ಮುಂಬೈ :ಸದ್ಯ ಪಠಾಣ್ ಸಿನಿಮಾದ ಗೆಲುವಿನ ಸಂಭ್ರಮದಲ್ಲಿರುವ ಬಾಲಿವುಡ್ ಬಾದ್ಶಾ ಶಾರೂಕ್ ಖಾನ್ ಕುಟುಂಬಕ್ಕೂ ಪೊಲೀಸ್ ಕೇಸುಗಳಿಗೂ ಯಾಕೋ ನಂಟು ಹೆಚ್ಚಿದಂತೆ ಕಾಣುತ್ತಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಶಾರೂಕ್ ಪುತ್ರ ಆರ್ಯನ್ ಡ್ರಗ್ ಕೇಸ್ನಡಿಯಲ್ಲಿ ಸಿಲುಕಿಕೊಂಡು ಜೈಲು ವಾಸ ಅನುಭವಿಸಿದ್ದರು. ಈ ಘಟನೆಯಿಂದ ಶಾರೂಕ್ ಖಾನ್ ಕುಟುಂಬ ಸುಧಾರಿಸಿಕೊಳ್ಳುತ್ತಿರುವಾಗಲೇ ಇದೇ ಶಾರೂಕ್ ಪತ್ನಿ ಹಾಗೂ ಡಿಸೈನರ್ ಗೌರಿ ಖಾನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಗೌರಿ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆ 409 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಮುಂಬೈ ನಿವಾಸಿಯಾಗಿರುವ ಜಸ್ವಂತ್ ಶಾ ಎಂಬವರು ಗೌರಿ ಖಾನ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಗೌರಿ ಖಾನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ಕಂಪನಿಯು 86 ಲಕ್ಷ ರೂಪಾಯಿ ಶುಲ್ಕ ಪಾವತಿ ಮಾಡಿದ್ದರೂ ಸಹ ಫ್ಲಾಟ್ ನೀಡಲು ತುಳಸಿಯಾನಿ ಸಂಸ್ಥೆಯು ವಿಫಲವಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ . ಲಕ್ನೋದ ಸುಶಾಂತ್ ಗಾಲ್ಫ್ ಸಿಟಿ ಪ್ರದೇಶದ ತುಳಸಿಯಾನಿ ಗಾಲ್ಫ್ ವ್ಯೂನಲ್ಲಿರುವ ಫ್ಲಾಟ್ ಅನ್ನು ಬೇರೆಯವರಿಗೆ ನೀಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಗೌರಿ ಖಾನ್ ಮಾತ್ರವಲ್ಲದೇ ತುಳಸಿಯಾನಿ ಕನ್ಸ್ಟ್ರಕ್ಷನ್ & ಡೆವೆಲೆಪ್ಮೆಂಟ್ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ ತುಳಸಿಯಾನಿ ಹಾಗೂ ನಿರ್ದೇಶಕ ಮಹೇಶ್ ತುಳಸಿಯಾನಿ ವಿರುದ್ಧವೂ ದೂರನ್ನು ದಾಖಲಿಸಲಾಗಿದೆ. ಬ್ರ್ಯಾಂಡ್ ಅಂಬಾಸಿಡರ್ ಗೌರಿ ಖಾನ್ರಿಂದ ಪ್ರಭಾವಿತರಾಗಿ ನಾವು ಈ ಫ್ಲಾಟ್ ಖರೀದಿ ಮಾಡಲು ನಿರ್ಧರಿಸಿದ್ದೆವು ಎಂದು ಜಸ್ವಂತ್ ಶಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.