ಸಚಿವ ಸಂಪುಟ ವಿಸ್ತರಣೆ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದ್ದು, ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಸಂಭಾವ್ಯ ಸಚಿವರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇಂದು ಸಂಜೆ ಏಳು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ನಡುವೆ ಯಡಿಯೂರಪ್ಪ ಮಾತು ಕೇಳಿ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಶಾಸಕರಲ್ಲಿ ಕೆಲವರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಮಂತ್ರಿ ಸ್ಥಾನದ ರೇಸ್ನಲ್ಲಿದ್ದ ಶಾಸಕ ಮುನಿರತ್ನ, ಎಂಎಲ್ಸಿ ಹೆಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಅನುಮಾನ. ಅಲ್ಲದೆ, ಈಗಾಗಲೇ ಅಬಕಾರಿ ಸಚಿವರಾಗಿರುವ ಹೆಚ್. ನಾಗೇಶ್ ಅವರನ್ನು ಕೂಡ ಸಂಪುಟದಿಂದ ಕೈಬಿಡಲಾಗಿದೆ.
ಸದ್ಯ ಒಂದು ಸ್ಥಾನವನ್ನು ಖಾಲಿ ಬಿಟ್ಟಿದ್ದು ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಬಿಎಸ್ವೈ ಹೇಳಿದ್ದಾರೆ. ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ನಡೆಯಲಿದ್ದು ಅದರ ಬಳಿಕ ಬಾಕಿ ಇರುವ ಸ್ಥಾನದ ಕುರಿತು ಅಂತಿಮ ನಿರ್ಧಾರ ತಳೆಯಲಾಗುತ್ತದೆ.
ಈ ನಡುವೆ, ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದ ಎಂಎಲ್ಸಿ ಎ ಹೆಚ್ ವಿಶ್ವನಾಥ್, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ 17 ಶಾಸಕರ ಭಿಕ್ಷೆಯಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆ ವೇಳೆ ನೀಡಿದ ಮಾತನ್ನು ಯಡಿಯೂರಪ್ಪ ಸರ್ಕಾರ ಉಳಿಸಿಕೊಂಡಿಲ್ಲ. ನಮ್ಮ ತ್ಯಾಗಕ್ಕೆ ಬೆಲೆಯಿಲ್ಲದಂತಾಗಿದೆ. ಬ್ಯಾಗ್ ಹಿಡಿಯುವುದೇ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಇರುವ ಅರ್ಹತೆ ಎಂಬಂತಾಗಿದೆ. ಯಡಿಯೂರಪ್ಪ ತಮ್ಮ ನಾಲಿಗೆಯನ್ನು ಕಳೆದುಕೊಂಡಿದ್ದಾರೆ ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಪಿ ಯೋಗೇಶ್ವರ್ ಮಂತ್ರಿ ಸಿಎಂ ಯಡಿಯೂರಪ್ಪನವರ ಮನೆಯಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣವೇ ಕಾರಣ. ಇದರಲ್ಲಿ ವಿಜಯೇಂದ್ರ ಅವರ ಕೊಡುಗೆ ಇದೆ. ಅದೇ ರೀತಿ ಯಡಿಯೂರಪ್ಪನವರ ಪ್ರತಿಷ್ಠೆ ನೆಲಸಮವಾಗಲೂ ಅವರ ಮಗ ವಿಜಯೇಂದ್ರ ಅವರೇ ಕಾರಣವಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇಡೀ ವಿಧಾನಸೌಧದಲ್ಲಿ ಅವರ ಅಣ್ಣ ತಮ್ಮಂದಿರೇ ಕುಳಿತಿದ್ದಾರೆ. ಇದರಿಂದ ಯಡಿಯೂರಪ್ಪ ಸಂಪಾದಿಸಿದ್ದ ಹೆಸರು ಹಾಳಾಗುತ್ತಿದೆ ಎಂದು ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಎಲ್ಲದಕ್ಕೂ ಸುಮ್ಮನೆ ಹೈಕಮಾಂಡ್ ಹೆಸರು ಎಳೆದು ತರಬೇಡಿ. ಕರ್ನಾಟಕದಲ್ಲಿ ಯಡಿಯೂರಪ್ಪನವರೇ ಹೈಕಮಾಂಡ್. ಸಿಪಿ ಯೋಗೇಶ್ವರ್ ಬ್ಲಾಕ್ಮೇಲ್ ತಂತ್ರ ಬಳಸಿ ಸಚಿವರಾಗುತ್ತಿದ್ದಾರೆ. ಅವರ ಬ್ಲಾಕ್ ಮೇಲ್ ಏನೆಂದು ಯಾವತ್ತಾದರೂ ಒಂದು ದಿನ ಹೊರಗೆ ಬರುತ್ತದೆ. ನಮ್ಮ ರಾಜ್ಯದಲ್ಲಿ ಸಚಿವರಾಗೋಕೆ ಬ್ಯಾಗ್ ಹಿಡಿದುಕೊಳ್ಳೋದೇ ಮಾನದಂಡವೇ? ಯೋಗೇಶ್ವರ್ಗೆ ಕೇವಲ ಮುಂಬೈನಲ್ಲಿ ಬ್ಯಾಗ್ ಹಿಡಿದಿದ್ದು ಬಿಟ್ಟರೆ ಮತ್ತೇನೂ ಮಾಡಿಲ್ಲ. ಈ ಎಲ್ಲ ಬೆಳವಣಿಗೆಯಿಂದ ನನಗೆ ನೋವಾಗಿದೆ. ನಾವು ಮನುಷ್ಯರು. ನಮಗೂ ಹೃದಯ ಇದೆ, ನಮಗೂ ನೋವಾಗುತ್ತೆ ಎಂದು ಅವರು ಬೇಸರ ಹೊರಹಾಕಿದ್ದಾರೆ.
ಕರ್ನಾಟಕದಲ್ಲಿ ಯಾವ ನಾಯಕನಿಗೂ ಕೃತಜ್ಞತೆ ಇಲ್ಲ. ಆ ಸಿದ್ದರಾಮಯ್ಯರನ್ನು ಕರೆದುಕೊಂಡು ಬಂದೆವು, ಅವರು ಕೃತಜ್ಞತೆ ಉಳಿಸಿಕೊಳ್ಳಲಿಲ್ಲ. ಯಡಿಯೂರಪ್ಪನವರಿಗಾಗಿ ತ್ಯಾಗ ಮಾಡಿದೆವು. ಆದರೆ ಅವರು ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ. ಯಡಿಯೂರಪ್ಪನವರು ಕೊಟ್ಟಿದ್ದ ಮಾತು ಉಳಿಸಿಕೊಂಡಿಲ್ಲ. ಇದನ್ನೆಲ್ಲ ಯಡಿಯೂರಪ್ಪ ನೆನಪು ಮಾಡಿಕೊಳ್ಳಬೇಕು. ಯಾರಿಂದ ಸರ್ಕಾರ ರಚನೆಯಾಗಿದೆ ಎಂಬುದನ್ನು ಸಿಎಂ ನೆನಪು ಮಾಡಿಕೊಳ್ಳಬೇಕು. 17 ಜನರ ಭಿಕ್ಷೆಯಲ್ಲಿ ಸರ್ಕಾರ ಇದೆ. ನಮ್ಮ ತ್ಯಾಗದಿಂದ ಸರ್ಕಾರ ಬಂದಿದೆ ಎಂಬುದನ್ನು ನೆನಪು ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರೇ, ಕೊಟ್ಟ ಮಾತನ್ನು ಉಳಿಸಿಕೊಳ್ಳದ ನಿಮಗೆ ಆ ಸಿದ್ದಲಿಂಗೇಶ್ವರ ಒಳ್ಳೆಯದು ಮಾಡುವುದಿಲ್ಲ. ನೀವು ಎಂತಹ ಸರ್ಕಾರ ಮಾಡಿದ್ದೀರಿ ಯಡಿಯೂರಪ್ಪನವರೇ? 33 ಸಚಿವ ಸ್ಥಾನಗಳಲ್ಲಿ 13 ವೀರಶೈವ, 11 ಜನ ಒಕ್ಕಲಿಗ, 4 ಜನ ಕುರುಬರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದೀರ. ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಹೆಚ್. ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ಯಾಕೆ ತೆಗೆಯಬೇಕು? ನಿಮ್ಮನ್ನ ಸಿಎಂ ಮಾಡಿದ್ದೆ ಈ 17 ಜನ. ನಿಮ್ಮ ಸಂಪುಟದಲ್ಲಿ ಮುಸ್ಲಿಂ ಕೂಡ ಇರಬೇಕು, ಎಲ್ಲ ಜಾತಿ ಜನಾಂಗದವರು ಇರಬೇಕು. ಆದರೆ, ನಿಮ್ಮ ಸರ್ಕಾರದಲ್ಲೇನಾಗಿದೆ? ಕರ್ನಾಟಕದಲ್ಲಿ ಮಾತಿಗೆ ತಪ್ಪದ ನಾಯಕ ಅಂತ ನಾವೇ ನಿಮಗೆ ಬಿರುದು ಕೊಟ್ಟಿದ್ದೆವು. ಆದರೆ, ಈಗ ಅದೇ ಸುಳ್ಳಾಗಿದೆ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಮುನಿರತ್ನನವರ ಬದಲು ಯೋಗೇಶ್ವರ್ಗೆ ಯಾಕೆ ಸಚಿವ ಸ್ಥಾನ ನೀಡುತ್ತಿದ್ದೀರ? ಯೋಗೇಶ್ವರ್ ಮೇಲೆ 420 ಕೇಸ್ ಇದೆ. ಅವನನ್ನು ಸಚಿವನನ್ನಾಗಿ ಮಾಡೋಕೆ ದುಂಬಾಲು ಬಿದ್ದಿದ್ದೀರ. ಅವನ ಬ್ಲಾಕ್ಮೇಲ್ ಒಳಗೆ ನೀವೇನಾದರೂ ಸಿಕ್ಕಿಹಾಕಿಕೊಂಡಿದ್ದೀರಾ? ಅವನು ನಿಮಗಾಗಿ ರಾಜೀನಾಮೆ ಕೊಟ್ಟಿದ್ದನಾ? ಅಥವಾ ನೀವು ಯೋಗೇಶ್ವರ್ಗೆ ಕೈಗೊಂಬೆ ಆಗಿದ್ದೀರಾ? ನಿಮ್ಮ ಮಾಜಿ ಪಿಎ ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದುಕೊಂಡಿದ್ದಾರ ಹೇಳಿ ಎಂದು ಹೆಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ.