
ಜಾತಿ ಜನ ಗಣತಿ ವರದಿ ಬಿಡುಗಡೆಗೆ ತಯಾರಿ ನಡೆದಿರುವ ಬೆನ್ನಲ್ಲೇ ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ನೂರಾರೂ ಕೋಟಿ ಖರ್ಚು ಮಾಡಿ ಜಾತಿ ಗಣತಿ ಮಾಡಿದೆ. ಆದ್ರೂ ವರದಿ ಬಿಡುಗಡೆ ಮಾಡ್ತಿಲ್ಲ ಅಂತಾ ಬಿಜೆಪಿ-ಜೆಡಿಎಸ್ನವರೇ ದೂರಿದ್ರು. ಈಗ ನಮ್ಮ ಸರ್ಕಾರ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡಿಸಿದೆ. ಏಪ್ರಿಲ್ 17 ನೇ ತಾರೀಖು ಮಂಡನೆಗೆ ಸಿಎಂ ಸೂಚಿಸಿದ್ದಾರೆ. ನಮಗೆ ಒಂದು ಪ್ರತಿಯನ್ನೂ ಕೊಟ್ಟಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಆ ಕುರಿತು ಚರ್ಚೆ ಮಾಡ್ತೇವೆ ಎಂದಿದ್ದಾರೆ.

ವರದಿ ಬಿಡುಗಡೆಗೂ ಮುಂಚೆಯೇ ಬಿಜೆಪಿ-ಜೆಡಿಎಸ್ ವಿರೋಧ ಸರಿಯಲ್ಲ. ಮಗು ಹುಟ್ಟುವ ಮುನ್ನವೇ ಕುಲಾವಿ ಹೊಲೆಸಿದಂತೆ ಬಿಜೆಪಿ ಮಾತಾನಾಡ್ತಿದೆ. ಎಲ್ಲ ಸಮಾಜಕ್ಕೂ ನ್ಯಾಯ ಕೊಡಿಸುವ ಜಾತಿ ಜನಗಣತಿಯಿಂದ ಆಗಲಿದೆ. ಒಬ್ಬರಿಗೆ ನ್ಯಾಯ, ಮತ್ತೊಬ್ಬರಿಗೆ ಅನ್ಯಾಯ ಆಗುವ ಪ್ರಶ್ನೆ ಇಲ್ಲ. ಸಣ್ಣ ಪುಟ್ಟ ನೂನ್ಯತೆ ಇದ್ದರೇ ಸಚಿವ ಸಂಪುಟದಲ್ಲಿಯೇ ಚರ್ಚಿಸಿ ತೀರ್ಮಾನಿಸಿ ಸರಿಪಡಿಸಿಕೊಳ್ಳುತ್ತೇವೆ. ವಿರೋಧ ಪಕ್ಷದವರು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಅದರಲ್ಲಿ ಅವರಿಗೆ ಶಕ್ತಿ ಸಿಗಲ್ಲ. ಎಂದಿದ್ದಾರೆ.

ಜಾತಿ ಜನಗಣತಿಯಿಂದ ಸಮಾಜ ಒಡೆಯುವ ಕೆಲಸ ಮಾಡ್ತಿದೆ ಎಂದು ಬಿಜೆಪಿ-ಜೆಡಿಎಸ್ ಆರೋಪಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಕೌಂಟರ್ ಕೊಟ್ಟಿದ್ದು, ಪಾಪ ಅವರ ರಾಜಕೀಯಕ್ಕೆ ಏನೂ ಸಿಗ್ತಿಲ್ಲ, ಇನ್ನೇನೂ ಮಾಡ್ತಾರೆ..? ಮೀನು ಕೈ ಜಾರಿ ಹೋದಂತೆ ಬಿಜೆಪಿಗೆ ಯಾವ ವಿಚಾರವೂ ಸಿಕ್ತಿಲ್ಲ. ಬಿಜೆಪಿಯವರನ್ನ ನೋಡಿದ್ರೆ ನನಗೆ ಹೊಟ್ಟೆ ಉರಿಯುತ್ತೆ ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಜೊತೆಗೆ ಸ್ವಾಮೀಜಿಗಳು ಜಾತಿ ಜನಗಣತಿಗೆ ವಿರೋಧ ಮಾಡ್ತಿರೋ ವಿಚಾರಕ್ಕೆ ಉತ್ತರಿಸಿ, ಸ್ವಾಮೀಜಿಗಳಿಗೆ ವರದಿ ಕೈ ತಲುಪಿಲ್ಲ. ಜಾತಿಗಣತಿ ವರದಿಯಲ್ಲಿ ಏನಿದೆ ಎಂದು ಗೊತ್ತಿಲ್ಲ. ಊಹಾಪೋಹದಿಂದ ಕೆಲವರು ಮಾತನಾಡ್ತಿದ್ದಾರೆ ಎಂದಿದ್ದಾರೆ.

ನಮ್ಮ ಸರ್ಕಾರ, ನಮ್ಮ ಪಕ್ಷ ಯಾವ ಸಮುದಾಯಕ್ಕೂ ಅನ್ಯಾಯವಾಗಲು ಬಿಡಲ್ಲ. ವರದಿ ಸಚಿವ ಸಂಪುಟದಲ್ಲಿ ಮಂಡನೆ ಆಗಿದೆ, ಇನ್ನೂ ಅಂಗೀಕಾರವಾಗಿಲ್ಲ. ಬಳಿಕ ಎಲ್ಲರೂ ಅದರ ಬಗ್ಗೆ ಚರ್ಚೆ ಮಾಡಲಿ ಎಂದಿದ್ದಾರೆ. ಚಲುವರಾಯಸ್ವಾಮಿ ಜಾತಿ ಜನಗಣತಿ ಬಗ್ಗೆ ಸಕಾರಾತ್ಮಕವಾಗಿ ಇದ್ದಾರೆ ಎನಿಸುತ್ತದೆ. ಆದರೆ ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಇಂದು ಒಕ್ಕಲಿಗ ಸಮುದಾಯದ ಶಾಸಕರ ಸಭೆ ಕರೆದಿದ್ದಾರೆ. ಇಂದಿನ ಸಭೆಯಲ್ಲೂ ಚಲುವರಾಯಸ್ವಾಮಿ ಅದೇ ರೀತಿ ಹೇಳ್ತಾರಾ..? ಅಥವಾ ಸಭೆಯಲ್ಲಿ ಜಾತಿ ಜನಗಣತಿಯನ್ನು ಸತ್ಯವಾಗಲೂ ವಿರೋಧಿಸ್ತಾರಾ..? ಅನ್ನೋ ಬಗ್ಗೆ ಗೊತ್ತಾಗಬೇಕಿದೆ.