ಕಕ್ಕಿಲಾಯರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಆಡಳಿತ, ವಿಜಯೇಂದ್ರ ವಿಚಾರದಲ್ಲಿ ಮೌನವಹಿಸಿರುವುದೇಕೆ?

ಮಂಗಳೂರಿನ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ ಅವರು ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಧರಿಸದೆ, ಕೋವಿಡ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ತಡೆ‌ ಕಾಯ್ದೆಯಡಿ ನಗರದ ಕದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕುರಿತು ಸಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳಾಗುತ್ತಿವೆ. ಈ ಚರ್ಚೆಯ ನಡುವೆ ಈಗ ಸಿಎಂ ಯಡಿಯೂರಪ್ಪನವರ ಮಗ ವಿಜಯೇಂದ್ರ ಕರೋನಾ ಪ್ರೊಟೊಕಾಲ್ ನಿಯಮ ಉಲ್ಲಂಘಿಸಿ ನಂಜನಗೂಡು ದೇವಾಲಯದಲ್ಲಿ ಪೂಜೆ ಸಲ್ಲಿಸಿರುವುದು ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ.

ಏಳು ವರ್ಷ ಸಜೆ ವಿಧಿಸಬಹುದಾದ ಕೇಸು ಹಾಕಿರುವ ಮಂಗಳೂರಿನ ಪೊಲೀಸರು.

ವೈಜ್ಞಾನಿಕ ಮನೋಭಾವವುಳ್ಳ ಕಕ್ಕಿಲಾಯರು, ಹಿಂದಿನಿಂದಲೂ ಮೂಢ, ಅವೈಜ್ಞಾನಿಕ ಪದ್ಧತಿಗಳನ್ನು ವಿರೋಧಿಸುತ್ತಾ ಬಂದವರು. ಕರೋನಾ ಭಾರತಕ್ಕೆ ಕಾಲಿಟ್ಟಂದಿನಿಂದ ಕಕ್ಕಿಲಾಯರು ಸರ್ಕಾರಕ್ಕೆ ಹಾಗೂ ಜನರಿಗೆ ನೀಡುತ್ತಿದ್ದ ಸಲಹೆಗಳೆಲ್ಲಾ ನಿಜವಾಗುತ್ತಾ ಬಂದಿದೆ. ಮಾಸ್ಕ್‌ ಧರಿಸುವುದರಿಂದ ಕರೋನಾ ಬರುವುದಿಲ್ಲವೆಂಬ ವಾದ ಸುಳ್ಳು ಎನ್ನುವುದು ಕಕ್ಕಿಲಾಯ ಅವರ ವಾದ. ಎಲ್ಲರಿಗೂ ಮಾಸ್ಕ್‌ ಕಡ್ಡಾಯಗೊಳಿಸಿದ ಸರ್ಕಾರದ ನಡೆಯೆ ಅವೈಜ್ಞಾನಿಕ ಎಂದು ಅವರು ಹೇಳುತ್ತಾರೆ. ಅದೂ ಅಲ್ಲದೆ, ತನಗೆ ಈಗಾಗಲೇ ಕರೊನಾ ಸೋಂಕು ಬಂದು ಹೋಗಿದೆ. ಇನ್ನು ನನ್ನ ಮೂಲಕ ಯಾರಿಗೂ ಸೋಂಕು ಹರಡುವುದಿಲ್ಲ ಎಂದು ಅವರು ವಾದ ಮಾಡುವುದೂ ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣುತ್ತದೆ.

ಆದರೆ, ಮಾಸ್ಕ್ ಹಾಕಲಿಲ್ಲವೆಂಬ ಕಾರಣಕ್ಕೆ ಈಗ ಡಾ.ಶ್ರೀನಿವಾಸ ಕಕ್ಕಿಲಾಯರ ಮೇಲೆ ಏಳು ವರ್ಷ ಸಜೆ ವಿಧಿಸಬಹುದಾದ ಕೇಸನ್ನು ಮಂಗಳೂರಿನ ಪೊಲೀಸರು ಹಾಕಿದ್ದಾರೆ. ಸಾಮಾನ್ಯವಾಗಿ ಮಾಸ್ಕ್ ಹಾಕದೆ ಇದ್ದರೆ ಪ್ರೊಟೊಕಾಲ್ ಪ್ರಕಾರ ಎಷ್ಟು ದಂಡ ಇದೆಯೊ ಅದನ್ನು ಹಾಕಿ ಮುಂದೆ ಹೀಗೆ ಮಾಡದೆ ಇರಲು ಎಚ್ಚರಿಸುವುದು ಪೋಲಿಸರ ಕರ್ತವ್ಯ. ಪ್ರೊಟೊಕಾಲ್ ಪ್ರಕಾರ ದಂಡ ಹಾಕಿ ಮುಗಿಸಬೇಕಾದ ಪ್ರಕರಣವನ್ನು ಇಷ್ಟೊಂದು ಯಾಕೆ ಬೆಳೆಸಲಾಗುತ್ತಿದೆ? ಎನ್ನುವ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ.

ಮಾಸ್ಕ್ ಹಾಗದೆ ಸೂಪರ್ ಮಾರ್ಕೆಟ್‌ಗೆ ಬಂದದ್ದು ಏಕೆ? ಇದಕ್ಕೆ ಡಾಕ್ಟರ್ ಶ್ರೀನಿವಾಸ ಕಕ್ಕಿಲಾಯ ಅವರ ಉತ್ತರ,

ಮನೆಯ ಹತ್ತಿರದಲ್ಲೆ ಇರುವ ಮಾರ್ಕೆಟ್ಗೆ ಮಾಸ್ಕ್ ಹಾಕದೆ ಬಂದಿದ್ದಿನಿ ಹೌದು, ಆದರೆ ನನ್ನಿಂದ ಅಲ್ಲಿಯ ಜನರಿಗೆ ಯಾವುದೆ ಸಮಸ್ಯೆ ಆಗಿಲ್ಲ. ಹಾಗೆ ಮಾಸ್ಕ್ ಹಾಕದೆ ಬಂದಿರುವುದಕ್ಕೆ ನಾನು ದಂಡ ಕಟ್ಟುತ್ತೇನೆ ಆದರೆ ನನ್ನ ಅನುಮತಿ ಇಲ್ಲದೆ ಸಿಸಿ ಟಿವಿಯಲ್ಲಿನ ವಿಡಿಯೋ ಕ್ಲಿಪ್ ಅನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದು ತಪ್ಪು. ಇವತ್ತು ಮಾಧ್ಯಮಗಳು ನನ್ನ ಮಾಸ್ಕ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದಿರ ಕರೋನದಿಂದ ಜನಸಾಮಾನ್ಯರು ಹಾಸಿಗೆ, ಲಸಿಕೆ, ಐಸಿಯು ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಈ ಕುರಿತು ಸರ್ಕಾರವನ್ನು ಎಂದಾದರು ಪ್ರಶ್ನೆ ಮಾಡಿದ್ದೀರ ಎಂದು ಖಾಸಗಿ ಮಾಧ್ಯಮಗಳನ್ನು ಪ್ರಶ್ನಿಸಿದ್ದಾರೆ. ಜೊತೆಗೆ ನಾನು ಕಾನೂನಿಗೆ ಗೌರವ ನೀಡುತ್ತೇನೆ, ಕಾನೂನಿಗೆ ನಾನು ಉತ್ತರಿಸುತ್ತೇನೆ ಎಂದು ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. 

ಶ್ರೀನಿವಾಸ್ ಕಕ್ಕಿಲಾಯ ಅವರು ಮಾಡಿದ್ದು ತಪ್ಪು ಅನ್ನುವುದಾದರೆ, ಸಿಎಂ ಯಡಿಯೂರಪ್ಪ ಅವರ ಮಗ ಮಾಡಿದ್ದೇನು?

ಮನೆ ಹತ್ತಿರವಿರುವ ಸೂಪರ್ ಮಾರ್ಕೆಟ್ ಗೆ ಮಾಸ್ಕ್ ಹಾಕದೆ ಹೋದ ಡಾಕ್ಟರ್ ಶ್ರೀನಿವಾಸ ಕಕ್ಕಿಲಾಯ ಅವರ ವಿರುದ್ಧ ಏಳು ವರ್ಷಗಳ ಜೈಲುವಾಸ ಅನುಭವಿಸಿವಂತ ಕೇಸು ಹಾಕುವ ಪೋಲಿಸರು ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ತನ್ನ ಪತ್ನೀ ಸಮೇತ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಅಥವಾ ಉಲ್ಲಂಘಿಸಿ ಪೂಜೆ ಸಲ್ಲಿಸಿ ಹೊರಬಂದರು. ಕರೋನ ಮಾರ್ಗಸೂಚಿಯ ಪ್ರಕಾರ ದೇವಸ್ಥಾನಗಳಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಖುದ್ದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ ಹೇಗೆ ಪೂಜೆಗೆ ಕುಳಿತರು? ಕನಿಷ್ಠ ಮಾಸ್ಕ್ ಆದರೂ ಹಾಕಿದ್ದಾರೆಯೇ? ಅದೂ ಇಲ್ಲ. ವಾಸ್ತವವಾಗಿ ಆತನ ಮೇಲಷ್ಟೇ ಅಲ್ಲದೆ ಸರ್ಕಾರದ ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ದೇವಸ್ಥಾನದ ಒಳಗೆ ಪ್ರವೇಶ ನೀಡಿದ ಅಧಿಕಾರಿಗಳ ಮೇಲೂ ಕೇಸು ಬೀಳಬೇಕಿತ್ತಲ್ಲವೇ? ಹಾಗೇನೂ ಆಗಲಿಲ್ಲ. ಮಾಸ್ಕ್ ಹಾಕದೆ ಬಂದ ಒಂದೇ ಒಂದು ಕಾರಣಕ್ಕೆ ಬೀಳುವ ಕೇಸು, ಕರೋನಾ ಮಾರ್ಗಸೂಚಿಯ ಪ್ರಮುಖ ನಿಯಮಗಳನ್ನು ಉಲ್ಲಂಘಿಸಿದಕ್ಕೆ ಬೀಳುವುದಿಲ್ಲ.

ಶ್ರೀನಿವಾಸ ಕಕ್ಕಿಲಯ ವಿರುದ್ಧ ನಡೆದಿದೆಯೇ ಷಢ್ಯಂತ್ರ?

ಸೂಪರ್ ಮಾರ್ಕೆಟ್ಗೆ ಮಾಸ್ಕ್ ಇಲ್ಲದೆ ಹೋದ ಶ್ರೀನಿವಾಸ ಕಕ್ಕಿಲಯ ಅವರ ಸಿಸಿ ಟಿವಿ ವಿಡಿಯೋ ತುಣುಕು ಅಷ್ಟು ಬೇಗನೇ ಮಾಧ್ಯಮಕ್ಕೆ ತಲುಪಿದ್ದು ಹೇಗೆ ಮತ್ತು ಯಾಕೆ?. ಮಾಧ್ಯಮಗಳ ಜೊತೆ ಜೊತೆಗೆ ಸಿಸಿ ಟಿವಿ ವಿಡಿಯೋ ತುಣುಕು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗೆ ವೈರಲ್ ಆದ ವಿಡಿಯೋವನ್ನು ಇನ್ನೊಂದಷ್ಟು ಮುಖ್ಯವಾಹಿನಿ ಮಾಧ್ಯಮಗಳು ಪ್ರಸಾರ ಮಾಡಲು ಆರಂಭಿಸಿದವು. ಹಾಗೆ ಪ್ರಸಾರ ಮಾಡಿದ ಯಾವೊಂದು ಮಾಧ್ಯಮಗಳು ನನ್ನ ಅನುಮತಿ ಪಡೆದಿಲ್ಲ ಎಂಬುದು ಕಕ್ಕಿಲಾಯ ಅವರ ಆರೋಪವು ಕೂಡ. (ಬಹುತೇಕ ಈ ವಿಡಿಯೋ ಶೇರ್ ಆಗಿರುವುದು ಬಿಜೆಪಿ ಪರ ಇರುವ ಪೇಜುಗಳಲ್ಲಿ)

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಶ್ರೀನಿವಾಸ ಕಕ್ಕಿಲಾಯ ಅವರ ಪ್ಯಾಮಿಲಿ ಹಿನ್ನೆಲೆ ಹುಡುಕಿದ ಕೆಲವರು ಈ ವಿಷಯವನ್ನು ಸಂಪೂರ್ಣವಾಗಿ ರಾಜಕೀಯಗೊಳಿಸಿ ತೇಜೊವಧೆಗೆ ನಿಂತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಕಕ್ಕಿಲಾಯರ ಮೇಲೆ ದಾಳಿ ಮಾಡುತ್ತಿರುವ ಬಹುಮಂದಿಯ ಮೂಲ ಉದ್ದೇಶ ಮಾಸ್ಕ್ ವಿಷಯ ಅಲ್ಲ. ಬದಲಿಗೆ, ಸರ್ಕಾರ ದೀರ್ಘಕಾಲದಿಂದ ಮಾಡುತ್ತ ಬಂದಿರುವ, ಕಪಟಿಗಳನ್ನು ಸೋಗಲಾಡಿಗಳನ್ನು ಬೆತ್ತಲುಗೊಳಿಸುವ ಕೆಲಸಗಳು. ಮನುಷ್ಯತ್ವದ ಮತ್ತು ಸೌಹಾರ್ದದ ಶತ್ರುಗಳಾದ ಬಲಪೀಡೆಗಳನ್ನು, ವೈದ್ಯಕೀಯ ರಂಗದಲ್ಲಿದ್ದೂ ವೈದ್ಯಕೀಯ ತತ್ವ ಸಿದ್ಧಾಂತಗಳಿಗೆ ವಿರುದ್ಧವಿರುವ ಭಕ್ತಗಣಗಳನ್ನು, ಮೂಢನಂಬಿಕೆಗಳ ಮೂಲಕ ಜೀವನೋಪಾಯ ಕಂಡುಕೊಂಡಿರುವವರನ್ನು ಅವರು ದಿಟ್ಟವಾಗಿ ಎದುರಿಸುತ್ತ expose ಮಾಡುತ್ತಲೇ ಬಂದವರು. ಸತ್ಯವನ್ನು ಹೇಳುವುದಕ್ಕೆ ಎಂದೂ ಹಿಂದೇಟು ಹಾಕದ ಕಾರಣಕ್ಕೇ ಅಸಂಖ್ಯ ಶತ್ರುಗಳನ್ನು ಸೃಷ್ಟಿಕೊಂಡವರು. ಇಂದು ಅವರ ವಿರುದ್ಧ ದಾಳಿಗಿಳಿದಿರುವುದು ಅದೇ ವರ್ಗ ಎಂದು ಬರೆದುಕೊಂಡಿದ್ದಾರೆ.

ಕರೋನಾ ಹರಡಿದ ಮೊದಲ ದಿನದಿಂದ ಇಲ್ಲಿಯವರೆಗೆ ಸರ್ಕಾರ ಮಾಡಬೇಕಿರುವುದು ಏನು ಮಾಡುತ್ತಿರುವುದಾದರು ಏನು ಅನ್ನುವ ಬಗ್ಗೆ ಸವಿಸ್ತಾರವಾಗಿ ವೇಳೆ ವಿವರಿಸುತ್ತಾ ಬಂದಿರುವ ಕಕ್ಕಿಲಯ ವಿರುದ್ಧ ನಿಜಕ್ಕೂ ಷಢ್ಯಂತ್ರ ನಡೆಯುತ್ತಿದೆ ಎನ್ನುವುದು ಹಲವರ ವಾದ.

ಕಳೆದ ಒಂದು ವರ್ಷದಿಂದಲೂ ಮಾಸ್ಕ್ ನಿಯಮ ಜಾರಿಯಲ್ಲಿದೆ. ನಾವು ನೂರಕ್ಕೆ ನೂರು ಪಾಲಿಸಿದ್ದೇವಾ? ರಾಜಕಾರಣಿಗಳು  ಪಾಲಿಸಿದ್ದಾರಾ? ಪೊಲೀಸರು ಪಾಲಿಸಿದ್ದಾರಾ? ಕರೋನಾ ಎರಡನೇ ಅಲೆ ಅಪ್ಪಳಿಸಿದ ನಂತರವೇ ಇದೇ ಮಂಗಳೂರು ಪೊಲೀಸರು ಲಕ್ಷಾಂತರ ಜನರು ನೆರೆದಿದ್ದ ನಳೀನ್ ಕುಮಾರ್ ಕಟೀಲರ ‘ಧರ್ಮನೇಮ’ಕ್ಕೆ ಹೇಗೆ ಅನುಮತಿ ಕೊಟ್ಟಿದ್ದರು? ಈಗ ಸಿಎಂ ಪುತ್ರನಿಗೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲು ಅನುಮತಿ ನೀಡಿದ್ದು ಯಾರು? ಮತ್ತೆ ಇವರ ಮೇಲೆಲ್ಲ ಯಾಕೆ ಕೇಸು ದಾಖಲಾಗಿಲ್ಲ? ಎಂಬ ಅನೇಕ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಎತ್ತಿದ್ದಾರೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...