ಕ್ಷಮೆಯಾಚನೆ ಸುದ್ದಿಯನ್ನು ನಿರಾಕರಿಸಿದ ತೇಜಸ್ವಿ ಸೂರ್ಯ!

ಬಿಬಿಎಂಪಿಯ ದಕ್ಷಿಣ ವಲಯದ ಕೋವಿಡ್‌ ವಾರ್ಡ್‌ ರೂಮ್‌ಗೆ ಗುರುವಾರ ಸಂಜೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಮುಸ್ಲಿಂ ಸಿಬ್ಬಂದಿಯ ಬಳಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕ್ಷಮೆ ಕೋರಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. ಆದರೆ, ಈ ರೀತಿ ಯಾವುದೇ ಕ್ಷಮಾಪಣೆ ಪ್ರಸಂಗ ನಡೆದಿಲ್ಲ, ಈ ಸುದ್ದಿ ನಕಲಿ ಎಂದು ತೇಜಸ್ವಿ ಸೂರ್ಯ ಅವರ ಕಛೇರಿಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹೇಳಿದೆ.

ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆದಿದ್ದ ವೇಳೆ ತೇಜಸ್ವಿ ಸೂರ್ಯ,  ಉದ್ದೇಶ ಪೂರ್ವಕವಾಗಿ 17 ಮುಸ್ಲಿಂ ನೌಕರರ ಹೆಸರು ಮಾತ್ರ ಉಲ್ಲೇಖಿಸಿ ನೇರ ಆರೋಪ ಮಾಡಿದ್ದರು. ಆದರೆ, 206 ಜನ ಕಾರ್ಯನಿರ್ವಹಿಸುವ  ವಾರ್ ರೂಮ್ ನ ಹಾಸಿಗೆ ನಿಯೋಜನೆ ವಿಭಾಗದಲ್ಲಿ ಕೇವಲ ಒಬ್ಬ ಮುಸ್ಲಿಂ ಯುವಕ ಮಾತ್ರ ಕೆಲಸ ಮಾಡುತ್ತಿದ್ದರು. ಬೆಡ್ ಬ್ಲಾಕಿಂಗ್ ಹಗರಣಕ್ಕೂ ಉದ್ದೇಶಪೂರ್ವಕವಾಗಿ ಕೋಮು ಬಣ್ಣ ನೀಡಿದ್ದಾರೆ ಎಂದು ತೇಜಸ್ವಿ ಸೂರ್ಯನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಬೆಡ್‌ ಬ್ಲಾಕಿಂಗ್‌ ಹಗರಣಕ್ಕೂ ತೇಜಸ್ವಿ ಸೂರ್ಯ ಹೆಸರು ಉಲ್ಲೇಖಿಸಿರುವ ಸಿಬ್ಬಂದಿಗಳಿಗೂ ಸಂಬಂಧವಿಲ್ಲವೆನ್ನುವುದು ಬೆಳಕಿಗೆ ಬರುತ್ತಿದ್ದಂತೆ ರಾಷ್ಟ್ರೀಯ ಮಟ್ಟದಲ್ಲಿ ತೇಜಸ್ವಿ ಸೂರ್ಯ ಛೀಮಾರಿಯನ್ನು ಎದುರಿಸಿದ್ದರು. ಸರ್ಕಾರದ ಹುಳುಕುಗಳನ್ನು ಮರೆ ಮಾಚಲು ತೇಜಸ್ವಿ ಉದ್ದೇಶ ಪೂರ್ವಕವಾಗಿ ಬೆಡ್‌ ಬ್ಲಾಕಿಂಗ್‌ ದಂಧೆಗೆ ಕೋಮು ಆಯಾಮ ನೀಡಿದ್ದಾರೆ ಎಂದು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು.

ವ್ಯಾಪಕ ಆಕ್ರೋಶಕ್ಕೊಳಗಾದ ಬಳಿಕ ತೇಜಸ್ವಿ ಸೂರ್ಯ ವಿಷಾದ ವ್ಯಕ್ತಪಡಿಸಿದ್ದಾರೆ ಎನ್ನಲಾದ ಕಾಲ್‌ ರೆಕಾರ್ಡ್‌ ಒಂದು ವೈರಲ್‌ ಆಗಿತ್ತು. ಅದಾದ ಬಳಿಕ, ಬಿಬಿಎಂಪಿ ಹೆಲ್ಪ್‌ ಲೈನ್‌ ಕೂಡಾ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ದೂರುಗಳು ಕೇಳಿ ಬಂದಿದ್ದವು. ತೇಜಸ್ವಿ ಸೂರ್ಯ ಕೋವಿಡ್‌ ವಾರ್‌ ರೂಮಿನ ಸಿಬ್ಬಂದಿಗಳಿಗೆ ಮಾಡಿದ ಅಪಮಾನದ ಬಳಿಕ ಹಲವಾರು ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿದ್ದರು ಎಂದು ವಾರ್‌ ರೂಮಿನ ಮೂಲಗಳು ತಿಳಿಸಿದ್ದವು.

ಅದಲ್ಲದೆ, ಬೆಡ್‌ ಬುಕಿಂಗ್‌ ಹಗರಣದಲ್ಲಿ ಬಿಜೆಪಿ ಶಾಸಕನ ಹೆಸರೇ ಕೇಳಿ ಬಂದಿದ್ದು, ತೇಜಸ್ವಿ ಸೂರ್ಯನ ವಿರುದ್ಧ ಆಕ್ರೋಶ ಹೆಚ್ಚಾಗಲು ಕಾರಣವಾಗಿತ್ತು. ಈ ಎಲ್ಲಾ ಕಾರಣಗಳಿಂದ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ತೇಜಸ್ವಿ ಸೂರ್ಯ ಬಿಬಿಎಂಪಿ ವಾರ್‌ ರೂಮಿಗೆ ಧಾವಿಸಿ ಸಿಬ್ಬಂದಿಗಳ ಜೊತೆ ಮಾತನಾಡಿದ್ದರು.

ಈ ವೇಳೆ ಸಿಬ್ಬಂದಿಗಳ ಬಳಿ ಕ್ಷಮೆ ಕೇಳಿ ಯಾರೂ ಈ ವಿಷಯವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಧೈರ್ಯದಿಂದ ಇರಿ ಎಂದು ಸಂಸದರು ವಿಶ್ವಾಸ ತುಂಬಿದ್ದಾಗಿ ಸಿಬ್ಬಂದಿ ಹೇಳಿದ್ದಾರೆ.

‘ಪ್ರಕರಣದ ನಂತರ ಬಹಳಷ್ಟು ಸಿಬ್ಬಂದಿ ಕೆಲಸಕ್ಕೆ ಬರುತ್ತಿರಲಿಲ್ಲ. ಈ ಸಂದರ್ಭದಲ್ಲಿ ರಜೆ ಹಾಕುವುದು ಬೇಡ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಕರ್ತವ್ಯಕ್ಕೆ ಹಾಜರಾಗಿ ಎಂದು ಸಂಸದರು ಹೇಳಿರುವುದಾಗಿಯೂ ವಾರ್‌ ರೂಮ್‌ ಸಿಬ್ಬಂದಿ ತಿಳಿಸಿದ್ದರು.

ಸ್ವತಃ, ತೇಜಸ್ವಿಯೇ, ನನಗೆ ಬೇರೆಯವರು ಕೊಟ್ಟ ಪಟ್ಟಿಯನ್ನು ಓದಿದ್ದೇನೆ. ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಗುರಿಮಾಡಿರಲಿಲ್ಲ ಎಂದು ಸಮರ್ಥನೆ ನೀಡಿದ್ದರು.

ಇದೇ ಆಧಾರದ ಮೇಲೆ ದಿ ನ್ಯೂಸ್‌ ಮಿನಿಟ್‌, ಪ್ರಜಾವಾಣಿ ಸೇರಿದಂತೆ ಹಲವು ಸುದ್ದಿ ಸಂಸ್ಥೆಗಳು ʼತೇಜಸ್ವಿ ಸೂರ್ಯʼ ಕ್ಷಮೆ ಕೇಳಿರುವುದಾಗಿ ವರದಿ ಮಾಡಿತ್ತು. ಈ ವರದಿ ಪ್ರಕಟವಾಗುತ್ತಿದ್ದಂತೆಯೇ, ತೇಜಸ್ವಿ ಅವರ ದುಡುಕುತನ ಹಾಗೂ ಬೇಜವಾಬ್ದಾರಿತನಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

ಆದರೆ, ಕ್ಷಮೆ ಕೇಳಿದ ವರದಿ ಬಳಿಕ ಟ್ರಾಲ್‌ಗೆ ಒಳಗಾದ ತೇಜಸ್ವಿ ಸೂರ್ಯ ತಮ್ಮ ಕಛೇರಿಯ ಅಧಿಕೃತ ಖಾತೆ ಮೂಲಕ ಸುದ್ದಿಯನ್ನು ನಕಲಿಯೆಂದು ಹೇಳಿದ್ದಾರೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...