ಬಿಗ್ ಬಾಸ್ ಕನ್ನಡ(Bigg Boss Kannada) ಸೀಸನ್ 12 ಅಂತಿಮ ಹಂತಕ್ಕೆ ತಲುಪುತ್ತಿದ್ದು, ಈ ವಾರ ಟಾಪ್ 6 ಸ್ಪರ್ಧಿಯ ಸ್ಥಾನಕ್ಕಾಗಿ ಮನೆ ಮಂದಿ ಹೋರಾಟಕ್ಕಿಳಿದಿದ್ದಾರೆ. ಈ ಬಾರಿ ಬಿಗ್ ಬಾಸ್ ಗೆಲ್ಲಬಹುದಾದ ಸ್ಪರ್ಧಿಗಳು ಎನಿಸಿಕೊಂಡಿರುವ ಗಿಲ್ಲಿ ನಟ(Gilli Nata) ಹಾಗೂ ರಕ್ಷಿತಾ ಶೆಟ್ಟಿ(Rakshitha Shetty) ಈಗಾಗಲೇ ಆಟದಿಂದ ಹೊರಗುಳಿದಿದ್ದಾರೆ. ಇದು ಗಿಲ್ಲಿ ಹಾಗೂ ರಕ್ಷಿತಾ ಅಭಿಮಾನಿಗಳಿಗೆ ಬೇಸರವಾಗಿದ್ದರೂ ಕೂಡ ಈ ವಾರದ ಆಟ ವೀಕ್ಷಕರಿಗೆ ಹೆಚ್ಚಿನ ಮನೋರಂಜನೆ ನೀಡುತ್ತಿದೆ.

ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ಆಟದ ಪರಿ ಕೂಡ ಬದಲಾಗಿದ್ದು, ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿದೆ. ಈ ಮೊದಲಿನಿಂದಲೂ ತಮ್ಮ ಮಾತುಗಳಿಂದ ಎಲ್ಲರ ವಿರೋಧ ಕಟ್ಟಿಕೊಳ್ಳುತ್ತಿದ್ದ ಅಶ್ವಿನಿ ಗೌಡ ಈ ವಾರ ಟಾಸ್ಕ್ನಲ್ಲಿ ತೋರಿದ ಪ್ರದರ್ಶನ ನೋಡಿ ಮನೆ ಮಂದಿಯೇ ಶಾಕ್ ಆಗಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಟಾಪ್ 6 ಸ್ಪರ್ಧಿಯ ಸ್ಥಾನಕ್ಕಾಗಿ ಅಶ್ವಿನಿ ಗೌಡ ಉತ್ತಮವಾಗಿ ಟಾಸ್ಕ್ ಆಡಿದ್ದಾರೆ.

ಟಾಪ್ 6 ರೇಸ್ಗೆ ಸ್ಪರ್ಧಿಗಳಾಗಲು ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ಇದರ ಪ್ರಕಾರ ಸ್ಪರ್ಧಿಗಳು ಒಂದು ಕಂಬ ಹಿಡಿದು ನಿಲ್ಲಬೇಕು. ಹಿಂಭಾಗದಲ್ಲಿ ಅವರಿಗೆ ತೂಕವನ್ನು ಹೊರಿಸಲಾಗಿತ್ತದೆ. ಇದರ ಜೊತೆಗೆ ಎದುರಿದ್ದವರು ನೀರನ್ನು ಎರಚುತ್ತಾರೆ. ಇದೆಲ್ಲವನ್ನೂ ಸಹಿಸಿಕೊಂಡು ಸ್ಪರ್ಧಿಗಳು ಅತಿ ಹೆಚ್ಚು ಸಮಯ ನಿಲ್ಲಬೇಕು. ರಘು ಹಾಗೂ ರಾಶಿಕಾ ಮತ್ತು ಧ್ರುವಂತ್ ಹಾಗೂ ಅಶ್ವಿನಿ ಗೌಡ ತಂಡಗಳಾಗಿ ಅಖಾಡಕ್ಕೆ ಇಳಿದಿದ್ದಾರೆ.

ಮೊದಲ ಸುತ್ತಿನಲ್ಲಿ ಆಡಿದ ರಾಶಿಕಾ 29.51 ನಿಮಿಷ ಹಾಗೂ ರಘು ಅವರು 70.10 ನಿಮಿಷ ನಿಂತಿದ್ದರು. ಅಶ್ವಿನಿ ಗೌಡ ಹಾಗೂ ಧ್ರುವಂತ್ ಅವರು ರಘು ದಾಖಲೆಯನ್ನು ಮುರಿದು ಗೆಲುವು ಕಂಡಿದ್ದಾರೆ. ರಘು ಹಾಗೂ ರಾಶಿಕಾ ಜೋರಾಗಿಯೇ ನೀರು ಎರಚಿದ್ದು, ಅಶ್ವಿನಿ ಗೌಡ ಹಾಗೂ ಧ್ರುವಂತ್ ಕಿಂಚಿತ್ತೂ ಅಲುಗಾಡದೇ ನಿಂತು ಸ್ಪರ್ಧೆಯಲ್ಲಿ ಗೆಲುವು ಕಂಡರು. ಈ ವೇಳೆ ಅಶ್ವಿನಿ ಗೌಡ ಹಾಗೂ ರಾಶಿಕಾ ನಡುವೆ ಮಾತಿನ ಜಟಾಪಟಿ ಜೋರಾಗಿಯೇ ನಡೆದಿದ್ದು, ಅಶ್ವಿನಿ ಗೌಡ ಮಾತಿನ ಸಮರದಲ್ಲಿಯೂ ಸೋಲದೇ ಗೆಲುವು ಕಂಡಿದ್ದಾರೆ. ಅಶ್ವಿನಿ ಗೌಡ ಅವರ ಆಟಕ್ಕೆ ಮನೆಯ ಇತರ ಸ್ಪರ್ಧಿಗಳು ಶಾಕ್ ಆಗಿದ್ದು, ರಕ್ಷಿತಾ ಹಾಗೂ ರಘು ಅಶ್ವಿನಿ ಗೌಡ ಅವರನ್ನು ಪ್ರಶಂಸಿಸಿದ್ದಾರೆ.






