ಬೆಂಗಳೂರು : ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಬಡ ಆಟೋ ಚಾಲಕರ ಕುಟುಂಬಗಳಿಗೆ ಕೂಡಲೇ ಸಹಾಯಧನವನ್ನು ಬಿಡುಗಡೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷವು ಪ್ರತಿಭಟನೆ ನಡೆಸಿ ಒತ್ತಾಯಿಸಿದೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಆಟೋ ಘಟಕದ ಅಧ್ಯಕ್ಷ ಆಯುಬ್ ಖಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಕೊಲ್ಲಿ ಯುದ್ಧದ ಪರಿಣಾಮದಿಂದ ಎಲ್ ಪಿ ಜಿ ಬಂಕ್ ಗಳಲ್ಲಿ ಸಾಕಷ್ಟು ಅನಿಲ ಕೊರತೆ ಉಂಟಾಗಿದೆ. ಆಟೋ ಚಾಲಕರುಗಳು ಪ್ರತಿ ದಿವಸದ ತಮ್ಮ ದುಡಿಮೆಗೆ ಕೊಡಲಿ ಏಟು ಬಿದ್ದಿದೆ. ಚಾಲಕರುಗಳು ದೈನಂದಿನ ತಮ್ಮ ಸಂಸಾರಗಳನ್ನು ನಡೆಸಲಾಗದೆ ಬೀದಿಗೆ ಬೀಳುತ್ತಿದ್ದಾರೆ. ಈ ದುಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಉಪಚುನಾವಣೆ ಹಾಗೂ ಮುಖ್ಯಮಂತ್ರಿ ಬದಲಾವಣೆಯ ರಾಜಕೀಯದಲ್ಲಿ ಆಟೋ ಚಾಲಕರುಗಳ ಸಂಕಷ್ಟಗಳನ್ನು ಅರಿಯದೆ ಕಣ್ಮುಚ್ಚಿ ಕುಳಿತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಪ್ಯಾರಾಚೂಟ್ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?
ಅನೇಕ ಸಮಾಜ ಸೇವಕರುಗಳು, ಚಿತ್ರನಟರುಗಳು ಮುಂದೆ ಬಂದು ತಮ್ಮ ಕೈಲಾದಷ್ಟು ಚಾಲಕರುಗಳಿಗೆ ನೆರವನ್ನು ನೀಡುತ್ತಿದ್ದಾರೆ. ಆದರೆ ಸರ್ಕಾರವು ಈ ಕಡೆ ಗಮನವನ್ನೇ ಹರಿಸುತ್ತಿಲ್ಲ. ಅನೇಕ ಆಟೋ ಸಂಘಟನೆಗಳು ಮನವಿಗಳನ್ನು ನೀಡಿದ್ದಾರೆ ಹಾಗೂ ಪ್ರತಿಭಟನೆಯನ್ನು ಮಾಡಿದ್ದಾರೆ. ಆದರೂ ಸಹ ಸರ್ಕಾರದ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಕಣ್ಣು, ಕಿವಿ ಕೇಳಿಸದಂತಾಗಿದೆ. ಕೂಡಲೇ ಸಂಕಷ್ಟದಲ್ಲಿರುವ ಈ ಆಟೋ ಚಾಲಕ ವರ್ಗಕ್ಕೆ ಕೂಡಲೇ 15000 ರೂ. ಗಳ ಸಹಾಯಧನವನ್ನು ಬಿಡುಗಡೆ ಮಾಡಬೇಕು . ಈ ಮೂಲಕ ಲಕ್ಷಾಂತರ ಚಾಲಕ ಕುಟುಂಬಗಳಿಗೆ ಕೂಡಲೇ ನೆರವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ತಲುಪಿಸಿದ್ದೇವೆ. ಈ ಬಗ್ಗೆ ಸರ್ಕಾರ ಕ್ಯಾರೆ ಅನ್ನುತ್ತಿಲ್ಲ. ಸರ್ಕಾರವು ಕಾಳಸಂತೆ ಕೋರರಿಗೆ ಕೋಟ್ಯಾಂತರ ಹಣವನ್ನು ಲೂಟಿ ಮಾಡುವುದಕ್ಕೆ ಬಿಟ್ಟು ಕಣ್ಮುಚ್ಚಿ ಕುಳಿತಿದೆ. ಯಾರ ಮೇಲೂ ಸಹ ಇದುವರೆಗೂ ಕಠಿಣ ಕ್ರಮವನ್ನು ತೆಗೆದುಕೊಂಡಿಲ್ಲ. ಸರ್ಕಾರದ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳು ಹಗಲು ದರೋಡೆಗೆ ಇಳಿದಿರುವುದು ಸರ್ಕಾರದ ದಿವಾಳಿ ತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಸರ್ಕಾರದ ಈ ರೀತಿಯ ಬೇಜವಾಬ್ದಾರಿ ಹಾಗೂ ನಿರ್ಲಜ್ಜ ಧೋರಣೆಯಿಂದ ಚಾಲಕರುಗಳು ಬೀದಿಗಿಳಿದು ಹೋರಾಟ ಮಾಡುವಂತಹ ಸಂದರ್ಭ ಬಂದಿದೆ. ಲಕ್ಷಾಂತರ ಆಟೋ ಚಾಲಕ ವರ್ಗಗಳ ಕೋಪಕ್ಕೆ ಗುರಿಯಾಗಿ ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿ. ಈಗಲಾದರೂ ಎಚ್ಚೆತ್ತುಕೊಂಡು ಸರ್ಕಾರ ಸಹಾಯಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ವಿವಿಧ ಆಟೋ ಸಂಘಟನೆಗಳ ಮುಖಂಡರುಗಳು ಭಾಗವಹಿಸಿ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು. ಪಕ್ಷದ ಮುಖಂಡರುಗಳಾದ ಜಗದೀಶ್ ಚಂದ್ರ, ಲಕ್ಷ್ಮಿಕಾಂತ್ ರಾವ್, ಜಗದೀಶ್ ವಿ ಸದಂ, ಸಂಚಿತ್ ಸೆಹ್ವಾನಿ, ಉಷಾ ಮೋಹನ್, ಪುಟ್ಟಣ್ಣ ಗೌಡ, ಇರ್ತಾದ್, ಶಶಿಧರ್ ಆರಾಧ್ಯ, ಮುನೇಶ್ ಕುಮಾರ್, ಚೆನ್ನಪ್ಪ ಗೌಡ ಸೇರಿದಂತೆ ಅನೇಕ ಮುಖಂಡರುಗಳಾಗು ಕಾರ್ಯಕರ್ತರುಗಳು ಭಾಗವಹಿಸಿದ್ದರು.






