ಮಣಿಪುರ ರಾಜ್ಯದಲ್ಲಿ ಇಬ್ಬರು ಕುಕಿ ಬುಡಕಟ್ಟು ಜನಾಂಗದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ (ಜು.28) ತಡರಾತ್ರಿ ಪ್ರಕರಣವೊಂದನ್ನು ದಾಖಲಿಸಿದೆ.
ಮಹಿಳೆಯರ ಬೆತ್ತಲೆ ಮೆರವಣಿಗೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದ ಅಣತಿಯ ಮೇರೆಗೆ ಸಿಬಿಐ ಈ ಕುರಿತು ಶುಕ್ರವಾರ ತನಿಖೆ ಆರಂಭಿಸಿತ್ತು.
ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ ಎಂದು ಕೇಂದ್ರ ಈ ವಾರದ ಆರಂಭದಲ್ಲಿ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
ರಾಜ್ಯದ ಹೊರಗೆ ವಿಚಾರಣೆ ನಡೆಸಲು ಸಿಬಿಐಗೆ ಅವಕಾಶ ನೀಡಬೇಕು ಎಂದು ಕೇಂದ್ರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತ್ತು.
ಮಣಿಪುರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಥೌಬಾಲ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಪ್ರಕರಣಕ್ಕೆ ಸಂಬಂಧಿಸಿದ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.
ಇದಕ್ಕೂ ಮುನ್ನ ಪೊಲೀಸರು ಮೇ 4 ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿದ ಘಟನೆ ಸಂಬಂಧ ವೈರಲ್ ವಿಡಿಯೊದಿಂದ ಕೃತ್ಯ ಎಸಗಿದ ಗುಂಪಿನಲ್ಲಿ 14 ಮಂದಿಯನ್ನು ಗುರುತಿಸಿದ್ದರು.
ಈ ಸುದ್ದಿ ಓದಿದ್ದೀರಾ? ಕೇರಳ | ಪೌರ ಕಾರ್ಮಿಕ ಮಹಿಳೆಯರಿಗೆ ಒಲಿದ ಅದೃಷ್ಟ ; 11 ಮಂದಿಗೆ 10 ಕೋಟಿ ರೂ. ಲಾಟರಿ
ಮಹಿಳೆರನ್ನು ಮೆರವಣಿಗೆ ನಡೆಸುವುದಕ್ಕೂ ಮುನ್ನ ಗುಂಪು ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ವರದಿಯಾಗಿದೆ.
ಜುಲೈ 19 ರಂದು ಮಣಿಪುರ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿದ 26 ಸೆಕೆಂಡುಗಳ ವಿಡಿಯೊ ವೈರಲ್ ಆಗಿತ್ತು. ಇದು ರಾಷ್ಟ್ರಾದ್ಯಂತ ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಸಂಬಂಧ ಕಂಗ್ಪೋಕ್ಪಿ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿತ್ತು.