ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಸುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ. ವಿಚಾರಣೆಗೆ ಅಗತ್ಯವಿದ್ದರೆ ನೋಟೀಸ್ ನೀಡುತ್ತೇವೆ. ಆಗಲೂ ತನಿಖೆಗೆ ಸಹಕರಿಸದೇ ಇದ್ದಲ್ಲಿ, ಜಾಮೀನು ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇವೆ”
ಇದು ಸುಮಾರು ಹದಿನೈದು ದಿನಗಳ ಹಿಂದೆ ಸಾವಿರಾರು ಕೋಟಿ ಬಿಟ್ ಕಾಯಿನ್ ಹಗರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಹಗರಣದ ಕಿಂಗ್ ಪಿನ್ ಹ್ಯಾಕರ್ ಶ್ರೀಕೃಷ್ಣನ ದಿಢೀರ್ ನಾಪತ್ತೆ ಕುರಿತು ನೀಡಿದ್ದ ಹೇಳಿಕೆ.
ಆ ಹೇಳಿಕೆ ನೀಡಿ, ಮೂರು ವಾರ ಕಳೆದರೂ ನಾಪತ್ತೆಯಾಗಿರುವ ಶ್ರೀಕಿ, ತನ್ನ ವಿರುದ್ಧ ಡ್ರಗ್ಸ್ ಪ್ರಕರಣ ದಾಖಲಾಗಿರುವ ಬೆಂಗಳೂರಿನ ಜೀವನ್ ಭೀಮಾನಗರ ಠಾಣೆಗೆ ಹಾಜರಾಗಿಲ್ಲ. ಪೊಲೀಸರು ಆತನನ್ನು ಹುಡುಕಿ ಹೋದ ಆತನ ಮನೆ, ತಂಗಿದ್ದ ಲಾಡ್ಜುಗಳನ್ನೂ ಆತ ಪತ್ತೆಯಾಗಿಲ್ಲ. ತನಿಖೆಗೆ ಸಹಕರಿಸುವುದಿರಲಿ, ಪೊಲೀಸರಿಗೆ ಆತ ಎಲ್ಲಿದ್ದಾನೆ ಎಂಬ ಸುಳಿವು ಕೂಡ ಸಿಕ್ಕಿಲ್ಲ. ಆದರೂ ಆ ನಿರ್ದಿಷ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಾಗಲೀ ಅಥವಾ ಆತನ ವಿರುದ್ಧ ಬಹುಕೋಟಿ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಸಿಸಿಬಿ, ಸಿಐಡಿ, ಸಿಬಿಐ, ಇಡಿ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯೂ ಆತನ ನಾಪತ್ತೆ ಬಗ್ಗೆಯಾಗಲೀ, ವಿಚಾರಣೆಗೆ ಹಾಜರಾಗದ ಬಗ್ಗೆಯಾಗಲೂ ಚಕಾರವೆತ್ತಿಲ್ಲ, ಆತನ ಜಾಮೀನು ರದ್ದು ಕೋರಿ ನ್ಯಾಯಾಲಕ್ಕೆ ಅರ್ಜಿಯನ್ನೂ ಸಲ್ಲಿಸಿದ ಮಾಹಿತಿ ಇಲ್ಲ!
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಖಾತೆಗಳೂ ಸೇರಿದಂತೆ ಹಲವು ಹ್ಯಾಕ್ ಮಾಡಿ, ಬಿಟ್ ಕಾಯಿನ್ ವಂಚನೆ ನಡೆಸಿ, ಡ್ರಗ್ಸ್ ಮಾರಾಟ, ಸಾಗಣೆ ಮತ್ತು ಸೇವನೆಯಲ್ಲಿ ಭಾಗಿಯಾಗಿ, ಬರೋಬ್ಬರಿ ಹತ್ತು ಸಾವಿರ ಕೋಟಿ ವಂಚನೆಯ ಆರೋಪ ಹೊತ್ತಿರುವ ಹಲವು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ತನಿಖೆಗಳಲ್ಲಿ ಬೇಕಾಗಿರುವ ಆರೋಪಿಯೊಬ್ಬ ಜಾಮೀನು ಪಡೆದು ಜೈಲಿನಿಂದ ಕೈಬೀಸಿಕೊಂಡು ಬಂದಾಗಲೇ ಪೊಲೀಸರು ಈ ಪ್ರಕರಣದಲ್ಲಿ ವಹಿಸಿರುವ ಜಾಣಕುರುಡು ಜಗಜ್ಜಾಹೀರಾಗಿತ್ತು. ಇದೀಗ ಅಂತಹ ಅಂತಾರಾಷ್ಟ್ರೀಯ ಅಕ್ರಮಗಳನ್ನು ಎಸಗಿರುವ ಆರೋಪಿ ನಾಪತ್ತೆಯಾಗಿ ತಿಂಗಳು ಉರುಳಿದರೂ ಪೊಲೀಸರು ಕಣ್ಣು ಮುಚ್ಚಿ ಕೂತಿರುವುದು ಏನನ್ನು ಸೂಚಿಸುತ್ತಿದೆ? ಪೊಲೀಸರಷ್ಟೇ ಅಲ್ಲ; ಬಹುತೇಕ ಪ್ರತಿಪಕ್ಷಗಳು, ಮಾಧ್ಯಮಗಳು ಕೂಡ ದಿಢೀರನೇ ಈ ವಿಷಯದಲ್ಲಿ ಜಾಣ ಮೌನಕ್ಕೆ ಜಾರಿರುವುದರ ಹಿಂದಿನ ಗುಟ್ಟೇನು? ಎಂಬ ಪ್ರಶ್ನೆಗಳು ಸಹಜವಾಗೇ ಎದ್ದಿವೆ.
ಅದರಲ್ಲೂ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ, ಪ್ರಭಾವಿ ಸಚಿವರಿಬ್ಬರು, ಪ್ರತಿಪಕ್ಷ ಕಾಂಗ್ರೆಸ್ ನ ಶಾಸಕರು, ತನಿಖೆ ನಡೆಸುತ್ತಿರುವ ಸಿಸಿಬಿ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಹಿರಿಯ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳ ಹೆಸರು ಕೇಳಿಬಂದಿದ್ದ ಬಿಟ್ ಕಾಯಿನ್ ಪ್ರಕರಣದ ಎ 1 ಆರೋಪಿಯೇ ಹೀಗೆ ದಿಢೀರನೇ ಮಾಯವಾಗಿದ್ದರೂ ಬೆಂಗಳೂರು ಪೊಲೀಸ್ ಕಮೀಷನರ್ ಆಗಲೀ, ರಾಜ್ಯ ಪೊಲೀಸ್ ಮುಖ್ಯಸ್ಥರಾಗಲೀ ಯಾಕೆ ತಲೆಕೆಡಿಸಿಕೊಂಡಿಲ್ಲ? ಆತನ ಪತ್ತೆಗಾಗಿ ಪೊಲೀಸರು ಯಾವ ಪ್ರಯತ್ನವನ್ನೂ ಮಾಡದೆ ಸುಮ್ಮನಿರುವುದರ ಅರ್ಥವೇನು?(ಆತನ ಪತ್ತೆ ವಿಷಯದಲ್ಲಿ ಪೊಲೀಸರ ಯಾವ ಪ್ರಯತ್ನಗಳ ಬಗ್ಗೆಯೂ ಯಾವ ಮಾಹಿತಿಯೂ ಇಲ್ಲ!).

ಪ್ರಮುಖವಾಗಿ ಪೊಲೀಸರ ನಿಷ್ಕ್ರಿಯತೆ ಮತ್ತು ಅದೇ ಹೊತ್ತಿಗೆ ಮುಖ್ಯವಾಹಿನಿ ಮಾಧ್ಯಮಗಳ ದಿಢೀರ್ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ. ಏಕೆಂದರೆ; ಶ್ರೀಕಿ ಇಡೀ ಪ್ರಕರಣದ ಕಿಂಗ್ ಪಿನ್ ಎಂದು ಪೊಲೀಸರು ಆತನನ್ನು ಬಿಂಬಿಸಿದ್ದರೂ, ವಾಸ್ತವವಾಗಿ ಆತನೇ ಹತ್ತು ಸಾವಿರ ಕೋಟಿಯಷ್ಟು ಬೃಹತ್ ಹಗರಣದ ಫಲಾನುಭವಿಯಲ್ಲ. ಬದಲಾಗಿ ಆತನನ್ನು ಕೈಗೊಂಬೆಯಾಗಿ ಬಳಸಿಕೊಂಡು, ಆತನ ಹ್ಯಾಕಿಂಗ್ ಅಕ್ರಮ ಮತ್ತು ಡ್ರಗ್ಸ್ ದಂಧೆಯನ್ನೇ ದಾಳವಾಗಿಸಿಕೊಂಡು ಆತನನ್ನು ಪಳಗಿಸಲಾಗಿತ್ತು, ಬೆದರಿಸಲಾಗಿತ್ತು. ಹಾಗೆ ಬೆದರಿಸಿ ಪಳಗಿಸುವ ಮೂಲಕ ಆತನ ಹ್ಯಾಕಿಂಗ್ ಪ್ರತಿಭೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಆತನ ಹ್ಯಾಕಿಂಗ್ ಟ್ಯಾಲೆಂಟ್ ಬಳಸಿ ಕೇವಲ ಬಿಟ್ ಕಾಯಿನ್ ಹ್ಯಾಕ್ ಅಷ್ಟೇ ಅಲ್ಲದೆ, ಬಿಟ್ ಕಾಯಿನ್ ವಹಿವಾಟಿನ ಮೂಲಕ ಸಾವಿರಾರು ಕೋಟಿ ರೂಪಾಯಿ ಕಪ್ಪು ಹಣವನ್ನು ಅಧಿಕೃತ ವಹಿವಾಟಿನ ಆದಾಯವೆಂದು ಪರಿವರ್ತಿಸಲಾಗಿದೆ. ಈ ಕೃತ್ಯವನ್ನು ಸ್ವತಃ ಅಧಿಕಾರದ ಚುಕ್ಕಾಣಿ ಹಿಡಿದವರು, ಪ್ರತಿಪಕ್ಷಗಳ ಕೆಲವರು ಶಾಸಕರು, ಅವರ ಮಕ್ಕಳು, ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಕೂಡ ಮಾಡಿದ್ದಾರೆ. ಹಾಗಾಗಿಯೇ ಆತನನ್ನು ಮಾಧ್ಯಮ ಮತ್ತು ತನಿಖಾ ಸಂಸ್ಥೆಗಳಿಂದ ಬಚಾವು ಮಾಡುವ ಯತ್ನವಾಗಿ ಆತನನ್ನು ನಾಪತ್ತೆ ಮಾಡಲಾಗಿದೆ ಎಂಬ ಗಂಭೀರ ಅನುಮಾನಗಳು ಈಗ ಕೇಳಿಬರುತ್ತಿವೆ.
ವಾಸ್ತವವಾಗಿ ಡ್ರಗ್ಸ್ ಮತ್ತು ಹೋಟೆಲ್ ವ್ಯವಸ್ಥಾಪಕರ ಮೇಲಿನ ಹಲ್ಲೆ ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿಯನ್ನು ಬಂಧಿಸಿ, ಜೈಲಿಗೆ ಕಳಿಸಿದ್ದೇ ಒಂದು ಅನುಮಾನಾಸ್ಪದ ನಡೆಯಾಗಿತ್ತು. ಅದಾದ ಬಳಿಕ ಆತನ ಮೇಲೆ ಡ್ರಗ್ಸ್ ಸೇವನೆಯ ಗಂಭೀರ ಆರೋಪವಿದ್ದರೂ ಆತನಿಗೆ ಜಾಮೀನು ಕೊಡಿಸಿ ಆತನನ್ನು ಸಾದಾ ಸೀದಾ ಪಿಕ್ ಪಾಕೆಟ್ ಕಳ್ಳನಂತೆ ಬಿಡುಗಡೆ ಮಾಡಿ ಕಳಿಸಿದ್ದು ಕೂಡ ಬಿಜೆಪಿಯ ಸರ್ಕಾರದ ಪ್ರಭಾವಿ ನಾಯಕರೊಬ್ಬರ ಕೈವಾಡ ಎಂಬ ಸುದ್ದಿ ಕೂಡ ಹರಿದಾಡಿತ್ತು. ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ಒಂದೇ ದಿನದಲ್ಲಿ ಆತನಿಗೆ ಹಾಗೆ, ಸ್ವತಃ ಆರೋಪಿಗೇ ಗೊತ್ತಿಲ್ಲದಂತೆ ವಕೀಲರ ನೇಮಿಸಿ, ಜಾಮೀನು ಕೊಡಿಸಿದ ಆ ಪ್ರಭಾವಿ ವ್ಯಕ್ತಿಯೇ ಶ್ರೀಕಿಯಿಂದ ಅತಿ ಹೆಚ್ಚು ಲಾಭ ಪಡೆದಿದ್ದು, ಆತನಿಗೆ ಸೇರಿದ ಸಾವಿರಾರು ಕೋಟಿ ಕಪ್ಪುಹಣವನ್ನು ವೈಟ್ ಮಾಡಿಕೊಟ್ಟ ಶ್ರೀಕಿಯನ್ನು ತನಿಖೆಯ ಜಾಲದಿಂದ ಪಾರು ಮಾಡುವ ಉದ್ದೇಶದಿಂದಲೇ ಜಾಮೀನು ಕೊಡಿಸಿ ನಾಪತ್ತೆ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.
ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯ ಪ್ರಕಾರವೇ, ಸಿಬಿಐ ಇಂಟರ್ ಪೋಲ್ ಮಾಹಿತಿ ಕೇಳಿದ್ದ, ಇಡಿ ತನಿಖೆ ಆರಂಭಿಸಿದ್ದ, ಪ್ರಧಾನಿ ಮೋದಿ ಖುದ್ದು ಮೇಲ್ವಿಚಾರಣೆ ನಡೆಸುತ್ತಿರುವ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಣ್ಣಳತೆಯಲ್ಲೇ ತನಿಖೆ ನಡೆಯುತ್ತಿರುವ ಈ ಪ್ರಕರಣದ ನಿರ್ಣಾಯಕ ಆರೋಪಿಯೇ ನಾಪತ್ತೆಯಾಗಿದ್ದರೂ ಆ ಬಗ್ಗೆ ಮಾತನಾಡದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಮೊನ್ನೆ ಬಿಟ್ ಕಾಯಿನ್ ಪ್ರಕರಣ ಮುಗಿದ ಅಧ್ಯಾಯ ಎಂಬ ಹೇಳಿಕೆ ನೀಡಿದ್ದಾರೆ!
ಆರೋಪಿಯ ನಾಪತ್ತೆ, ಪೊಲೀಸರ ದಿವ್ಯ ಮೌನ, ಬಳಿಕ ಗೃಹ ಸಚಿವರು ಪ್ರಕರಣ ಮುಗಿದ ಅಧ್ಯಾಯ ಎಂಬ ಹೇಳಿಕೆಗಳು ಖಂಡಿತವಾಗಿಯೂ ಕ್ರೊನಾಲಜಿಯಲ್ಲೇ ಇವೆ ಮತ್ತು ಪ್ರಕರಣದ ಕುರಿತು ಹೇಳಬೇಕಾದ್ದನ್ನು ಬಹಳ ಸ್ಪಷ್ಟವಾಗಿಯೇ ಹೇಳುತ್ತಿವೆ. ಅಲ್ಲವೆ?