ದಕ್ಷಿಣ ಕಾಶೀ ಎಂದು ಹೊಗಳಿಸಿಕೊಳ್ಳುವ ತಲಕಾವೇರಿಯಲ್ಲಿ ಕಳೆದ ಮಳೆಗಾಲದಂದು ಭೂ ಕುಸಿತ ಸಂಭವಿಸಿ ಐವರು ಬಲಿಯಾದರು. ಈ ಸುದ್ದಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯಿತು. ಅರಣ್ಯ ಇಲಾಖೆಯ ಅವೈಜ್ಞಾನಿಕ ಇಂಗು ಗುಂಡಿ ನಿರ್ಮಾಣದಿಂದಾಗಿಯೇ ಈ ಭೂ ಕುಸಿತ ಸಂಬವಿಸಿತೆಂದು ತಜ್ಞರ ವರದಿ ಹೇಳಿದೆ. ಪ್ರವಾಸೀ ಜಿಲ್ಲೆಯಾಗಿರುವ ಕೊಡಗಿನ ಪ್ರವಾಸೀ ಸ್ಥಳಗಳ ಅಭಿವೃದ್ದಿಗೆ ಸರ್ಕಾರ ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಆದರೆ ಅಭಿವೃದ್ದಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬ ದೊಡ್ಡ ಆರೋಪವೇ ಇದೆ. ತಲಕಾವೇರಿ ಭಾಗಮಂಡಲ ಹಿಂಧಿನ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯು ಬಿದ್ದಾಟಂಡ ಎಸ್. ತಮ್ಮಯ್ಯ ಅಧ್ಯಕ್ಷತೆಯ ಆಡಳಿತ ಮಂಡಳಿಯ ಮೂರು ವರ್ಷ ಕಾಲದ ಅಧಿಕಾರಾವಧಿಯಲ್ಲಿ ಒಂದಷ್ಟು ಕೆಲಸ ಕಾರ್ಯಗಳಾಗಿವೆ. ತಲಕಾವೇರಿ ದೇವಾಲಯಕ್ಕೆ ಸೇರಿದ ಒತ್ತುವರಿಯಾಗಿರುವ ಭೂಮಿಯೇ 150 ಎಕರೆ ಆಗಿದೆ. ಆದರೆ ಈ ಭೂಮಿಯನ್ನು ಈವರೆಗೂ ಒತ್ತುವರಿದಾರರಿಂದ ಬಿಡಿಸಿಕೊಳ್ಳಲು ಅಗಿಲ್ಲ. ಈ ಜಾಗದ ಪೈಕಿ 13ಎಕರೆ ಪ್ರದೇಶವನ್ನು ಗುರುತಿಸಿ ಬೇಲಿ ನಿರ್ಮಿಸಲಾಗಿದೆ.
ಭಾಗಮಂಡಲದಲ್ಲಿ ಅತಿಥಿ ಗೃಹ ನಿರ್ಮಾಣ , ಪಿಂಡ ಪ್ರಧಾನ ಜಾಗದಲ್ಲಿ ಇಂಟರ್ ಲಾಕ್ ಅಳವಡಿಕೆ, ತಕ್ಷಕವನ, ತಲಕಾವೇರಿಯಲ್ಲಿ ಆಭರಣ ಇರಿಸಲು, ತಕ್ಕರಿಗೆ, ಅರ್ಚಕರು ಹಾಗೂ ಭದ್ರತಾ ಸಿಬ್ಬಂದಿಗಳ ಕೊಠಡಿ, ಅನ್ನಛತ್ರ ನಿರ್ಮಾಣ, ವಿಸರ್ಜನೆಯಾಗದ ಶಿವಲಿಂಗ ಸೇರಿದಂತೆ ಕೆಲವು ಮುಖ್ಯವಾದ ಕೆಲಸ ಕಾರ್ಯಗಳು ಇನ್ನೂ ಆಗಿಲ್ಲ. ತಲಕಾವೇರಿ, ಭಾಗಮಂಡಲ ಕ್ಷೇತ್ರ ಜೀರ್ಣೋದ್ದಾರಗೊಂಡ ಬಳಿಕ ಪುನರ್ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪುನರ್ ಪ್ರತಿಷ್ಠಾಪನಾ ಸಮಿತಿ ವತಿಯಿಂದ ಸಂಗ್ರಹಿಸಲಾಗಿದ್ದ ಹಣದಲ್ಲಿ ಖರ್ಚು ವೆಚ್ಚ ಕಳೆದು ಬಾಕಿ ಉಳಿದಿದ್ದ ರೂ.23ಲಕ್ಷವನ್ನು ತಲಕಾವೇರಿಯ ಆಶ್ರಮದ ಬಳಿ ಅನ್ನ ಛತ್ರ ನಿರ್ಮಾಣಕ್ಕೆಂದು ಜಿಲ್ಲಾಧಿಕಾರಿಗಳ ಮೂಲಕ ದೇವಾಲಯ ಸಮಿತಿ ಖಾತೆಗೆ ವರ್ಗಾಯಿಸಲಾಗಿತ್ತು. ಇಷ್ಟರವರೆಗೆ ಖಾತೆಯಲ್ಲಿದ್ದ ಹಣವನ್ನು ಈ ಬಾರಿ ಇತರ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. ಅಲ್ಲಿಗೆ ಅನ್ನ ಛತ್ರದ ಯೊಜನೆ ನೆನೆಗುದಿಗೆ ಬಿದ್ದಂತಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತುಲಾ ಸಂಕ್ರಮಣ ಸಂದರ್ಭ ಒಂದು ತಿಂಗಳ ಕಾಲ ಮಾತೆ ಕಾವೇರಿಗೆ ತೊಡಿಸುವ ಆಭರಣದೊಂದಿಗೆ ತಕ್ಕ ಮುಖ್ಯಸ್ಥರು, ಅರ್ಚಕರು, ಭದ್ರತಾ ಸಿಬ್ಬಂದಿಗಳು ತಲಕಾವೇರಿಯಲ್ಲಿಯೇ ತಂಗಬೇಕಾಗುತ್ತದೆ. ಆದರೆ ಅಲ್ಲಿ ಸರಿಯಾದ, ತಂಗಲು ಯೋಗ್ಯವಾದ ಕೊಠಡಿ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಯತ್ನದಿಂದ ಅಂದಿನ ಬಿಬಿಎಂಪಿ ಮೇಯರ್ ಕೊಡುಗೆಯಾಗಿ ನೀಡಿದ ರೂ.1 ಕೋಟಿ ಹಣದಲ್ಲಿ ರೂ.60 ಲಕ್ಷದಲ್ಲಿ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲು ಹಾಗೂ ರೂ.40ಲಕ್ಷದಲ್ಲಿ ಕ್ಷೇತ್ರದ ಆವರಣದಲ್ಲಿ ಬ್ಯಾರಿಕೇಡ್ ತೆರವುಗೊಳಿಸಿ ರೈಲಿಂಗ್ಸ್ ಹಾಕಲು ಯೋಜನೆ ತಯಾರಿಸಲಾಗಿತ್ತು. ಆದರೆ ಇದಕ್ಕೆ ಇನ್ನೂ ಕೂಡಾ ಚಾಲನೆ ಸಿಕ್ಕಿಲ್ಲ. ಈ ಹಿಂದೆ ತಲಕಾವೇರಿ ಕ್ಷೇತ್ರ ಜೀರ್ಣೋದ್ದಾರ ಸಂದರ್ಭ ಅಗಸ್ತ್ಯ ಮುನಿ ಗರ್ಭಗುಡಿಯಲ್ಲಿದ್ದ ಶಿವಲಿಂಗವನ್ನು ಹೊರತೆಗೆದು ಮಣ್ಣಿನಡಿಯಲ್ಲಿ ಹುದುಗಿರಿಸಲಾಗಿದೆ. ಇದನ್ನು ಹೊರತೆಗೆದು ನಿಯಮಾನುಸಾರ ಧಾರ್ಮಿಕ ವಿಧಿವಿಧಾನದಂತೆ ವಿಸರ್ಜನೆ ಮಾಡುಬೇಕೆಂದು ಅಷ್ಟ ಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುತ್ತದೆ. ಆದರೆ, ಈ ಕಾರ್ಯ ಇನ್ನೂ ಕೂಡ ಆಗಿಲ್ಲ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಆದಷ್ಟು ಶೀಘ್ರ ಈ ಕಾರ್ಯ ನೆರವೇರಬೇಕಿದೆ.
ಭಾಗಮಂಡಲ ಶ್ರೀ ಬಗಂಡೇಶ್ವರ ದೇವಾಲಯದ ಹಿಂಭಾಗದಲ್ಲಿ ದೇವಾಲಯಕ್ಕೆ ಸೇರಿದ ಜಾಗದಲ್ಲಿ ಕ್ಷೇತ್ರಕ್ಕೆ ಆಗಮಿಸುವ ಗಣ್ಯರಿಗೆ ತಂಗಲು ಅತಿಥಿಗೃಹ ನಿರ್ಮಾಣ ಮಾಡಲು 2014ರಲ್ಲಿಯೇ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ರೂ.80ಲಕ್ಷ ಹಣ ಕೂಡ ಮೀಸಲಿರಿಸಲಾಗಿದೆ. ಆದರೆ ಇನ್ನೂ ಕೂಡ ಯೋಜನೆ ಕಾರ್ಯಗತಗೊಂಡಿಲ್ಲ. ಯೋಜನೆಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ತಯಾರಿಸುವಾಗ ಅಧ್ಯಕ್ಷರ ಕೊಠಡಿ ಸೇರಿಸಿ ತಯಾರಿಸಿದ್ದರಿಂದ ಜಿಲ್ಲಾಧಿಕಾರಿಗಳು ಅದನ್ನು ತಿರಸ್ಕರಿಸಿ ಮರು ಕ್ರಿಯಾಯೋಜನೆ ತಯಾರಿಸುವಂತೆ ಆದೇಶಿಸಿದ್ದರು. ಮತ್ತೆ ಕ್ರಿಯಾಯೋಜನೆ ತಯಾರಿಸಲಾಯಿತಾದರೂ ಅದಕ್ಕೆ ಅನುಮೋದನೆ ಸಿಗದ್ದರಿಂದ ಯೋಜನೆಯ ರೂಪು ರೇಷೆ ಸಿದ್ಧಗೊಂಡಿಲ್ಲ. ಭಾಗಮಂಡಲದ ತ್ರಿವೇಣಿ ಸಂಗಮದ ಬಳಿಪಿಂಡ ಪ್ರದಾನ ಮಾಡುವ ಸ್ಥಳದಲ್ಲಿ ಇಂಟರ್ ಲಾಕ್ ಅಳವಡಿಕೆಗಾಗಿ ರೂ.13ಲಕ್ಷ ಕಾದಿರಿಸಲಾಗಿದೆ. ಆದರೆ ಹಣ ಬಿಡುಗಡೆ ಆಗದ ಕಾರಣ ಈ ಕೆಲಸ ಇನ್ನೂ ಕೂಡ ಆರಂಭಗೊಂಡಿಲ್ಲ.
ಭಗಂಡೇಶ್ವರ ಕ್ಷೇತ್ರದೊಳಗಿರುವ ಶ್ರೀ ಸುಬ್ರಹ್ಮಣ್ಯ ಗುಡಿಯ ತಾಮ್ರದ ಹೊದಿಕೆಯಲ್ಲಿ ಸೋರಿಕೆಯಾಗುತ್ತಿದ್ದು, ಮರಗಳು ಹಾಳಾಗಿವೆ. ಹಿಂದಿನ ಉಪವಿಭಾಗಾಧಿಕಾರಿ ಜವರೇಗೌಡ ಅವರು ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿದ್ದರೂ ಇನ್ನೂ ರಿಪೇರಿ ಮಾಡಿಸಿಲ್ಲ. ಎರಡು ವರ್ಷದ ಹಿಂದೆ ತುಲಾ ಸಂಕ್ರಮಣ ಜಾತ್ರೆ ಸಂದರ್ಭ ತಲಕಾವೇರಿ ಕ್ಷೇತ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಆದರೆ ಯಾವದೇ ಟೆಂಡರ್ ಕರೆಯದೇ ಮಡಿಕೇರಿಯ ವ್ಯಕ್ತಿಯೋರ್ವರ ಮೂಲಕ ಕ್ಯಾಮರಾ ಅಳಡಿಸಲಾಗಿತ್ತು. ಇದರ ವೆಚ್ಚ ರು.25 ಲಕ್ಷವೆಂದು ಬಿಲ್ ಸಲ್ಲಿಸಲಾಗಿತ್ತು. ಆದರೆ, ಇಷ್ಟೊಂದು ದೊಡ್ಡ ಮೊತ್ತದ ಬಿಲ್ಗೆ ಯಾವದೇ ಟೆಂಡರ್, ಸರಿಯಾದ ದಾಖಲೆಗಳಿಲ್ಲದ್ದರಿಂದ ಹಿಂದಿನ ಜಿಲ್ಲಾಧಿಕಾರಿಗಳು ಹಣ ಮಂಜೂರು ಮಾಡದೆ ತಡೆ ಹಿಡಿದಿದ್ದರು. ನಂತರದಲ್ಲಿ 25ಲಕ್ಷದಲ್ಲಿ ವಿದ್ಯುತ್ ಕೆಲಸದ ಹಣವನ್ನು ಪ್ರತ್ಯೇಕಿಸಿ ರೂ.11.50ಲಕ್ಷದ ಬಿಲ್ ಸಲ್ಲಿಸಲಾಗಿದೆ. ಇದೀಗ ಬಿಲ್ಗೆ ಸಂಬಂಧಿಸಿದ ಕಡತ ಜಿಲ್ಲಾಧಿಕಾರಿಗಳ ಬಳಿ ಇದೆ. ಈ ನಡುವೆ ಬಿಲ್ ಪಾವತಿಗೆ ಸಂಬಂಧಿಸಿದಂತೆ ಸಿಸಿ ಕ್ಯಾಮರಾ ಅಳವಡಿಸಿರುವವರಿಗೆ ತಹಶೀಲ್ದಾರರು ನೋಟೀಸ್ ಕಳುಹಿಸಿದ್ದು, ತಾ. 12ರಂದು ಕಛೇರಿಗೆ ಬರುವಂತೆ ತಿಳಿಸಿದ್ದಾರೆ. ಇತ್ತ ಸಾಲ ಮಾಡಿ ತನ್ನ ಕೈಯಿಂದ ಹಣ ಹಾಕಿ ಕೆಲಸ ಮಾಡಿದ ವ್ಯಕ್ತಿ ಒಮ್ಮೆ ತನಗೆ ಸೇರಬೇಕಾದ ಹಣ ಸಿಕ್ಕಿದರೆ ಸಾಕೆಂದು ಕಂಬನಿಗರೆಯುತ್ತಿದ್ದಾರೆ. ಈ ಬಗ್ಗೆ ಸಚಿವರಿಗೂ ಮನವಿ ಸಲ್ಲಿಸಿ ಬೇಡಿಕೊಂಡಿದ್ದಾರೆ.
ತಲಕಾವೇರಿ ಭಾಗಮಮಂಡಲ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಆಡಳಿತ ಮಂಡಳಿ ಅಧಿಕಾರಾವಧಿ ಕಳೆದ ಜನವರಿ 31 ಕ್ಕೆ ಮುಕ್ತಾಯಗೊಂಡಿದ್ದು, ನೂತನ ಸದಸ್ಯರುಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ತಿಂಗಳ ತಾ.28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಕಾಂಕ್ಷಿಗಳಿಂದ ಪೈಪೋಟಿಯಂತೆ ಅರ್ಜಿ ಸಲ್ಲಿಕೆಯಾಗುತ್ತಿದೆ. ನೂತನ ಆಡಳಿತ ಮಂಡಳಿಯು ಕ್ಷೇತ್ರವನ್ನು ಅಭಿವೃದ್ದಿ ಮಾಡಲಿದೆಯೇ ಎಂಬುದು ಪ್ರಶ್ನೆ.