ತೇಜಸ್ವಿ ಸೂರ್ಯ ಬೆಡ್ ಹಗರಣ ಬಯಲಿಗೆಳೆದ ನಂತರ BBMP ಹೆಲ್ಪ್ ಲೈನ್ ಕರೆ ಸಂಪರ್ಕವೇ ಆಗುತ್ತಿಲ್ಲ

ಮಂಗಳವಾರ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿ ಬೆಡ್‌ ಬ್ಲಾಕಿಂಗ್‌ ಹಗರಣವನ್ನು ಬಯಲಿಗೆಳೆದ ವೀಡಿಯೋ ಬಿಡುಗಡೆಗೊಂಡ ಕೂಡಲೇ ಲಕ್ಷಗಟ್ಟಲೆ ಬಾರಿ ವಾಟ್ಸ್‌ ಅಪ್‌ ನಲ್ಲಿ ಶೇರ್‌ ಆಗಿ ಇಡೀ ರಾಜ್ಯಾದ್ಯಂತ ವೈರಲ್‌ ಆಗಿಬಿಟ್ಟಿತು. ತೇಜಸ್ವಿ ಅವರ ಕಾರ್ಯಕ್ಕೆ ಜನರು ಶಭಾಷ್‌ ಅಂದರೂ ಮಾರನೇ ದಿನ ಬಿಬಿಎಂಪಿ ವಾರ್‌ ರೂಂ ನಲ್ಲಿ ಕೆಲಸ ಮಾಡುತ್ತಿರುವ ಒಟ್ಟು 205 ಉದ್ಯೋಗಿಗಳಲ್ಲಿ 17 ಜನರು ಮಾತ್ರ ಮುಸ್ಲಿಂ ಸಮುದಾಯದ ನೌಕರರು ಎಂಬ ಮಾಹಿತಿ ಹೊರಬೀಳುತಿದ್ದಂತೆ ಮತ್ತೆ ಸಂಸದರು ಟ್ವಿಟರ್ ನಲ್ಲಿ ಡೈಪರ್‌ ಸೂರ್ಯ ಎಂಬ ಹ್ಯಾಷ್‌ ಟ್ಯಾಗ್‌ ಅಡಿಯಲ್ಲಿ ಟ್ರೋಲ್‌ ಗೆ ಒಳಗಾದರು. ಸೂರ್ಯ ಅವರು ಅಂದು ಐಏಎಸ್‌ ಅಧಿಕಾರಿ ತುಳಸಿ ಮದ್ದಿನೇನಿ ಅವರ ಎದುರು ಓದಿದ ಹೆಸರುಗಳೆಲ್ಲವೂ ಅವರೇ ಆಯ್ಕೆ ಮಾಡಿಕೊಂಡಿದ್ದ ಹೆಸರುಗಳೆಂದು ಎಲ್ಲರಿಗೂ ಗೊತ್ತಾಗಿ ಆ ಕಾವು ಬೇಗನೇ ಇಳಿದು ಹೋಯಿತು.

ಆದರೆ ಮಂಗಳವಾರ ರಾತ್ರಿ 10 ಘಂಟೆ ವೇಳೆಗೆ ಟ್ವೀಟ್‌ ಮಾಡಿದ್ದ ಸೂರ್ಯ ಸರ್ಕಾರಿ ಕೋಟಾ ಮೂಲಕ ಹಂಚಿಕೆ ಮಾಡುವ ಹಾಸಿಗೆಗಳ ಲಭ್ಯತೆ ಸಂಖ್ಯೆ ಶೂನ್ಯ ಎಂದು ಬಿಬಿಎಂಪಿ ವೆಬ್ಸೈಟ್ ಇಂದು ಮಧ್ಯಾಹ್ನ ತೋರಿಸಿತ್ತು. ಈಗ ಅದು 1504 ಹಾಸಿಗೆಗಳು ಲಭ್ಯ ಎಂದು ತೋರಿಸುತ್ತಿದೆ. ವ್ಯವಸ್ಥೆ ಸುಧಾರಣೆ ಆಗುತ್ತಿದೆ ಎಂದು ಹೇಳಿಕೊಂಡಿದ್ದರು. ಕೋವಿಡ್ ರೋಗಿಗಳಿಗೆ ಸರ್ಕಾರಿ ಕೋಟಾದಲ್ಲಿ ಹಂಚಿಕೆ ಮಾಡಲು ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಆಸ್ಪತ್ರೆ, ಖಾಸಗಿ ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು, ಸರ್ಕಾರದ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಹಂಚಿಕೆಗೆ ಲಭ್ಯ ಇರುವ ಹಾಸಿಗೆಗಳ ವಿವರವನ್ನೂ ಟ್ವೀಟ್ನಲ್ಲಿ ಹಂಚಿಕೊಂಡಿದ್ದರು. ಆದರೆ ಅವರು ಬಿಬಿಎಂಪಿಯ ಹಾಸಿಗೆ ಹಂಚಿಕೆ ದಂಧೆ ಬಯಲಿಗೆಳೆದ ಬಳಿಕ ಬಿಬಿಎಂಪಿ ಪೋರ್ಟಲ್ನಲ್ಲಿ ಹಾಸಿಗೆ ಲಭ್ಯತೆ ಹೆಚ್ಚಳವಾಗುವ ಬದಲು ಕಡಿಮೆ ಆಗಿದೆ. ಅವರೇ ಮಾಧ್ಯಮಗಳಿಗೆ ಹೇಳಿಕೊಂಡಂತೆ ಧಾಳಿ ಬಳಿಕ ಹಾಸಿಗೆ ಸೌಲಭ್ಯ ಇನ್ನೂ ಉತ್ತಮ ಗೊಳ್ಳಬೇಕಿತ್ತು. ಆದರೆ ಹಾಗೇನೂ ಆಗಿಲ್ಲ ಜತೆಗೇ ಐಸಿಯು, ವೆಂಟಿಲೇಟರ್‌ ಸೌಲಭ್ಯ ಇರುವ ಹಾಸಿಗೆಗಳ ಕೊರತೆ ಈಗಲೂ ಎಂದಿನಂತೆಯೇ ಇದೆ.

 ‘ಬಿಬಿಎಂಪಿಯ ಪೋರ್ಟಲ್ನಲ್ಲಿ ಯಾವತ್ತೂ ಒಟ್ಟು ಹಾಸಿಗೆಗಳ ಲಭ್ಯತೆ ಪ್ರಮಾಣ ಶೂನ್ಯ ಎಂದು ತೋರಿಸಿಲ್ಲ. ಆದರೆ, ಐಸಿಯು ಮತ್ತು ವೆಂಟಿಲೇಟರ್ ಸೌಲಭ್ಯ ಇರುವ ಹಾಸಿಗೆಗಳ ತೀವ್ರ ಕೊರತೆ ಇರುವುದು ನಿಜವಾಗಿತ್ತು. ಬಿಬಿಎಂಪಿ ಅಯುಕ್ತ ಗೌರವ್‌ ಗುಪ್ತ ಅವರು ಟ್ವೀಟ್‌ ಗಳಲ್ಲಿ ಹಾಸಿಗೆ ಲಭ್ಯತೆ ಬಗ್ಗೆ ಮಾಹಿತಿ ನೀಡುತಿದ್ದಾರೆ. ಅವರು ಮಂಗಳವಾರ ಮಧ್ಯಾಹ್ನ 11 ಗಂಟೆಗೆ ಮಾಡಿರುವ ಟ್ವೀಟ್ನಲ್ಲೂ ಒಟ್ಟು 2,015 ಹಾಸಿಗೆಗಳು ಹಂಚಿಕೆಗೆ ಲಭ್ಯ ಇವೆ ಎಂಬ ಮಾಹಿತಿ ಇತ್ತು. ಅಂದರೆ ಸೂರ್ಯ ಅವರು ಆರೋಪಿಸಿದ್ದಂತೆ ಹಾಸಿಗೆ ಲಭ್ಯತೆ ಶೂನ್ಯ ಎಂದು ಇರಲೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ತೀವ್ರ ಉಸಿರಾಟದ ಸಮಸ್ಯೆ ಹೊಂದಿರುವ ಕೋವಿಡ್ ರೋಗಿಗಳು ಬುಧವಾರವೂ ಮತ್ತು ಗುರುವಾರವೂ ಸಮಸ್ಯೆ ಎದುರಿಸಿದರು. ‘ಕೋವಿಡ್ ವಾರ್ ರೂಂ ಮೂಲಕ ಹಾಸಿಗೆ ಹಂಚಿಕೆಯಲ್ಲಿ ಅವ್ಯವಹಾರ ನಡೆಯುತ್ತಿದೆ’ ಎಂದು ಆರೋಪಿಸಿದ್ದ ಸಂಸದ ತೇಜಸ್ವಿಸೂರ್ಯ, ‘ವಾರ್ ರೂಂ ಎಲ್ಲ ಸಿಬ್ಬಂದಿಯ ಫೋನ್ ಕರೆಗಳ ವಿವರ ಸಂಗ್ರಹಿಸಿ ಪರಿಶೀಲಿಸಬೇಕು’ ಎಂದು ಒತ್ತಾಯಿಸಿದ್ದರು. ಈ ಬೆಳವಣಿಗೆ ಬಳಿಕ, ತುರ್ತು ಅವಶ್ಯಕತೆ ಇರುವವರಿಗೂ ಹಾಸಿಗೆ ಒದಗಿಸಲು ನೆರವಾಗುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹಾಸಿಗೆ ಬೇಕಿದ್ದರೆ 1912 ಸಹಾಯವಾಣಿಗೆ ಕರೆ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ.

ತುರ್ತಾಗಿ ಐಸಿಯು ಹಾಸಿಗೆ ಅವಶ್ಯಕತೆ ಇರುವವರು ಬಿಬಿಎಂಪಿ ಸಹಾಯವಾಣಿ 1912ಗೆ ಕರೆ ಮಾಡಿದರೆ ಸಂಪರ್ಕವೇ ಸಿಗುತ್ತಿಲ್ಲ. ಸ್ವತಃ ಈ ವರದಿಗಾರನೇ 1912 ಗೆ ಕರೆ ಮಾಡಿದಾಗ 15 ನಿಮಿಷವಾದರೂ ಯಾರೂ ಕರೆ ಸ್ವೀಕರಿಸಲಿಲ್ಲ . ಅದರೆ ನೀವು ಕ್ಯೂನಲ್ಲಿದ್ದೀರ ಕಾಯಿರಿ ಎಂಬ ಆಡಿಯೋ ಸತತ ಚಲಾವಣೆಯಲ್ಲಿತ್ತು. ಈಗ ಬೆಂಗಳೂರು ನಗರ ಕಾಂಗ್ರೆಸ್‌ ಘಟಕವು ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲಾಗಿದೆ. ಸಂಸದರು ಸುಳ್ಳು ಹೇಳಿ ತಪ್ಪು ಮಾಹಿತಿ ರವಾನಿಸಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಿದೆ. ಸಂಸದರು ಸುಳ್ಳು ಹೇಳುತ್ತಿದ್ದಾರೆ, ಜನರಿಗೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸೂರ್ಯ ಅವರು ಒಂದೇ ಸಮುದಾಯದ 17 ಜನ ಉದ್ಯೋಗಿಗಳನ್ನು ಟಾರ್ಗೆಟ್‌ ಮಾಡಿರುವುದರ ವಿರುದ್ದ ದೇಶಾದ್ಯಂತ ಖಂಡನೆಯೂ ವ್ಯಕ್ತವಾಗುತ್ತಿದೆ. ಬೆಡ್ ಬ್ಲಾಕಿಂಗ್ ಪ್ರಕರಣ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ 17 ಮಂದಿ ಮುಸ್ಲಿಂ ಸಿಬ್ಬಂದಿಯ ಹೆಸರನ್ನು ಮಾತ್ರ ಉಲ್ಲೇಖಿಸಿರುವುದರ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಾಮರಾಜಪೇಟೆ ಶಾಸಕ ಜಮೀರ್, 205 ಸಿಬ್ಬಂದಿಯಲ್ಲಿ ಕೇವಲ ಮುಸ್ಲಿಮರ ಹೆಸರನ್ನು ಮಾತ್ರ ಉಲ್ಲೇಖಿಸಿರೋದು ಎಷ್ಟು ಸರಿ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾಡಿದರು. ಅವರು ರಂಜಾನ್ ಸಮಯದಲ್ಲಿ ಹೀಗೆಲ್ಲಾ ಮಾಡುತ್ತಿರಲ್ಲ, ನಿಮಗೆ ಒಳ್ಳೆಯದಾಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಸರ್ಕಾರದ ಆಡಳಿತದಲ್ಲೇ ಈ ಬೆಡ್ ಅಕ್ರಮ ನಡೆದಿದೆ. ಹಾಗಾದರೆ ನೀವು ಸಿಎಂ ಯಡಿಯೂರಪ್ಪ ರಾಜೀನಾಮೆ ಕೇಳಬೇಕು ಅಲ್ವಾ. ಏಕೆ ತೇಜಸ್ವಿ ಅವರೇ ಸಿಎಂ ರಾಜೀನಾಮೆ ಕೇಳುತ್ತಿಲ್ಲ ಎಂದು ಜಮೀರ್ ಪ್ರಶ್ನಿಸಿದರು.

ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಶಾಸಕ ಸತೀಶ್ ರೆಡ್ಡಿ ಪಿಎ ಹರೀಶ್ ಎಂಬುವರು ಶಾಮೀಲಾಗಿದ್ದಾರೆ ಎಂದು ಪೇಪರ್ ತೋರಿಸಿದ ಜಮೀರ್ ಇದಕ್ಕೆ ತೇಜಸ್ವಿ ಸೂರ್ಯ ಏನ್ ಹೇಳ್ತಾರೆ ಎಂದು ಪ್ರಶ್ನಿಸಿದರು. ಸಂಸದರು ಉಲ್ಲೇಖಿಸಿರುವ 17 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ರೆ ನಾನು ಅವರಿಗೆಲ್ಲಾ ಕೆಲಸ ಕೊಡುತ್ತೇನೆ ಎಂದು ಜಮೀರ್ ಇದೇ ವೇಳೆ ಘೋಷಿಸಿದರು.

ಈ ಹಿಂದೆ ಸಂಸದರ ಕ್ಷೇತ್ರದಲ್ಲಿ ಕೋವಿಡ್ ನಿಂದ ಮೃತಪಟ್ಟವರನ್ನು ಹಿಂದೂ, ಮುಸ್ಲಿಂ ಅಂತ ನೋಡದೆ ನಾವು ಅಂತ್ಯ ಸಂಸ್ಕಾರದ ಮಾಡಿದ್ದೀವಿ. ಅವಾಗ ನೀವು ಎಲ್ಲಿ ಹೋಗಿದ್ರಿ ತೇಜಸ್ವಿ ಅವರೇ. ನಾವು ಯಾವ ಧರ್ಮ ಯಾವ ಜಾತಿ ಅಂತ ಕೇಳಿ ಅಂತ್ಯಸಂಸ್ಕಾರ ಮಾಡಿಲ್ಲ. ನೀವು ಜಾತಿ-ಧರ್ಮ ನೋಡದನ್ನು ಬಿಡಿ. ಇದೇ ಕೊನೆ ಈ ರೀತಿ ಮಾತನಾಡಬೇಡಿ ಎಂದು ಜಮೀರ್ ಎಚ್ಚರಿಕೆ ನೀಡಿದರು. ಇದು ನಮ್ಮ ದೇಶ. ರಂಜಾನ್ ವೇಳೆ ಹೀಗೆಲ್ಲಾ ನೋಯಿಸಬೇಡಿ ಎಂದು ಜಮೀರ್ ಸುದ್ದಿಗೋಷ್ಠಿಯಲ್ಲಿ ಭಾವುಕರಾದರು.ಮುಸ್ಲಿಮರಿಗೆ ಮಾತ್ರ ಆಕ್ಸಿಜನ್ ಕೊಡಿ ಎಂದು ಅವರು ಹೇಳಿದ್ದಾರಾ? ಬಹರೈನ್ ರಾಷ್ಟ್ರದಿಂದ ನಿನ್ನೆ ಆಕ್ಸಿಜನ್ ಬಂದಿದೆ. ನಾವು ಕಳುಹಿಸಿದ ಆಕ್ಸಿಜನ್ನ ಮುಸ್ಲಿಮರಿಗೆ ಮಾತ್ರ ಬಳಸಿ ಎಂದು ಅಲ್ಲಿನವರು ಹೇಳಿದ್ದಾರಾ? ಪರಿಸ್ಥಿತಿ ಹೀಗಿರುವಾಗ ಸಂಸದರಾದ ತೇಜಸ್ವಿ ಸೂರ್ಯ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಜಮೀರ್ ತಿರುಗೇಟು ನೀಡಿದರು.

17 ಮಂದಿ ಯುವಕರ ಹೆಸರನ್ನು ಹೇಳದೇ ಈ ದಂಧೆ ಬಹಿರಂಗಗೊಳಿಸಿದ್ದಿದ್ದರೆ ತೇಜಸ್ವಿ ಅವರ ಗೌರವ ಮತ್ತಷ್ಟು ಹೆಚ್ಚಾಗುತಿತ್ತು.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...