
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, 17ನೇ ತಾರೀಕು ಕ್ಯಾಬಿನೆಟ್ ನಲ್ಲಿ ಚರ್ಚೆ ಆದ ನಂತರ ಹೇಳಿಕೆ ಕೊಡೋಣ ಎಂದುಕೊಂಡಿದ್ದೆ. ಆದರೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಗೊಂದಲ ಉಂಟಾಗಿರುವುದರಿಂದ ಸ್ಪಷ್ಟನೆ ನೀಡಬೇಕಾಗಿದೆ. ಕೆಲವರಿಗೆ ತಮ್ಮ ಜಾತಿ ಬಿಟ್ಟು ಹೋಗಿದೆ ಎಂಬ ಅಭಿಪ್ರಾಯ ಇದೆ. ರಾಜ್ಯದಲ್ಲಿ ಎಷ್ಟು ಜಾತಿಗಳಿವೆಯೋ ಎಲ್ಲವನ್ನು ಒಳಗೊಳ್ಳಲಾಗಿದೆ. ಸಂಖ್ಯೆ ಎಷ್ಟು ಎಂದು ಈಗ ನಾನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ನಾವು ಜಾತಿ ಹೇಳುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಕೆಲವರು ಜಾತಿಯ ಬಗ್ಗೆ ಮಾಹಿತಿ ಇಲ್ಲದವರು ಇದ್ದಾರೆ. ಸುಮಾರು ಅಂತಹ ಐನೂರು ಜಾತಿಗಳು ಸಿಕ್ಕಿವೆ. ನಮ್ಮ ಜಾತಿಯ ಸಮೀಕ್ಷೆ ಆಗಿಲ್ಲ ಎಂದು ಹೇಳುವುದು ಸರಿಯಲ್ಲ. ಕಾಂತರಾಜ್ ಅವರು ಇದ್ದಾಗ ಒಂದು ಫಾರ್ಮೆಟ್ ತಯಾರಿಸಿದ್ದರು. ಈ ವರದಿ ಅವೈಜ್ಞಾನಿಕ ಎನ್ನುವಂತಿಲ್ಲ. 54 ಪ್ರಶ್ನಾವಳಿಗಳನ್ನು ಒಳಗೊಳ್ಳಲಾಗಿತ್ತು. ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದು ಜಾತಿ ಗಣತಿ ಅಲ್ಲವೇ ಅಲ್ಲ. ಮಾಡಿರುವ ಸಮೀಕ್ಷೆಯಲ್ಲಿ ಒಂದು ಅಂಶ ಜಾತಿ ಅಷ್ಟೇ. ಜನರು ಹೇಳಿರುವ ಜಾತಿಯನ್ನು ಬರೆದುಕೊಳ್ಳಲಾಗಿದೆ ಎಂದಿದ್ದಾರೆ.

ಜನರ ಜಾತಿಯನ್ನು ನಾವು ನಿರ್ಧರಿಸಲು ಆಗಲ್ಲ, ಮನೆಯವರು ಕೊಟ್ಟ ಜಾತಿಯನ್ನು ನಮೂದಿಸಲಾಗಿದೆ. ವರದಿ ಸಾರ್ವಜನಿಕಗೊಂಡ ನಂತರ ಚರ್ಚೆ ಮಾಡಬಹುದು. ವರದಿಯಲ್ಲಿ ತಪ್ಪಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಇದೆ. ತಪ್ಪಾಗಿದ್ದರೆ ಸರಿ ಮಾಡುತ್ತೇವೆ ಎಂದು ಸರಕಾರ ಹೇಳಿದೆ. ಶೇಕಡ 95 ಸರಿ ಇದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಏನನ್ನು ನೋಡದೆ ಇದು ವೈಜ್ಞಾನಿಕ ವರದಿ ಅಲ್ಲ ಎನ್ನಬಾರದು. ಸಿದ್ದರಾಮಯ್ಯನವರು ಕೂತುಕೊಂಡು ವರದಿ ಬರೆಸಿದ್ದಾರೆ ಎನ್ನುವುದು ಸರಿಯಲ್ಲ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಯಾ ಜಿಲ್ಲಾಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ ಎಂದಿದ್ದಾರೆ.
ಪ್ರತಿ ಹಳ್ಳಿಯಲ್ಲಿ ತರಬೇತಿಗೊಂಡ ಶಿಕ್ಷಕರು ಹೋಗಿ ಸಮೀಕ್ಷೆ ಮಾಡಿದ್ದಾರೆ. ಯಾವ ಶಿಕ್ಷಕರಿಗೂ ವೈಯಕ್ತಿಕ ಆಸಕ್ತಿ ಇರಲು ಸಾಧ್ಯವಿಲ್ಲ. ನೀಡಿರುವ ಫಾರ್ಮೆಟ್ ಅನ್ನು ತುಂಬಿಸಿಕೊಂಡು ಬಂದಿದ್ದಾರೆ ಅಷ್ಟೆ. ಇದು ಖಾಸಗಿ ಅವರು ತಯಾರಿಸಿದ ವರದಿಯಲ್ಲ. ಮೊದಲು ಸಚಿವ ಸಂಪುಟ ವರದಿ ಬಗ್ಗೆ ಚರ್ಚೆ ಮಾಡಲಿ. ನಮ್ಮ ಜಾತಿಯ ಸಂಖ್ಯೆ ಕಡಿಮೆಯಾಗಿದೆ ಎಂದು ಕೆಲವರು ಹೇಳುತ್ತಾರೆ. ರಾಜ್ಯದಿಂದ ಹೊರಗುಳಿದವರು ಈ ಲೆಕ್ಕಾಚಾರದಲ್ಲಿ ಬರಲ್ಲ. ಲಿಂಗಾಯತರು ಈ ಬಗ್ಗೆ ದೂರಿದ್ದಾರೆ. ಲಿಂಗಾಯಿತ ಎಂದು ಹೇಳುವ ಬದಲು ಹಿಂದೂ ಗಾಣಿಗ ಎಂದು ಕೆಲವರು ಕೊಟ್ಟಿದ್ದಾರೆ ಎಂದಿದ್ದಾರೆ.

ಸರ್ವೇ ಮಾಡುವಾಗ ಯಾರು ಏನು ಹೇಳಿದ್ದಾರೋ ಗೊತ್ತಿಲ್ಲ. ಅಧಿಕಾರಿಗಳಿಗೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ತಪ್ಪಿದ್ದರೆ ದೂರು ಕೊಟ್ಟು ಸರಿಪಡಿಸಬಹುದು. ಸರಿಪಡಿಸಲು ಅಧಿಕಾರಿಗಳು ಇದ್ದಾರೆ. ಈ ವರದಿ ಜಾರಿ ಮಾಡಲು ಆಗದಿದ್ದರೆ ಮರು ಸಮೀಕ್ಷೆ ಮಾಡಿ ಏನು ಪ್ರಯೋಜನ..? ಇದು ವೈಜ್ಞಾನಿಕವಾಗಿ ಆದ ವರದಿ, ಏನು ತೊಂದರೆ ಇಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸರ್ವೆಯಾಗಿದೆ. ಭಾರತ್ ಎಲೆಕ್ಟ್ರಾನಿಕ್ಸ್ ನವರು ವರದಿ ಅಪ್ಲೋಡ್ ಮಾಡಿದ್ದಾರೆ. ಅವರು ಯಾರಿಗೂ ಪಾಸ್ವರ್ಡ್ ಕೊಡುವುದಿಲ್ಲ. ಎಲ್ಲಾ ಊಹಾಪೋಹಗಳು ಚರ್ಚೆಯಾಗುತ್ತಿದೆ. ಸಚಿವ ಸಂಪುಟದಲ್ಲಿ ಮೊದಲು ಚರ್ಚೆ ಆಗಲಿ, ವರದಿ ಜಾರಿ ಆಗಬೇಕು ಎಂದು ನಾನು ಹಾರೈಸುತ್ತೇನೆ. ಜನರ ಮನಸ್ಸಿನಲ್ಲಿರುವ ಅನುಮಾನ ದೂರವಾಗಲು ವರದಿ ಸಾರ್ವಜನಿಕಗೊಳ್ಳಬೇಕು ಎಂದಿದ್ದಾರೆ.