• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ದನಿಗಳನ್ನು ಅಡಗಿಸಿ-ಜೀವಗಳನ್ನಾದರೂ ಕಾಪಾಡುವಿರಾ..?

ನಾ ದಿವಾಕರ by ನಾ ದಿವಾಕರ
May 21, 2021
in ಅಭಿಮತ
0
ದನಿಗಳನ್ನು ಅಡಗಿಸಿ-ಜೀವಗಳನ್ನಾದರೂ ಕಾಪಾಡುವಿರಾ..?
Share on WhatsAppShare on FacebookShare on Telegram

ADVERTISEMENT

ಕೋವಿಡ್ 19 ನಿಯಮಾವಳಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಚ್ಚುಕಟ್ಟಾಗಿ, ಕಟ್ಟುನಿಟ್ಟಾಗಿ ಅನುಸರಿಸಿದ್ದರೆ ಬಹುಶಃ ಕರೋನಾ ಎರಡನೆ ಅಲೆ ಇಷ್ಟೊಂದು ಜೀವಹರಣಕ್ಕೆ ಕಾರಣವಾಗುತ್ತಿರಲಿಲ್ಲ. ಜನವರಿ 2021ರಲ್ಲಿ  “ ವಿಶ್ವದಲ್ಲೇ ಕೋವಿಡ್ 19 ವಿರುದ್ಧ ದಿಗ್ವಿಜಯ ಸಾಧಿಸಿದ ಏಕೈಕ ರಾಷ್ಟ್ರ ಭಾರತ ” ಎಂದು ಕೇಂದ್ರ ಸರ್ಕಾರ ಘೋಷಿಸಿದ ಸಂದರ್ಭದಲ್ಲೂ ಭಾರತ ಕೋವಿಡ್ ಮುಕ್ತ ಆಗಿರಲಿಲ್ಲ. ಅದೊಂದು ಆತ್ಮರತಿಯ ಘೋಷಣೆಯಾಗಿತ್ತು. ಫೆಬ್ರವರಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಇದೇ ಸಾಧನೆಗಾಗಿ ಮುಕ್ತಕಂಠದಿಂದ ಪ್ರಶಂಸಿಸಿ ಪರಾಕು ಹಾಡಿದಾಗಲೂ ಭಾರತ ಕರೋನಾ ಮುಕ್ತವಾಗಿರಲಿಲ್ಲ.

ಈ ಅವಧಿಯುದ್ದಕ್ಕೂ ಕೇಂದ್ರ ಸರ್ಕಾರ ರೂಪಿಸಿದ್ದ ಮಾಸ್ಕ್ ಧರಿಸುವುದು, ಎರಡು ಗಜ ದೈಹಿಕ ಅಂತರ ಕಾಪಾಡುವುದು ಮತ್ತು ಕೈಗಳನ್ನು ಸ್ಯಾನಿಟೈಸ್ ಮಾಡುವುದು ಕೋವಿಡ್ ನಿಯಮಾವಳಿಗಳಾಗಿ ಜಾರಿಯಲ್ಲಿದ್ದವು. ಭಾರತದ ದುರಂತ ಎಂದರೆ ಇಲ್ಲಿ ಕಾನೂನು ಪುಸ್ತಕ ಒಂದೇ ಇರುತ್ತದೆ. ಆ ಪುಸ್ತಕದಲ್ಲಿನ ಕಾನೂನು ನಿಯಮಗಳೂ ಒಂದೇ ಇರುತ್ತವೆ. ಆದರೆ ಆಚರಣೆಯ ಮಟ್ಟದಲ್ಲಿ ಎರಡು ಕಾನೂನುಗಳು ಜಾರಿಯಾಗುತ್ತವೆ. ಕರೋನಾ ನಿಯಾಮವಳಿಗಳೂ ಇದರಿಂದ ಹೊರತಾಗಿಲ್ಲ. ಇಂದಿಗೂ ಈ ದ್ವಂದ್ವದ ನಡುವೆಯೇ ನಾವು ಕಟ್ಟುನಿಟ್ಟಾದ ಕೋವಿದ್ ನಿಯಮಾವಳಿಗಳನ್ನು ಪಾಲಿಸುತ್ತಿದ್ದೇವೆ.

ಇಂತಹ ಒಂದು ಕಾನೂನು ವ್ಯವಸ್ಥೆಯಲ್ಲಿ ಅಪರಾಧದ ನಿಷ್ಕರ್ಷೆಗೂ ಎರಡು ಆಯಾಮಗಳಿರುತ್ತವೆ, ಶಿಕ್ಷೆಗೂ ಎರಡು ಮಜಲುಗಳಿರುತ್ತವೆ. ಕಾನೂನು ಎಲ್ಲರಿಗೂ ಸಮನಾಗಿ ಅನ್ವಯಿಸುತ್ತದೆ ಆದರೆ ಅಪರಾಧ ನಿಷ್ಕರ್ಷೆ ಮಾಡುವಾಗ ಪ್ರಜೆಗಳನ್ನು ಎರಡು ಬಣಗಳಲ್ಲಿ ವಿಂಗಡಿಸಲಾಗುತ್ತದೆ. ತಪ್ಪು ಮಾಡಿಯೂ ಅಪರಾಧಿ ಎನಿಸಿಕೊಳ್ಳದವರು ಅಧಿಕಾರ ಪೀಠಕ್ಕೆ ಸನಿಹದಲ್ಲಿರುತ್ತಾರೆ. ತಪ್ಪು ಸಾಬೀತಾಗುವ ಮುನ್ನವೇ ಶಿಕ್ಷೆಗೊಳಗಾಗುವ ಅಪರಾಧಿಗಳು ವಿರೋಧಿ ಬಣದಲ್ಲಿರುತ್ತಾರೆ. ಅಥವಾ ಯಾವುದೇ ತಪ್ಪು ಮಾಡದಿದ್ದರೂ ಅಪರಾಧಿ ಎನಿಸಿಕೊಳ್ಳುತ್ತಾರೆ. ಆಡಳಿತಾರೂಢ ಪಕ್ಷದ ಪರಾಕು ಪಡೆ ಮೊದಲ ಬಣಕ್ಕೆ ಸೇರುತ್ತದೆ, ವಿರೋಧಿ ಪಡೆ ಎರಡನೆ ಬಣಕ್ಕೆ ಸೇರುತ್ತದೆ. ಇದು ಈ ದೇಶದ ಅಲಿಖಿತ ನಿಯಮ. ಇತ್ತೀಚೆಗೆ ಅಧಿಕೃತತೆಯ ಮೊಹರು ಕಾಣುತ್ತಿದೆ.

ಕೋವಿಡ್ ಬಯಲು ಮಾಡುತ್ತಿರುವ ಗುಜರಾತ್ ಮಾದರಿಯ ಅಸಲಿ ಮುಖ!

ಹೀಗೆ ಅಪರಾಧಿ ಹಣೆಪಟ್ಟಿ ಹೊತ್ತವರಲ್ಲಿ ಉತ್ತರ ಪ್ರದೇದ ಕಫೀಲ್ ಖಾನ್ ಅವರಿಂದ ಕರ್ನಾಟಕದ ಡಾ ಶ್ರೀನಿವಾಸ್ ಕಕ್ಕಿಲ್ಲಾಯ ಅವರವರೆಗೂ ಸಾವಿರ ಸಂಖ್ಯೆಯಲ್ಲಿದ್ದಾರೆ. ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಇಲ್ಲದೆ ಮುನ್ನೂರು ಹಸುಳೆಗಳು ಅಸುನೀಗಿದವು. ಯಾರಿಗೂ ಶಿಕ್ಷೆಯಾಗಿಲ್ಲ. ಅಮಾಯಕ ಡಾ ಕಫೀಲ್ ಖಾನ್ ಜೈಲು ವಾಸ ಅನುಭವಿಸಿ ಹೊರಬಂದಿದ್ದಾರೆ. ನಮ್ಮ ನಡುವೆಯೇ ಚಾಮರಾಜನಗರದ 24 ಸಾವುಗಳನ್ನು ನೋಡುತ್ತಿದ್ದೇವೆ. ತನಿಖೆ ಮುಗಿದಿದೆ. ಜಿಲ್ಲಾಧಿಕಾರಿಯನ್ನು ಹೊಣೆ ಎಂದು ಹೇಳಲಾಗಿದೆ. ಆರೋಗ್ಯ ವ್ಯವಸ್ಥೆಯನ್ನು ನಿರ್ವಹಿಸುವ ನೈತಿಕ ಹೊಣೆ ಇರುವ ಸಚಿವರು, ಸು(ಉ)ಸ್ತುವಾರಿ ಸಚಿವರು, ಶಾಸಕರು, ಸಂಸದರು ನೆಮ್ಮದಿಯಿಂದಿರುತ್ತಾರೆ. ಮತ್ತೊಂದು ಇದೇ ರೀತಿಯ ದುರ್ಘಟನೆ ನಡೆಯುವವರೆಗೂ ಯಾರೂ ಉಸಿರೆತ್ತುವುದಿಲ್ಲ. ಸತ್ತವರ ಪಾಲಿಗೆ ಪರಿಹಾರವೇ ಮರುಜೀವ ಅಥವಾ ಪುನರ್ಜನ್ಮ.

ಇಂತಿಪ್ಪ ಅರಾಜಕತೆಯ ನಡುವೆ ಜನಪರ ಕಾಳಜಿ ಇರುವ , ಸಮಾಜಮುಖಿ ಚಿಂತನೆ ಇರುವ, ಕಳೆದ ಒಂದು ವರ್ಷದಿಂದ ತಮ್ಮ ನೂರಾರು ಬರಹಗಳ ಮೂಲಕ, ಸಂದರ್ಶನಗಳ ಮೂಲಕ, ವಿಡಿಯೋ ಮಾತುಗಳ ಮೂಲಕ ಕೊರೋನಾ ಪೀಡಿತ ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸಿದ ಓರ್ವ ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ, ಆಳುವ ಪಕ್ಷದ ದೃಷ್ಟಿಯಲ್ಲಿ ಅಪರಾಧಿಯಾಗಿಬಿಡುತ್ತಾರೆ. ಕಾರಣ ಒಂದು ಷಾಪಿಂಗ್ ಮಾಲ್‍ಗೆ ಹೋದಾಗ ಕಕ್ಕಿಲ್ಲಾಯ ಅವರು ಮಾಸ್ಕ್ ಧರಿಸಿರಲಿಲ್ಲ ಎನ್ನುವುದು. ಅವರ ವಿರುದ್ಧ ದಾಖಲಿಸಿರುವ ಎಫ್‍ಐಆರ್ ನಲ್ಲಿ , ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಪ್ರಶ್ನಿಸಿರುವುದನ್ನೂ ಅಪರಾಧ ಎಂದೇ ಭಾವಿಸಲಾಗಿದೆ. ಹಾಗಾಗಿ ಕೇವಲ ದಂಡ ವಿಧಿಸಬೇಕಾದ ತಪ್ಪಿಗೆ ಡಾ ಕಕ್ಕಿಲ್ಲಾಯ ಎಫ್‍ಐಆರ್ ಎದುರಿಸಬೇಕಿದೆ.

ಕರ್ನಾಟಕ ಸರ್ಕಾರಕ್ಕೆ ಕೋವಿಡ್ ನಿಯಂತ್ರಣದ ಬಗ್ಗೆ ಆಸ್ಥೆ ಇದ್ದಿದ್ದಲ್ಲಿ ಕಕ್ಕಿಲ್ಲಾಯ ಅಂತಹ ತಜ್ಞರಿಗೆ ತನ್ನ ಕೋವಿಡ್ ನಿಯಂತ್ರಣ ಸಲಹಾ ಕಾರ್ಯಪಡೆಯಲ್ಲಿ ಸ್ಥಾನ ಕೊಡಬೇಕಿತ್ತು. ಅವರ ಮಾರ್ಗದರ್ಶನ ಎಷ್ಟೋ ಕರೋನಾ ಸೋಂಕಿತರಲ್ಲಿ ವಿಶ್ವಾಸ ಮೂಡಿಸಿದೆ. ಅವರು ಹೇಳಿದ್ದನ್ನೆಲ್ಲಾ ಒಪ್ಪಲೇ ಬೇಕೆಂದಿಲ್ಲ. ಆದರೆ ನಿರಾಕರಿಸಬಹುದಾದ ತಜ್ಞರೂ ಅವರಲ್ಲ. ಇದು ಸಾರ್ವಜನಿಕವಾಗಿಯೇ ಬಹಳಷ್ಟು ಚರ್ಚೆಗೊಳಗಾಗಿದೆ. ಓರ್ವ ಜವಾಬ್ದಾರಿಯುತ ವೈದ್ಯರಾಗಿ ಅವರು ಮಾಸ್ಕ್ ಧರಿಸದೆ ಹೊರಗೆ ಬರಬಾರದಿತ್ತು.. ಅದಕ್ಕೆ ಅವರೇ ನೀಡುವ ಕಾರಣಗಳು ಏನೇ ಇದ್ದರೂ ಸಾರ್ವಜನಿಕ ವಲಯದಲ್ಲಿ ಅನ್ವಯಿಸುವ ಒಂದು ಕಾನೂನು ಪಾಲಿಸಬೇಕಾದ್ದು ಅವರ ಕರ್ತವ್ಯ. ಹಾಗಾಗಿ ಮಾಸ್ಕ್ ಧರಿಸಿದೆ ಇದ್ದ ಕಾರಣಕ್ಕೆ ದಂಡ ವಿಧಿಸಿದ್ದರೆ ಅಡ್ಡಿಯಿಲ್ಲ.

ಕಕ್ಕಿಲಾಯರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಆಡಳಿತ, ವಿಜಯೇಂದ್ರ ವಿಚಾರದಲ್ಲಿ ಮೌನವಹಿಸಿರುವುದೇಕೆ?

ಆದರೆ ಸರ್ಕಾರದ ಉದ್ದೇಶವೇ ಬೇರೆ ಇದ್ದಂತಿದೆ. ದೆಹಲಿಯಲ್ಲಿ ಕೇಂದ್ರ ಸರ್ಕಾರದ ಲಸಿಕೆ ನೀತಿಯನ್ನು ಪ್ರಶ್ನಿಸಿ, ನಮ್ಮ ಮಕ್ಕಳಿಗೇ ಇಲ್ಲದ ಲಸಿಕೆಯನ್ನು ಹೊರದೇಶಕ್ಕೆ ಏಕೆ ರಫ್ತು ಮಾಡಿದಿರಿ ಎಂದು ಪ್ರಶ್ನಿಸುವ ಕೆಲವು ಪೋಸ್ಟರ್‍ಗಳು ಸರ್ಕಾರವನ್ನು ಕಂಗೆಡೆಸಿರುವುದನ್ನು ನೋಡಿದಾಗ ಇಲ್ಲಿನ ರಾಜಕೀಯ ಒಳಸುಳಿಯೂ ಅರ್ಥವಾಗುತ್ತದೆ. ದೆಹಲಿಯಲ್ಲಿ ಎಲ್ಲ ವಲಯಗಳಲ್ಲೂ ಈ ಪೋಸ್ಟರ್ ಅಂಟಿಸಿದವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಇವರ ಪೈಕಿ ಆಟೋ ಚಾಲಕರು, ದಿನಗೂಲಿ ನೌಕರರೂ ಹಲವರಿದ್ದಾರೆ. ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರಗಳು ಅನುಸರಿಸುತ್ತಿರುವ ಕಾರ್ಯನೀತಿಗಳನ್ನು ಖಂಡಿಸುವವರು, ಪ್ರಶ್ನಿಸುವವರು ಎಲ್ಲರೂ ಅಪರಾಧಿಗಳಾಗಿಬಿಡುತ್ತಾರೆ. ಕಕ್ಕಿಲ್ಲಾಯ ಅವರ ಅಪರಾಧವೂ ಅದೇ ಆಗಿದೆ.

ಆಕ್ಸಿಜನ್ ಪೂರೈಕೆ ಮಾಡದೆ ನೂರಾರು ಜನರ ಸಾವಿಗೆ ಕಾರಣರಾದವರು ಅಧಿಕಾರ ಪೀಠಗಳಿಗೆ ಹತ್ತಿರವಾಗುತ್ತಾರೆ. ಆದರೆ ಆಕ್ಸಿಜನ್ ಕೊರತೆಯ ಕಾರಣಗಳನ್ನು ಪ್ರಶ್ನಿಸುವವರು ಅಪರಾಧಿಗಳಾಗುತ್ತಾರೆ. ಬೆಂಗಳೂರಿನಲ್ಲಿ ಹಾಸಿಗೆ ಹಗರಣದಲ್ಲಿ 17 ನಿರಪರಾಧಿಗಳನ್ನು ಏಕದಂ ಅಮಾನತು ಮಾಡಲಾಗುತ್ತದೆ. ಆದರೆ ಈ ಹಗರಣದ ಹಿಂದಿರುವ ಕಾಣದ ಕೈಗಳು ಶಾಶ್ವತವಾಗಿ ಕಾಣದಾಗುತ್ತವೆ. ಈ ಹಾಸಿಗೆ ಹಗರಣದ ಸದ್ದಿನಲ್ಲಿ ಚಾಮರಾಜನಗರದ ಸಾವುಗಳು ಆವಿಯಾಗಿ ಹೋಗುತ್ತವೆ. ಎರಡೂ ಪ್ರಕರಣಗಳಲ್ಲಿ ಅಪರಾಧಿಗಳ ಪತ್ತೆಯೇ ಆಗುವುದಿಲ್ಲ.  ಇದನ್ನು ಕಾಂಗರೂ ನ್ಯಾಯ ಎಂದು ಕರೆಯಲಾಗುತ್ತದೆ. ಬಹುಶಃ #ಆತ್ಮನಿರ್ಭರ ಭಾರತದಲ್ಲಿ ನಾವು ಕಾಂಗರೂ ನ್ಯಾಯದ ಹಂತಕ್ಕೆ ತಲುಪಿಬಿಟ್ಟಿದ್ದೇವೆ.

ಕೋವಿಡ್ 19 ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಕಾರ್ಯನೀತಿಗಳನ್ನು ಹಲವಾರು ವಿಜ್ಞಾನಿಗಳು, ವೈದ್ಯರು, ವೈರಾಣು ತಜ್ಞರು, ಸಾಂಕ್ರಾಮಿಕ ತಜ್ಞರು ಪ್ರಶ್ನಿಸುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ 900 ವೈದ್ಯರು-ವಿಜ್ಞಾನಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ರಚಿಸಲಾಗಿರುವ ವೈಜ್ಞಾನಿಕ ಸಲಹಾ ಮಂಡಲಿಯ ಅಧ್ಯಕ್ಷರಾಗಿದ್ದ ಖ್ಯಾತ ವೈರಾಣು ತಜ್ಞ ಶಾಹಿದ್ ಜಮೀಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಉತ್ತರಪ್ರದೇಶ ಸರ್ಕಾರ ನ್ಯಾಯಾಲಯದ ನಿರ್ದೇಶನಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಅಲ್ಲಿನ ನಿವೃತ್ತ ನ್ಯಾಯಮೂರ್ತಿ ಗೋವಿಂದ್ ಮಾಥೂರ್ ವಿಷಾದ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲೇ ತಮ್ಮ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಖ್ಯಾತ ವೈದ್ಯ ಡಾ ಮಂಜುನಾಥ್ ಪದೇ ಪದೇ ಹೇಳುತ್ತಿದ್ದಾರೆ .

ಪ್ರಜಾತಂತ್ರ ವ್ಯವಸ್ಥೆ ಮತ್ತು ಮೌಲ್ಯಗಳಲ್ಲಿ ವಿಶ್ವಾಸ ಇರುವ ಯಾವುದೇ ಸರ್ಕಾರವು, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ನೀಡುವ ಇಂತಹ ಸಲಹೆಗಳನ್ನು, ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಏಕೆಂದರೆ ಇದು ಜನಸಾಮಾನ್ಯರ ಸಾವು ಬದುಕಿನ ಪ್ರಶ್ನೆ. ಕೋವಿದ್ ಹೋಗಲಾಡಿಸಲು ಗೋಮೂತ್ರ ಸೇವನೆ, ಸಗಣಿ ಲೇಪನ ಮುಂತಾದ ಅಪ್ರಬುದ್ಧ ಅವೈಜ್ಞಾನಿಕ ಸಲಹೆಗಳನ್ನು ಗೌರವಯುತವಾಗಿ ಕಾಣುವ ಆಡಳಿತಾರೂಢ ಸರ್ಕಾರಕ್ಕೆ ನಾವು 21ನೆಯ ಶತಮಾನದ ವೈಜ್ಞಾನಿಕ ಡಿಜಿಟಲ್ ಯುಗದಲ್ಲಿದ್ದೇವೆ ಎಂಬ ಪರಿಜ್ಞಾನ ಇರಬೇಕಲ್ಲವೇ ? ಸರ್ಕಾರದ ಪ್ರಥಮ ಆದ್ಯತೆ ಜನಸಾಮಾನ್ಯರ ಆರೋಗ್ಯ ಮತ್ತು ಸಾರ್ವಜನಿಕರ  ಸ್ವಾಸ್ಥ್ಯ ಆಗಿರಬೇಕಲ್ಲವೇ ?

ಕೋವಿಡ್‌ನಿಂದ ಪಾರಾಗಲು ಭಾರತಕ್ಕಿರುವ ದಾರಿ ಯಾವುದು?

ಸರ್ಕಾರದ ತಪ್ಪು ನೀತಿಗಳಿಂದಲೇ ಕೊರೋನಾ ಎರಡನೆ ಅಲೆ ಗ್ರಾಮ ಗ್ರಾಮಗಳಿಗೂ ಹರಡಿರುವುದು ಈಗ ಗುಟ್ಟಿನ ಮಾತೇನಲ್ಲ. ಆದರೆ ಕೋವಿದ್ ಸೋಂಕಿತರ ಅಂಕಿಸಂಖ್ಯೆಗಳನ್ನು ನೀಡುವಲ್ಲಿಯೂ ಸುಳ್ಳು ಮಾಹಿತಿಗಳನ್ನು ನೀಡಲಾಗುತ್ತಿದೆ. ಗುಜರಾತ್‍ನಲ್ಲಿ ಮಾರ್ಚ್ 1 ರಿಂದ ಮೇ 10ರ ಅವಧಿಯಲ್ಲಿ 4218 ಕೋವಿದ್ ಸಾವುಗಳು ಸಂಭವಿಸಿವೆ ಎಂದು ಸರ್ಕಾರದ ಅಧಿಕೃತ ಮಾಹಿತಿ ಹೇಳುತ್ತದೆ. ಆದರೆ ಇದೇ ಅವಧಿಯಲ್ಲಿ 1,23,871 ಮರಣ ದೃಢೀಕರಣ ಪತ್ರಗಳನ್ನು ಅಧಿಕೃತವಾಗಿಯೇ ನೀಡಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 65,781 ಮರಣಗಳು ಹೆಚ್ಚಾಗಿರುವುದು ಇದರಿಂದ ಕಂಡುಬರುತ್ತದೆ. ಆದರೆ ಸರ್ಕಾರದ ಮಾಹಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ಉತ್ತರಪ್ರದೇಶದಲ್ಲೂ ಸಹ ಗಂಗೆಯಲ್ಲಿ ನೂರಾರು ಶವಗಳು ತೇಲುತ್ತಿದ್ದರೂ ಮರಣ ಪ್ರಮಾಣವನ್ನು ಕಡಿಮೆ ತೋರಿಸಲಾಗುತ್ತಿದೆ.

ಆಧುನಿಕ ನಾಗರಿಕ ಜಗತ್ತು ಪ್ರಾಚೀನ ಮನಸ್ಥಿತಿಯ ಸಂಘರ್ಷ

ಸರ್ಕಾರಗಳ ಈ ನೀತಿಗಳ ಪರಿಣಾಮವಾಗಿ ವಿಜ್ಞಾನಿಗಳಿಗೆ ಕೋವಿದ್ ಸೋಂಕಿನ ಹೆಚ್ಚಳ ಮತ್ತು ಪ್ರಸರಣದ ಖಚಿತ ಅಂದಾಜು ಮಾಡುವುದು ಕಷ್ಟವಾಗುತ್ತದೆ. ಇದರಿಂದ ಮುಂಬರುವ ದಿನಗಳಲ್ಲಿ ಕೋವಿದ್ ನಿಯಂತ್ರಿಸಲು ಅನುಸರಿಸಬೇಕಾಗುವ ವೈಜ್ಞಾನಿಕ, ವೈದ್ಯಕೀಯ ನೀತಿಗಳನ್ನು ರೂಪಿಸುವುದೂ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲೇ 900ಕ್ಕೂ ಹೆಚ್ಚು ವೈದ್ಯರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಭಾರತ ಇಂದು ಎದುರಿಸುತ್ತಿರುವುದು ಒಂದು ನೈಸರ್ಗಿಕ ವಿಕೋಪ, ವೈದ್ಯಕೀಯ ಸವಾಲು. ಇಡೀ ದೇಶವೇ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಹೇಳುವ ಸರ್ಕಾರಕ್ಕೆ ಮೊದಲು ಕಿವಿ ಚುರುಕಾಗಿರಬೇಕು. ಆಲಿಸುವ ಪ್ರಜ್ಞೆ ಮತ್ತು ತಾಳ್ಮೆ ಇರಬೇಕು. ಟೀಕೆಗಳನ್ನು ಸಹಿಸಿಕೊಳ್ಳುವ ಸಂಯಮ ಇರಬೇಕು.  ಜನಸಾಮಾನ್ಯರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ಉದಾತ್ತ ಮನೋಭಾವ ಇರಲೇಬೇಕು.

ಲಸಿಕೋತ್ಸವ ಮರೆತುಬಿಡಿ: ನೀತಿಯೇ ನಿಷ್ಪ್ರಯೋಜಕವಾಗಿದೆ

ಇದಾವುದೂ ಇಲ್ಲದಂತಹ ಒಂದು ವಿಕೃತ ಆಡಳಿತ ವ್ಯವಸ್ಥೆಯನ್ನು ನಾವು ನೋಡುತ್ತಿದ್ದೇವೆ.  ಡಾ ಶ್ರೀನಿವಾಸ ಕಕ್ಕಿಲ್ಲಾಯ ಅವರಂಥವರು ಇಂತಹ ವಿಕೃತಿಗೆ ಬಲಿಯಾಗುತ್ತಾರೆ. ಕಫೀಲ್ ಖಾನ್ ಅಂಥವರು ಶಿಕ್ಷೆ ಅನುಭವಿಸುತ್ತಾರೆ. ರಾಜಕೀಯ ಮೇಲಾಟಗಳಿಂದ ಭ್ರಷ್ಟರೂ, ಅಪರಾಧಿಗಳೂ ಸುರಕ್ಷಾ ವಲಯಗಳಲ್ಲಿ ಅಡಗಿ ಕುಳಿತುಬಿಡುತ್ತಾರೆ. ಚಾಮರಾಜನಗರದಲ್ಲಿ ಈಗ ಇದೇ ಆಗಿದೆ. ವರ್ಗಾವಣೆಯಾದ ಜಿಲ್ಲಾಧಿಕಾರಿ ಮರಳಿ ತಮ್ಮ ಸ್ಥಾನ ಪಡೆದಿದ್ದಾರೆ. ಹಾಗಾದರೆ 24 ಸಾವಿಗೆ ಯಾರು ಹೊಣೆ ? ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ. ಶ್ರೀನಿವಾಸ ಕಕ್ಕಿಲ್ಲಾಯ ಮಾಸ್ಕ್ ಧರಿಸಲಿಲ್ಲ ಎಂಬ ಕಾರಣಕ್ಕೆ, ಸರ್ಕಾರದ ಮಾರ್ಗದರ್ಶಿ ಸೂತ್ರವನ್ನು ಪ್ರಶ್ನಿಸಿದ್ದಕ್ಕೆ ಅಪರಾಧಿಯಾಗಿಬಿಡುತ್ತಾರೆ. ಆದರೆ ಚಾಮರಾಜನಗರದಲ್ಲಿ ಇದೇ ಮಾರ್ಗದರ್ಶಿ ಸೂತ್ರದ ಉಲ್ಲಂಘನೆಯಾಗಿ 24 ಜನರು ಸತ್ತಿದ್ದಾರೆ.  ಯಾರೂ ಅಪರಾಧಿಯಾಗುವುದಿಲ್ಲ. ಏಕೆಂದರೆ ಅಲ್ಲಿ ರಾಜಕೀಯ ಕೃಪಾಕಟಾಕ್ಷ ಮೇಲುಗೈ ಸಾಧಿಸುತ್ತದೆ.

ಕೋವಿಡ್ ದಾಳಿಯ ನಡುವೆ ಗ್ರಹಿಸಬೇಕಾದ ಕೆಲವು ನೀತಿಗಳು

ಈ ಕ್ಷುದ್ರ ರಾಜಕಾರಣದ ನಡುವೆ ಕರ್ನಾಟಕದ ಮತ್ತು #ಆತ್ಮನಿರ್ಭರ ಭಾರತದ ಜನತೆ ಉಸಿರುಗಟ್ಟಿ ಸಾಯುತ್ತಿದ್ದಾರೆ. ನಿತ್ಯ ಸಾವು ಪ್ರತಿಕ್ಷಣದ ನೋವು ಬಹುಶಃ ಸಹಜ ಜೀವನವಾಗಿಬಿಡುವ ಸಾಧ್ಯತೆಗಳೇ ಕಾಣುತ್ತಿವೆ. ಏಕೆಂದರೆ ಈ ದೇಶದಲ್ಲಿ ಜೀವಕ್ಕೆ ಬೆಲೆ ಇಲ್ಲ. ಸಾವಿಗೆ ಈ ದೇಶ ವಿಚಲಿತವಾಗುವುದಿಲ್ಲ. ಹೆಣಗಳು ನಮ್ಮ ನಿದ್ರೆಗೆಡಿಸುವುದಿಲ್ಲ. ಶವಯಾತ್ರೆಗಳು ನಮ್ಮ ಪ್ರಜ್ಞೆಯನ್ನು ಕಲಕುವುದಿಲ್ಲ. ಬಹುಶಃ ಒಂದು ದೇಶವಾಗಿ ಅಥವಾ ಒಂದು ಸಮಾಜವಾಗಿ ನಾವು ಬೆತ್ತಲಾಗಿಬಿಟ್ಟಿದ್ದೇವೆ.

Previous Post

ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ ಅವರ ವರ್ಗಾವಣೆ ಕುರಿತು ನಡೆಯುತ್ತಿದೆಯೇ ಹಗ್ಗಜಗ್ಗಾಟ..?

Next Post

ಕೋವಿಡ್‌ ಸಂಕಷ್ಟ: ಸರ್ಕಾರಕ್ಕೆ 12 ಪತ್ರಗಳನ್ನು ಬರೆದಿದ್ದೇನೆ, ಒಂದಕ್ಕಾದರೂ ಉತ್ತರ ನೀಡಿದ್ದೀರಾ? -ಸಿದ್ದರಾಮಯ್ಯ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಕೋವಿಡ್‌ ಸಂಕಷ್ಟ: ಸರ್ಕಾರಕ್ಕೆ 12 ಪತ್ರಗಳನ್ನು ಬರೆದಿದ್ದೇನೆ, ಒಂದಕ್ಕಾದರೂ ಉತ್ತರ ನೀಡಿದ್ದೀರಾ? -ಸಿದ್ದರಾಮಯ್ಯ

ಕೋವಿಡ್‌ ಸಂಕಷ್ಟ: ಸರ್ಕಾರಕ್ಕೆ 12 ಪತ್ರಗಳನ್ನು ಬರೆದಿದ್ದೇನೆ, ಒಂದಕ್ಕಾದರೂ ಉತ್ತರ ನೀಡಿದ್ದೀರಾ? -ಸಿದ್ದರಾಮಯ್ಯ

Please login to join discussion

Recent News

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 
Top Story

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

by Chetan
July 2, 2025
ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 
Top Story

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

by Chetan
July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

July 2, 2025
ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada