ರಾಜಕಾರಣಿಯೊಬ್ಬನ ಆಶ್ರಯದಲ್ಲಿ ಇರುವ ಆರೋಪಿಗಳನ್ನು ಪೊಲೀಸ್ (Police) ಪಾತ್ರಧಾರಿ ನಾಯಕ ತನ್ನ ತಂತ್ರಗಾರಿಕೆಯಿಂದ ವಶಕ್ಕೆ ಪಡೆದುಕೊಳ್ಳುವಂತಹ ದೃಶ್ಯಗಳನ್ನು ಸಿನೆಮಾಗಳಲ್ಲಿ ಕಂಡಿದ್ದೀವೆ. ಈಗ ಅಂತಹದ್ದೇ ದೃಶ್ಯಗಳನ್ನು ನೆನಪಿಸುವಂತಹ ಪಕ್ಕಾ ಸಿನಿಮೀಯ ಮಾದರಿಯ ಕಾರ್ಯಾಚರಣೆ ದೆಹಲಿಯಿಂದ ವರದಿ ಆಗಿದೆ.
ಕಾರ್ಯಾಚರಣೆಯ ಮುಖ್ಯ ರುವಾರಿಗಳು ತೆಲಂಗಾಣ ಪೊಲೀಸರಾಗಿದ್ದು (Telangana police) , ದೆಹಲಿ ಪೊಲೀಸರಿಗೆ (Delhi Police) ಮಾಹಿತಿ ನೀಡದೆ, ದೆಹಲಿಯಲ್ಲಿರುವ ಮಾಜಿ ಸಂಸದರೊಬ್ಬರ ಮನೆಯಿಂದ ನಾಲ್ವರನ್ನು ವಶಕ್ಕೆ ಪಡೆದು ತಮ್ಮ ರಾಜ್ಯಕ್ಕೆ ಸದ್ದಿಲ್ಲದೆ ಮರಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸ್ವತಃ ದೆಹಲಿ ಪೊಲೀಸರೇ ತೆಲಂಗಾಣ ಪೊಲೀಸರ ಮೇಲೆ ಇಂತಹದ್ದೊಂದು ಆರೋಪ ಮಾಡಿದ್ದಾರೆ.
ಬಿಜೆಪಿ ಮುಖಂಡ, ಮಹಬೂಬ್ ನಗರದ ಮಾಜಿ ಸಂಸದ ಜಿತೇಂದರ್ ರೆಡ್ಡಿ (Jitendr singh) ಅವರ ದೆಹಲಿಯ ಸೌತ್ ಅವೆನ್ಯೂ ನಗರದ ಮನೆಯಿಂದ ಸೋಮವಾರ ರಾತ್ರಿ 8:30 ರ ಹೊತ್ತಿಗೆ ನಾಲ್ವರನ್ನು ಆಗಂತುಕರು ಅಪಹರಿಸಿದ್ದಾರೆ ಎಂದು ದೆಹಲಿ ಪೊಲೀಸರಿಗೆ ದೂರು ಬಂದಿರುತ್ತದೆ. ಅದರ ಜಾಡು ಹಿಡಿದು ಹೋದ ದೆಹಲಿ ಪೊಲೀಸರು, ತನಿಖೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಆ ಆಗಂತುಕರು ತೆಲಂಗಾಣ ಪೊಲೀಸರೇ ಎಂದು ದೆಹಲಿ ಪೊಲೀಸ್ ಮೂಲಗಳು ಆರೋಪಿಸಿದೆ.
ಪ್ರಕರಣದ ವಿವರ:
ಮಾಜಿ ಸಂಸದ ರೆಡ್ಡಿಯ ದೆಹಲಿಯಲ್ಲಿರುವ ನಿವಾಸಕ್ಕೆ ಫೆಬ್ರವರಿ 26 ರಂದು ಮೂವರು ಅತಿಥಿಗಳು ಬರುತ್ತಾರೆ. ಮಾಜಿ ವಿದ್ಯಾರ್ಥಿ ನಾಯಕ ರವಿ ಮುನ್ನೂರು ಹಾಗೂ ಇನ್ನಿಬ್ಬರು ಅತಿಥಿಗಳು ಬಂದು ಸಂಸದರ ಮನೆಯಲ್ಲಿ ತಂಗುತ್ತಾರೆ. ಆದರೆ, ಅದಾಗಲೇ ಕೊಲೆಯತ್ನ ಪ್ರಕರಣ ಒಂದರಲ್ಲಿ ಇವರ ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಆದರೆ, ಅಲ್ಲಿಂದ ತಲೆ ಮರೆಸಿಕೊಂಡು ಬಂದಿದ್ದ ಆರೋಪಿಗಳು ಪರಿಚಯದ ಮಾಜಿ ಸಂಸದ ರೆಡ್ಡಿಯ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಹೀಗಿರುವಾಗ ಸೋಮವಾರ ರಾತ್ರಿ ಬಂದಿದ್ದ ಅತಿಥಿಗಳು ಮಾತ್ರವಲ್ಲದೆ, ಮಾಜಿ ಸಂಸದರ ಚಾಲಕ ಸೇರಿ ನಾಲ್ವರನ್ನು ಅಪಹರಿಸಲಾಗಿದೆ ಎಂದು ದೆಹಲಿ ಪೊಲೀಸರಿಗೆ ದೂರು ಹೋಗುತ್ತದೆ.
ಇದೊಂದು ಹೈ-ಪ್ರೊಫೈಲ್ ಪ್ರಕರಣ ಆಗಿರುವುದರಿಂದ ದೆಹಲಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗುತ್ತಾರೆ. ನಾಪತ್ತೆಯಾದವರ ಹಿನ್ನೆಲೆ ಗಮನಿಸಿದಾಗ ಅವರು ಪ್ರಕರಣವೊಂದರಲ್ಲಿ ತೆಲಂಗಾಣ ಪೊಲೀಸರಿಗೆ ಬೇಕಾಗಿದ್ದವರು ಎಂಬ ಸುಳಿವು ದೆಹಲಿ ಪೊಲೀಸರಿಗೆ ಲಭಿಸುತ್ತದೆ. ಈ ಸುಳಿವು ಹಿಡಿದಕೊಂಡು ಹೋದ ಪೊಲೀಸರು ತೆಲಂಗಾಣ ಪೊಲೀಸರ ಕಾರ್ಯಾಚರಣೆಯೇ ಇದು ಎಂಬ ತೀರ್ಮಾನಕ್ಕೆ ಬರುತ್ತಾರೆ.
ತಮ್ಮ ಕಾರ್ಯವ್ಯಾಪ್ತಿಗೆ ಇನ್ನೊಂದು ರಾಜ್ಯದ ಪೊಲೀಸ್ ಅಧಿಕಾರಿಗಳು ಬಂದು ಕಾರ್ಯಾಚರಣೆ ನಡಸಬೇಕಾದರೆ, ಸ್ಥಳೀಯ ಪೊಲೀಸರಿಗೆ ಮೊದಲೇ ಮಾಹಿತಿ ನೀಡಬೇಕಾಗುತ್ತದೆ, ಆದರೆ, ಈ ಕಾರ್ಯಾಚರಣೆಯಲ್ಲಿ ತೆಲಂಗಾಣ ಪೊಲೀಸ್ ತಮಗೆ ಮಾಹಿತಿ ನೀಡದೆ ನಡೆಸಿರುವುದು ದೆಹಲಿ ಪೊಲೀಸರ ಅಸಮಾಧಾನಕ್ಕೆ ಗುರಿಯಾಗಿದೆ ಎನ್ನಲಾಗಿದೆ. ಅಲ್ಲದೆ, ಪೊಲೀಸ್ ಕಾರ್ಯಾಚರಣೆಯ ಕುರಿತು ಅಧಿಕೃತ ಮಾಹಿತಿಗಳು ಇಲ್ಲದ್ದರಿಂದ ಇದನ್ನೊಂದು ಅಪಹರಣ ಪ್ರಕರಣವನ್ನಾಗಿ ದೆಹಲಿ ಪೊಲೀಸರು ಮುಂದುವರೆಸುತ್ತಾರೆ.
ಈ ನಡುವೆ, ದೆಹಲಿ ಪೊಲೀಸರ ಆರೋಪವನ್ನು ತೆಲಂಗಾಣ ಪೊಲೀಸ್ ಸಂಪೂರ್ಣ ಅಲ್ಲಗೆಳೆಯುತ್ತದೆ. ಅಲ್ಲದೆ, ಫೆಬ್ರವರಿ 25 ರಂದು ಕೊಲೆಯತ್ನ ಪ್ರಕರಣ ದಾಖಲಿಸಿರುವುದು ನಿಜ, ಆದರೆ, ದೆಹಲಿಗೆ ಹೋಗಿ ಯಾರನ್ನೂ ಅಪಹರಣ ಮಾಡಿಲ್ಲ, ಯಾರನ್ನೂ ವಶಕ್ಕೂ ಪಡೆದಿಲ್ಲ ಎಂದು ತೆಲಂಗಾಣ ಪೊಲೀಸ್ ಹೇಳುತ್ತದೆ.
ಮುಂದುವರೆದು, (ಕುತೂಹಲಕಾರಿ ಸಂಗತಿ ಎಂದರೆ ಇದುವೇ) ಆರೋಪಿಗಳಿಗೆ ನೀಡಿದ ನೋಟಿಸ್ ಅನ್ವಯ ಸ್ವತಃ ಆರೋಪಿಗಳೇ ಬುಧವಾರ ತನಿಖಾಧಿಕಾರಿಯ ಮುಂದೆ ಹಾಜರಾಗಿದ್ದಾರೆ, ನಾವು ವಶಕ್ಕೆ ಪಡೆದುಕೊಂಡಿಲ್ಲ ಎಂದು ಸ್ವತಃ ತೆಲಂಗಾಣದ ಬಾಲನಗರ್ ಡಿಸಿಪಿ ಜಿ. ಸಂದೀಪ್ ಹೇಳಿಕೆ ನೀಡುತ್ತಾರೆ.
ತೆಲಂಗಾಣ ಪೊಲೀಸ್ ಮೂಲಗಳ ಪ್ರಕಾರ, ಈ ಪ್ರಕರಣವನ್ನು ಹೈದರಾಬಾದ್ ಸಮೀಪದ ಪೆಟಬಶೀರಾಬಾದ್ ಠಾಣೆಯ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ.
ಈ ಒಟ್ಟಾರೆ ಪ್ರಹಸನವು ಮಾಜಿ ಸಂಸದ ತೀವ್ರ ಅಸಮಾಧಾನಕ್ಕೆ ಗುರಿಯಾಗಿದೆ. ಬಿಜೆಪಿ ಮುಖಂಡ ರೆಡ್ಡಿ, ತನ್ನ ನಿವಾಸದಿಂದ ಅಪಹರಣಕ್ಕೊಳಗಾದ ನಾಲವರ ಬಗ್ಗೆ ಯಾವ ಮಾಹಿತಿಯೂ ನನಗೆ ದೊರೆತಿಲ್ಲ, ಅವರು ಎಲ್ಲಿದ್ದಾರೆ, ಎಂದು ಗೊತ್ತಿಲ್ಲ, ನಾವು ದೆಹಲಿ ಪೊಲೀಸರನ್ನೇ ಅವಲಂಬಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ತೆಲಂಗಾಣ ಪೊಲೀಸರ ವಿರುದ್ಧ ಕಿಡಿ ಕಾರಿದ್ದು, ಓರ್ವ ಮಾಜಿ ಸಂಸದನ ಮನೆಗೆ, ವಿಐಪಿ ಏರಿಯಾಗೆ ನುಗ್ಗಿ ಅವರ ಅತಿಥಿಗಳನ್ನು ಈ ರೀತಿ ಅಪಹರಿಸಿರುವುದು ತೆಲಂಗಾಣ ಪೊಲೀಸರ ಅತಿರೇಕದ ವರ್ತನೆ ಎಂದು ಆರೋಪಿಸಿದ್ದಾರೆ. ಅದಾಗ್ಯೂ, ರವಿ ಮುನ್ನುರ್ ಹಾಗೂ ಚಾಲಕ ಥಾಪಾನನ್ನು ಹೊರತು ಪಡಿಸಿ ನಾಪತ್ತೆಯಾದ ಇನ್ನಿಬ್ಬರು ಯಾರು ಎಂಬ ಸುಳಿವನ್ನು ರೆಡ್ಡಿ ಕೂಡಾ ಬಿಟ್ಟುಕೊಟ್ಟಿಲ್ಲ. ಅಲ್ಲದೆ, ಪೊಲೀಸರು ʼಬೋಗಸ್ ಪ್ರಕರಣವನ್ನುʼ ಅವರ ವಿರುದ್ಧ ಫಿಕ್ಸ್ ಮಾಡಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದಾರೆ.
ಇನ್ನು, ತನ್ನ ನಿವಾಸದ ಹೊರಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ, ಸಾದಾ ವಸ್ತ್ರದಲ್ಲಿರುವ ಆಘಂತುಕರು ರೆಡ್ಡಿ ಮನೆಯ ಹೊರಗಿನಿಂದ ನಾಲ್ವರನ್ನು ಕಾರಿನಲ್ಲಿ ಬಲವಂತವಾಗಿ ಕುಳ್ಳಿರಿಸುವುದು ದಾಖಲಾಗಿದೆ. ಆ ವಿಡಿಯೋ ಇಲ್ಲಿದೆ.
ಏನೇ ಆಗಲಿ, ರಾಜಕಾರಣಿಯೊಬ್ಬರ ಮನೆಯಲ್ಲಿದ್ದರೆ ತಾವು ಬಚಾವು ಆಗಬಲ್ಲೆವು ಎಂದು ನಂಬಿ ಬಂದವರನ್ನು ರಾತ್ರೋರಾತ್ರಿ ತೆಲಂಗಾಣ ಪೊಲೀಸರು, ಅದೂ ಬೇರೆ ರಾಜ್ಯಕ್ಕೆ ತೆರಳಿ ಎತ್ತಂಗಡಿ ಮಾಡಿದ್ದಾರೆ. ಇದು ಕಾರ್ಯವ್ಯಾಪ್ತಿ ಮೊದಲಾದ ಸೂಕ್ಷ್ಮ ವಿಷಯಗಳಿಗೆ ಸಂಬಂಧಪಟ್ಟದ್ದಾಗಿರುವುದರಿಂದ ದೆಹಲಿ ಪೊಲೀಸರು ತೆಲಂಗಾಣ ಪೊಲೀಸರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಿದೆ.