ಸುಮಾರು 1.8 ಕೋಟಿ ಜನಸಂಖ್ಯೆ ಇರುವ ಬೆಂಗಳೂರು ವಿಶ್ವದಲ್ಲೇ ಸುರಕ್ಷಿತ ನಗರಗಳಲ್ಲೊಂದು ಎಂಬ ಗರಿಮೆ ಹೊಂದಿದೆ. ಯಾವುದೇ ಹಳ್ಳಿಯಿಂದ, ಪಟ್ಟಣದಿಂದ ಬದುಕನ್ನು ಅರಸುತ್ತಾ ಬಂದವರಿಗೆ ಬೆಂಗಳೂರು ಮೋಸ ಮಾಡಿಲ್ಲ ಎಂಬೊಂದು ಮಾತಿದೆ. ವೃತ್ತಿಯೋ, ದುಡ್ಡೋ ಅಥವಾ ಬದುಕಿನ ಪಾಠವೋ ಬೆಂಗಳೂರು ಏನಾದರೊಂದನ್ನು ಕೊಟ್ಟೇ ಕೊಡುತ್ತದೆ. ಹಾಗಾಗಿ ಬೆಂಗಳೂರಿನಿಂದ ಬರಿದಾಗಿ ಹೋಗುವವರು ಬೆರಳೆಣಿಕೆ ಮಂದಿಯಷ್ಟೇ ಎಂಬ ನಂಬುಗೆಯೊಂದಿದೆ. ಈ ನಂಬಿಕೆಯೇ, ಮೆಜೆಸ್ಟಿಕ್‌ಗೆ ದಿನಾ ಬೆಳಗ್ಗೆ ಬಂದು ತಲುಪುವ ಬಸ್ಸುಗಳಲ್ಲಿ ಕಿಕ್ಕಿರಿದ ಕಣ್ಣುಗಳಲ್ಲಿ ತುಂಬಿರುತ್ತವೆ.
ಬೆಂಗಳೂರಿಗೆ ಹಲವು ವಿಶೇಷಗಳಿವೆ. ಉದ್ಯಾನನಗರಿ, ನಿವೃತ್ತರ ಸ್ವರ್ಗ ಎಂದೆಲ್ಲಾ ಕರೆಸಿಕೊಂಡ ಬೆಂಗಳೂರು ಸದ್ಯ ವಿಪರೀತವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ ಈ ಹೆಸರುಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಸಿಲಿಕಾನ್ ವ್ಯಾಲಿ ಎಂದು ರಂಜನೀಯವಾಗಿ ಕರೆಯಲ್ಪಡುವ ಬೆಂಗಳೂರಿನ ಒಡಲಿನಲ್ಲಿ ʼಮೆಟ್ರೋʼ ವೇಗದಲ್ಲಿ ತಲೆಯೆತ್ತುತ್ತಿರುವ ಕಟ್ಟಡಗಳು ಬೆಂದಕಾಳೂರಿನ ಭವ್ಯ ಇತಿಹಾಸವನ್ನು ಗಿಜಿಗುಟ್ಟುವ ತರಾತುರಿಯ ನಡುವೆಯೂ ಬಚ್ಚಿಟ್ಟುಕೊಂಡಿದೆ.

15 ನೇ ಶತಮಾನದಲ್ಲಿ ಕೆಂಪೇಗೌಡ ಎಂಬ ಅಪ್ರತಿಮ ಕನಸುಗಾರ ಪಕ್ಕಾ ಯೋಜನೆಗಳೊಂದಿಗೆ ಕಟ್ಟಿದ ಬೆಂಗಳೂರು ಎಂಬ ನಗರಕ್ಕೆ 5 ಶತಮಾನದ ಇತಿಹಾಸಗಳು ಮಾತ್ರ ಇರುವುದಿಲ್ಲ. ಚರಿತ್ರೆಯ ತಂತುಗಳು ಬೆಂಗಳೂರಿನಲ್ಲಿ ಇನ್ನೂ ಆಳಕ್ಕೆ ತನ್ನ ಬೇರುಗಳನ್ನು ಇಳಿಸಿವೆ. ಬೆಂಗಳೂರು ಪುರಾತನ ಕುರುಹುಗಳಿಗೆ ಅಂಟಿಕೊಂಡಿರುವುದಿಲ್ಲ, ಹೊಸತನಗಳಿಗೆ ತನ್ನನ್ನು ತಾನು ತೆರೆಯುತ್ತಾ.. ತನ್ನ ಎದೆ ಹರವನ್ನು ವಿಶಾಲವಾಗಿ ಹರಡುತ್ತಿದೆ. ತನ್ನನ್ನರಸಿ, ನಂಬಿ ಬರುವ ಕಂದಮ್ಮಗಳನ್ನು ಅಪ್ಪಿಕೊಳ್ಳಲು ಕೈ ಚಾಚುವ ತಾಯಿಯಂತೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ, ಬಂದಷ್ಟು ಜನರನ್ನೂ ಕಿಸಕ್ಕೆನ್ನದೆ ಸಹಿಸಿ ಸಾಕುತ್ತಿದೆ, “ಬನ್ನಿ ಮಕ್ಕಳಾ ನನ್ನ ಮಡಿಲು ಇನ್ನಷ್ಟು ವಿಶಾಲವಿದೆಯೆಂದು” ತೊಡೆ ಚಾಚಿ ಕರೆದುಕೊಳ್ಳುತ್ತಿದೆ.
ಬಹುಷ, ಬೆಂಗಳೂರಿನ ತಾಯಿಗುಣಕ್ಕೆ ಈ ಊರಿಗೆ ಬೆಂದಕಾಳೂರು ಎಂಬ ಹೆಸರು ಬರಲು ಕಾರಣವಾದಳೆಂದು ನಂಬುವ ಆ ಮಹಾತಾಯಿಯ ವಾತ್ಸಲ್ಯ ಕಾರಣವಿದ್ದಿರಬಹುದು. ಆಕೆಯ ಮಮತೆ ಈ ಮಣ್ಣಿನಲ್ಲಿ ಬೆರೆತು, ಹಸಿವು ನೀಗಿಸಲು ಪಡಿಪಾಟೀಲು ಪಡುತ್ತಿರಬೇಕು. ಈಗ ಹೇಳುತ್ತಿರುವ ತಾಯಿಗೂ ಬೆಂಗಳೂರೆಂಬ ತಾಯಿಗೂ ಒಂದು ಅಂತರ್ಗತ ಸಂಬಂಧವಿದೆಯೆಂದು ಜಾನಪದ ನಂಬಿಕೆಯಿದೆ.
ಬೆಂದ ಕಾಳು ಕೊಟ್ಟು ಬೆಂದಕಾಳೂರು:
ಬೆಂಗಳೂರು ಒಂದು ಊರಾಗಿ, ಊರು ಪಟ್ಟಣವಾಗಿ, ಪಟ್ಟಣ ನಗರವಾಗಿ, ನಗರ ಮಹಾನಗರವಾಗುವ ಮೊದಲು ಕಾಡಾಗಿತ್ತು ಎಂದು ಹೇಳಿದರೆ, ಈಗಿನ ಬೆಂಗಳೂರು ನೋಡಿದವರಿಗೆ ನಂಬಲು ಕಷ್ಟವಾಗಿದ್ದೀತು. ಹೌದು. ಬೆಂಗಳೂರು ಒಂದು ದೊಡ್ಡ ಕಾಡಾಗಿತ್ತು.
ಅದು 13 ನೆಯ ಶತಮಾನ. ಹೊಯ್ಸಳರ ಆಡಳಿತದ ಕಾಲ. ಒಂದೊಮ್ಮೆ ಹೊಯ್ಸಳ ರಾಜ ವೀರ ಬಲ್ಲಾಳ II, ತನ್ನ ಬೇಟೆಗೆಂದು ಅಂದು ಕಾಡಾಗಿದ್ದ ಇಂದಿನ ಬೆಂಗಳೂರಿನಲ್ಲಿ ಎಡೆಬಿಡದೆ ಅಲೆದಾಡುತ್ತಿದ್ದರು. ಹೀಗೆ ಒಂದು ಸಲ ಬೇಟೆಗೆಂದು ಬಂದ ರಾಜರಿಗೆ ದಾರಿ ತಪ್ಪಿ, ಇನ್ನಷ್ಟು ಅಲೆದಾಡಿ ಮತ್ತಷ್ಟು ಬಸವಳಿದಾಗ ಚೇತರಿಕೆ ನೀಡಿದ್ದು ಕಾಡಿನಲ್ಲಿ ವಾಸಿಸುತ್ತಿದ್ದ ಅಜ್ಜಿಯೊಬ್ಬಳ ಬೇಯಿಸಿದ ಹುರುಳಿ ಮತ್ತು ಬೊಗಸೆ ನೀರು. ಮುಂದೆ ಇದುವೇ ಈ ಕಾಡಿಗೆ ಬೆಂದಕಾಳೂರೆಂದು ಆ ಬಳಿಕ ಅಪಭ್ರಂಶಗೊಂಡು ಬೆಂಗಳೂರೆಂದು ಹೆಸರು ಬರಲು ಕಾರಣವಾಯಿತು. ಅಜ್ಜಿಯ ಆತ್ಮೀಯ ಉಪಚಾರದೊಂದಿಗೆ ಚೇತರಿಸಿದ ರಾಜ, ಅವಳ ನೆನಪಾಗಿ ಈ ಕಾಡಿಗೆ ಬೆಂದ+ಕಾಳು+ಊರು ಎಂಬ ಹೆಸರಿಟ್ಟ ಎನ್ನುವುದು ಪ್ರತೀತಿ. ಬೆಂದಕಾಳೂರು ಎಂಬ ಹೆಸರು ಹೇಗೆ ಬಂತು ಎಂದರೆ ಹೆಚ್ಚು ಚಾಲ್ತಿಯಲ್ಲಿರುವ ಕತೆ ಇದು.

ಇದೊಂದು ಚಾರಿತ್ರಿಕ ಘಟನೆಯಾಗಿ ಎಲ್ಲೂ ಉಲ್ಲೇಖವಾಗದ ಆದರೆ ಜಾನಪದ ಬಳುವಳಿಯಾಗಿ ಬಂದಿರುವ ಒಂದು ವಾದ. ಇತಿಹಾಸ ಸಂಶೋಧಕರು ಜಾನಪದಗಳನ್ನು ಮತ್ತು ಇತಿಹಾಸವನ್ನು ಬೆರೆಸಿ ನೋಡುವುದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಗು ಈ ಕತೆಗೆ ಐತಿಹಾಸಿಕ ಪುರಾವೆಗಳು ಸಿಗುವುದಿಲ್ಲದ್ದರಿಂದ ಇದು ಜಾನಪದ ನಂಬುಗೆಯಾಗಿಯೇ ಉಳಿದಿದೆ.
ಇನ್ನೊಂದು ವಾದದ ಪ್ರಕಾರ, ಬಳೆಪೇಟೆ, ನಾಗರಪೇಟೆ, ಚಿಕ್ಕಪೇಟೆ ಮೊದಲಾದ ಪ್ರದೇಶಗಳಲ್ಲಿ ಕಂಡುಬಂದ ಬಿಳಿ ಕಲ್ಲಿನಿಂದಾಗಿ ಇಲ್ಲಿಗೆ ಬಿಳಿಯ ಕಲ್ಲಿನ ಊರು ಎಂಬ ಹೆಸರು ಬಂತು. ಕ್ರಮೇಣ ಅದು ಬೆಂಗಳೂರಾಗಿ ಮಾರ್ಪಾಡುಗೊಂಡಿತು ಎನ್ನುವುದು. ಈ ವಾದವನ್ನು ಮಂಡಿಸಿದವರು ಸಂಶೋಧಕ ಚಿದಾನಂದ ಮೂರ್ತಿ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಉಲ್ಲೇಖಿಸಿದೆ.
ಆ ವರದಿಯಲ್ಲಿ ಬೆಂಗಳೂರಿಗೆ ಬೆಂದಕಾಳೂರು ಎಂಬ ಹೆಸರು ಬರಲು ಕಾರಣವಾದ ಅಂಶಗಳ ಕುರಿತು ಇತಿಹಾಸ ತಜ್ಞರು ಏನು ಹೇಳುತ್ತಾರೆಂದು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ.
ಹೊಯ್ಸಳರ ಕಾಲದಲ್ಲಿ ರಾಜಮನೆತನದ ಬೆಂಗಾವಲು ಪಡೆ ಈ ಪ್ರದೇಶದಲ್ಲಿ ವಾಸವಿದ್ದುದರಿಂದ ಇದು “ಬೆಂಗಾವಲರ ಊರಾಗಿ” ಬಳಿಕ ಬೆಂಗಳೂರು ಆಯಿತೆಂದೂ ಹೇಳಲಾಗುತ್ತಿದೆ. ಇದು ಕೂಡಾ ಪ್ರಬಲ ಐತಿಹಾಸಿಕ ಪುರಾವೆಗಳಿಲ್ಲದ ಜಾನಪದ ನಂಬಿಕೆ.
ಅಷ್ಟಕ್ಕೇ ನಿಲ್ಲುವುದಿಲ್ಲ, ಬೆಂಗಳೂರಿನ ಕುರಿತು ಹುಟ್ಟಿಕೊಂಡಿರುವ ವಾದಗಳು. ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ವೆಂಕಟನಾಥ ಅಥವಾ ವೆಂಕಟೇಶ್ವರನ ನಂಬುವವರು ದೊಡ್ಡ ಸಂಖ್ಯೆಯಲ್ಲಿದ್ದರು. ಹಾಗಾಗಿ ಇದು ವೆಂಕನನೂರು ಎಂಬ ಹೆಸರು ಹೊಂದಿತ್ತು, ಕ್ರಮೇಣ ಬೆಂಗಳೂರೆಂಬ ಹೆಸರಾಗಿ ಹೊರಳಿಕೊಂಡಿತು ಎಂಬುವುದು ನನ್ನ ನಂಬುಗೆ ಎಂದವರು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR)ಯ ನಿರ್ದೇಶಕ ಎಸ್‌ಕೆ ಅರುಣಿ.

ಇನ್ನು ʼಇತಿಹಾಸ ದರ್ಪಣʼ ಎಡಿಟರ್, ಪ್ರಾಜ್ಞ ರಾಜೇಶ್ ಹೆಚ್‌ಜಿ ಪ್ರಕಾರ, ಇಲ್ಲಿ ಹೇರಳವಾಗಿದ್ದ ʼಬೆಂಗʼ ಮರದಿಂದಾಗಿಯೇ ʼಬೆಂಗನೂರುʼ ಎಂಬ ಹೆಸರು ಬಂತು. ಇದು ಬೆಂಗಳೂರಾಗಿ ಬದಲಾಯಿತು.
ಆದರೆ, ಬೆಂಗಳೂರು ಹೆಸರಿನ ಐತಿಹಾಸಿಕ ಜಾಡು ಹಿಡಿದು ಹೊರಟರೆ ವಾಸ್ತವಕ್ಕೆ ಹತ್ತಿರವಾಗಿ ನಿಲ್ಲುವ ನಿರೂಪಣೆಯೊಂದಿದೆ. ಇದನ್ನು ಪ್ರತಿಪಾದಿಸಿದವರು ಇತಿಹಾಸ ತಜ್ಞ ಸುರೇಶ್ ಮೂನ. ಅವರ ಪ್ರಕಾರ, ಬೆಂಗಳೂರು ಎನ್ನುವುದು ಬೇರೆಯದೇ ಒಂದು ಊರಿತ್ತು. ಹಳೆ ಬೆಂಗಳೂರು ಎಂದು ಕರೆಯಲ್ಪಡುವ ಇಲ್ಲಿಯೇ ನೂತನ ಬೆಂಗಳೂರಿನ ಶಿಲ್ಪಿ ಕೆಂಪೇಗೌಡರ ತಾಯಿ ಜನಿಸಿದರು. ಬೆಂಗಳೂರು ಕಟ್ಟಬೇಕಾದರೆ ಬೆಂಗಳೂರಿಗೆ ತನ್ನ ತಾಯಿ ಜನಿಸಿದ ಊರ ಹೆಸರನ್ನೇ ಕೆಂಪೇಗೌಡರು ಇಟ್ಟರು ಎನ್ನುವುದು. ಅದನ್ನು ಹಿಂದುಸ್ತಾನ್ ಟೈಮ್ಸ್ ಹಾಗೆಯೇ ವರದಿ ಮಾಡಿದೆ.
ಕ್ರಿಸ್ತ ಶಕ 800 ಕ್ಕೂ ಮೊದಲೇ ಬೆಂಗಳೂರು ಎಂಬ ನಗರವೊಂದು ಅಸ್ತಿತ್ವದಲ್ಲಿದ್ದು, ಅದರ ಉಲ್ಲೇಖ ಕ್ರಿ.ಶ 890ರಲ್ಲಿ ಕೆತ್ತಲ್ಪಟ್ಟಿರುವ ವೀರಗಲ್ಲಿನಲ್ಲಿದೆ. ಈ ವೀರಗಲ್ಲು ಬೆಂಗಳೂರಿನ ಕದನದ ಕುರಿತಾಗಿ ಕೆತ್ತಲಾಗಿದ್ದು, ಅದರಲ್ಲಿ ಆಗಿನ 10 ಹಳ್ಳಿಗಳ ಹೆಸರು ಉಲ್ಲೇಖಿಸಲಾಗಿದೆ. ಬೆಂಗಳೂರಿನ ಹೆಸರು ಅದರಲ್ಲಿ ಇದೆ. ಹಾಗಾಗಿ, ಐತಿಹಾಸಿಕ ಪುರಾವೆಗಳೊಂದಿಗೆ ಈ ವಾದ ವಾಸ್ತವಕ್ಕೆ ಹೆಚ್ಚು ಹತ್ತಿರದಲ್ಲಿ ನಿಲ್ಲುತ್ತದೆ.
ಒಟ್ಟಾರೆ, ಜಾನಪದಗಳಿಗೆ ವ್ಯತಿರಿಕ್ತವಾಗಿ ಬೆಂಗಳೂರು ಹೆಸರಿನ ಇತಿಹಾಸವನ್ನು ಇತಿಹಾಸಕಾರರು ಪ್ರತಿಪಾದಿಸುತ್ತಾರೆ. ಇತಿಹಾಸ ಪುರಾವೆಗಳನ್ನು ಎದುರು ನೋಡುತ್ತದೆ. ಭಾವುಕತೆಗಳಿಗೆ ಅಲ್ಲಿ ಜಾಗವಿಲ್ಲ. ಅಲ್ಲಿ ಏನಿದ್ದರೂ ಸಾಕ್ಷಿ ಬೇಕು. ನಂಬ ತಕ್ಕಂತಹ ಪುರಾವೆಗಳು ಬೇಕು.
ಏನೇ ಇರಲಿ. ಹಸಿವು ನೀಗಿಸಿದ ಬೆಂದ ಕಾಳಿನಿಂದಾಗಿ ಬೆಂದಕಾಳೂರೆಂಬ ಹೆಸರು ಬಂತು ಎನ್ನುವುದು ಬೆಂಗಳೂರಿನ ಸಲಹುವ ಗುಣಕ್ಕೆ ಹೆಚ್ಚು ಆಪ್ತವಾಗಿದ್ದಂತೆ ಕಾಣುತ್ತದೆ. ಅಜ್ಜಿಯ ಮಮತೆಗೆ ಕಣ್ತಪ್ಪಿನಿಂದ ಹಸಿದ ಮಕ್ಕಳು ಇದ್ದರೂ, ಬಹುತೇಕರ ಹೊಟ್ಟೆ ಹೊರೆಯಲು ಬಸವಳಿದರೂ ಬಸವಳಿಯದಂತೆ ಬೆಂಗಳೂರೆಂಬ ಮಹಾ ಅಜ್ಜಿ ತನ್ನ ಮಡಿಲು ಚಾಚುತ್ತಲೇ ಇದ್ದಾಳೆ. ತೋಳುಗಳನ್ನು ವಿಶಾಲಗೊಳಿಸುತ್ತಾಳೆ ಇದ್ದಾಳೆ.