ಶಿವಮೊಗ್ಗದ ಬಜರಂಗದಳ (Bajarang Dal) ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (UAPA) ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹರ್ಷನ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ 10 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಫೆ 25 ರಿಂದ 11 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಸೋಮವಾರ ಪೊಲೀಸ್ ಕಸ್ಟಡಿ (Police Custody) ಅಂತ್ಯವಾದ ಹಿನ್ನೆಲೆ ಎಲ್ಲ ಆರೋಪಿಗಳನ್ನು ಎರಡನೇ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆ ಎಲ್ಲ ಆರೋಪಿಗಳನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ (Shivamogga Central Prison) ಶಿಫ್ಟ್ ಮಾಡಲಾಗಿದೆ.
ಪ್ರಮುಖ ಆರೋಪಿ ಬುದ್ಧನಗರ ನಿವಾಸಿ ಮಹಮ್ಮದ್ ಖಾಸಿಫ್ (30) ಸೇರಿದಂತೆ ಸೈಯದ್ ನದೀಮ್, ರಿಹಾನ್ ಷರೀಫ್, ಆಸಿಫ್ ಉಲ್ಲಾ ಖಾನ್, ಅಬ್ದುಲ್ ಅಫ್ನಾನ್, ನಿಹಾನ್, ಫರಾಜ್ ಪಾಷಾ, ಅಬ್ದುಲ್ ಖಾದರ್ ಜಿಲಾನ್, ಅಬ್ದುಲ್ ರೋಷನ್ ಮತ್ತು ಜಾಫರ್ ಸಾದಿಕ್ ಪ್ರಕರಣದ ಇತರ ಆರೋಪಿಗಳು ಪೊಲೀಸರು ಬಂಧಿಸಿದ್ದಾರೆ.
90 ದಿನಗಳ ಬದಲಿಗೆ 180 ದಿನಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಲು ಕೋರ್ಟ್ ತನಿಖಾಧಿಕಾರಿಗೆ ಸಮಯವನ್ನು ನೀಡಿದೆ. ಫೆಬ್ರವರಿ 20 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ 28 ವರ್ಷದ ಬಜರಂಗದಳದ ಮುಖಂಡ ಹರ್ಷ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು .

ಹರ್ಷ ಹತ್ಯೆಯ ಹಿಂದೆ ದೊಡ್ಡ ಪಿತೂರಿಯಿದೆ ಎಂದು ರಾಜ್ಯ ಪೊಲೀಸರು ಪರಿಗಣಿಸಿದ್ದು, ಯುಎಪಿಎ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಕೊಲೆಗಿಂತ ಹೆಚ್ಚಿನ ಪ್ರಕರಣವಾಗಿದ್ದು, ಕಣಾದ ಕೈಗಳು ಇದರಿಂದೆ ಇದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಏತನ್ಮಧ್ಯೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಅನ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ಈ ಎರಡು ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಬಿಜೆಪಿ ಮುಖಂಡರು ಹಾಗೂ ಹಿಂದುತ್ವವಾದಿಗಳು ತೀವ್ರವಾಗಿ ಆಗ್ರಹಿಸಿದ್ದಾರೆ. ಹರ್ಷ ಅವರ ಕುಟುಂಬಕ್ಕೆ ಕರ್ನಾಟಕ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಿದೆ.
ಉದ್ಧೇಶಪೂರಕವಾಗಿಯೇ ಹರ್ಷನನ್ನು ಕೊಂದು ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ. ಮೃತ ಯುವಕ ಹಿಂದುತ್ವ ಸಂಬಂಧಿತ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು, ಹಿಜಾಬ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾನೆ. ಕೊಲೆಗೂ ಹಿಜಾಬ್ ಗದ್ದಲಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದರೂ, ನಂತರ ಏಜೆನ್ಸಿಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.