ಕೋವಿಡ್ ಬಯಲು ಮಾಡುತ್ತಿರುವ ಗುಜರಾತ್ ಮಾದರಿಯ ಅಸಲಿ ಮುಖ!

ಕೋವಿಡ್‌ ಸೋಂಕು ಭಾರತಕ್ಕೆ ಕಾಲಿಟ್ಟಂದಿನಿಂದ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ಬೇಜವಾಬ್ದಾರಿ ಮತ್ತು ಯಡವಟ್ಟುಗಳು ಬಹಿರಂಗಗೊಳ್ಳುತ್ತಿವೆ. ಕೋವಿಡ್‌ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆಂದು ಸ್ಥಾಪನೆಯಾದ ಪಿಎಂಕೇರ್ಸ್‌ ನಿಧಿಯಿಂದ ಹಿಡಿದು ಕೋವಿಡ್‌ ಸಂಬಂಧಿತ ಸಾವುಗಳವರೆಗೆ ಸರ್ಕಾರ ನಾಗರಿಕರಿಂದ ವಾಸ್ತವಾಂಶಗಳನ್ನು ಮುಚ್ಚಿಡುತ್ತಿದೆ.

ಕೋವಿಡ್‌ ಎರಡನೇ ಅಲೆಯ ತೀವೃತೆ ಆರಂಭವಾದಗಿನಿಂದ ಸ್ಮಶಾನಗಳಲ್ಲಿ ಸರತಿ ಸಾಲಿನಲ್ಲಿ ತಮ್ಮ ಸರದಿಗಾಗಿ ಕಾಯುತ್ತಿರುವ ಮೃತದೇಹಗಳಿಗೂ ಸರ್ಕಾರ ನೀಡುತ್ತಿರುವ ಕೋವಿಡ್‌ ಸಾವು ಪಟ್ಟಿಗಳಿಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಅಂತರಾಷ್ಟ್ರೀಯ ಮಾಧ್ಯಮಗಳೇ ವರದಿ ಮಾಡಿದ್ದವು. ಇದೀಗ, ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್‌ ಕೋವಿಡ್‌ ಮರಣ ಪ್ರಮಾಣಗಳ ಅಂಕಿ ಅಂಶದಲ್ಲಿ ʼಚೆಂಗಾಸಿʼ ಮಾಡಿರುವುದು ಬಯಲಾಗಿದೆ.

ಗುಜರಾತ್‌ ಸರ್ಕಾರ 2021ರ ಮಾರ್ಚ್‌ 1 ರಿಂದ ಮೇ 10 ರ ಅವಧಿಯಲ್ಲಿ ಸುಮಾರು 1.23 ಲಕ್ಷ ಮರಣ ಪ್ರಮಾಣ ಪತ್ರಗಳನ್ನು ವಿತರಿಸಿದೆ. ಅದರಲ್ಲಿ, ಕೋವಿಡ್‌ ಮರಣಗಳೆಂದು ಕೇವಲ 4,218 ಸಾವುಗಳನ್ನು ನಮೂದಿಸಿದೆ. ಗುಜರಾತಿ ಪತ್ರಿಕೆ ʼದಿವ್ಯ ಭಾಸ್ಕರ್‌ʼ ವರದಿ ಪ್ರಕಾರ ಕಳೆದ ವರ್ಷ ಅಂದರೆ, 2020 ರ ಇದೇ ಅವಧಿಯಲ್ಲಿ ಸರ್ಕಾರ ಸುಮಾರು 58 ಸಾವಿರದಷ್ಟು ಮರಣ ಪ್ರಮಾಣ ಪತ್ರಗಳನ್ನು ವಿತರಿಸಿದೆ. ಅಂದರೆ, ಒಂದೇ ವರ್ಷದ ಅಂತರದಲ್ಲಿ ಬರೋಬ್ಬರಿ ದುಪ್ಪಟ್ಟು ಮರಣಗಳು ಸಂಭವಿಸಿವೆ. ಅದಾಗ್ಯೂ ಕೋವಿಡ್‌ ಸಾವುಗಳೆಂದು ಕೇವಲ 4 ಸಾವಿರ ಚಿಲ್ಲರೆ ಸಾವುಗಳನ್ನು ಪರಿಗಣಿಸಿರುವುದು ಸರ್ಕಾರ ಕೋವಿಡ್‌ ಅಂಕಿಅಂಶದಲ್ಲಿ ನಡೆಸುತ್ತಿರುವ ಮುಚ್ಚುಮರೆಯನ್ನು ಬಯಲಿಗೆಳೆದಿವೆ.

ಕಳೆದ ವರ್ಷಕ್ಕಿಂತ ಅಂಕಿಅಂಶಗಳು ದ್ವಿಗುಣಗೊಂಡಿದ್ದರೂ ರಾಜ್ಯ ಸರ್ಕಾರದ ಅಂಕಿ ಅಂಶಗಳು ಮಾರ್ಚ್ 1 ಮತ್ತು ಮೇ 10 ರ ನಡುವೆ ಕೇವಲ 4,218 ಕೋವಿಡ್ ಸಾವುಗಳನ್ನು ಮಾತ್ರ ಉಲ್ಲೇಖಿಸಿವೆ ಎಂದು ದಿವ್ಯ ಭಾಸ್ಕರ್‌ ಮಾಡಿರುವ ವರದಿಯನ್ನು ಪತ್ರಕರ್ತ ದೀಪಕ್‌ ಪಟೇಲ್‌ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ರಾಜ್ಯದ ಸಾವಿನ ಅಂಕಿಅಂಶಗಳನ್ನು ಮರೆಮಾಚಲಾಗುತ್ತಿದೆ ಎಂದು ಹೇಳುವುದು ಸೂಕ್ತವಲ್ಲ ಎಂದು ಗುಜರಾತ್ ಸರ್ಕಾರ ಹೇಳಿದೆ.

ಗುಜರಾತ್‌ ಸರ್ಕಾರ ಕೋವಿಡ್‌ ಸಾವುಗಳ ವಾಸ್ತವ ಅಂಕಿಅಂಶಗಳನ್ನು ಮರೆಮಾಚುತ್ತಿರುವುದಾಗಿ ಈ ಹಿಂದೆಯೇ ದಿ ಹಿಂದೂ, ದಿ ಕ್ಯಾರವಾನ್‌ ಮೊದಲಾದ ಪತ್ರಿಕೆಗಳು ವಿಸ್ಕೃತ ವರದಿ ಪ್ರಕಟಿಸಿದ್ದವು. ರಾಜ್ಯ ಮಾಧ್ಯಮಗಳೂ ಸರ್ಕಾರ ಅಂಕಿಅಂಶಗಳಲ್ಲಿ ತೋರಿಸುತ್ತಿರುವ ʼಕಳ್ಳಾಟʼಗಳ ಕುರಿತು ಖಾರವಾಗಿ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದವು.

ಈ ಹಿನ್ನೆಲೆಯಲ್ಲಿ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಕಳೆದ ಎಪ್ರಿಲ್‌ನಲ್ಲೇ ಒಂದು ಸಮರ್ಥನೆಯೊಂದಿಗೆ ಮಾಧ್ಯಮದೆದುರು ಪ್ರತ್ಯಕ್ಷವಾಗಿದ್ದು, ರಾಜ್‌ ಸರ್ಕಾರ ಕೋವಿಡ್‌ ಸಾವುಗಳಲ್ಲಿ ಯಾವುದೇ ಮುಚ್ಚುಮರೆ ಮಾಡುವುದಿಲ್ಲವೆಂದು ಸಮಜಾಯಿಷಿ ನೀಡಿದ್ದರು. ಮುಂದುವರೆದು, comorbid ರೋಗಿಗಳ (ಒಂದಕ್ಕಿಂತ ಹೆಚ್ಚು ರೋಗಗಳಿರುವ ವ್ಯಕ್ತಿಗಳು) ಸಾವಿನ ಪ್ರಾಥಮಿಕ  ಕಾರಣವನ್ನು ತಜ್ಞರ ಸಮಿತಿ ನಿರ್ಧರಿಸಬೇಕೆಂದು ICMR ಮಾರ್ಗಸೂಚಿ ಇದೆ. ಒಂದು ವೇಳೆ ಸಮಿತಿಯು ಕೋವಿಡ್‌ ಸೋಂಕಿತನ ಸಾವಿಗೆ ಹೃದಯಾಘಾತವೆಂದು ನಿರ್ಧರಿಸಿದರೆ ಆತ ಕೋವಿಡ್‌ ಸೋಂಕಿತನಾಗಿದ್ದರೂ ಸಾವನ್ನು ಕೋವಿಡ್‌ ಸೋಂಕು ಎಂದು ಪರಿಗಣಿಸಲಾಗುವುದಿಲ್ಲ. ದೇಶಾದ್ಯಂತ ಇದೇ ವ್ಯವಸ್ಥೆ ಚಾಲ್ತಿಯಲ್ಲಿದೆ ಎಂದು ಹೇಳಿದ್ದರು. ಆದರೆ, ICMR ಮಾರ್ಗಸೂಚಿಯು, ಕೋವಿಡ್‌ ಸೋಂಕಿತ ವ್ಯಕ್ತಿ ರೋಗಲಕ್ಷಣಗಳಿಲ್ಲದೆ ಮೃತಪಟ್ಟರೂ ಕೋವಿಡ್‌ ಸಾವೆಂದು ಪರಿಗಣಿಸಬೇಕೆಂದು ಹೇಳುತ್ತದೆ. ಹಾಗಾಗಿ ಅವರು ಹೇಳಿರುವುದು ತಪ್ಪು ಎಂದು ಸ್ಕ್ರಾಲ್‌.ಇನ್ ವರದಿ ಮಾಡಿದೆ.

ಗುಜರಾತಿನಲ್ಲಿ ಕೋವಿಡ್‌ ರೋಗಿಗಳ ಸಾವಿನ ಪಟ್ಟಿಯಲ್ಲಿ ನಮೂದಿಸದ ಹಲವಾರು ಪ್ರಕರಣಗಳಿವೆ ಇದೆ ಎಂದು ದಿ ಹಿಂದೂ ಕೂಡಾ ವರದಿ ಮಾಡಿದೆ. ಸಾವಿಗೆ ಪ್ರಾಥಮಿಕ ಕಾರಣ ಕೋವಿಡ್‌ ಅಲ್ಲವೆಂದು ಪರಿಗಣಿಸಿ ಹಲವಾರು ಸೋಂಕಿತರ ಮರಣವನ್ನು ಕೋವಿಡ್‌ ಮರಣವಲ್ಲವೆಂದು ಪರಿಗಣಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿತ್ತು.

ದಿ ಕ್ಯಾರವಾನ್‌ ಕೂಡಾ ಮರಣಗಳ ಸಂಖ್ಯೆಯ ಕುರಿತು ಸರ್ಕಾರ ನೀಡುವ ಅಂಕಿ ಅಂಶ ಹಾಗೂ ಸ್ಮಶಾನದಲ್ಲಿ ದಹಿಸಲ್ಪಡುವ ಮೃತದೇಹಗಳ ಸಂಖ್ಯೆಯಲ್ಲಿ ವಿಪರೀತ ವ್ಯತ್ಯಾಸಗಳಿರುವುದನ್ನು ಬಯಲಿಗೆಳೆದಿತ್ತು. ಇದೀಗ, ಸರ್ಕಾರವೇ ನೀಡಿರುವ ಮರಣ ಪ್ರಮಾಣ ಪತ್ರಗಳ ಆಧಾರದ ಮೇಲೆಯೇ ಕೋವಿಡ್‌ ಕುರಿತಾದ ಅಂಕಿ ಅಂಶಗಳಲ್ಲಿ ಸರ್ಕಾರ ʼಕಳ್ಳಾಟʼ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಭಾರತವನ್ನು ಯಾವ ಗುಜರಾತ್‌ ಮಾಡುತ್ತೇನೆಂದು ಬಿಜೆಪಿ ಅಧಿಕಾರಕ್ಕೆ ಬಂದಿತೋ, ಆ ʼಗುಜರಾತ್‌ ಮಾಡೆಲ್‌ʼ ನ ವಾಸ್ತವಾಂಶ ಇದು. ಕೋವಿಡ್‌ ದೆಸೆಯಿಂದಾಗಿ ಆರೋಗ್ಯ ಕ್ಷೇತ್ರದ ಅಸಮರ್ಪಕತೆ ಹಾಗೂ ಗುಜರಾತ್‌ ಮಾದರಿಯ ನಗ್ನ ಸತ್ಯಗಳು ಹೀಗೆ ಬಯಲಾಗ ತೊಡಗಿವೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...