ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಬಿಟ್ ಕಾಯಿನ್ ಹಗರಣ (Bit Coin Scam) ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ (Araga Jnanendra) ಬಿಟ್ ಕಾಯಿನ್ ಹಗರಣದ ಕುರಿತು ವಿಧಾನ ಪರಿಷತ್ತಿನಲ್ಲಿ ನೀಡಿರುವ ಉತ್ತರದಿಂದ ಅಸಂತುಷ್ಟರಾಗಿರುವ ವಿಪಕ್ಷ ನಾಯಕರು, ಹಗರಣದ ಕುರಿತು ಸಿಬಿಐ ಅಥವಾ ಎನ್ಐಎ ತನಿಖೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಆಗಸ್ಟ್ 2016ರಲ್ಲಿ ಬಿಟ್ ಫೈನೆಕ್ಸ್ ಎಂಬ ಕ್ರಿಪ್ಟೋ ಕರೆನ್ಸಿಯನ್ನು 4.5 ಬಿಲಿಯನ್ ಡಾಲರ್ ಮೊತ್ತದ ಬಿಟ್ ಕಾಯಿನ್ ಗಳಾಗಿ ಪರಿವರ್ತಿಸಿರುವ ಕುರಿತು ಅಮೇರಿಕಾ ಮೂಲದ ಏಜೆನ್ಸಿ ತನಿಖೆ ನಡೆಸಿತ್ತು. ಈ ತನಿಖೆಯಲ್ಲಿ ಹಗರಣ ಹಾಗೂ ಭಾರತ/ಕರ್ನಾಟಕದ ನಡುವೆ ಯಾವುದೇ ಸಂಬಂಧವಿಲ್ಲವೆಂದು ಏಜೆನ್ಸಿ ತಿಳಿಸಿದೆ ಎಂದು ಆರಗ ಜ್ಞಾನೇಂದ್ರ ಸದನದಲ್ಲಿ ಹೇಳಿದರು.
“ಹಗರಣಕ್ಕೆ ಸಂಬಂಧಿಸಿ ಅಮೇರಿಕಾದ ಏಜೆನ್ಸಿ (america agency) ಇಬ್ಬರು ಅಮೇರಿಕನ್ ಪ್ರಜೆಗಳನ್ನು ಈಗಾಗಲೇ ಬಂಧಿಸಿದೆ. ಹ್ಯಾಕಿಂಗ್ ಮೂಲಕ ಪಡೆಯಲಾಗಿದ್ದ ಸಂಪೂರ್ಣ ಹಣವನ್ನು ಅವರು ಜಪ್ತಿಗೊಳಿಸಿದ್ದಾರೆ. ಆದರೆ, ಈ ಪ್ರಕರಣ ಹಾಗೂ ಭಾರತದ ನಡುವೆ ಯಾವುದೇ ಸಂಬಂಧ ಇರುವ ಕುರಿತು ಅವರಿಗೆ ಮಾಹಿತಿ ಲಭಿಸಿಲ್ಲ,” ಎಂದು ಜ್ಞಾನೇಂದ್ರ ಹೇಳಿದ್ದಾರೆ.
Also Read : ರಾಜ್ಯ ಬಿಜೆಪಿ ಸರ್ಕಾರಕ್ಕೆ ಸುನಾಮಿಯಂತೆ ಅಪ್ಪಳಿಸಲಿದೆಯೇ ʼಬಿಟ್‌ಕಾಯಿನ್ʼ ಹಗರಣ?
ಇದೇ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ (Srikrishna Ramesh alias Sriki) ಎಂಬ ಹ್ಯಾಕರ್ ನನ್ನು 2020 ನವೆಂಬರ್ ನಲ್ಲಿ ಬಂಧಿಸಿದ್ದರು. ಬಿಟ್ ಕಾಯಿನ್ ಬಳಸಿ ಡಾರ್ಕ್ ನೆಟ್’ನಿಂದ ಡ್ರಗ್ಸ್ ಖರೀದಿ ಹಾಗೂ ಬಿಟ್ ಕಾಯಿನ್ ಹ್ಯಾಕಿಂಗ್ ಮಾಡಿರುವ ಆರೋಪ ಶ್ರೀಕಿ ಮೇಲಿತ್ತು. ಕರ್ನಾಟಕ ಸರ್ಕಾರದ ವೆಬ್ಸೈಟ್ ಹಾಕಿ ಮಾಡಿ ಸುಮಾರು ರೂ.11.5 ಕೋಟಿ ಹಣ ದೋಚಿರುವ ಕುರಿತು ಹಾಗೂ ಬಿಟ್ ಫೈನೆಕ್ಸ್ ಕರೆನ್ಸಿ ಅದಲು ಬದಲು ಮಾಡಿರುವ ಕುರಿತಾಗಿ ಶ್ರೀಕಿ ತನಿಖೆ ವೇಳೆ ಬಾಯಿಬಿಟ್ಟಿದ್ದ.
ತನಿಖೆಯು ಹಳ್ಳ ಹಿಡಿಯುತ್ತಿರುವ ಕುರಿತು ಕಾಂಗ್ರೆಸ್ ಪರಿಷತ್ ಸದಸ್ಯ ಯು ಬಿ ವೆಂಕಟೇಶ್ ಅವರು ಸದನದಲ್ಲಿ ಪ್ರಸ್ತಾಪಿಸಿದ್ದರು. ಸರ್ಕಾರವು ತನಿಖೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಲ್ಲ ಎಂದು ಆರೋಪಿಸಿದ್ದರು.

“ಹಣ ವರ್ಗಾವಣೆ ಮಾಡಲು ಭಾರತ ಮೂಲದ ಈಮೈಲ್ ಐಡಿಗಳನ್ನು ಬಳಸಲಾಗಿತ್ತು. ಭಾರತ ಮೂಲದ ಈಮೈಲ್ ಐಡಿಗಳನ್ನು ಬಳಸುವ ಅಗತ್ಯವೇನಿತ್ತು? ಈ ಹಾದಿಯಲ್ಲಿ ನೀವೇ ತನಿಖೆ ನಡೆಸ್ತೀರಾ? ಸಿಬಿಐ ಅಥವಾ ಎನ್ಐಎಗೆ ತನಿಖೆಯನ್ನು ವಹಿಸ್ತೀರಾ ಎಂಬ ಕುರಿತು ಸ್ಪಷ್ಟನೆ ನೀಡಿ,” ಎಂದು ವೆಂಕಟೇಶ್ ಹೇಳಿದ್ದಾರೆ.
ಇವರೊಂದಿಗೆ ದನಿಗೂಡಿಸಿದ ಕಾಂಗ್ರೆಸ್ ವಿಧಾನ ಪರಿಷತ್ ನಾಯಕ ಬಿ ಕೆ ಹರಿಪ್ರಸಾದ್, ಹಗರಣದಲ್ಲಿ ಹಲವು ವಿವಿಐಪಿಗಳ ಕೈವಾಡವೂ ಇದೆ. ಅವರೆಲ್ಲರ ಹೆಸರು ಹೊರಗೆ ಬರಬೇಕು. ಆ ಕಾರಣಕ್ಕಾಗಿ ಪಾರದರ್ಶಕ ತನಿಖೆಗೆ ಸರ್ಕಾರ ಆದೇಶ ನಿಡಬೇಕು. ಇದೊಂದು ಮಾಮೂಲಿ ಪ್ರಕರಣ ಅಲ್ಲ. ಹಗರಣದಲ್ಲಿ ಐಪಿಎಸ್ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳೂ ಇದ್ದಾರೆ. ಹಾಗಾಗಿ ಇದನ್ನು ಬೇರೆ ಏಜೆನ್ಸಿ ಮುಖಾಂತರವೇ ತನಿಖೆ ಮಾಡಬೇಕು, ಎಂದಿದ್ದಾರೆ.
Also Read : ಹ್ಯಾಕರ್ ಶ್ರೀಕಿ ಬಂಧನ : ಹೊಲ ಮೇಯ್ದ ಬೇಲಿಯ ರಕ್ಷಣೆಯ ತಂತ್ರವೇ?
ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ವಿಪಕ್ಷಗಳು ಯಾವುದೇ ದಾಖಲೆಗಳನ್ನು ನೀಡಿದರೆ ಸರ್ಕಾರವು ಆ ದಾಖಲೆಗಳ ಆಧಾರದ ಮೇಲೆ ಉನ್ನತ ಮಟ್ಟದ ತನಿಖೆಯನ್ನು ನಡೆಸುತ್ತದೆ ಎಂದು ಗೃಹ ಸಚಿವರು ಹೇಳಿದ್ದಾರೆ.
“ಭಾರತೀಯ ಮೂಲದ ಈಮೈಲ್ ಐಡಿಗಳನ್ನು ಬಳಸಿರುವ ಕುರಿತು ದಾಖಲೆಗಳನ್ನು ನೀಡಿ. ನಾವು ತನಿಖೆ ನಡೆಸುತ್ತೇವೆ. ಈ ವಿಚಾರದ ಕುರಿತು ಕೂಲಂಕುಷವಾದ ಮಾಹಿತಿಯನ್ನು ಪಡೆದಿದ್ದೇನೆ. ಇದನ್ನು ದೊಡ್ಡ ವಿಚಾರವೆಂದು ಬಿಂಬಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಜೊತೆಯೂ ಮಾತನಾಡಿದ್ದೇನೆ. ಹಣ ಕಳೆದುಕೊಂಡವರು ಪ್ರಧಾನಿಯನ್ನು ಭೇಟಿಯಾಗಿದ್ದಾರೆ. ಆದರೆ, ಕೇಂದ್ರದಿಂದ ಈ ಕುರಿತಾಗಿ ಯಾವುದೇ ದಾಖಲೆಗಳನ್ನು ರಾಜ್ಯಕ್ಕೆ ನೀಡಿಲ್ಲ,” ಎಂದು ಅವರು ಹೇಳಿದರು.
Also Read : ಬಿಟ್ ಕಾಯಿನ್ ಹಗರಣ : ಶ್ರೀಕಿ ನಾಪತ್ತೆ ಕಥೆ ಹೇಳುತ್ತಿರುವುದೇನು?
ಈ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಈ ಪ್ರಕರಣವನ್ನು ಸಿಬಿಐಗೆ ಏಕೆ ನೀಡುತ್ತಿಲ್ಲ? ಸರ್ಕಾರದ ಹಣವನ್ನೇ ದೋಚಿದ್ದರೂ ಮೀನಾಮೇಷ ಏಕೆ ಎಣಿಸುತ್ತಿದ್ದಾರೆ? ಸರ್ಕಾರದ ಈ ನಡೆ ಅನುಮಾನ ಹುಟ್ಟುಹಾಕುತ್ತಿದೆ. ಸಿಬಿಐ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿಗಳೇ ಘೋಷಿಸಲಿ, ಎಂದು ಅವರು ಆಗ್ರಹಿಸಿದರು.