• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಪ್ರಜಾಪ್ರಭುತ್ವಕ್ಕೆ ಅವಶ್ಯ

ನಾ ದಿವಾಕರ by ನಾ ದಿವಾಕರ
December 27, 2022
in ಅಭಿಮತ
0
ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಪ್ರಜಾಪ್ರಭುತ್ವಕ್ಕೆ ಅವಶ್ಯ
Share on WhatsAppShare on FacebookShare on Telegram

ಕಾಲ ಕಾಲಕ್ಕೆ, ಐದು ವರ್ಷಗಳಿಗೊಮ್ಮೆ ಅಥವಾ ಪಕ್ಷಾಂತರ, ಆಪರೇಷನ್‌ ಕಮಲ ಮುಂತಾದ ಕಾರಣಗಳಿಂದ, ಶಾಸನ ಸಭೆಯ ಅವಧಿ ಮುಗಿಯುವ ಮುನ್ನವೇ ನಡೆಯುವ ಚುನಾವಣೆಗಳು ಭಾರತದ ಪ್ರಜಾಪ್ರಭುತ್ವಕ್ಕೆ ಪುಷ್ಠಿ ನೀಡುವಂತಹ ಸಾಂವಿಧಾನಿಕ ಪ್ರಕ್ರಿಯೆ. ಚುನಾವಣಾ ಆಯೋಗ ತನ್ನ ನೂತನ ಅವತಾರದಲ್ಲಿ ಹಿಂದಿನ ಹಲವಾರು ಲಕ್ಷಣಗಳನ್ನು ಕಳೆದುಕೊಂಡಿದೆಯಾದರೂ, ಇಂದಿಗೂ ಸಹ ಮತದಾನದ ಪ್ರಕ್ರಿಯೆಯನ್ನು ನಿರ್ವಹಿಸುವಲ್ಲಿ ತನ್ನ ಕ್ಷಮತೆ ಮತ್ತು ನಿಷ್ಠುರತೆಯನ್ನು ಉಳಿಸಿಕೊಂಡುಬಂದಿದೆ. ಆದರೂ ಟಿ.ಎನ್‌. ಶೇಷನ್‌ ಅವರಂತಹ ಮುಖ್ಯ ಚುನಾವಣಾ ಆಯುಕ್ತರು ಬಯಸಿದಂತಹ ಪ್ರಜಾಸತ್ತಾತ್ಮಕ ಸಂಸ್ಥೆಯಾಗಿ ಚುನಾವಣಾ ಆಯೋಗ ಇಂದು ಕಾಣುತ್ತಿಲ್ಲ. ಆಡಳಿತಾರೂಢ ಸರ್ಕಾರಗಳು ತಮ್ಮದೇ ಸ್ವಾರ್ಥ ರಾಜಕಾರಣಕ್ಕಾಗಿ ಕೈಗೊಳ್ಳುವ ಹಲವಾರು ನಿರ್ಧಾರಗಳಿಗೆ ಪುಷ್ಠಿ ನೀಡುವುದು, ಶಾಸನಸಭೆಗಳಲ್ಲಿರುವ ಬಹುಮತದ ಪ್ರಾತಿನಿಧ್ಯ ಮತ್ತು ಚುನಾವಣಾ ಕಣದಲ್ಲಿರುವ ಮತದಾರರ ಬಲ. ಈ ಎರಡನ್ನೂ ನಿರ್ಧರಿಸುವುದು ಚುನಾವಣಾ ಪ್ರಕ್ರಿಯೆ. ಹಾಗಾಗಿ ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತ ಸ್ವತಂತ್ರ ಕಾರ್ಯನಿರ್ವಹಣೆ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಅಪೇಕ್ಷಣೀಯವಾಗುತ್ತದೆ.

ADVERTISEMENT

ಪಕ್ಷಾಂತರ ಎನ್ನುವ ಒಂದು ಪರಂಪರೆ ನಮ್ಮಲ್ಲಿತ್ತು ಎನ್ನುವುದನ್ನೇ ಮರೆತಂತಿರುವ ಭಾರತದ ಪ್ರಜಾತಂತ್ರ ವ್ಯವಸ್ಥೆ ಇಂದು ಸರ್ಕಾರಗಳು ಪಲ್ಲಟಗೊಳ್ಳುವುದನ್ನು ಸಹಜ ಪ್ರಕ್ರಿಯೆಯಾಗಿ ಒಪ್ಪಿಕೊಂಡು ಬಂದಿದೆ. ಆಪರೇಷನ್‌ ಕಮಲ ಎಂಬ ಪ್ರಕ್ರಿಯೆ ಪಕ್ಷಾಂತರದ ಹೊಸ ರೂಪಾಂತರವಾಗಿದ್ದು, ಬಹುಮತ ಗಳಿಸಿದ ಸರ್ಕಾರವೂ ಸಹ ಕೆಲವೇ ದಿನಗಳಲ್ಲಿ ಚುನಾಯಿತ ಸದಸ್ಯರ ಪಕ್ಷ ಬದಲಿಸುವ ನಿರ್ಧಾರದಿಂದ ಅಧಿಕಾರ ಕಳೆದುಕೊಳ್ಳುವ ಒಂದು ಹೊಸ ಪರಂಪರೆಯನ್ನು ಭಾರತದ ಪ್ರಜ್ಞಾವಂತ ಸಮಾಜವೂ ಒಪ್ಪಿಕೊಂಡಂತೆಯೇ ಕಾಣುತ್ತದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ವಿಧಾನ ಸಭೆಗಳಲ್ಲಿ ಈ ರೂಪಾಂತರಿ ಪ್ರಕ್ರಿಯೆ ಅನಾವರಣಗೊಂಡಿರುವುದನ್ನು ಸಮಾಜವೂ ಸಹ ಸದ್ದಿಲ್ಲದೆ ಒಪ್ಪಿಕೊಂಡಿದೆ. ಮತದಾರರ ಆಯ್ಕೆ ಮತ್ತು ಆದ್ಯತೆಗಳು ತಮ್ಮ ವಾಸ್ತವಿಕ ಮೌಲ್ಯ ಕಳೆದುಕೊಳ್ಳುತ್ತಿರುವುದನ್ನು ಈ ಬೆಳವಣಿಗೆ ಸೂಚಿಸುತ್ತದೆ. ಪ್ರಬುದ್ಧ ಎಂದು ಬೆನ್ನುತಟ್ಟಿಕೊಳ್ಳುವ ಮತದಾರ ಪ್ರಭುಗಳೂ ಸಹ, ತತ್ವ, ಸಿದ್ಧಾಂತ ಮತ್ತು ಸ್ವಾರ್ಥ ರಾಜಕಾರಣದ ನೆಲೆಯಲ್ಲಿ ಇದನ್ನು ಆಕ್ಷೇಪಣೆ ಇಲ್ಲದೆಯೇ ಒಪ್ಪಿಕೊಂಡು ಬರುತ್ತಿದ್ದಾರೆ.

ಆಡಳಿತಾರೂಢ ಸರ್ಕಾರಗಳಿಗೆ ಶಾಸನ ಸಭೆಯಲ್ಲಿರುವ ಬಹುಮತ ಮತ್ತು ಭವಿಷ್ಯದ ಚುನಾವಣೆಗಳಲ್ಲಿ ಮರು ಆಯ್ಕೆಯಾಗಲು ಅವಶ್ಯವಾದ ತಂತ್ರಗಾರಿಕೆಯ ಬಗ್ಗೆ ಅತಿಯಾದ ವಿಶ್ವಾಸ, ಈ ಎರಡೂ ಅಂಶಗಳು ಸರ್ಕಾರಗಳನ್ನು ಮತ್ತಷ್ಟು ಬಲಪಡಿಸುತ್ತವೆ. ಈ ಸಾಂವಿಧಾನಿಕ ಶಕ್ತಿಯನ್ನು ಬಳಸಿಕೊಂಡು ಶಿಥಿಲವಾಗುತ್ತಿರುವ ಪ್ರಜಾಸತ್ತಾತ್ಮಕ ನೆಲೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ದೇಶ ಎದುರಿಸುತ್ತಿರುವ ಜ್ವಲಂತ ತಳಮೂಲದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ನಿರುದ್ಯೋಗ ಮತ್ತು ಬಡತನವನ್ನು ನಿವಾರಿಸುವಂತಹ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬಹುದು. ತನ್ಮೂಲಕ ಭಾರತದ ಪ್ರಜಾತಂತ್ರವನ್ನು ಮತ್ತಷ್ಟು ಬಲಪಡಿಸುವುದೇ ಅಲ್ಲದೆ, ಜನಸಾಮಾನ್ಯರು ಎದುರಿಸುತ್ತಿರುವ ಸವಾಲುಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಸೂಚಿಸಬಹುದು. ಪ್ರತಿ ಚುನಾವಣೆಯ ನಂತರವೂ ಸಂವಿಧಾನಕ್ಕೆ ಬದ್ಧರಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಳ್ಳುವ ಪಕ್ಷಗಳು ಮತ್ತು ಸರ್ಕಾರಗಳ ಲೋಪಗಳನ್ನು ತಿದ್ದುವ ಗುರುತರ ಜವಾಬ್ದಾರಿ ಇರುವ ವಿರೋಧ ಪಕ್ಷಗಳು ಈ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದಲ್ಲಿ ಭಾರತದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗುತ್ತದೆ.

ಈ ವ್ಯವಸ್ಥೆಯಲ್ಲಿ ಚುನಾವಣೆಗಳ ಮೂಲಕ ನಿಷ್ಕರ್ಷೆಯಾಗುವ ಆಡಳಿತ-ವಿರೋಧ ಪಕ್ಷ ಅಥವಾ ಗುಂಪುಗಳಿಗೆ ಸಮಾನ ಹೊಣೆಗಾರಿಕೆ, ಮಾನ್ಯತೆ ಹಾಗೂ ವಿಶ್ವಾಸಾರ್ಹತೆ ಇರಬೇಕಾದ್ದು ಅತ್ಯವಶ್ಯ. ಆಡಳಿತಾರೂಢ ಪಕ್ಷಕ್ಕಿಂತಲೂ ಹೆಚ್ಚಿನ ಜವಾಬ್ದಾರಿ ವಿರೋಧ ಪಕ್ಷಗಳ ಮೇಲಿರುತ್ತದೆ. ಸರ್ಕಾರದ ಪ್ರತಿಯೊಂದು ತಪ್ಪು ಹೆಜ್ಜೆಯನ್ನೂ ಜನತೆಯ ಮುಂದಿಟ್ಟು, ಸರಿದಾರಿಗೆ ತರುವುದೇ ಅಲ್ಲದೆ, ಬಹುಮತದ ಬಲದಿಂದ ಸರ್ಕಾರಗಳು ಜಾರಿಗೊಳಿಸುವ ಜನವಿರೋಧಿ ಆಡಳಿತ ನೀತಿಗಳನ್ನು ವಿರೋಧಿಸಿ, ಸಂವಿಧಾನಬದ್ಧ ಆಡಳಿತ ನಡೆಸುವಂತೆ ಒತ್ತಾಯಿಸುವ ಹಕ್ಕು ಸಹ ವಿರೋಧ ಪಕ್ಷಗಳಿಗೆ ಇರುತ್ತದೆ. ಹಾಗೆಯೇ ಆಡಳಿತಾರೂಢ ಪಕ್ಷಗಳೂ ಸಹ ವಿರೋಧ ಪಕ್ಷಗಳನ್ನು ಅಕ್ಷರಶಃ ವಿರೋಧಿ ನೆಲೆಯಲ್ಲೇ ಕಾಣದೆ, ಉತ್ತಮ ಆಡಳಿತ ನೀಡುವಲ್ಲಿ ಸಹಭಾಗಿತ್ವ ವಹಿಸುವ ಪಕ್ಷಗಳೆಂದು ಮಾನ್ಯತೆ ನೀಡಬೇಕಾಗುತ್ತದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಈ ಎರಡೂ ಸ್ಥಾನಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಶ್ವತವಲ್ಲ ಎಂಬ ಪರಿವೆಯೂ ಜನಪ್ರತಿನಿಧಿಗಳಿಗೆ, ಪಕ್ಷಗಳಿಗೆ ಇರಬೇಕಾಗುತ್ತದೆ.

ಈ ಮನೋಭಾವ ಇಲ್ಲವಾದಾಗ, ಆಡಳಿತಾರೂಢ ಪಕ್ಷಗಳು ತಮ್ಮ ಬಹುಮತ ಉಳಿಸಿಕೊಳ್ಳಲು ಮಾಡುವ ಕಸರತ್ತುಗಳ ಜೊತೆಗೇ ವಿರೋಧ ಪಕ್ಷಗಳನ್ನು ಮತ್ತಷ್ಟು ದುರ್ಬಲಗೊಳಿಸುವ ಕ್ರಮಗಳಿಗೆ ಮುಂದಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ಆಡಳಿತ ನೀತಿಗಳನ್ನು ವಿರೋಧಿಸುವುದೇ ದೇಶದ್ರೋಹಕ್ಕೆ ಸಮಾನ ಎಂಬಂತಹ ವಾತಾವರಣ ಸೃಷ್ಟಿಯಾಗುತ್ತಿದ್ದು, ವಿರೋಧ ಪಕ್ಷಗಳ ಚುನಾಯಿತ ಪ್ರತಿನಿಧಿಗಳನ್ನು ರಾಜಕೀಯವಾಗಿ ದುರ್ಬಲಗೊಳಿಸಲು ಸಾಂವಿಧಾನಿಕ ಸಂಸ್ಥೆಗಳನ್ನು ಬಳಸುವ ಪರಂಪರೆ ಅತಿರೇಕಕ್ಕೆ ಹೋಗುತ್ತಿದೆ. 1970ರ ನಂತರದ ರಾಜಕಾರಣದಲ್ಲಿ ಆರಂಭವಾದ ಈ ಪ್ರವೃತ್ತಿಗೆ ಈಗ ಪ್ರಜ್ಞಾವಂತ ಸಮಾಜದ ನಡುವೆಯೂ ಮೌನ ಸಮ್ಮತಿ ದೊರೆತಿರುವುದರಿಂದ, ವಿರೋಧ ಪಕ್ಷಗಳ ನಾಯಕರ ವಿರುದ್ಧ ಸಾಂವಿಧಾನಿಕ ಸಂಸ್ಥೆಗಳ ಮೂಲಕ ಪ್ರಹಾರ ನಡೆಸುವುದು ಸುಲಭವೂ ಆಗಿದೆ. ರಾಜಕೀಯ ವಿರೋಧಕ್ಕೂ, ರಾಜಕೀಯ ದ್ವೇ಼ಷಕ್ಕೂ ಇರುವ ಅಂತರವೂ ಕಡಿಮೆಯಾಗುತ್ತಿರುವುದನ್ನು ಇತ್ತೀಚಿನ ಬೆಳವಣಿಗೆಗಳಲ್ಲಿ ಗಮನಿಸಬಹುದಾಗಿದೆ.

ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಆಧಾರ ಸ್ತಂಭಗಳಾಗಿಯೇ ಪರಿಗಣಿಸಲ್ಪಟ್ಟಿವೆ. ಸಾಮಾನ್ಯವಾಗಿ ಮಾಧ್ಯಮವನ್ನು ನಾಲ್ಕನೆಯ ಸ್ತಂಭ ಎಂದು ಭಾವಿಸುವುದು ಸಹಜವೇ ಆದರೂ, ಮೂಲತಃ ನಾಲ್ಕನೆಯ ಸ್ತಂಭವಾಗಿ ಕಾರ್ಯನಿರ್ವಹಿಸುವುದು, ಸಂವಿಧಾನದ ಅಡಿಯಲ್ಲೇ ಸ್ಥಾಪಿತವಾಗಿರುವ ಸಾರ್ವಜನಿಕ ಸಂಸ್ಥೆಗಳು. ಸಿಬಿಐ, ಜಾರಿ ನಿರ್ದೇಶನಾಲಯ (ಇ ಡಿ), ಚುನಾವಣಾ ಆಯೋಗ, ವಿಜಿಲೆನ್ಸ್‌ ಆಯೋಗ, ಮಾಹಿತಿ ಹಕ್ಕು ಆಯೋಗ, ಮಾನವ ಹಕ್ಕುಗಳ ಆಯೋಗ ಈ ಎಲ್ಲ ಸಂಸ್ಥೆಗಳು ಆಡಳಿತ ವ್ಯವಸ್ಥೆಯಲ್ಲಿ ನಡೆಯಬಹುದಾದ ದುರ್ವ್ಯವಹಾರಗಳ ಬಗ್ಗೆ ಗಮನ ಹರಿಸುವ ಸಲುವಾಗಿಯೇ ಸ್ಥಾಪನೆಯಾಗಿರುತ್ತವೆ. ಅಧಿಕಾರಸ್ಥ ಸರ್ಕಾರದ ಹಂಗು ಅಥವಾ ಮುಲಾಜು ಇಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಂವಿಧಾನಿಕ ಅಧಿಕಾರವನ್ನೂ ಸಹ ಈ ಆಯೋಗಗಳು ಹೊಂದಿರುತ್ತವೆ. ನಿಷ್ಪಕ್ಷಪಾತತೆಯಿಂದ, ಜನಸಾಮಾನ್ಯರ ಹಿತಾಸಕ್ತಿಯ ದೃಷ್ಟಿಯಿಂದ, ಪ್ರಜಾಪ್ರಭುತ್ವದ ಬೇರುಗಳನ್ನು ಸಂರಕ್ಷಿಸುವ ನೆಲೆಯಲ್ಲಿ, ಈ ಸಂಸ್ಥೆಗಳ ಕಾರ್ಯ ನಿರ್ವಹಣೆ ಮಹತ್ವ ಪಡೆಯುತ್ತದೆ.

ದುರದೃಷ್ಟವಶಾತ್‌ ಈ ಸಾರ್ವಜನಿಕ ಸಂಸ್ಥೆಗಳು ಕ್ರಮೇಣ ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡು, ಅಧಿಕಾರಾರೂಢ ಸರ್ಕಾರಗಳ ಕೈಗೊಂಬೆಗಳಂತೆ ಕಾರ್ಯ ನಿರ್ವಹಿಸುತ್ತವೆ. ಕಾಂಗ್ರೆಸ್‌ ಆಳ್ವಿಕೆಯ ಸಂದರ್ಭದಲ್ಲಿ ಅಟಲ್‌ ಬಿಹಾರಿ ವಾಜಪೇಯಿ, ಎಲ್‌ ಕೆ ಅಡ್ವಾಣಿ ಮುಂತಾದ ಬಿಜೆಪಿ ನಾಯಕರು, ಸಿಬಿಐ ಮತ್ತಿತರ ಸಂಸ್ಥೆಗಳನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ, ಸಿಬಿಐ  ಸರ್ಕಾರದ ಕೈಗೊಂಬೆಯಾಗಿದೆ ಎಂದು ನಿರಂತರವಾಗಿ ಆರೋಪಿಸುತ್ತಿದ್ದುದನ್ನು ಇಂದು ಸ್ಮರಿಸಲೇಬೇಕಿದೆ. ಈ ಆರೋಪಗಳನ್ನು ತಳ್ಳಿಹಾಕುವಂತೆಯೂ ಇರಲಿಲ್ಲ. ಏಕೆಂದರೆ ಇಂದಿರಾಗಾಂಧಿ ಆಳ್ವಿಕೆಯ ನಂತರ ಕಾಂಗ್ರೆಸ್‌ ಸರ್ಕಾರಗಳು ಸಾರ್ವಜನಿಕ ಸಂಸ್ಥೆಗಳನ್ನು ಬಳಸಿಕೊಂಡು, ವಿರೋಧ ಪಕ್ಷ ನಾಯಕರನ್ನು ಮಣಿಸಲು ಯತ್ನಿಸಿರುವ ಪ್ರಸಂಗಗಳು ಹೇರಳವಾಗಿವೆ. ದುರಂತ ಎಂದರೆ ಈ ಪ್ರವೃತ್ತಿಯನ್ನು ವಿರೋಧಿಸಿಕೊಂಡೇ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ಇದೇ ಪರಂಪರೆಯನ್ನು ಮುಂದುವರೆಸಿರುವುದೇ ಅಲ್ಲದೆ, ಮತ್ತಷ್ಟು ಅತಿರೇಕಕ್ಕೆ ತಲುಪಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ 2014-22ರ ಎನ್‌ಡಿಎ ಆಳ್ವಿಕೆಯಲ್ಲಿ ಜಾರಿ ನಿರ್ದೇಶನಾಲಯವು ನಡೆಸಿರುವ ದಾಳಿಯ ಸಂಖ್ಯೆ 27 ಪಟ್ಟು ಹೆಚ್ಚಾಗಿದೆ.  2004 ರಿಂದ 2014ರ ಅವಧಿಯಲ್ಲಿ 112 ದಾಳಿಗಳನ್ನು ನಡೆಸಿದ್ದರೆ, ಕಳೆದ ಎಂಟು ವರ್ಷಗಳಲ್ಲಿ 3010 ದಾಳಿಗಳನ್ನು ನಡೆಸಲಾಗಿದೆ. ಪಿಎಮ್‌ಎಲ್‌ಎ ಕಾಯ್ದೆಯಡಿ 2011 ರಿಂದ 2020ರ ಅವಧಿಯಲ್ಲಿ 1569 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕೇವಲ ಒಂಬತ್ತು ಪ್ರಕರಣಗಳಲ್ಲಿ ಶಿಕ್ಷೆ ನೀಡಲಾಗಿದೆ. ಎನ್‌ಡಿಎ ಆಳ್ವಿಕೆಯ ಎಂಟು ವರ್ಷಗಳ ಅವಧಿಯಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ದಾಳಿಗೆ ತುತ್ತಾದವರ ಪೈಕಿ ಶೇ 95ರಷ್ಟು ವಿರೋಧ ಪಕ್ಷದವರೇ ಇದ್ದಾರೆ. ಯುಪಿಎ ಅವಧಿಯಲ್ಲಿ ಶೇ 54ರಷ್ಟು ವಿರೋಧ ಪಕ್ಷದ ನಾಯಕರ ವಿರುದ್ಧ ಕ್ರಮ ಜರುಗಿಸಲಾಗಿತ್ತು. ಎನ್‌ಡಿಎ ಅವಧಿಯಲ್ಲಿ ಜಾರಿ ನಿರ್ದೇಶನಾಲಯದ ಜಾಲಕ್ಕೆ ಸಿಲುಕಿದ 121 ಪ್ರಮುಖ ರಾಜಕಾರಣಿಗಳ ಪೈಕಿ 115 ವಿರೋಧ ಪಕ್ಷದವರಿದ್ದಾರೆ. ಯುಪಿಎ ಅವಧಿಯಲ್ಲಿ 26 ಆರೋಪಿಗಳ ಪೈಕಿ 14 ವಿರೋಧ ಪಕ್ಷದ ನಾಯಕರಿದ್ದರು. ಒಟ್ಟಾರೆಯಾಗಿ ನೋಡಿದರೆ 2004-2022ರ ಅವಧಿಯ ಯುಪಿಎ-ಎನ್‌ಡಿಎ ಆಡಳಿತಾವಧಿಯಲ್ಲಿ ಸಿಬಿಐ ಮತ್ತಿತರ ಸಂಸ್ಥೆಗಳ ದಾಳಿಗೆ ಸಿಲುಕಿದ 147 ರಾಜಕೀಯ ನಾಯಕರ ಪೈಕಿ ಶೇ 85ರಷ್ಟು ವಿರೋಧ ಪಕ್ಷದವರೇ ಆಗಿದ್ದಾರೆ. (ಇಂಡಿಯನ್‌ ಎಕ್ಸ್‌ಪ್ರೆಸ್‌ , 21 ಸೆಪ್ಟಂಬರ್‌ 2022)

ಪಕ್ಷಾತೀತವಾಗಿ ನೋಡಿದಾಗ, ಆಡಳಿತಾರೂಢ ಪಕ್ಷಗಳು ಸಾರ್ವಜನಿಕ ಸಂಸ್ಥೆಗಳನ್ನು ವಿರೋಧ ಪಕ್ಷಗಳ ವಿರುದ್ಧ ಅಸ್ತ್ರದಂತೆ ಬಳಸುವ ಒಂದು ಪ್ರವೃತ್ತಿಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯ. ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರ ಒಡೆತನದ ಶೈಕ್ಷಣಿಕ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ. ರಾಜ್ಯ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ, ವಿರೋಧ ಪಕ್ಷದ ಆತ್ಮಬಲವನ್ನು ಕುಗ್ಗಿಸುವ ಒಂದು ಸಾಧನವಾಗಿ ಇಂತಹ ದಾಳಿಗಳನ್ನು ನಡೆಸುವ ಪರಂಪರೆ ನಡೆದುಬಂದಿರುವುದರಿಂದ, ಸಿಬಿಐ, ಜಾರಿ ನಿರ್ದೇಶನಾಲಯ ಮುಂತಾದ ಸಾರ್ವಜನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯೂ ಜನಸಾಮಾನ್ಯರ ದೃಷ್ಟಿಯಲ್ಲಿ ಕುಗ್ಗಿದೆ. ಡಿಕೆಶಿ ಅವರ ಸಂಸ್ಥೆಗಳಲ್ಲಿ ಅವ್ಯವಹಾರಗಳು ನಡೆದಿದ್ದೇ ಆದಲ್ಲಿ ಸಿಬಿಐ ದಾಳಿಯನ್ನು ಸಮರ್ಥನೀಯ ಎನ್ನಬಹುದು.

ಆದರೆ ರಾಜಕೀಯ ನಾಯಕರ ಅಥವಾ ಅವರ ಕುಟುಂಬ ಸದಸ್ಯರ ಒಡೆತನದಲ್ಲಿರುವ ಶೈಕ್ಷಣಿಕ ಸಂಸ್ಥೆಗಳು, ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳು, ಕಾರ್ಪೋರೇಟ್‌ ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು  ಅಕ್ಷರಶಃ ಪ್ರಾಮಾಣಿಕವಾಗಿರುತ್ತವೆ ಎಂದು ನಂಬಲೂ ಸಾಧ್ಯವಾಗುವುದಿಲ್ಲ. ಚುನಾವಣಾ ಪೂರ್ವದಲ್ಲೇ ಇಂತಹ ದಾಳಿಗಳು ನಡೆಯುವುದರಿಂದ ಸಿಬಿಐ ಮುಂತಾದ ಸಂಸ್ಥೆಗಳ ವಿಶ್ವಾಸಾರ್ಹತೆಯೂ ಪ್ರಶ್ನಾರ್ಹವಾಗಿಬಿಡುತ್ತವೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಆಯಾ ಸಂಸ್ಥೆಗಳ ಮೇಲೆಯೇ ಇರುತ್ತದೆ. ಡಿಕೆಶಿ ಆಗಲೀ ಇತರ ಯಾವುದೇ ರಾಜಕೀಯ ನಾಯಕರಾಗಲೀ, ಅಕ್ರಮ ಸಂಪತ್ತು ಕ್ರೋಢೀಕರಿಸಿದ್ದಲ್ಲಿ ಶಿಕ್ಷೆಗೊಳಗಾಗುವುದು ಅಪೇಕ್ಷಣೀಯವೇ. ಆದರೆ ಈ ರೀತಿಯ ದಾಳಿಗಳಿಗೆ ವಿರೋಧ ಪಕ್ಷಗಳ ನಾಯಕರಷ್ಟೇ ಗುರಿಯಾಗುವುದು ಹಲವಾರು ಅನುಮಾನಗಳನ್ನು ಮೂಡಿಸುತ್ತದೆ. ಆಡಳಿತ ಪಕ್ಷದ ನಾಯಕರ ಸಂಸ್ಥೆಗಳೆಲ್ಲವೂ ನ್ಯಾಯಯುತವಾಗಿ, ಸಂವಿಧಾನಬದ್ಧತೆಯಿಂದೆ ನಡೆಯುತ್ತಿವೆಯೇ ಎಂಬ ಪ್ರಶ್ನೆಯೂ ಸಹಜವಾಗಿಯೇ ಮೂಡುತ್ತದೆ. ಭ್ರಷ್ಟಾಚಾರದ ಮೂಟೆಗಳನ್ನು ಹೊತ್ತ ಹಲವಾರು ನಾಯಕರು ಪಕ್ಷ ಬದಲಿಸುವುದರೊಂದಿಗೆ ಅಧಿಕಾರಾರೂಢ ಪಕ್ಷದೊಂದಿಗೆ ಬೆರೆತು, ನಿರಪರಾಧಿಗಳಾಗಿರುವ ಪ್ರಸಂಗಗಳು ನಮ್ಮ ಮುಂದೆ ಹೇರಳವಾಗಿವೆ.

ಈ ಹಿನ್ನೆಲೆಯಲ್ಲೇ ಸಾರ್ವಜನಿಕ ಸಂಸ್ಥೆಗಳ ಸಾಂವಿಧಾನಿಕ ಜವಾಬ್ದಾರಿ ಮತ್ತು ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಗಂಭೀರ ಆಲೋಚನೆ ಅತ್ಯವಶ್ಯವಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಸಾಂವಿಧಾನಿಕ ಸಂಸ್ಥೆಗಳೂ ತಮ್ಮ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವುದು ಅತ್ಯವಶ್ಯ. ಪ್ರಜಾತಂತ್ರದ ನಾಲ್ಕನೆಯ ಆಧಾರ ಸ್ತಂಭ ಎಂದೇ ಬಣ್ಣಿಸಬಹುದಾದ ಈ ಸಂಸ್ಥೆಗಳು ಆಡಳಿತಾರೂಢ ಪಕ್ಷಗಳ ಅಣತಿಯಂತೆ ನಡೆದುಕೊಳ್ಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪಕ್ಷಾತೀತವಾದ ಪ್ರಯತ್ನಗಳೂ ಬೇಕಿವೆ. ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಈ ವಿಚಾರವನ್ನು ಪದೇಪದೇ ಪ್ರಸ್ತಾಪಿಸುತ್ತಿದ್ದುದನ್ನು ಸ್ಮರಿಸಬಹುದು. ಸಂವಿಧಾನದ ರಕ್ಷಣೆಯನ್ನು ಗ್ರಾಂಥಿಕ ನೆಲೆಯಲ್ಲಿ, ಪ್ರಜಾಪ್ರಭುತ್ವದ ಸಂರಕ್ಷಣೆಯನ್ನು ಸಾಂಸ್ಥಿಕ ನೆಲೆಯಲ್ಲಿ ಮಾತ್ರವೇ ನೋಡದೆ, ಭಾರತದ ಕೋಟ್ಯಂತರ ಜನಗಳ ಭವಿಷ್ಯದ ನೆಲೆಯಲ್ಲಿ ನಿಂತು ನೋಡಿದಾಗ, ನಮ್ಮ ಆಡಳಿತ ವ್ಯವಸ್ಥೆಗೆ ಚಿಕಿತ್ಸಕ ಗುಣ ಇರುವಂತಹ ಚಿಂತನಾವಾಹಿನಿಗಳು ಅಗತ್ಯವಾಗಿ ಬೇಕಾಗಿವೆ ಎನಿಸುತ್ತದೆ. ಈ ವಾಹಿನಿಗಳು ಸಾರ್ವಜನಿಕರ ಒಳಗಿನಿಂದಲೇ ಉಗಮಿಸಬೇಕಿದೆ. ತಮ್ಮ ಪವಿತ್ರ ಮತ ಚಲಾಯಿಸುವ ಪ್ರತಿಯೊಬ್ಬ ಪ್ರಜೆಗೂ ಈ ಕಾಳಜಿ ಇರುವುದು ವರ್ತಮಾನದ ತುರ್ತು.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ : ಪ್ರತಾಪ್‌ ಸಿಂಹ

Next Post

BJPಗೆ ಸಡ್ಡು ಹೊಡೆದು ರಾಜಕೀಯ ಮಾಡ್ತಾರಾ ? ಮಾಜಿ ಸಚಿವ ಜನಾರ್ದನ ರೆಡ್ಡಿ

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Next Post
BJPಗೆ ಸಡ್ಡು ಹೊಡೆದು ರಾಜಕೀಯ ಮಾಡ್ತಾರಾ ? ಮಾಜಿ ಸಚಿವ ಜನಾರ್ದನ ರೆಡ್ಡಿ

BJPಗೆ ಸಡ್ಡು ಹೊಡೆದು ರಾಜಕೀಯ ಮಾಡ್ತಾರಾ ? ಮಾಜಿ ಸಚಿವ ಜನಾರ್ದನ ರೆಡ್ಡಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada