ಬೆಂಗಳೂರು ನಗರದಾದ್ಯಂತ ಕಳೆದ 1 ವಾರದಿಂದ ಸತತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸಾರ್ವಜನಿಕರಿಗೆ ನೂತನ ಗೈಡ್ ಲೈನ್ಸ್ ಹೊರಡಿಸಿದೆ. ತಗ್ಗು ಪ್ರದೇಶ, ರಾಜಕಾಲುವೆ, ಕೆರೆಯ ಆಸುಪಾಸಿನ ಏರಿಯಾಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಬಗ್ಗೆ ಎಚ್ಚರಿಸುವ ಕೆಲಸ ಮಾಡಿದೆ.
ನಿರಂತರ ಮಳೆ ಆಗುತ್ತಿದ್ದು, ಕೆಲವೇ ದಿನಗಳಲ್ಲಿ ಕಾಲರಾ, ಜಾಂಡೀಸ್, ಡೆಂಘೀ, ಕರುಳ ಬೇನೆ, ಚಿಕನ್ ಗುನ್ಯಾ, ಮಲೇರಿಯಾ ರೋಗಗಳ ಹರಡುವ ಆಂತಕವಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಾರ್ವಜನಿಕರಿಗೆ ಬಿಬಿಎಂಪಿ ಸೂಚನೆ ನೀಡಿದೆ.
ಪ್ರತಿ ವಾರ್ಡ್ಗಳ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್, ಹೆರಿಗೆ ಆಸ್ಪತ್ರೆಗಳಲ್ಲಿ ಔಷಧಿ ಸಿಗುವಂತೆ ಕ್ರಮ ತೆಗೆದುಕೊಳ್ಳಲಿದ್ದು, ಪಾಲಿಕೆ ವ್ಯಾಪ್ತಿಯ ಮಹದೇವಪುರ, ಯಲಹಂಕ, ಆರ್.ಆರ್ ನಗರ, ಬೊಮ್ಮನಹಳ್ಳಿ ವಲಯಗಳಲ್ಲಿ ತಾತ್ಕಾಲಿಕ ಶಿಬಿರ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ.
ನೀರಿನ ಗುಣಮಟ್ಟ ಪರೀಕ್ಷೆಯನ್ನೂ ನಡೆಸುವಂತೆ ಆದೇಶ ನೀಡಲಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ORS ಹಾಗೂ ಹಾಲೋಜೆನ್ ಮಾತ್ರೆಗಳು ನೀಡುವಂತೆ ಬಿಬಿಎಂಪಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.