ಬೆಡ್ ಬ್ಲಾಕಿಂಗ್ ಹಗರಣದ ಹುಯಿಲಿನ ಹಿಂದೆ ಇತ್ತೆ ಐಸ್ಪಿರಿಟ್ ಲಾಬಿ!

ಸಂಸದ ತೇಜಸ್ವಿ ಸೂರ್ಯ ಅವರ ‘ಬೆಡ್ ಬ್ಲಾಕಿಂಗ್’ ಸರ್ಜಿಕಲ್ ದಾಳಿ, ಸಂಪೂರ್ಣ ತಿರುಗುಬಾಣವಾಗಿದೆ.

ಒಂದು ಕಡೆ ಕರೋನಾದಂತಹ ಮಾನವೀಯ ಬಿಕ್ಕಟ್ಟಿನ ಹೊತ್ತಲ್ಲಿ, ರಾಜ್ಯಾದಂತ ಸಾವಿರಾರು ಜನ ಹಾದಿಬೀದಿಯ ಹೆಣವಾಗುತ್ತಿರುವ ಹೊತ್ತಲ್ಲಿ, ಜನರ ಜೀವ ಉಳಿಸುವಲ್ಲಿ ಹೆಜ್ಜೆ ಹೆಜ್ಜೆಗೂ ಎಡವಿರುವ, ಈಗಲೂ ಕೋವಿಡ್ ಚಿಕಿತ್ಸೆ ಪ್ಯಾಕೇಜ್ ಬೆಲೆ ಏರಿಕೆಯಿಂದ, ಕೇಂದ್ರದ ಮುಂದೆ ಆಮ್ಲಜನಕ ಹಂಚಿಕೆಯ ಪಾಲು ಕೇಳದೇ ಮುಗ್ಗುಮ್ಮಾಗಿರುವವರೆಗೆ ಪ್ರತಿ ಹಂತದಲ್ಲೂ ಜನವಿರೋಧಿ ನಿಲುವುಗಳನ್ನೇ ತಳೆಯುತ್ತಿರುವ ತಮ್ಮದೇ ಪಕ್ಷದ ಸರ್ಕಾರವನ್ನು ಪ್ರಶ್ನಿಸುವ ಬದಲು, ಒಬ್ಬ ಸಂಸದನಾಗಿ ಕೋವಿಡ್ ವಾರ್ ರೂಂ ನೌಕರರ ಮೇಲೆ ಕೊಳಕುಮಂಡಲದ ರೀತಿ ಕೋಮು ವಿಷ ಕಾರಿಕೊಂಡು ಯುವ ಸಂಸದರು ಬೆತ್ತಲಾಗಿದ್ದಾರೆ.

ಮತ್ತೊಂದು ಕಡೆ,  ಸಾಮಾಜಿಕ ಜಾಲತಾಣಗಳಲ್ಲಿ, ರಾಷ್ಟ್ರ –ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಇಡೀ ಬೆಡ್ ಬ್ಲಾಕಿಂಗ್ ಹಗರಣದ ಹಿಂದೆ ಇರುವುದು ಅದೇ ತೇಜಸ್ವಿ ಸೂರ್ಯ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಠಳಾಯಿಸಿದ್ದ ಅವರದೇ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮತ್ತು ಅವರ ಆಪ್ತ ಸಹಾಯಕರೇ ಎಂಬುದು ಜಗಜ್ಜಾಹೀರಾಗುತ್ತಲೇ ದಿಢೀರ್ ಉಲ್ಟಾ ಹೊಡೆಯಲಾಗಿದೆ. ಬಹಿರಂಗವಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 17 ಮಂದಿ ವಾರ್ ರೂಂ ಸಿಬ್ಬಂದಿಯನ್ನು ಭಯೋತ್ಪಾದಕರು ಎಂದೆಲ್ಲಾ ನಿಂದಿಸಿದ ತೇಜಸ್ವಿ, ಮಾರನೇ ದಿನ ಖಾಸಗಿಯಾಗಿ ಅವರನ್ನು ಭೇಟಿಯಾಗಿ ಕ್ಷಮೆ ಕೇಳಿರುವ ಸಂಗತಿ ಇದೀಗ ಬಯಲಾಗಿದೆ.

ಇಡೀ ಈ ಪ್ರಕರಣದಲ್ಲಿ ಬಿಜೆಪಿ ಯುವ ಸಂಸದ ಮತ್ತು ಇತರೆ ನಾಯಕರ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ವಾರ್ ರೂಂನಲ್ಲಿ 200ಕ್ಕೂ ಅಧಿಕ ವಿವಿಧ ಧರ್ಮಕ್ಕೆ ಸೇರಿದ ಸಿಬ್ಬಂದಿ ಇದ್ದರೂ, ಕೇವಲ 17 ಮಂದಿ ಮುಸ್ಲಿಮರ ಹೆಸರು ಮಾತ್ರ ಹೇಳಿ ಹೇಯ ವರ್ತನೆ ತೋರಿದ ತೇಜಸ್ವಿ ಸೂರ್ಯ ಪ್ರತಿನಿಧಿಸುವ ಪಕ್ಷ ಮತ್ತು ಸಿದ್ಧಾಂತ ಮಾನವ ಕುಲಕ್ಕೇ ಕಂಟಕ ಎಂಬ ಕಟು ಟೀಕೆಗಳು ವ್ಯಕ್ತವಾಗಿವೆ. ಹಾಗೇ ಆಮ್ಲಜನಕ ಕೊರತೆಯಿಂದ 28 ಜನ ಸಾವು ಕಂಡ ಚಾಮರಾಜನಗರದ ಪ್ರಕರಣದಿಂದ ಜನರ ಗಮನವನ್ನು ಬೇರೆಡೆ ಸೆಳೆದು ಬಿಜೆಪಿ ಸರ್ಕಾರ, ಮುಖ್ಯವಾಗಿ ಸ್ವಜಾತಿಯ ಸಚಿವ ಸುರೇಶ್ ಕುಮಾರ್ ಅವರನ್ನು ಪಾರು ಮಾಡಲು ಆರ್ ಎಸ್ ಎಸ್ ನಾಯಕರು ಹೆಣೆದ ತಂತ್ರದ ದಾಳವಾಗಿ ಈ ಯುವ ಸಂಸದರು ರಂಗ ಪ್ರವೇಶ ಮಾಡಿದರು ಎಂಬ ಮಾತೂ ಕೇಳಿಬಂದಿದೆ. ಜೊತೆಗೆ ಬಿ ಎಸ್ ಯಡಿಯೂರಪ್ಪ ಆಡಳಿತದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ಉದ್ದೇಶದಿಂದಲೇ ಅವರ ವಿರೋಧಿ ಬಿ ಎಲ್ ಸಂತೋಷ್ ಬಣ ಹೆಣೆದ ತಂತ್ರ ಇದು ಎಂಬ ವ್ಯಾಖ್ಯಾನವೂ ಇದೆ.

ಆದರೆ, ಈ ಎಲ್ಲಾ ಆಯಾಮಗಳಿಗಿಂತ ಕುತೂಹಲಕಾರಿಯಾದ ಮತ್ತೊಂದು ಆಯಾಮವೆಂದರೆ; ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಸತೀಶ್ ರಡ್ಡಿ ಸೇರಿದಂತೆ ಸಂಸದರ ಆಪ್ತರೇ ಕಿಂಗ್ ಪಿನ್ ಗಳಾಗಿದ್ದರು. ಆದರೆ, ಒಂದು ಹಂತದಲ್ಲಿ ಆ ಹಗರಣದ ವಿವರಗಳನ್ನು ಅಧಿಕಾರಿಗಳು ಲೀಕ್ ಮಾಡುವ ಮೂಲಕ ಅಕ್ರಮವನ್ನು ಬಯಲುಮಾಡುವ ಯತ್ನ ನಡೆಸಿದ ಸುಳಿವು ಸಿಗುತ್ತಲೇ ಸ್ವತಃ ತಾವೇ ದಾಳಿ ನಡೆಸಿ ಇಡೀ ಪ್ರಕರಣವನ್ನು ತಿರುವುಮುರುವು ಮಾಡುವ ಷಢ್ಯಂತ್ರದ ಭಾಗವಾಗಿ ತೇಜಸ್ವಿ ರಂಗ ಪ್ರವೇಶ ಮಾಡಿದರು ಎಂಬುದು. ಈ ವಾದಕ್ಕೆ ಪೂರಕವಾಗಿ ಸ್ವತಃ ಸತೀಶ್ ರೆಡ್ಡಿಯೇ ಬೆಡ್ ಬ್ಲಾಕಿಂಗ್ ಕೃತ್ಯದಲ್ಲಿ ತಮ್ಮ ಆಪ್ತ ಸಹಾಯಕ ಮೂಲಕ ತೊಡಗಿದ್ದರು ಎಂಬ ವಿವರಗಳನ್ನು ಮುಖ್ಯವಾಹಿನಿ ಪತ್ರಿಕೆಗಳು ಬಯಲು ಮಾಡಿವೆ.

ಹೀಗೆ ಇಡೀ ಪ್ರಕರಣ ತಿರುಗುಬಾಣವಾಗುತ್ತಲೇ ಸಂಸದ ತೇಜಸ್ವಿ ಸೂರ್ಯ ತನ್ನ ಆರೋಪದ ಆಧಾರದ ಮೇಲೆ ಯಾವ ತನಿಖೆಯೂ ಇಲ್ಲದೆ ವಜಾಗೊಂಡಿದ್ದ ನೌಕರರನ್ನು ಖಾಸಗಿಯಾಗಿ ಭೇಟಿಯಾಗಿ ಕ್ಷಮೆಯಾಚಿಸಿ ತೇಪೆ ಹಚ್ಚಲು ಯತ್ನಿಸಿದ್ದಾರೆ. ಆ ಮಾಹಿತಿ ಕೂಡ ಮಾಧ್ಯಮಗಳ ಮೂಲಕ ಬಹಿರಂಗವಾಗುತ್ತಲೇ ಆ ಕುರಿತ ವರದಿ ಮಾಡಿದ ದ ನ್ಯೂಸ್ ಮಿನಿಟ್ ಜಾಲತಾಣದ ವಿರುದ್ಧ ಫೇಕ್ ನ್ಯೂಸ್ ಆರೋಪ ಮಾಡಿ ಅದನ್ನೂ ಮರೆಮಾಚುವ ಯತ್ನ ನಡೆಯಿತು. ಆದರೆ, ದ ನ್ಯೂಸ್ ಮಿನಿಟ್ ಸಂಪಾದಕಿ ಧನ್ಯಾ ರಾಜೇಂದ್ರನ್, ನೇರವಾಗಿ ತೇಜಸ್ವಿ ಸೂರ್ಯ ಅವರ ಫೇಕ್ ನ್ಯೂಸ್ ಆರೋಪದ ಟ್ವೀಟ್ ಗೆ ಪ್ರತಿಕ್ರಿಯಿಸಿ, ಕ್ಷಮೆಯಾಚನೆಯ ವರದಿ ಸುಳ್ಳಲ್ಲ. ಸವಾಲು ಹಾಕಿದರೆ, ಅದರ ಸಂಪೂರ್ಣ ಆಡಿಯೋ ಬಹಿರಂಗಪಡಿಸುವುದಾಗಿ ಸವಾಲು ಹಾಕಿದ ಬಳಿಕ ಬಾಲಸುಟ್ಟ ಬೆಕ್ಕಿನಂತೆ ಸಂಸದರು ತಣ್ಣಗಾಗಿದ್ದಾರೆ.

ಈ ನಡುವೆ, ಮತ್ತೊಂದು ಕುತೂಹಲಕಾರಿ ಸಂಗತಿ ಬಯಲಾಗಿದ್ದು, ಬೆಡ್ ಬುಕಿಂಗ್ ಸೇರಿದಂತೆ ಬಿಬಿಎಂಪಿಯ ಕೋವಿಡ್ ನಿರ್ವಹಣೆ ಸಂಬಂಧದ ಡಿಜಿಟಲ್ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಈಗಿರುವ ವ್ಯವಸ್ಥೆಗೆ ಬದಲಾಗಿ ‘ಐಸ್ಪಿರಿಟ್’ ಎಂಬ ಡಿಜಿಟಲ್ ನೆರವು ಸಂಸ್ಥೆಗೆ ವಹಿಸಿಕೊಡಲು ಈ ಪ್ರಕರಣವನ್ನು ದಾಳವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಈ ದಾಳಿ ನಡೆದಿದೆ. ಈಗಿರುವ ಬಿಬಿಎಂಪಿ ವ್ಯವಸ್ಥೆಯಲ್ಲಿ ಲೋಪವಿದೆ, ಅದರಿಂದಾಗಿ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಬಿಂಬಿಸಿ, ಇಡೀ ಕೋವಿಡ್ ಸಂಬಂಧಿತ ಆ್ಯಪ್, ಡಿಜಿಟಲ್ ಕೆಲಸ ಕಾರ್ಯಗಳನ್ನು ತಮ್ಮ ಆಪ್ತರ ಆ ಸಂಸ್ಥೆಗೆ ವಹಿಸಿಕೊಡುವ ಲಾಭಿಯ ಭಾಗವಾಗಿ ಸಂಸದರು ಈ ದಾಳಿಯನ್ನು ಹೆಣೆದಿದ್ದರು. ಆದರೆ, ಇದೀಗ ಇಡೀ ಪ್ರಕರಣದ ಹಲವು ರೀತಿಯಲ್ಲಿ ತಿರುಗುಬಾಣವಾಗುತ್ತಿರುವುದರಿಂದ, ಸ್ವತಃ ರಾಜ್ಯ ಮತ್ತು ಕೇಂದ್ರ ಬಿಜೆಪಿಯಲ್ಲೇ ಸಂಸದರ ಕೃತ್ಯದ ಬಗ್ಗೆ ಅಸಮಾಧಾನವೆದ್ದಿದೆ. ಹಾಗಾಗಿ ಈ ಉದ್ದೇಶ ಕೂಡ ಈಡೇರುವಂತೆ ತೋರುತ್ತಿಲ್ಲ ಎಂಬುದು ಬಿಬಿಎಂಪಿಯ ಬಿಜೆಪಿ ವಲಯದಲ್ಲೇ ಕೇಳಿಬರುತ್ತಿರುವ ಮಾತು!

ಹಾಗಾಗಿ, ಸದ್ಯಕ್ಕಂತೂ ಬಿಬಿಎಂಪಿ ವಾರ್ ರೂಂ ವಿರುದ್ಧ, ಒಂದೇ ಏಟಿಗೆ ಹತ್ತಾರು ಹಣ್ಣು ಕೆಡವುವ ಲೆಕ್ಕಾಚಾರದಿಂದ ತೇಜಸ್ವಿ ಸೂರ್ಯ ಹೂಡಿದ ಬಾಣ, ಈಗ ಹತ್ತು ತಲೆ ಹೊತ್ತು ತಿರುಗುಬಾಣವಾದಂತಹ ನಗೆಪಾಟಲಿನ ಸ್ಥಿತಿ ನಿರ್ಮಾಣವಾಗಿದೆ! ಅಡಿಕೆ ಹೋದ ಮಾನ, ಆನೆ ಕೊಟ್ಟರೂ ಬಾರದು ಎಂಬಂತೆ, ಹೀಗೆ ದಿನ ನಿತ್ಯ ಮುಖ್ಯವಾಹಿನಿ ಪತ್ರಿಕೆಗಳ ಮುಖಪುಟದಲ್ಲಿ ಹೋಗುತ್ತಿರುವ ಮಾನವನ್ನು ನಾಲ್ಕು ಗೋಡೆಯ ನಡುವೆ ಕ್ಷಮೆಯಾಚನೆಯಲ್ಲಿ ಸರಿದೂಗಿಸುವುದು ಸಾಧ್ಯವೇ ಎಂಬುದು ಈಗ ಬಿಜೆಪಿ ವಲಯದಲ್ಲಿ ಚಾಲ್ತಿಯಲ್ಲಿರುವ ಹೊಸ ಜೋಕು!

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...