2019-20ರಲ್ಲಿ ಕಾಂಗ್ರೆಸ್ಗಿಂತ 5 ಪಟ್ಟು ಹೆಚ್ಚು ದೇಣಿಗೆ ಪಡೆದ ಬಿಜೆಪಿ

ಬಿಜೆಪಿ ಅಧಿಕಾರಕ್ಕೇರಿದ ಬಳಿಕ ಸತತ ಏಳನೇ ವರ್ಷವೂ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷವಾದ ಹೊರಹೊಮ್ಮಿದೆ. ಅತೀ ಹೆಚ್ಚು ವೈಯಕ್ತಿಕ ಹಾಗೂ ಕಾರ್ಪೊರೇಟ್ ದೇಣಿಗೆಗಳನ್ನು ಪಡೆದವರ ಪಟ್ಟಿಯಲ್ಲಿ ತನ್ನ ನಂಬರ್ 1 ಸ್ಥಾನವನ್ನು ಕಾಯ್ದುಕೊಂಡಿದೆ.

2019-20 ಆರ್ಥಿಕ ವರ್ಷದ ಆಯವ್ಯಯವನ್ನು ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳು ಸಲ್ಲಿಸಿವೆ. ಬಿಜೆಪಿಯು ವೈಯಕ್ತಿಕವಾಗಿ ಹಾಗೂ ಕಾರ್ಪೊರೇಟ್ ಕಂಪೆನಿಗಳಿಂದ ಸುಮಾರು 750 ಕೋಟಿ ರೂ.ಗಳನ್ನು ದೇಣಿಗೆಯಾಗಿ ಪಡೆದಿದೆ. ಬಿಜೆಪಿಯ ನಂತರದ ಸ್ಥಾನದಲ್ಲಿರುವ ಕಾಂಗ್ರೆಸ್ ಬಿಜೆಪಿಗಿಂತ ಐದು ಪಟ್ಟು ಕಡಿಮೆ ಮೊತ್ತವನ್ನು ದೇಣಿಯಾಗಿ ಪಡೆದಿದೆ. ಕಾಂಗ್ರೆಸ್’ಗೆ 139 ಕೋಟಿ ರೂ., NCP ಗೆ 59 ಕೋಟಿ ರೂ. TMC ಗೆ 8 ಕೋಟಿ ರೂ. CPM ಗೆ 19.6 ಕೋಟಿ ರೂ ಹಾಗೂ CPI ಗೆ 1.9 ಕೋಟಿ ರೂ ದೇಣಿಗೆ ಕಳೆದೊಂದು ವರ್ಷದಲ್ಲಿ ಹರಿದುಬಂದಿದೆ.

ಇನ್ನು ಬಿಜೆಪಿಗೆ ದೇಣಿಗೆ ನೀಡಿರುವವರ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಹೆಸರನ್ನು ನೊಡುವುದಾದರೆ, ಬಿಜೆಪಿ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರು ನಡೆಸುತ್ತಿರುವ ಜುಪಿಟರ್ ಕ್ಯಾಪಿಟಲ್, ಐಟಿಸಿ ಗ್ರೂಪ್, ಮ್ಯಾಕ್ರೋಟೆಕ್ ಡೆವಲಪರ್ಸ್, ಬಿ ಜಿ ಶಿರ್ಕೆ ಕನ್ಸ್ಟ್ರಕ್ಷನ್ ಟೆಕ್ನಾಲಜಿ, ಪ್ರಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಮತ್ತು ಜನಕಲ್ಯಾಣ್ ಎಲಕ್ಟೋರಲ್ ಟ್ರಸ್ಟ್ ವತಿಯಿಂದ ಅತೀ ಹೆಚ್ಚು ದೇಣಿಗೆ ನೀಡಲಾಗಿದೆ.

ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ವತಿಯಿಮದ ಬಿಜೆಪಿಗೆ 217.75 ಕೋಟಿ ರೂ, ಜನಕಲ್ಯಾಣ ಎಲೆಕ್ಟೋರಲ್ ಟ್ರಸ್ಟ್ ವತಿಯಿಂದ 45.95 ಕೋಟಿ ರೂ., ಜುಪಿಟರ್ ಕ್ಯಾಪಿಟಲ್ ವತಿಯಿಂದ 15 ಕೋಟಿ ರೂ., ಲೋಧಾ ಡೆವೆಲಪರ್ಸ್ (ಈಗ ಮ್ಯಾಕ್ರೊಟೆಕ್ ಡೆವೆಲಪರ್ಸ್) ವತಿಯಿಂದ 21 ಕೋಟಿ ರೂ., ಐಟಿಸಿ ಮತ್ತು ಅದ ಸಹ ಸಂಸ್ಥೆಗಳಿಂದ 76 ಕೋಟಿ ರೂ. ಗುಲ್ಮಾರ್ಗ್ ರಿಯಾಲ್ಟರ್ಸ್ ವತಿಯಿಂದ 21 ಕೋಟಿ ರೂ. ಮತ್ತು ಬಿ ಜಿ ಶಿರ್ಕೆ ಕನ್ಸ್ಟ್ರಕ್ಷನ್ ಟೆಕ್ನಾಲಜಿ ವತಿಯಿಂದ 35 ಕೋಟಿ ರೂ. ದೇಣಿಗೆಯಾಗಿ ನೀಡಲಾಗಿದೆ.

ಎಲೆಕ್ಟೋರಲ್ ಟ್ರಸ್ಟ್ ಎಂದರೆ, ವೈಯಕ್ತಿಕವಾಗಿ ಅಥವಾ ಕಾರ್ಪೊರೇಟ್ ಕಂಪೆನಿಗಳಿಂದ ದೇಣಿಗೆಯನ್ನು ಸಂಗ್ರಹಿಸಿ ಅದನ್ನು ರಾಜಕೀಯ ಪಕ್ಷಗಳಿಗೆ ಹಂಚುವಂತಹ ಸೆಕ್ಷನ್ ೨೫ ಅಡಿಯಲ್ಲಿ ಬರುವಂತಹ ಕಂಪನಿಗಳು. ಇವು ದೇಣಿಗೆ ನೀಡುವವರ ಹೆಸರನ್ನು ಗೌಪ್ಯವಾಗಿಡುತ್ತವೆ. ಪ್ರುಡೆಂಟ್ ಟ್ರಸ್ಟ್ ನೊಂದಿಗೆ ಭಾರ್ತಿ ಎಂಟರ್ಪ್ರೈಸಸ್, ಜಿಎಂಆರ್ ಏರಪೋರ್ಟ್ ಡೆವೆಲಪರ್ಸ್ ಮತ್ತು ಡಿ ಎಲ್ ಎಫ್ ಲಿಮಿಟೆಡ್ ಕಂಪನಿಗಳು ಗುರುತಿಸಿಕೊಂಡಿದೆ. ಜನಕಲ್ಯಾಣ್ ಟ್ರಸ್ಟ್’ಗೆ ಜೆ ಎಸ್ ಡಬ್ಲ್ಯೂ ಸಂಸ್ಥೆಯು ಪ್ರಮುಖವಾಗಿ ದೇಣಿಗೆಯನ್ನು ನೀಡುತ್ತದೆ.

ಇಲ್ಲಿ ಗಮನಿಸಬೇಕಾದ ಮುಖ್ಯವಾದ ಸಂಗತಿ ಏನೆಂದರೆ, ಬಿಲ್ಡರ್ ಸುಧಾಕರ್ ಶೆಟ್ಟಿ ಎಂಬವರಿಗೆ ಸೇರಿದ ಗುಲ್ಮಾರ್ಗ್ ರಿಯಾಲ್ಟರ್ಸ್ ರೂ. ೨೦ ಕೋಟಿಯಷ್ಟು ಮೊತ್ತವನ್ನು ಅಕ್ಟೋಬರ್ 2019ರಲ್ಲಿ ದೇಣಿಗೆಯಾಗಿ ನೀಡಿದೆ. ಆದರೆ, 2020ರ ಜನವರಿಯಲ್ಲಿ ಅವರ ನಿವಾಸ ಹಾಗೂ ಕಚೇರಿಯ ಮೇಲೆ ಇಡಿ ದಾಳಿ ನಡೆಸಲಾಗಿತ್ತು.

ಇನ್ನು ಕೇವಲ ಕಾರ್ಪೊರೇಟ್ ದೇಣಿಗೆ ಮಾತ್ರವಲ್ಲದೇ, ಸುಮಾರು 14 ಶಿಕ್ಷಣ ಸಂಸ್ಥೆಗಳು ಕೂಡಾ ಬಿಜೆಪಿಯ ದೇಣಿಗೆದಾರರ ಪಟ್ಟಿಯಲ್ಲಿದೆ. ಇವರಲ್ಲಿ ಪ್ರಮುಖರೆಂದರೆ, ದೆಹಲಿಯ ಮೇವಾರ್ ಯೂನಿವರ್ಸಿಟಿ 2 ಕೋಟಿ ರೂ., ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ 10 ಲಕ್ಷ, ಗೋಯೆಂಕಾ ಇಂಟರ್ನಾಷನಲ್ ಸ್ಕೂಲ್, ಸೂರತ್ ಹಾಗೂ ಪಠಾಣಿಯಾ ಪಬ್ಲಿಕ್ ಸ್ಕೂಲ್, ರೋಹ್ಟಕ್ ತಲಾ 2.5 ಲಕ್ಷ ರೂ, ರಾಜಸ್ಥಾನದ ಕೋಟಾದಲ್ಲಿರುವ ಆ್ಯಲೆನ್ ಕೆರಿಯರ್ ನಿಂದ 25 ಲಕ್ಷ ದೇಣಿಗೆ ನೀಡಲಾಗಿದೆ.

ಇದರೊಂದಿಗೆ ಹಲವು ಪ್ರಮುಖ ರಾಜಕೀಯ ಪುಢಾರಿಗಳು ಕೂಡಾ ಬಿಜೆಪಿಗೆ ದೇಣಿಗೆ ನೀಡಿದ್ದಾರೆ. ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಅವರು 5 ಲಕ್ಷ, ರಾಜ್ಯಸಭಾ ಎಂಪಿ ರಾಜೀವ್ ಚಂದ್ರಶೇಖರ್ 2 ಕೋಟಿ, ಅರುಣಾಚಲ್ ಪ್ರದೇಶ ಸಿಎಂ ಪೆಮಾ ಖಂಡು 1.1 ಕೊಟಿ ಮತ್ತು ಕಿರಣ್ ಖೇರ್ 6.8 ಲಕ್ಷ ರೂ ದೇಣಿಗೆಯಾಗಿ ನೀಡಿದ್ದಾರೆ.

ಇದಿಷ್ಟೇ ಬಿಜೆಪಿ ದೇಣಿಗೆಯಾಗಿ ಸ್ವೀಕರಿಸಿದ ಮೊತ್ತವೆಂದು ಅಂದಾಜಿಸಿದರೆ ಅದು ತಪ್ಪು. ಈ ಪಟ್ಟಿಯಲ್ಲಿ ರೂ. 20,000ಕ್ಕಿಂತ ಹೆಚ್ಚು ಮೊತ್ತದ ದೇಣಿಗೆ ನೀಡಿದವರ ಹೆಸರು ಮಾತ್ರ ಲಭ್ಯವಿದೆ. ಇದಕ್ಕಿಂತ ಕಡಿಮೆ ಮೊತ್ತದ ದೇಣಿಗೆ ನೀಡಿದವರ ಹೆಸರನ್ನು ಬಹಿರಂಗಗೊಳಿಸುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗದ ನಿಯಮ ಹೇಳುತ್ತದೆ. ಇನ್ನುಳಿದ ಎಲ್ಲಾ ರೀತಿಯ ದೇಣಿಗೆಗಳ ಕುರಿತ ಸಮಗ್ರ ಆಯವ್ಯಯ ವರದಿಯನ್ನು ಚುನಾವಣಾ ಆಯೋಗಕ್ಕೆ ನೀಡಲು ಜೂನ್ 30ರವರೆಗೆ ಕಾಲಾವಕಾಶವಿದೆ.

ಈಗ ನೀಡಿರುವ ಲೆಕ್ಕಾಚಾರದಲ್ಲಿ ಎಲೆಕ್ಟೋರಲ್ ಬಾಂಡ್ಗಳ ಕುರಿತಾಗಿಯೂ ಮಾಹಿತಿ ನೀಡಲಾಗಿಲ್ಲ. 2018ರಲ್ಲಿ ಎಲೆಕ್ಟೋರಲ್ ಬಾಂಡ್’ಗಳನ್ನು ಜಾರಿಗೆ ತಂದ ಬಳಿಕ ಅದರ ಅತಿ ದೊಡ್ಡ ಫಲಾನುಭವಿಯಾಗಿರುವ ಪಕ್ಷವೆಂದರೆ ಅದು ಬಿಜೆಪಿ. ಎಲೆಕ್ಟೋರಲ್ ಬಾಂಡ್ ಎಂಬುದು ಭೃಷ್ಟಾಚಾರದ ಇನ್ನೊಂದು ಮುಖವೆಂಬುದು ಹಿಂದಿನಿಂದಲೂ ಕೇಳಿ ಬರುತ್ತಿರುವ ಆರೋಪ. ಜೂನ್ 30ರಂದು ಬಿಜೆಪಿ ಸಲ್ಲಿಸಲಿರುವ ಸಂಪೂರ್ಣ ಆಯವ್ಯಯದಲ್ಲಿ ಈ ಕುರಿತಾದ ಮಾಹಿತಿ ಲಭ್ಯವಾಗಲಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...