ರಾಜ್ಯಸಭೆಯಲ್ಲಾಗಲಿ ಅಥವಾ ಸಾರ್ವಜನಿಕ ವೇದಿಕೆಗಳಲ್ಲಾಗಲಿ ಸಾಮಾನ್ಯವಾಗಿ ಸಮತೋಲನದ ಮಾತುಗಳ ಮೂಲಕ ಗಮನ ಸೆಳೆಯುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಖರ್ಗೆ ಭಾಷಣ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿಕೆ ಶಿವಕುಮಾರ್ ಬೆಂಬಲಿಗರು ಪದೇಪದೆ “ಡಿಕೆಶಿ, ಡಿಕೆಶಿ” ಎಂದು ಘೋಷಣೆ ಕೂಗಲು ಆರಂಭಿಸಿದರು. ಸ್ವತಃ ಡಿಕೆ ಶಿವಕುಮಾರ್ ಶಾಂತವಾಗಿರಲು ಮನವಿ ಮಾಡಿದರೂ ಕಾರ್ಯಕರ್ತರು ಘೋಷಣೆ ಮುಂದುವರಿಸಿದರು. ಇದರಿಂದ ಭಾಷಣಕ್ಕೆ ಅಡ್ಡಿಯಾಗುತ್ತಿದ್ದಂತೆ ಖರ್ಗೆ ತಾಳ್ಮೆ ಕಳೆದುಕೊಂಡರು.

“ಸುಮ್ಮನಿರಿ… ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ, ಯಾವುದೇ ಒಬ್ಬ ವ್ಯಕ್ತಿಯ ಸಭೆಯಲ್ಲ. ಹೀಗೆ ಘೋಷಣೆ ಕೂಗಿದರೆ ಪಕ್ಷ ಬಲವಾಗುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದರು.
ಕಾರ್ಯಕರ್ತರಿಗೆ ಶಿಸ್ತಿನ ಪಾಠ ಮಾಡಿದ ಖರ್ಗೆ, “ಎಲ್ಲರೂ ಸೇರಿ ಪಕ್ಷವನ್ನು ಬಲಪಡಿಸುವ ಕಾರ್ಯಕ್ರಮ ಇದು. ಒಬ್ಬರ ಪರ ಘೋಷಣೆ ಕೂಗಿ ಉಳಿದವರ ಕೊಡುಗೆಯನ್ನು ಕಡೆಗಣಿಸುವುದು ಸರಿಯಲ್ಲ. ಪಕ್ಷವೇ ಮುಖ್ಯ, ವ್ಯಕ್ತಿ ಅಲ್ಲ” ಎಂದು ಹೇಳಿದರು.
ಮುಂದುವರೆದು, ಸಭೆಯ ಮಧ್ಯೆ ಶಿಸ್ತು ಉಲ್ಲಂಘಿಸುವವರ ವಿರುದ್ಧ ವಿಡಿಯೋ ದೃಶ್ಯಾವಳಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಪಕ್ಷ ನೀಡಿರುವ ಜವಾಬ್ದಾರಿಗಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಹೈಕಮಾಂಡ್ ಜೊತೆ ಕೈಜೋಡಿಸಿ ಪಕ್ಷದ ಹೋರಾಟಗಳನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.






