ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಸದ ಜಟಾಪಟಿ ಜೋರಾಗಿದೆ. ಬೆಂಗಳೂರು ನಗರದ ಕಸವನ್ನು ವಿಲೇವಾರಿ ಮಾಡಲು ಬಿಜೆಪಿ ಶಾಸಕರು ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಬಿಜೆಪಿ ನಾಯಕರುಗಳು ಕಸ ವಿಲೇವಾರಿಗೆ ಬಿಡುವುದು ಬೇಡ. ಅವರೇ ಕಸವನ್ನು ಇಟ್ಟುಕೊಳ್ಳಲಿ. ಯಾರು ಬಿಡುವುದಿಲ್ಲವೋ ಅವರ ಕ್ಷೇತ್ರದಲ್ಲಿ ಕಸವನ್ನೇ ತೆಗೆಯುವುದಿಲ್ಲ, ತೆಗೆಸುವುದಿಲ್ಲ . ಮೈಕ್ ಹಾಕಿ ಪ್ರಚಾರ ಮಾಡಿಸುತ್ತೇನೆ. ಆಗ ಜನರೇ ಅವರಿಗೆ ಉಗಿಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನಾದರೂ ಕಸ ವಿಲೇವಾರಿಗೆ ಬಿಡುವುದಿಲ್ಲ ಎನ್ನುವ ಬಿಜೆಪಿ ನಾಯಕರ ಹೇಳಿಕೆ ವಿರುದ್ಧ ಗುಡುಗಿದ್ದು, ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಕಸ ಯಾರದ್ದು ಅದು ಜನರ ಕಸ. ಮೊದಲಿನಿಂದಲೂ ಹೇಗೆ ಸಂಪ್ರದಾಯವಿತ್ತೋ ಅದೇ ರೀತಿ ಮಾಡಿಕೊಂಡು ಬರುತ್ತಿದ್ದೇವೆ. ಬಿಜೆಪಿ ಹಾಗೂ ನಮ್ಮ ಸಮಯದಲ್ಲಿ ತೀರ್ಮಾನ ಮಾಡಿದ್ದು ಇದೇ ರೀತಿ ಎಂದರು.

ನಾವು ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ. ಸಾವಿರಾರು ಕೋಟಿಯನ್ನು ಎಷ್ಟು ಎಂದು ಕೊಡಲು ಆಗುತ್ತದೆ. 20, 30 ಕೋಟಿ ಸೇರಿದಂತೆ 50- 100 ಕೋಟಿ ಹಣವನ್ನು ಅಭಿವೃದ್ಧಿಗೆ ಕೊಡುತ್ತಾ ಬಂದಿದ್ದೇವೆ. ನಾವು ಕೊಡುತ್ತೇವೆ. ಅವರು ಅರ್ಥ ಮಾಡಿಕೊಳ್ಳಬೇಕು. ಮಹದೇವಪುರದಲ್ಲಿ ಕಸ ವಿಲೇವಾರಿ ನಿಲ್ಲಿಸಲಾಗಿದೆ. ನಾವು ಸಹ ಅಲ್ಲಿನ ಕಸ ಮೂರು ದಿನ ತೆಗೆಯಬೇಡಿ ಎಂದರೆ ಏನಾಗಬಹುದು. ಕಸ ವಿಲೇವಾರಿಗೆ ನಾಲ್ಕು ಕಡೆ ಜಮೀನುಗಳನ್ನು ನೋಡಿದ್ದೆವು. ಭೂಮಿ ಸಮಸ್ಯೆ ಬಂದ ಕಾರಣಕ್ಕೆ ಎರಡು ಕಡೆ ಅಂತಿಮ ಮಾಡಿದ್ದೇವೆ. ಟೆಂಡರ್ ಕೂಡ ಕರೆಯಲಾಗಿದೆ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.







