ಬ್ರೆಜಿಲ್ ಮಾರುಕಟ್ಟೆಗೆ ತನ್ನ COVID-19 ಲಸಿಕೆಯಾದ ಕೋವಾಕ್ಸಿನ್ನನ್ನು ವಿತರಿಸಲು ಪ್ರೆಸಿಸಾ ಮೆಡಿಸಿಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ LL.C ಕಂಪೆನಿಗಳೊಂದಿಗೆ ಮಾಡಿಕೊಂಡಿದ್ದ ತಿಳುವಳಿಕೆಯ ಒಪ್ಪಂದವನ್ನು ಕೊನೆಗೊಳಿಸಲಾಗಿದೆ ಎಂದು ಭಾರತ್ ಬಯೋಟೆಕ್ ಶುಕ್ರವಾರ ತಿಳಿಸಿದೆ.
20 ಮಿಲಿಯನ್ ಡೋಸ್ ಲಸಿಕೆಗಳನ್ನು ಪೂರೈಸಲು ಬ್ರೆಜಿಲ್ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದವು ವಿವಾದಕ್ಕೆ ಒಳಗಾದ ನಂತರ ಮತ್ತು ಆ ದೇಶದಲ್ಲಿ ತನಿಖೆಯು ಪ್ರಾರಂಭವಾದ ನಂತರ ಈ ಒಪ್ಪಂದವನ್ನು ಮುಕ್ತಾಯಗೊಳಿಸಲಾಯಿತು.
ಪ್ರೆಸಿಸಾ ಮೆಡಿಕಮೆಂಟೋಸ್ ಬ್ರೆಜಿಲ್ನಲ್ಲಿ ಭಾರತ್ ಬಯೋಟೆಕ್ನ ಪಾಲುದಾರರಾಗಿದ್ದು, ಪರವಾನಗಿ, ವಿತರಣೆ, ವಿಮೆ ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳ ನಿರ್ವಹಣೆಯಲ್ಲಿ ಸಹಾಯ, ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುತ್ತಿತ್ತು.
“ಕಂಪನಿಯು ಈ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ತಂದಿದೆ. ಒಪ್ಪಂದ ಮುಕ್ತಾಯದ ಹೊರತಾಗಿಯೂ, ಭಾರತ್ ಬಯೋಟೆಕ್ ಅನುಮೋದನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬ್ರೆಜಿಲ್ನ ಔಷಧ ನಿಯಂತ್ರಣ ಸಂಸ್ಥೆಯಾದ ANVISA ಯೊಂದಿಗೆ ಬದ್ಧತೆಯಿಂದ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ” ಎಂದು ಅದು ಹೇಳಿಕೊಂಡಿದೆ. ಅಲ್ಲದೆ, ಭಾರತ್ ಬಯೋಟೆಕ್ ಪ್ರತಿ ದೇಶದಲ್ಲಿ ಅನ್ವಯವಾಗುವ ಕಾನೂನು ಅವಶ್ಯಕತೆಗಳ ಪ್ರಕಾರ ವಿವಿಧ ದೇಶಗಳಲ್ಲಿ ಅನುಮೋದನೆಗಳನ್ನು ಪಡೆಯುತ್ತಿದೆ ಎಂದು ಅದು ಹೇಳಿದೆ.
ಭಾರತ್ ಬಯೋಟೆಕ್ ಬ್ರೆಜಿಲ್ನಲ್ಲಿ ಕೋವಾಕ್ಸಿನ್ ಅನ್ನು ಪರಿಚಯಿಸುವ ಉದ್ದೇಶದಿಂದ ನವೆಂಬರ್ 20 ರಂದು ಪ್ರೆಸಿಸಾ ಮೆಡಿಕಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ ಎಲ್.ಎಲ್.ಸಿ ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.
ಲಸಿಕೆಯ ಜಾಗತಿಕ ಬೆಲೆ $ 15-20ರ ನಡುವೆ ನಿಗದಿಪಡಿಸಲಾಗಿದೆ ಮತ್ತು ಅದರ ಪ್ರಕಾರ ಕೋವ್ಯಾಕ್ಸಿನ್ನನ್ನು ಬ್ರೆಜಿಲ್ ಸರ್ಕಾರಕ್ಕೆ ಪ್ರತಿ ಡೋಸ್ಗೆ $ 15 ದರದಲ್ಲಿ ನೀಡಲಾಯಿತು ಎಂದು ಭಾರತ್ ಬಯೋಟೆಕ್ ತಿಳಿಸಿದೆ.ಕಂಪನಿಯು ಯಾವುದೇ ಮುಂಗಡ ಪಾವತಿಗಳನ್ನು ಸ್ವೀಕರಿಸಿಲ್ಲ, ಅಥವಾ ಬ್ರೆಜಿಲ್ನ ಆರೋಗ್ಯ ಸಚಿವಾಲಯಕ್ಕೆ ಯಾವುದೇ ಲಸಿಕೆಗಳನ್ನು ನೀಡಿಲ್ಲ ಎಂದು ಕಂಪನಿ ತಿಳಿಸಿದೆ.
ಲಸಿಕೆ ತಯಾರಕ ತನ್ನ ಜಾಗತಿಕ ವ್ಯವಹಾರಗಳನ್ನು ಒಳಗೊಂಡಂತೆ ಅದರ ಎಲ್ಲಾ ಕಾರ್ಯಗಳನ್ನು ಸ್ಥಳೀಯ ಕಾನೂನುಗಳಿಗೆ ಅನುಗುಣವಾಗಿ ಮಾಡಲಾಗುತ್ತದೆ ಮತ್ತು ಕಂಪನಿಯು ಎಲ್ಲಾ ಸಮಯದಲ್ಲೂ ನೈತಿಕತೆ, ಸಮಗ್ರತೆ ಮತ್ತು ಅನುಸರಣೆಯ ಉನ್ನತ ಮಾನದಂಡಗಳನ್ನು ಬಳಸಿಕೊಳ್ಳುತ್ತದೆ ಮತ್ತು ಅನುಸರಿಸುತ್ತದೆ ಎಂದು ಒತ್ತಿ ಹೇಳಿದೆ.
ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಡದಿದ್ದರೂ, ವಿಶ್ವ ಆರೋಗ್ಯ ಸಂಸ್ಥೆ ಕೊವ್ಯಾಕ್ಸಿನ್ಗೆ ಅನುಮೋದನೆ ನೀಡದಿದ್ದರೂ ಬ್ರೆಜಿಲ್ ಸರ್ಕಾರ ಕುದ್ದು ಮುಂದೆ ನಿಂತು ಕೊವ್ಯಾಕ್ಸಿನ್ಗೆ ಹಸಿರು ನಿಶಾನೆ ತೋರಿಸಿತ್ತು. ಇದರ ಹಿಂದೆ ವ್ಯಾಪಕ ಭ್ರಷ್ಟಾಚಾರ ಇದೆ ಎಂದು ಅಲ್ಲಿನ ಜನತೆ ಬೀದಿಗಿಳಿದಿದ್ದರು. ಅಲ್ಲದೆ ಪೂರೈಸಬೇಕಾಗಿದ್ದ ಲಸಿಕೆಯನ್ನು ಇನ್ನೂ ಪೂರೈಸಿಲ್ಲ ಎಂದೂ ವಿವಾದವಾಗಿತ್ತು. ಈಗ ಕೊವ್ಯಾಕ್ಸಿನ್ ಉತ್ಪಾದಕರಾದ ಭಾರತ್ ಬಯೋಟೆಕ್ ತನ್ನ ಬ್ರೆಜಿಲ್ ಪಾಲುದಾರರೊಂದಿಗೆ ಒಪ್ಪಂದ ಕೊನೆಗೊಳಿಸಿದ್ದು ಇನ್ನಾದರೂ ವಿವಾದ ತಣ್ಣಗಾಗುತ್ತದಾ ಎಂದು ಕಾದು ನೋಡಬೇಕು.