ಬೆಂಗಳೂರು: ಕಾಂಗ್ರೆಸ್ಸಿನವರು ಯಾವ ಪುರುಷಾರ್ಥಕ್ಕಾಗಿ ಮತ್ತು ಯಾವ ನೈತಿಕತೆ ಇಟ್ಟುಕೊಂಡು ವಿಬಿ-ಜಿ ರಾಮ್ ಜಿ(VB-G RAM G Bill) ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಸವಾಲು ಹಾಕಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ವಿಬಿ-ಜಿ ರಾಮ್ ಜಿ) ಇದರ ಬಗ್ಗೆ ಕಾಂಗ್ರೆಸ್ ಪಕ್ಷವು 10ರಿಂದ ಹೋರಾಟ ಮಾಡಲು ಕರೆ ನೀಡಿದೆ. 20 ವರ್ಷಗಳ ಹಿಂದೆ ಯೋಜನೆ ಮಾಡಿದಾಗ ವಿಕಸಿತ ಭಾರತ, ಆಸ್ತಿ ನಿರ್ಮಾಣದ ಕಲ್ಪನೆಯೇ ಇರಲಿಲ್ಲ. ಆಗ, ದೇಶ- ಜನರ ಆರ್ಥಿಕ ಸ್ಥಿತಿ ಅತ್ಯಂತ ಕಠಿಣವಾಗಿತ್ತು ಎಂದು ವಿವರಿಸಿದರು.

ವಿಕಸಿತ ಭಾರತ ಆದಾಗ ಮೂಲಭೂತ ಸೌಕರ್ಯ, ದೀರ್ಘಾವಧಿಯ ಆಸ್ತಿಗಳಿರುವ ವಿಕಸಿತ ಗ್ರಾಮವೂ ಆಗದೇ ಇದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹಳ್ಳಿಗಳು ಖಾಲಿ ಆಗಲಿವೆ ಎಂಬ ಮಹತ್ವದ ಅಂಶವೂ ಇದರಲ್ಲಿದೆ ಎಂದು ತಿಳಿಸಿದರು. ಕಾಲಕಾಲಕ್ಕೆ ಈ ಯೋಜನೆಯಡಿ ಬದಲಾವಣೆಗಳನ್ನು ಅವರೂ ಮಾಡಿದ್ದಾರೆ ಎಂದು ಹೇಳಿದರು.

ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಇದು ಕಸಿಯಲಿದೆ ಎಂಬ ಸುಳ್ಳನ್ನು ಅವರು ಹೇಳುತ್ತಿದ್ದಾರೆ. ಇದು ಶುದ್ಧಾಂಗ ಸುಳ್ಳು. ಇದು ಯಾವುದೇ ರೀತಿಯ ಕೇಂದ್ರದ ಯೋಜನೆ ಅಥವಾ ಕೇಂದ್ರ ಪ್ರಾಯೋಜಿತ ಯೋಜನೆ ಮಾಡಲು ಕಾನೂನಿನ ಅಗತ್ಯವಿಲ್ಲ. ವಿಬಿ-ಜಿ ರಾಮ್ ಜಿ ಎಂಬುದು ಸಂಸತ್ತಿನ ಕಾಯ್ದೆ ಎಂದು ತಿಳಿಸಿದರು. ಇದು ಕೆಲಸದ ಹಕ್ಕನ್ನು ಕಸಿಯುವುದಿಲ್ಲ. ಇದನ್ನು 125 ದಿನಕ್ಕೆ ಏರಿಸಿದ್ದೇವೆ ಎಂದು ಹೇಳಿದರು.

ಸರಿಯಾಗಿ ಕೆಲಸ ಕೊಟ್ಟು ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡುವ ಪ್ರತಿ ರಾಜ್ಯಕ್ಕೆ 17 ಸಾವಿರ ಕೋಟಿ ರೂ. ಸಿಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಅಂದಾಜು ಮೂಲಕ ಮಾಹಿತಿ ಸಿಕ್ಕಿದೆ. ಕಾಂಗ್ರೆಸ್ ಆಡಳಿತದಲ್ಲಿ ಮನ್‍ರೇಗಾ ಇದ್ದಾಗಲೂ ಬೇರೆ ಬೇರೆ ರಾಜ್ಯ ಸರಕಾರಗಳ ಅಡಿಯಲ್ಲಿ ಸರಾಸರಿ 50 ದಿನ ಮಾತ್ರ ಉದ್ಯೋಗ ಕೊಟ್ಟಿದ್ದರು. ಜೆಸಿಬಿ ಮೂಲಕ ಕೆಲಸ ಮಾಡಿಸಿದ್ದ ಬಹಳಷ್ಟು ಉದಾಹರಣೆಗಳಿವೆ ಎಂದರು.

ಕೇಂದ್ರ ಸರಕಾರದ ದುಡ್ಡು ತಿನ್ನುವ ವ್ಯವಸ್ಥೆ ಇತ್ತು
ಹಿಂದೆ ಒಂದು ಪೈಸೆಯನ್ನೂ ರಾಜ್ಯ ಸರಕಾರ ಕೊಡುತ್ತಿರಲಿಲ್ಲ. ಮನ ಬಂದಂತೆ ಕೆಲಸ ಮಾಡಿ ಕೇಂದ್ರ ಸರಕಾರದ ದುಡ್ಡು ತಿನ್ನುವ ವ್ಯವಸ್ಥೆ ಇದರಲ್ಲಿ ಇತ್ತು. ಗುರಿ ತಲುಪದ ಅಧಿಕಾರಿಗಳ ಮೇಲೆ ಕ್ರಮ ಆಗುತ್ತಿದ್ದು ನಿಮಗೂ ತಿಳಿದಿದೆ. ಈಚೆಗೆ ನೇರ ಕೂಲಿ ಪಾವತಿ ಆಗುತ್ತಿದ್ದರೂ, ಮೇಲ್ವಿಚಾರಣಾ ವ್ಯವಸ್ಥೆ ಇರಲಿಲ್ಲ ಎಂದು ಆಕ್ಷೇಪಿಸಿದರು. ಆ ಮೇಲ್ವಿಚಾರಣಾ ವ್ಯವಸ್ಥೆ ಮೂಲಕ ಕೇಂದ್ರೀಕೃತ ಪಾವತಿ ಮಾಡಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಬಹಳ ವಿಸ್ತøತವಾಗಿ ಮಾಡಲಾಗಿದೆ ಎಂದು ವಿವರಿಸಿದರು.

ಈ ಯೋಜನೆಯ ನಿರ್ಧಾರದ ಹಕ್ಕುಗಳನ್ನು ಕೇಂದ್ರ ಸರಕಾರ ಇಟ್ಟುಕೊಂಡಿದೆ ಎಂಬುದು ಅತ್ಯಂತ ದೊಡ್ಡ ಸುಳ್ಳು ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳೇ ನಮ್ಮನೆ ದೇವರು ಎಂಬುದು ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು. ಯುಪಿಎ ಕಾಲದ 10 ವರ್ಷದಲ್ಲಿ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ಆಗಿದೆ ಎಂದು ಸಂಸತ್ತಿನಲ್ಲಿ ಅಮಿತ್ ಶಾ ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಅದನ್ನು ಅಲ್ಲಗಳೆದಿಲ್ಲ ಎಂದು ತಿಳಿಸಿದರು.

ಈ ಯೋಜನೆಯಲ್ಲೂ ಹಗರಣ ಮುಂದುವರೆಸುವ ಇಚ್ಛೆ ಇದ್ದುದರಿಂದ ಅವರು ವಿರೋಧಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ಪಾರದರ್ಶಕ ಮಾಡಿದ್ದಕ್ಕಾಗಿ ಅವರ ಹೋರಾಟ ಎಂದು ದೂರಿದರು. ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯಿತಿಗಳೇ ನಿರ್ಧಾರ ಮಾಡುತ್ತವೆ. ಯಾವ ಹಳ್ಳಿಯಲ್ಲಿ ಯಾವ ಮೂಲಭೂತ ಸೌಕರ್ಯ ನಿರ್ಮಾಣ ಆಗಲಿದೆ ಎಂದು ತಿಳಿದುಕೊಳ್ಳುವ ಅವಕಾಶ ಇರುವ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಇದನ್ನು ತರಲಾಗಿದೆ. ಗತಿ ಶಕ್ತಿ ಯೋಜನೆಯಡಿ ಬೇರೆ ಬೇರೆ ಉದ್ದೇಶದ 85 ಲಕ್ಷ ಕೋಟಿ ಹೂಡಿಕೆಯ ವಿಭಿನ್ನ ಯೋಜನೆಗಳು ಮಂಜೂರಾಗಿವೆ. ಇಲ್ಲವಾದರೆ ಅವು ಹಾಗೇ ಬಿದ್ದಿರುತ್ತಿದ್ದವು ಎಂದು ತಿಳಿಸಿದರು.

ಆರ್ಥಿಕತೆ ಮೇಲೆ ದುಷ್ಪರಿಣಾಮ ಹೇಗೆ ಆಗಲು ಸಾಧ್ಯ
100 ದಿನ ಇದ್ದುದನ್ನು 125 ದಿನ ಮಾಡಿದರೆ ಗ್ರಾಮೀಣ ಭಾಗದ ಆರ್ಥಿಕತೆ ಮೇಲೆ ದುಷ್ಪರಿಣಾಮ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದರು. ಹಿಂದೆ ಕೂಲಿ ಪಾವತಿಗೆ ನಿಗದಿತ ಕಾಲಾವಧಿ ಇರಲಿಲ್ಲ. ಈಗ 14 ದಿನದಲ್ಲಿ ಕೊಡಬೇಕು. ಇಲ್ಲವೇ ದಂಡ ಹಾಕುತ್ತಾರೆ. ಈಗ ಜಗತ್ತಿನ ಅತಿದೊಡ್ಡ 4ನೇ ಆರ್ಥಿಕ ಶಕ್ತಿಯಾಗಿ ನಾವು ಪರಿವರ್ತನೆಗೊಂಡಿದ್ದೇವೆ. ಅತಿ ಶೀಘ್ರವೇ ಭಾರತವು 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿಂದೆ ಕೆಲಸ ಆಗಲೀ, ಇಲ್ಲದೇ ಇರಲಿ, ದುಡ್ಡು ಪಾವತಿ ಆಗುತ್ತಿತ್ತು. ಮೇಲ್ವಿಚಾರಣೆಯಿಂದ ಇದು ಬಂದ್ ಆಗಲಿದೆ ಎಂದರು.

ಜೆಸಿಬಿ ಮೂಲಕ ಕೆಲಸ ಮಾಡಿ ವಸೂಲಿ
ವಿಕಸಿತ ಗ್ರಾಮ ಪಂಚಾಯಿತಿ ಯೋಜನೆ ತಯಾರಿಸಿ ವಿಕಸಿತ್ ಭಾರತ್ ರೂರಲ್ ಇನ್‍ಫ್ರಾಸ್ಟ್ರಕ್ಚರ್ ಅಡಿ ಸೇರಿಸುತ್ತಾರೆ. ಇದರಲ್ಲಿ ಗುಣಮಟ್ಟ ಮತ್ತು ಎಷ್ಟು ಕೆಲಸ ಎಂಬುದಕ್ಕೆ ಆದ್ಯತೆ ಕೊಡುತ್ತೇವೆ. ಮೊದಲು ಕೇವಲ ಎಷ್ಟು ಕೆಲಸ ಎಂಬುದನ್ನಷ್ಟೇ ಗಮನಿಸುತ್ತಿದ್ದರು. ಜೆಸಿಬಿ ಮೂಲಕ ಕೆಲಸ ಮಾಡಿ ವಸೂಲಿ ಮಾಡುತ್ತಿರಲಿಲ್ಲ ಎಂದು ಒಬ್ಬರಾದರೂ ಹೇಳಲಿ. 20, 30, 40 ರೂ. ಕಾರ್ಮಿಕರಿಗೆ ಕೊಟ್ಟು ಅದನ್ನೆಲ್ಲ ವಸೂಲು ಮಾಡಿರಲಿಲ್ಲವೇ? ಎಂದು ಕೇಳಿದರು.
ಅನುಷ್ಠಾನಕ್ಕೆ ತಂದ ಕಾಮಗಾರಿಯ ನಿರ್ವಹಣೆಗೆ ಇದರಡಿ ಅವಕಾಶ ಇದೆ. ಇವತ್ತು ಮಾಡುವುದು, ಮರೆತುಬಿಡುವ ಪದ್ಧತಿ ಅಲ್ಲ. ನೀರಾವರಿ, ರಸ್ತೆ, ಶಾಲಾ ಕಟ್ಟಡ ಮಾಡಿದ್ದರೆ, ಇಂತಿಷ್ಟು ವರ್ಷ ನಿರ್ವಹಣೆ ಮಾಡಬೇಕೆಂಬ ಸೂಚನೆ ಇರುತ್ತದೆ. ಇದರಲ್ಲಿ ನಿಮ್ಮದೇನು ಸಮಸ್ಯೆ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಗಂಭೀರತೆ ಉಳ್ಳ ರಾಜಕಾರಣಿಯೇ?
ಆಡಳಿತಾತ್ಮಕ ವೆಚ್ಚ ಶೇ 6 ಇತ್ತು. ಹೀಗಾಗಿ ಸಿಬ್ಬಂದಿಗಳಿಗೆ ವೇತನ ಸಿಗುತ್ತಿರಲಿಲ್ಲ. ಸಿಬ್ಬಂದಿಗಳಿಗೆ ನೇರ ವೇತನ ಕೊಡುವ ವ್ಯವಸ್ಥೆ ಮಾಡಿ, ಅದನ್ನು ಶೇ 9ಕ್ಕೆ ಏರಿಸಿದ್ದೇವೆ. ಕಳೆದ 20 ವರ್ಷಗಳಲ್ಲಿ ಸರಾಸರಿ 100 ದಿನ, 100 ದಿನ ಸೋನಿಯಾಗಾಂಧಿ ಯೋಜನೆ ಎಂದು ಭಾಷಣ ಮಾಡಿದ್ದಾರೆ. ಇದರ ಕುರಿತು ಚರ್ಚೆ ನಡೆದಾಗ ರಾಹುಲ್ ಗಾಂಧಿ ಹಾಜರಿರಲಿಲ್ಲ. ಅವರೇನು ಗಂಭೀರತೆ ಉಳ್ಳ ರಾಜಕಾರಣಿಯೇ ಎಂದು ಕೇಳಿದರು. ವಿದೇಶಕ್ಕೆ ಹೋಗಿದ್ದರು. ಯಾಕೆ ವಿದೇಶಕ್ಕೆ ಹೋಗಿದ್ದೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಸೋಷಿಯಲ್ ಆಡಿಟಿಂಗ್ ಇನ್ನು ಮುಂದೆ ಆರು ತಿಂಗಳಿಗೊಮ್ಮೆ ನಡೆಯಲಿದೆ. ಮೊದಲು ಇದನ್ನು ಸಾಕ್ಷ್ಯವಾಗಿ ಪರಿಗಣಿಸುತ್ತಿರಲಿಲ್ಲ. ಇನ್ನು ಮುಂದೆ ಈ ವರದಿಯನ್ನು ಡಿಜಿಟಲ್ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ಇದೆಲ್ಲವೂ ತಾಂತ್ರಿಕ ಆಧರಿತ ಆಗಿರುವ ಕಾರಣ ಇದರಿಂದ ಇವರ ಭ್ರಷ್ಟಾಚಾರಕ್ಕೆ, ಇವರ ಮಧ್ಯವರ್ತಿಗಳಿಗೆ ತೊಂದರೆ ಆಗಲಿದೆ. ಗರಿಗರಿ ಅಂಗಿ, ಬಿಳಿ ಟೊಪ್ಪಿ ಹಾಕಿ ಓಡಾಡುವ ಕಾಂಗ್ರೆಸ್ಸಿನ ಜನ ಇದ್ದಾರಲ್ಲವೇ? ಅವರಿಗೆ ತೊಂದರೆ ಆಗಲಿದೆ. ಇನ್ನು ಮೇಲೆ ಅವರಿಗೆ ದುಡ್ಡು ಸಿಗಲಾರದು ಎಂದರು.

ಯಾವುದಾದರೂ ದೂರು (ಅಹವಾಲು) ಇದ್ದಲ್ಲಿ ಇಂತಿಷ್ಟು ತಿಂಗಳಲ್ಲಿ ಬಹುಹಂತದ ದೂರು ಪರಿಹಾರ ವ್ಯವಸ್ಥೆಯ ಮೂಲಕ ಪರಿಹರಿಸಲಾಗುವುದು. ತನಿಖೆ ನಡೆಸಿ ನಿಗದಿತ ಅವಧಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಕಾನೂನಿನಡಿ ಅವಕಾಶ ಕಲ್ಪಿಸಿದ್ದೇವೆ ಎಂದು ಹೇಳಿದರು. ಯಾರಾದರೂ ಕೋರ್ಟಿಗೆ ಹೋದರೆ ಸಂಬಂಧಿತ ಅಧಿಕಾರಿಗೆ ಶಿಕ್ಷೆ ಆಗಲಿದೆ ಅಥವಾ ಇಲಾಖಾ ತನಿಖೆಯಡಿ ಶಿಕ್ಷೆ ಸಿಗಲಿದೆ ಎಂದು ವಿವರಿಸಿದರು. ನೀವೇನು ಅಸಂಬದ್ಧ ಮಾತನಾಡುತ್ತೀರಿ ಎಂದು ಪ್ರಶ್ನೆ ಮಾಡಿದರು.
ಅಹವಾಲು ಸ್ವೀಕಾರದಿಂದ ಆರಂಭಿಸಿ ಅಹವಾಲು ಪರಿಹಾರದವರೆಗೆ ಪಾರದರ್ಶಕತೆಯನ್ನು ಇದರೊಳಗೆ ತಂದಿದ್ದೇವೆ. ಕೆಲಸವೇ ನಡೆಯದೇ ಹಣ ಪಾವತಿಸಿದ ಘಟನೆಗಳು ಪಶ್ಚಿಮ ಬಂಗಾಲದ 19 ಜಿಲ್ಲೆಗಳಲ್ಲಿ ಹಿಂದೆ ಪತ್ತೆಯಾಗಿದ್ದವು. ಹಣ ದುರ್ಬಳಕೆ ಕಾರಣಕ್ಕಾಗಿ ಅಲ್ಲಿ ಯೋಜನೆಯೇ ತಾತ್ಕಾಲಿಕವಾಗಿ ಬಂದ್ ಆಗಿತ್ತು ಎಂದು ಗಮನ ಸೆಳೆದರು. 2025-26ರಲ್ಲಿ 23 ರಾಜ್ಯಗಳಲ್ಲಿ ಮೇಲ್ವಿಚಾರಣೆ ನಡೆಸಿದಾಗ ಎಷ್ಟೋ ಯೋಜನೆಗಳು ಇರಲೇ ಇಲ್ಲ; ಅಥವಾ ಆದ ವೆಚ್ಚಕ್ಕೆ ಇರುವುದಕ್ಕೂ ಸಂಬಂಧವೇ ಇಲ್ಲದಂತಿತ್ತು ಎಂದು ಗಮನಕ್ಕೆ ತಂದರು. ಮನಸ್ಸಿಗೆ ಬಂದಂತೆ ಕೆಲಸ, ಯಂತ್ರಗಳ ಬಳಕೆಯೂ ನಡೆದಿದೆ ಎಂದು ವರದಿಯನ್ನು ಉಲ್ಲೇಖಿಸಿ ತಿಳಿಸಿದರು.

ವಾರಕ್ಕೊಮ್ಮೆ ಎಷ್ಟು ಕೆಲಸ ಆಗಿದೆ ಎಂದು ಸಾರ್ವಜನಿಕವಾಗಿ ತಿಳಿಸಬೇಕಿದೆ. ನಿಮಗೇನು ಸಮಸ್ಯೆ ಇದೆ ಇದರಲ್ಲಿ ಎಂದು ಕೇಳಿದರು. ಆಧಾರ್ ಸೇರ್ಪಡೆ 2014ರವರೆಗೆ 76 ಲಕ್ಷ ಇತ್ತು. ಈಗ ಅದನ್ನು 12.11 ಕೋಟಿಗೆ ಏರಿಸಿದ್ದೇವೆ ಎಂದು ವಿವರ ನೀಡಿದರು. ಯಾರು ಬರುತ್ತಾರೋ ಅವರಿಗೆ ಕೆಲಸ ಕೊಡುತ್ತೇವೆ ಎಂದು ತಿಳಿಸಿದರು.
ಹಿಂದೆ ಡಿಜಿಟಲ್ ಇ ಪಾವತಿ ಶೇ 37ರಷ್ಟಿತ್ತು. ಇವರು ದುಡ್ಡು ಹಾಗೇ ಕೈಯಲ್ಲಿ ಕೊಡುತ್ತಿದ್ದರು. ನಾವು ಡಿಜಿಟಲ್ ಪಾವತಿ ಪ್ರಮಾಣವನ್ನು ಶೇ 99ಕ್ಕೆ ಏರಿಸಿದ್ದೇವೆ. ಆ ಕಾರಣದಿಂದ ಬಜೆಟ್‍ನಲ್ಲಿ ಮತ್ತು ಜವಾಬ್ದಾರಿಯಲ್ಲಿ ಭಾಗೀದಾರಿಕೆ ಅನಿವಾರ್ಯ. ನಾವು 125 ದಿನಕ್ಕೆ ನಮ್ಮ ಮೊತ್ತ ಹೆಚ್ಚಿಸುತ್ತೇವೆ. ಚೆನ್ನಾಗಿ ಕೆಲಸ ಮಾಡಿದವರಿಗೆ ಜಾಸ್ತಿ ಹಣ ಸಿಗಲಿದೆ ಎಂದು ವಿಶ್ಲೇಷಿಸಿದರು.

ನೀರು, ಶೌಚಾಲಯ ಸಂಬಂಧಿತ ವ್ಯವಸ್ಥೆ, ಇತರ ಅವಶ್ಯಕತೆ ಆಧರಿಸಿ ಗ್ರಾಮ ಪಂಚಾಯಿತಿಗೆ ಯೋಜನೆ ರೂಪಿಸಲು ವಿಶೇಷ ಅಧಿಕಾರ ಇರಲಿದೆ. ಈ ಯೋಜನೆಗಳನ್ನು ನಾವು ಯೋಜಿತ ರೀತಿಯಲ್ಲಿ ಮಾಡಿದ್ದೇವೆ. ದೇಶದ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ವಲ್ರ್ಡ್ ಬ್ಯಾಂಕ್, ನೀತಿ ಆಯೋಗದ ವರದಿ ಪ್ರಕಾರ ನಮ್ಮ ದೇಶದ ಬಡತನ, ಬಹು ಆಯಾಮದ ಬಡತನದಿಂದ 25 ಕೋಟಿ ಜನರು ಹೊರಕ್ಕೆ ಬಂದಿದ್ದಾರೆ. ಅದರರ್ಥ ದೇಶ ನಂದನವನ ಆಗಿದೆ ಎಂದಲ್ಲ. ಇನ್ನಷ್ಟು ಕೆಲಸ ಆಗಬೇಕಿದೆ. ಅದಕ್ಕೆ ಮೂಲಭೂತ ಸೌಕರ್ಯ ಬೇಕು. ಅದಕ್ಕಾಗಿ ನೀರಾವರಿ ಬೇಕು. ಇದೆಲ್ಲ ಆಗಲು ಉತ್ತಮ ಗುಣಮಟ್ಟದ ವಿದ್ಯುತ್ ಅವಶ್ಯವಾಗಿ ಬೇಕಾಗಲಿದೆ. ಇಂಥ ಅನೇಕ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ನಾವು ಒಂದು ವಿಶೇಷವಾದ ಯೋಜನೆಯನ್ನು ಈ ವ್ಯವಸ್ಥೆಯಡಿ ಮಾಡಿದ್ದೇವೆ. ಇದನ್ನು ಕಾಂಗ್ರೆಸ್ ಪಕ್ಷಕ್ಕೆ ಸಹಿಸಲು ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರ ಹೀಗೇ ಮುಂದುವರೆಯಬೇಕು
ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶ, ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಹೇಳಿಕೊಂಡು ಜಗತ್ತಿನ ಮುಂದೆ ನಾವು ಹೀಗೇ ಅಡ್ಡಾಡಬೇಕು. ಇವರ ಮಧ್ಯವರ್ತಿಗಳು ಶ್ರೀಮಂತರಾಗಬೇಕು ಎಂಬ ಕಾರಣದಿಂದ ಈ ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಪಾರದರ್ಶಕ ವ್ಯವಸ್ಥೆ ಬೇಡವೇ? ಭ್ರಷ್ಟಾಚಾರವೇ ಬೇಕೇ ನಿಮಗೆ? 100 ರೂ. ದೆಹಲಿಯಿಂದ ಹಾಕಿದರೆ ಹಳ್ಳಿಗೆ 15 ರೂ. ತಲುಪುತ್ತದೆ ಎಂದು ರಾಜೀವ್ ಗಾಂಧಿ ಹೇಳಿದ್ದರಲ್ಲವೇ? ಅದೇ ಬೇಕೇ ನಿಮಗೆ? ಎಂದು ಕೇಳಿದರು. ಗ್ರಾಮ ಸಭಾಗಳ ಸೋಷಿಯಲ್ ಆಡಿಟ್‍ನಲ್ಲಿ 10 ಲಕ್ಷ 51 ಸಾವಿರ ದೂರುಗಳು ಬಂದಿವೆ. 3 ವರ್ಷದ ವಿವರ ಇವು. ನಮಗೆ ಕೂಲಿ ಸಿಕ್ಕಿಲ್ಲ; ನಮ್ಮಲ್ಲಿ ಕೆಲಸ ಆಗಿಲ್ಲ; ದುಡ್ಡು ಹೊಡೆದಿದ್ದಾರೆ ಎಂಬ ದೂರುಗಳಿವು. ಮೊಬೈಲ್ ಟ್ರ್ಯಾಕಿಂಗ್, ಜಿಪಿಎಸ್ ಟ್ರ್ಯಾಕ್ ಮಾಡಿದರೆ, ನಿಮ್ಮ ಸಮಸ್ಯೆ ಏನು ಎಂದು ಕೇಳಿದರು.

ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ. ನಿಮಗೆ ಬುದ್ಧಿ ಬೇಡವೇ ಸಿದ್ದರಾಮಯ್ಯನವರೇ?
80 ವರ್ಷದ ಕಾರ್ಮಿಕರೂ ಇದ್ದಾರೆ. ಅವರ ಹೆಸರಿಗೆ ದುಡ್ಡು ಹಾಕಿದ್ದಾರೆ. ಹಳೆ ಕಲ್ಲು ಹೊಸ ಬಿಲ್ -ಇದು ಎಲ್ಲ ಕಡೆ ನಡೆದಿದೆ. 100 ದಿನಗಳ ಕಾಲ ಕೆಲಸ ಕೊಡಬೇಕಾದ ದಲಿತ ಮಹಿಳೆಯೊಬ್ಬರ ಹೆಸರಿನಲ್ಲಿ ದುಡ್ಡು ಹೊಡೆದಿದ್ದರು. ಸಿದ್ದರಾಮಯ್ಯರ ಮೊದಲ ಅವಧಿಯ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು. ದುಡ್ಡು ಹೊಡೆದ ಇಂಥ ಸಾವಿರ ಉದಾಹರಣೆಗಳಿವೆ. ಇದರಲ್ಲಿ ಬದಲಾವಣೆ, ಪಾರದರ್ಶಕತೆ ಬೇಡವೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ. ನಿಮಗೆ ಬುದ್ಧಿ ಬೇಡವೇ ಸಿದ್ದರಾಮಯ್ಯನವರೇ? ಎಂದು ಕೇಳಿದರು.












