಾರೆ.






