ಕೋವಿಡ್ -19 ರ ಬಗೆಗಿನ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ, ಕರೋನವೈರಸ್ನ್ನು ‘ಇಂಡಿಯನ್ ವೆರಿಯಂಟ್’ ಎಂದು ಉಲ್ಲೇಖಿಸುವ ಅಥವಾ ಹಾಗೆ ಉಲ್ಲೇಖವಿರುವ ಯಾವುದೇ ವಿಷಯವನ್ನು ತಮ್ಮ ಪ್ಲಾಟ್ಫಾರ್ಮ್ನಿಂದ ತಕ್ಷಣ ತೆಗೆದುಹಾಕುವಂತೆ ಸರ್ಕಾರ ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ಕೇಳಿಕೊಂಡಿದೆ.
ಶುಕ್ರವಾರ, ಐಟಿ ಸಚಿವಾಲಯವು ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಗೆ ಪತ್ರ ಬರೆದಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) “ಇಂಡಿಯನ್ ವೇರಿಯಂಟ್” ಎಂಬ ಪದವನ್ನು ತನ್ನ ಯಾವುದೇ ವರದಿಯಲ್ಲಿ ಕರೋನವೈರಸ್ನ ಬಿ .1.617 ರೂಪಾಂತರಕ್ಕೆ ಬಳಸಿಲ್ಲ ಎಂದು ಒತ್ತಿಹೇಳಿತು.
ಈ ನಿಟ್ಟಿನಲ್ಲಿ ಐಟಿ ಸಚಿವಾಲಯ ಹೊರಡಿಸಿರುವ ನೋಟಿಸ್ನಲ್ಲಿ ಆನ್ಲೈನ್ನಲ್ಲಿ ‘ಸುಳ್ಳು ಹೇಳಿಕೆ’ ಪ್ರಸಾರವಾಗುತ್ತಿದೆ, ಅದು ಕರೋನವೈರಸ್ನ ‘ಭಾರತೀಯ ರೂಪಾಂತರ’ ಇತರ ದೇಶಗಳಲ್ಲಿ ಹರಡುತ್ತಿದೆ ಎಂದು ಸೂಚಿಸುತ್ತದೆ.
ಈ ಬಗ್ಗೆ ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮೇ 12, 2021 ರಂದು ಪ್ರೆಸ್ ಮೀಟ್ ಏರ್ಪಡಿಸಿದ್ದು ಭಾರಯತೀಯ ರೂಪಾಂತರ ಎಂದು ಬಳಸಬಾರದು ಎಂದು ಸ್ಪಷ್ಟಪಡಿಸಿದೆ ಎಂದು ಐಟಿ ಸಚಿವಾಲಯ ತಿಳಿಸಿದೆ.
ಅಲ್ಲದೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಗೆ “ನಿಮ್ಮ ಪ್ಲಾಟ್ಫಾರ್ಮ್ನಿಂದ ಕರೋನಾ ವೈರಸ್ನ ‘ಭಾರತೀಯ ರೂಪಾಂತರ’ವನ್ನು ಹೆಸರಿಸುವ, ಸೂಚಿಸುವ ಅಥವಾ ಉಲ್ಲೇಖಿಸುವ ಎಲ್ಲ ಪೋಸ್ಟ್ಗಳನ್ನು ತಕ್ಷಣ ತೆಗೆದುಹಾಕಬೇಕು” ಎಂದು ಕೇಳಲಾಗಿದೆ.
ಗೂಗಲ್, ಫೇಸ್ಬುಕ್ ಮತ್ತು ಟ್ವಿಟರ್ನಂತಹ ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಭಾರತ ದೊಡ್ಡ ಮಾರುಕಟ್ಟೆಯಾಗಿದೆ. ಸರ್ಕಾರ ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ, ಇತ್ತೀಚೆಗೆ ದೇಶದಲ್ಲಿ 53 ಕೋಟಿ ವಾಟ್ಸಾಪ್ ಬಳಕೆದಾರರು, 44.8 ಕೋಟಿ ಯೂಟ್ಯೂಬ್ ಬಳಕೆದಾರರು, 41 ಕೋಟಿ ಫೇಸ್ಬುಕ್ ಬಳಕೆದಾರರು, 21 ಕೋಟಿ ಜನರು ಇನ್ಸ್ಟಾಗ್ರಾಮ್ ಮತ್ತು 1.75 ಕೋಟಿ ಟ್ವಿಟರ್ ಬಳಕೆದಾರರಿದ್ದಾರೆ.
ಈ ವರ್ಷದ ಆರಂಭದಲ್ಲಿ, ಸಾಮಾಜಿಕ ಮಾಧ್ಯಮ ವೇದಿಕೆಗಳ ದುರುಪಯೋಗವನ್ನು ತಡೆಯಲು ಸರ್ಕಾರ ಮಾರ್ಗಸೂಚಿಗಳನ್ನು ಪರಿಚಯಿಸಿತ್ತು. ಈ ಹಿಂದೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಮಾಧ್ಯಮಗಳಲ್ಲಿ ಕರೋನವೈರಸ್ಗೆ ಸಂಬಂಧಿಸಿದ ಸುಳ್ಳು ಸುದ್ದಿ / ತಪ್ಪು ಮಾಹಿತಿಯನ್ನು ನಿಗ್ರಹಿಸುವ ಬಗ್ಗೆ ಈ ಮಾಧ್ಯಮಗಳಿಗೆ ಸಲಹೆಗಳನ್ನು ನೀಡಿತ್ತು.