• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಾಂಸ್ಥಿಕ ನೈತಿಕತೆ ಇಲ್ಲದ ಶಿಕ್ಷಣ ವ್ಯವಸ್ಥೆ

ಬಹುಜನರಿಗೆ ತಲುಪಬೇಕಾದ ಶಿಕ್ಷಣದ ಮೇಲೆ ಮಾರುಕಟ್ಟೆ ಸಾಮ್ರಾಜ್ಯ ವಿಸ್ತರಿಸುತ್ತಲೇ ಇದೆ

ಪ್ರತಿಧ್ವನಿ by ಪ್ರತಿಧ್ವನಿ
September 8, 2026
in Top Story, ಇದೀಗ, ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ, ವಿದೇಶ, ವಿಶೇಷ
0
ಸಾಂಸ್ಥಿಕ ನೈತಿಕತೆ ಇಲ್ಲದ ಶಿಕ್ಷಣ ವ್ಯವಸ್ಥೆ
Share on WhatsAppShare on FacebookShare on Telegram

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು..

ADVERTISEMENT

ಶಿಕ್ಷಣ ಸಾಮಾಜಿಕ ಉನ್ನತಿ ಮತ್ತು ಬೆಳವಣಿಗೆಯ ಮೂಲ ಅಡಿಪಾಯ. ವರ್ತಮಾನದ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದಷ್ಟೇ ಅಲ್ಲದೆ ಭವಿಷ್ಯದಲ್ಲಿ ಆರೋಗ್ಯಕರ ಸಮಾಜವನ್ನು ಕಾಪಾಡುವ ನಿಟ್ಟಿನಲ್ಲಿ, ತಳಮಟ್ಟದಿಂದಲೇ ಬೌದ್ಧಿಕ ಸಂಪತ್ತಿನ ವೃದ್ಧಿಯಾಗುವುದು ಶಿಕ್ಷಣದ ಮೂಲಕ. ಪಠ್ಯಕ್ರಮದಿಂದಾಚೆ ನೋಡಿದಾಗ, ಶೈಕ್ಷಣಿಕ ಅಡಿಪಾಯ ದೇಶದ ಸುಸ್ಥಿರ ಅಭಿವೃದ್ಧಿಗೆ ಮುಖ್ಯ ಆಕರವಾಗಿರುತ್ತದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ (Developing countries) ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ಹಾಗಾಗಿಯೇ ಭಾರತದ ಸಂವಿಧಾನವೂ ಸಹ ಅನುಚ್ಛೇದ 21ಎ ಅನ್ವಯ 6 ರಿಂದ 14 ವರ್ಷದವರೆಗೆ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಖಾತರಿಪಡಿಸುತ್ತದೆ. ಬಹುಶಃ 60ರ ಅರಳು-ಮರಳು ಭಾರತದ ಪ್ರಜಾಪ್ರಭುತ್ವಕ್ಕೂ ಅಂಟಿ 21ನೆಯ ಶತಮಾನ ಆರಂಭವಾಗುತ್ತಲೇ ಈ ಅನುಚ್ಛೇದವನ್ನು ಗ್ರಾಂಥಿಕವಾಗಿ ಸೀಮಿತಗೊಳಿಸಲಾಗಿದೆ.

Eshwara Khandre : ಗ್ರಾಮೀಣ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡ್ತೀವಿ..

ಈ ಶತಮಾನಕ್ಕೆ ಕಾಲಿಡುತ್ತಿದ್ದಂತೆಯೇ ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜಾರಿಗೊಳಿಸಿದ ಚಾರಿತ್ರಿಕ ಯೋಜನೆ ಸರ್ವಶಿಕ್ಷಣ ಅಭಿಯಾನ (SSA). 2000-2001ರಿಂದ ಕಾರ್ಯಗತವಾದ ಈ ಯೋಜನೆಯನ್ನು ಸಂವಿಧಾನ ತಿದ್ದುಪಡಿ 86ರ ಮುಖಾಂತರ, ಅನುಚ್ಛೇದ 21ಎ ಸೂಚಿಸುವ ಉಚಿತ ಸಾರ್ವತ್ರಿಕ ಶಿಕ್ಷಣ ನೀತಿಗೆ ಜೋಡಿಸಲಾಯಿತು. ವಿಡಂಬನೆ ಎಂದರೆ ಇದೇ ಸಮಯದಲ್ಲೇ ಶಿಕ್ಷಣದ ಕೇಸರೀಕರಣ (Safronisation) ಪ್ರಕ್ರಿಯೆಗೂ ವಾಜಪೇಯಿ ಸರ್ಕಾರ ಚಾಲನೆ ನೀಡಿತ್ತು. ಕೇಸರೀಕರಣ ಮತ್ತು ಜಾಗತೀಕರಣದ ಜಂಟಿ ಆಶ್ರಯದಲ್ಲಿ ಶಿಕ್ಷಣವನ್ನು ಮಾರುಕಟ್ಟೆಯಲ್ಲಿ ನಿಲ್ಲಿಸಿದ್ದೇ ಅಲ್ಲದೆ, ಸರ್ಕಾರಗಳು ಹಂತಹಂತವಾಗಿ ತಮ್ಮ ಶೈಕ್ಷಣಿಕ ಜವಾಬ್ದಾರಿಯಿಂದ ನುಣುಚಿಕೊಂಡು, ಖಾಸಗೀಕರಣಕ್ಕೆ ಮುಕ್ತ ಅವಕಾಶಗಳನ್ನು ಕಲ್ಪಿಸಲಾರಂಭಿಸಿದವು.

ನವ ಉದಾರವಾದಿ ವಾತಾವರಣದಲ್ಲಿ

ಬಲಪಂಥೀಯ ರಾಜಕಾರಣ ಮತ್ತು ಬಂಡವಾಳಶಾಹಿ ಆರ್ಥಿಕತೆ ಸದಾ ಒಟ್ಟೊಟ್ಟಿಗೇ ಸಾಗುವ ಆಡಳಿತಾತ್ಮಕ ಪ್ರಕ್ರಿಯೆಗಳು. ರಾಜಕೀಯವಾಗಿ ಬಲಪಂಥೀಯ ಸಿದ್ದಾಂತಗಳಿಗೆ ಅನುಗುಣವಾಗಿ ಪಠ್ಯಕ್ರಮಗಳನ್ನು ಬಹುಸಂಖ್ಯಾವಾದಿ ಧಾರ್ಮಿಕ ಚೌಕಟ್ಟಿಗೆ (Majoritarian Religious Framework) ಒಳಪಡಿಸುವುದು ಒಂದೆಡೆಯಾದರೆ ಮತ್ತೊಂದೆಡೆ ಶಿಕ್ಷಣವನ್ನು ಸಾಂಸ್ಥಿಕವಾಗಿ ಖಾಸಗೀಕರಣಕ್ಕೊಳಪಡಿಸಿ ಕ್ರಮೇಣ ಕಾರ್ಪೋರೇಟ್ ಮಾರುಕಟ್ಟೆಯ ವಶಕ್ಕೆ ಒಪ್ಪಿಸುವುದು ಆರ್ಥಿಕತೆಯ ಆದ್ಯತೆಯಾಗುತ್ತದೆ. ವಾಜಪೇಯಿ ಅವಧಿಯಲ್ಲಿ ಆರಂಭವಾದ ಈ ಪ್ರಕ್ರಿಯೆ ಈಗ ಬಹುಶಃ ಕೊನೆಯ ಹಂತದಲ್ಲಿದೆ. ಹಾಗಾಗಿ ಶಿಕ್ಷಣ ಮತ್ತು ಮಾರುಕಟ್ಟೆಯ ಮೈತ್ರಿಯನ್ನು ಭಂಗಗೊಳಿಸದೆ, ಸಾಂಸ್ಥಿಕವಾಗಿ ಶಿಕ್ಷಣ ವ್ಯವಸ್ಥೆಯನ್ನು ಖಾಸಗಿ ಒಡೆತನಕ್ಕೆ ಒಪ್ಪಿಸಲಾಗುತ್ತಿದೆ.

ಸಾಮಾಜಿಕ ಅಭ್ಯುದಯದ ಅಡಿಪಾಯವೇ ಶಿಕ್ಷಣ ಆಗಿರುವುದರಿಂದ ಒಮ್ಮೆಲೆ ಇಡೀ ವ್ಯವಸ್ಥೆಯನ್ನು ತಲೆಕೆಳಗು ಮಾಡುವುದು ಸಾಮಾಜಿಕ ಅಸಮತೋಲನ ಮತ್ತು ಸಾಂಸ್ಕೃತಿಕ ಪಲ್ಲಟಗಳಿಗೆ ಕಾರಣವಾಗುತ್ತದೆ. ಹಾಗಾಗಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಏಕ್ದಂ ಇಡಿಯಾಗಿ ಖಾಸಗೀಕರಣಗೊಳಿಸಲು ಸರ್ಕಾರ ಮುಂದಾಗುವುದಿಲ್ಲ. ಇಷ್ಟಾದರೂ ಪರಿಜ್ಞಾನ ರಾಜಕೀಯ ಪಕ್ಷಗಳಿಗೆ ಇರುವುದು ಸ್ವಾಗತಾರ್ಹ. ಆದರೆ ಸಾಂಸ್ಥಿಕವಾಗಿ ನೋಡಿದಾಗ ಕಳೆದ 25 ವರ್ಷಗಳಲ್ಲಿ ಮೇಲ್ ಹಂತದಿಂದ ಮಾರುಕಟ್ಟೆ ಪ್ರವೇಶಕ್ಕೆ ಬಾಗಿಲು ತೆರೆದಿರುವುದು ಕಾಣುತ್ತದೆ. ಪಠ್ಯಕ್ರಮದ ಕೇಸರೀಕರಣ ತಳಮಟ್ಟದಿಂದ ಆರಂಭವಾದರೆ, ಸಾಂಸ್ಥಿಕ ಕಾರ್ಪೋರೇಟೀಕರಣ ಮೇಲ್ಮಟ್ಟದಿಂದ ಆಗುತ್ತದೆ. ಈ ಎರಡೂ ಪ್ರಕ್ರಿಯೆಗಳು ಸಂಧಿಸುವ ವೇಳೆಗೆ “ ಶಿಕ್ಷಣ ಎಂಬ ಮಾರುಕಟ್ಟೆಯ ಸರಕು ಕಾರ್ಪೋರೇಟ್ ಔದ್ಯಮಿಕ ಜಗತ್ತಿನಲ್ಲಿ ವಿನಿಮಯ ವಸ್ತುವಾಗಿ ಪರಿವರ್ತನೆಯಾಗುತ್ತದೆ ”. 2047ರ ವಿಕಸಿತ ಭಾರತದಲ್ಲಿ ಈ ಹೊಸ ರೂಪದ ಅನಾವರಣವಾಗುತ್ತದೆ.

ನವ ಉದಾರವಾದಿ ರಾಜಕೀಯ ಆರ್ಥಿಕತೆಯಿಂದ ಸಾಮಾಜಿಕ ನ್ಯಾಯದ ಬದಿಗೆ ಸರಿಯುವುದು - ದಿ ವೈರ್

ಇದರ ಪೂರ್ವ ಸಿದ್ಧತೆಗಳನ್ನು ಉನ್ನತ ಶಿಕ್ಷಣದಲ್ಲಿ ಸ್ಪಷ್ಟವಾಗಿ ಕಾಣಬಹುದು. ಕರ್ನಾಟಕದ ಮಟ್ಟಿಗೆ ಜಾತಿ ರಾಜಕಾರಣ, ಅಖಿಲ ಭಾರತ ಮಟ್ಟದಲ್ಲಿ ಹಿಂದುತ್ವ-ಕಾರ್ಪೋರೇಟ್ ರಾಜಕಾರಣ ಈಗಾಗಲೇ ವಿಶ್ವವಿದ್ಯಾಲಯಗಳನ್ನು ಭ್ರಷ್ಟಾಚಾರದ ಕೂಪಗಳನ್ನಾಗಿಸಿರುವುದೇ ಅಲ್ಲದೆ, ಪಟ್ಟಭದ್ರರ ಭದ್ರಕೋಟೆಯನ್ನಾಗಿಸಿದೆ. ವಸ್ತುಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೈಸೂರಿನ ʼ ಮಾನಸ ಗಂಗೋತ್ರಿ ʼಯಲ್ಲೂ ಗಂಗೋತ್ರಿಯ ಚಿಲುಮೆ ಬತ್ತಿಹೋಗುವ ದಿನಗಳು ಹತ್ತಿರಬರುತ್ತಿರುವುದು ಕಾಣುತ್ತದೆ. ಈ ಸಾಂಸ್ಥಿಕ ಶಿಥಿಲಾವಸ್ಥೆಯ ನಡುವೆಯೇ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ ಎಲ್ಲವೂ ಹೇಗೆ ಕಾರ್ಪೋರೇಟ್ ಮಾರುಕಟ್ಟೆಯ ಸುಳಿಯಲ್ಲಿ ಸಿಲುಕಿದೆ ಎಂದು ಇತ್ತೀಚಿನ ನೀಟ್ ಹಗರಣ ತೆರೆದಿಟ್ಟಿದೆ. ಜಂತರ್ ಮಂತರ್ ಹೋರಾಟಗಳು ಈ ಅವ್ಯವಸ್ಥೆಯನ್ನು ಸರಿಪಡಿಸುವ ಒಂದು ಆಗ್ರಹವೇ ಹೊರತು, ಕಾರ್ಪೋರೇಟ್ ಹಿತಾಸಕ್ತಿಗಳನ್ನು ಉಚ್ಛಾಟಿಸುವ ಉದ್ದೇಶ ಹೊಂದಿರಲಿಲ್.

ಸಾಂಸ್ಥಿಕ ದೌರ್ಬಲ್ಯ-ಆಡಳಿತ ನಿರ್ಲಕ್ಷ್ಯ

ಮೇಲ್ ಮಟ್ಟದಿಂದ ಹಂತಹಂತವಾಗಿ ಶಿಥಿಲವಾಗುತ್ತಾ, ಸಾಂಸ್ಥಿಕವಾಗಿ ಶಿಕ್ಷಣ ಎಂಬ ಸ್ಥಾವರದ ತಾರಸಿ, ಗೋಡೆಗಳು, ಕಿಟಕಿ ಬಾಗಿಲುಗಳು ನೆಲಕ್ಕುದುರುತ್ತಿರುವತೆಲ್ಲಾ, ಸರ್ಕಾರಗಳು ಪ್ರಾಥಮಿಕ ಶಿಕ್ಷಣ ಎಂಬ ಅಡಿಪಾಯವನ್ನು ಗಟ್ಟಿಯಾಗಿ ಹಿಡಿದಿಟ್ಟಿರುವ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಮೆಲ್ಲಮೆಲ್ಲಗೆ ಅಲುಗಾಡಿಸುತ್ತಾ ಬರುತ್ತಿವೆ. ಇದು ಪಕ್ಷಾತೀತವಾಗಿ ಸರ್ಕಾರಗಳು ಕೈಗೊಂಡಿರುವ ʼ ಸರ್ವಶಿಕ್ಷಣ ಅಭಿಯಾನ ʼದ ಹಿಮ್ಮುಖ ಕಾರ್ಯಾಚರಣೆ (Reverse Operation). ಈಗಲೂ ʼ ಸರ್ವಶಿಕ್ಷಣ ʼ ಧ್ಯೇಯ ಜೀವಂತವಾಗಿದೆ. ಆದರೆ ಈ ಶಿಕ್ಷಣವನ್ನು ತಳಮಟ್ಟದ ಸಮಾಜದವರೆಗೂ ತಲುಪಿಸುವ ಜವಾಬ್ದಾರಿಯನ್ನು ಸರ್ಕಾರಿ ಹೆಗಲಿನಿಂದ ಖಾಸಗಿ ಹೆಗಲಿಗೆ ವರ್ಗಾಯಿಸಲಾಗುತ್ತಿದೆ. ಪ್ರಾಥಮಿಕ ಶಿಕ್ಷಣದ ಖಾಸಗೀಕರಣ ಒಂದು ಆಡಳಿತಾತ್ಮಕ ನೀತಿಯಾಗಿ ಕಾಣಲಾಗುವುದಿಲ್ಲ. ಬದಲಾಗಿ ಸಾಂಸ್ಥಿಕವಾಗಿ ಖಾಸಗಿ ಬಂಡವಾಳವೇ ಮೂಲೆಮೂಲೆಯ ಹಳ್ಳಿಗಳಿಗೂ ವಿಸ್ತರಿಸುತ್ತಿದೆ.

ತನ್ಮೂಲಕ ಸರ್ಕಾರಿ ಶಾಲೆಗಳ ಅವಸಾನ ಹಂತಹಂತವಾಗಿ ಕಂಡುಬರುತ್ತಿದೆ. ದ್ರಾವಿಡ ಪ್ರಾಣಾಯಾಮದ ರೀತಿಯಲ್ಲಿ ಈ ಅವಸಾನ ಪ್ರಕ್ರಿಯೆಯನ್ನು ಸುತ್ತಿಬಳಸಿ ಭಿನ್ನ ಮಾದರಿಗಳಲ್ಲಿ ನಿರ್ವಹಿಸಲಾಗುತ್ತಿದೆ. ಆದರೆ ಇದು ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು ʼ ಶಾಲಾ ವಿಲೀನ ʼ ಎಂಬ ಪ್ರಕ್ರಿಯೆಯಲ್ಲಿ ಗುರುತಿಸಬಹುದು. ಕಡಿಮೆ ಮಕ್ಕಳಿರುವ ಗ್ರಾಮೀಣ ಶಾಲೆಗಳನ್ನು ಮುಚ್ಚಿ ಸಮೀಪದ ಶಾಲೆಯೊಡನೆ ವಿಲೀನಗೊಳಿಸುವ ಈ ಪ್ರಕ್ರಿಯೆ ಮೇಲ್ನೋಟಕ್ಕೆ ನಿರುಪದ್ರವಿ ಎನಿಸಿದರೂ , ಆಳಕ್ಕಿಳಿದು ನೋಡಿದಾಗ ಸಾವಿರಾರು ಗ್ರಾಮೀಣ ಮಕ್ಕಳು ಈ ಕಾರಣದಿಂದಲೇ ಶಾಲೆ ತೊರೆಯುತ್ತಿರುವುದು ಕಾಣುತ್ತದೆ. ಇವರ ಪೈಕಿ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಾಸ್ತವ.

ಯಾದಗಿರಿ | ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ಷಡ್ಯಂತ್ರ :  ಮೈಲಾಪುರ ಗ್ರಾಮಸ್ಥರ ತ್ರೀವ ವಿರೋಧ

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇದೇ ನೀತಿಯನ್ನೇ ಕೆಪಿಎಸ್-ಮ್ಯಾಗ್ನೆಟ್ (Karnataka Public School-Magnet) ಯೋಜನೆಯ ಮೂಲಕ ಅಳವಡಿಸುತ್ತಿದೆ. ಈ ಯೋಜನೆಯ ತಮಾಷೆ ಎಂದರೆ ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಅಸ್ತಿತ್ವದಲ್ಲಿರುವ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳನ್ನು ವಿಲೀನಗೊಳಿಸುತ್ತಿದೆ. ಕೆಲವು ಸಮೀಕ್ಷೆಗಳ ಪ್ರಕಾರ ಕನಿಷ್ಠ 7,000 ದಿಂದ 40 ಸಾವಿರ ಶಾಲೆಗಳು ಮುಚ್ಚಿಹೋಗುವ ಸಾಧ್ಯತೆಗಳಿವೆ. ಇಷ್ಟಕ್ಕೂ ಒಂದರೊಳಗೊಂದು ಲೀನವಾದಾಗ ಎರಡರಲ್ಲಿ ಒಂದನ್ನು ಮುಚ್ಚಿದಂತೆಯೇ ಅಲ್ಲವೇ ? ಈ ಗಣಿತ ಸೂತ್ರ ಸರ್ಕಾರದ ಜಾಣಬುದ್ಧಿಗೆ ಅಪಥ್ಯವಾಗುತ್ತದೆ. ವರ್ತಮಾನ ಸಮಾಜದ ಬೆಳವಣಿಗೆ ಮತ್ತು ಭವಿಷ್ಯತ್ತಿನ ಸಾಮಾಜಿಕ ಅಭ್ಯುದಯಕ್ಕೆ ತಳಪಾಯವಾಗುವ ಸರ್ಕಾರಿ ಶಾಲೆಗಳ ಯುಗಾಂತ್ಯಕ್ಕೆ ಬಹುಶಃ ಎಲ್ಲ ಚುನಾಯಿತ ಸರ್ಕಾರಗಳೂ ವೇದಿಕೆ ಸಿದ್ಧಪಡಿಸುತ್ತಿವೆ.

Actor Bhaskar Shetty Om Prakash Rao : ವಿಧಾನ ಸೌಧ ಮೆಟ್ಟಿಲೇರಿದ  ಕಥೆ ಹಿಂದಿನ ರಾಜಕಾರಣ ಆಸೆ!  #biggboss

ಸರ್ಕಾರಿ ಶಾಲೆಗಳ ದುರವಸ್ಥೆ

ಈ ಹಿನ್ನೆಲೆಯಲ್ಲೇ ಭಾರತದ ಸರ್ಕಾರಿ ಶಾಲೆಗಳ ಸ್ಥಿತಿಗಳನ್ನು ಪರಾಮರ್ಶಿಸಬೇಕಿದೆ. ಕೇಂದ್ರ ಶಿಕ್ಷಣ ಸಚಿವಾಲಯದ “ ಶಿಕ್ಷಣಕ್ಕಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ “ (Unified District Information System for Education -UDISE) 2025-26ರ ವರದಿಯಲ್ಲಿ ಉಲ್ಲೇಖಿಸಿರುವಂತೆ ಭಾರತದಲ್ಲಿ 11.89 ಕೋಟಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ. ದೇಶದ ಒಟ್ಟು ಶಾಲಾ ಮಕ್ಕಳ ಪೈಕಿ ಶೇಕಡಾ 48-50ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಾಂಸ್ಥಿಕವಾಗಿ ಸರ್ಕಾರಿ ಶಾಲೆಗಳ ಪ್ರಮಾಣ ಶೇಕಡಾ 69ರಷ್ಟಿದ್ದು, 2023-24 ಕ್ಕೆ ಹೋಲಿಸಿದರೆ 2025-26ರಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಾದ ಮಕ್ಕಳ ಸಂಖ್ಯೆ 86 ಲಕ್ಷ ಕಡಿಮೆಯಾಗಿದೆ. ಖಾಸಗಿ ಅನುದಾನಿತ ಶಾಲೆಗಳ ಪ್ರವೇಶಾತಿ 88 ಲಕ್ಷ ಹೆಚ್ಚಾಗಿದೆ. ಶಾಲಾ ತರಗತಿಗಳ ಸಾಮಾಜಿಕ ಚಿತ್ರಣವನ್ನು ಗಮನಿಸಿದಾಗ ಒಬಿಸಿಗಳು ಶೇಕಡಾ 44.9, ಪರಿಶಿಷ್ಟ ಜಾತಿ ಶೇಕಡಾ 17.7 ಮತ್ತು ಪರಿಶಿಷ್ಟ ಪಂಗಡಗಳ ಶೇಕಡಾ 10ರಷ್ಟು ಶಾಲಾ ಮಕ್ಕಳನ್ನು ದಾಖಲಿಸಲಾಗಿದೆ.

ಕಾರ್ಪೋರೇಟ್ ಮಾರುಕಟ್ಟೆ ಮತ್ತು ಬಂಡವಾಳ ಭಾರತದ ಅರ್ಥವ್ಯವಸ್ಥೆಯನ್ನು ಆಕ್ರಮಿಸಿಕೊಂಡ ನಂತರದಲ್ಲಿ ಅಂದರೆ 2014ರಿಂದೀಚೆಗೆ, ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ 94,000 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಇದು ನೀತಿ(?) ಆಯೋಗದ ವರದಿ. ಈ ಅವಧಿಯಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿ ದಾಖಲಾತಿ 2.26 ಕೋಟಿಯಷ್ಟು ಕಡಿಮೆಯಾಗಿದೆ. ಒಟ್ಟು ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ 2005ರಲ್ಲಿ ಶೇಕಡಾ 71ರಷ್ಟಿದ್ದುದು 2025-26ರಲ್ಲಿ ಶೇಕಡಾ 49.24ರಷ್ಟಾಗಿದೆ.

ಸಾವಿರಾರು ಗ್ರಾಮೀಣ ಶಾಲೆಗಳು ಒಬ್ಬರೇ ಶಿಕ್ಷಕರೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಕಳೆದ ಒಂದು ವರ್ಷದಲ್ಲಿ ಉತ್ತರ ಪ್ರದೇಶದಲ್ಲಿ 25,000 , ಮಧ್ಯಪ್ರದೇಶದಲ್ಲಿ 22,600 ಶಾಲೆಗಳು ಮುಚ್ಚಿಹೋಗಿವೆ. ಅತಿಹೆಚ್ಚು ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯಗಳಿವು. ಇಷ್ಟರ ನಡುವೆ ʼ ಸರ್ವಶಿಕ್ಷಣ ಅಭಿಯಾನ ʼ ಇಂದಿಗೂ ಜಾರಿಯಲ್ಲಿದೆ. ಇದಕ್ಕೆ ಏನನ್ನೋಣ ?

Overview of capital markets in India: key concepts - iPleaders

ಭಾರತದ ವಿವಿಧ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿ, ದುರವಸ್ಥೆ, ಅವ್ಯವಸ್ಥೆ ಮತ್ತು ಅವಸಾನ ಪ್ರಕ್ರಿಯೆಯನ್ನು ಗಮನಿಸಿದಾಗ 1947ರ ಭಾರತದ ಕನಸು ಹೇಗೆ ಭಗ್ನವಾಗುತ್ತಿದೆ ಎಂದು ಅರ್ಥವಾಗುತ್ತದೆ. ಭಾರತದ ಸಂವಿಧಾನಕ್ಕೆ ಯಾವುದೇ ಚ್ಯುತಿ ಬಂದಿಲ್ಲ. ಸಾಂವಿಧಾನಿಕ ನಿಬಂಧನೆಗಳಿಗೆ, ಅನುಚ್ಛೇದಗಳಿಗೆ ಭಂಗ ಉಂಟಾಗಿಲ್ಲ. ಸಂವಿಧಾನ ರಕ್ಷಣಾ ಪಡೆಗಳು ಇದನ್ನು ಎಚ್ಚರದಿಂದ ಗಮನಿಸಬೇಕು.

ಇದನ್ನೂ ಓದಿ : ವಿಟ್ಲಪಿಂಡಿ ಉತ್ಸವದ ಬಳಿಕ ಅವಘಡ; ಸ್ವಾಮೀಜಿ ಕೈಯಿಂದ ಜಾರಿ ಬಿದ್ದ ಕೃಷ್ಣನ ಮೂರ್ತಿ

ರಾಜ್ಯದಿಂದ ರಾಜ್ಯಕ್ಕೆ ಹೇಗೆ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಸರ್ಕಾರದ ಮಡಿಲಿನಿಂದ ಜಾರಿ ಮಾರುಕಟ್ಟೆಯ ಅಂಗಳದಲ್ಲಿ ಬೀಳುತ್ತಿದೆ ಎನ್ನುವುದನ್ನು ಗುರುತಿಸಬೇಕಿದೆ. 2025-26ರ ಕೇಂದ್ರ ಬಜೆಟ್ನಲ್ಲಿ ಶಿಕ್ಷಣ ಸಚಿವಾಲಯಕ್ಕೆ 1,28,650 ಕೋಟಿ ರೂಗಳನ್ನು ಮಂಜೂರು ಮಾಡಲಾಗಿದೆ. ಶಾಲಾ ಶಿಕ್ಷಣ-ಸಾಕ್ಷರತೆಗೆ 78,572 ಕೋಟಿ, ಉನ್ನತ ಶಿಕ್ಷಣಕ್ಕೆ 50,078 ಕೋಟಿ ರೂಗಳನ್ನು ಒದಗಿಸಲಾಗಿದೆ. ಸಮಗ್ರ ಶಿಕ್ಷಣ ಯೋಜನೆಗೆ ಪ್ರತ್ಯೇಕವಾಗಿ 41,250 ಕೋಟಿ ರೂಗಳನ್ನು ಒದಗಿಸಲಾಗಿದೆ.

ಈ ಭಾರಿ ಮೊತ್ತ ಆಕರ್ಷಕವಾಗಿ ಕಾಣುತ್ತದೆ. ಆದರೆ ಒಟ್ಟು ಬಜೆಟ್ ವೆಚ್ಚದ ಭಾಗವಾಗಿ ನೋಡಿದಾಗ ಶಿಕ್ಷಣಕ್ಕಾಗಿ ಮೀಸಲಿಟ್ಟಿರುವ ಹಣ 1967ರಲ್ಲಿ ಕೊಥಾರಿ ಆಯೋಗ ಶಿಫಾರಸು ಮಾಡಿದ ಶೇಕಡಾ 6 ಇನ್ನೂ ಬಹಳ ದೂರ ಇದೆ. ಈವರೆಗಿನ ಯಾವುದೇ ಕೇಂದ್ರ-ರಾಜ್ಯ ಸರ್ಕಾರಗಳೂ ಕೊಥಾರಿ ಆಯೋಗದ ಸಲಹೆಯಂತೆ ಶಿಕ್ಷಣದಲ್ಲಿ ಸಾರ್ವಜನಿಕ ಹಣಹೂಡಿಕೆಗಾಗಿ ಒಟ್ಟು ಬಜೆಟ್ನ ಶೇಕಡಾ 6ರ ಮಿತಿಯನ್ನು ಸಮೀಪಿಸಿಯೂ ಇಲ್ಲ. ಹಾಗಾಗಿ ಭಾರತದಲ್ಲಿ ಸಾರ್ವತ್ರಿಕ ಸಾರ್ವಜನಿಕ ಶಿಕ್ಷಣ (Universal Public Education) ಪ್ರಶ್ನೆ ಎದುರಾದಾಗ, ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ನ್ಯಾಯದ ಕಟಕಟೆಯಲ್ಲಿ ನಿಲ್ಲುತ್ತವೆ. ಪಶ್ಚಿಮ ಬಂಗಾಲ ಮತ್ತು ಕೇರಳದ ಎಡರಂಗ ಸರ್ಕಾರ ಮಾತ್ರ ಈ ಮಿತಿಯನ್ನು ದಾಟಿ ಶೇಕಡಾ 15ರವರೆಗೂ ಒದಗಿಸಿದೆ.

ದುರವಸ್ಥೆ-ಅವ್ಯವಸ್ಥೆಯ ಪಕ್ಷಿನೋಟ

ಇತ್ತೀಚಿನ ಜಂತರ್ ಮಂತರ್ ವಿದ್ಯಾರ್ಥಿ ಹೋರಾಟದ ನಂತರ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ರಾಜಸ್ಥಾನದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ಸಮೀಕ್ಷೆ ಮಾಡಲು ಮುಂದಾದಾಗ ಕಾನೂನು ಕ್ರಮ ಎದುರಿಸಬೇಕಾಯಿತು. ಅನುಮತಿ ಇಲ್ಲದೆ ಸರ್ಕಾರಿ ಸಂಸ್ಥೆಗಳನ್ನು ಪರಿಶೀಲಿಸುವುದು ಅಪರಾಧವೇ ಆದರೂ ಸಿಜೆಪಿ ಕಾರ್ಯಕರ್ತರ ಈ ಪ್ರಯತ್ನ ದೇಶಾದ್ಯಂತ ಸರ್ಕಾರಗಳಿಗೆ ಎಚ್ಚರಿಕೆಯ ಗಂಟೆಯಾಗಿತ್ತು.

ಹಲವು ರಾಜ್ಯ ಸರ್ಕಾರಗಳು ಕೂಡಲೇ ನಿದ್ದೆಯಿಂದೆದ್ದು ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ವಹಿಸಲಾರಂಭಿಸಿದವು. ಆದರೆ ಈ ಆರಂಭ ಶೂರತ್ವದ ಕ್ರಮಗಳು ತಾರ್ಕಿಕ ಅಂತ್ಯ ತಲುಪುತ್ತವೆಯೇ ? ಹೇಳಲಾಗುವುದಿಲ್ಲ. ಆದರೆ ಪತ್ರಿಕಾ ಮಾಧ್ಯಮಗಳು ಈ ಚಟುವಟಿಕೆಯನ್ನು ಮುಂದುವರೆಸಿದ್ದು, ವಿವಿಧ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳ ಸಮೀಕ್ಷೆ ನಡೆಸಿ ವರದಿ ಮಾಡಿವೆ. ಈ ಸಮೀಕ್ಷೆಯ ಫಲಿತಾಂಶಗಳನ್ನು ಗಮನಿಸಿದರೆ, ಶಿಕ್ಷಣ ನವ ಭಾರತದಲ್ಲಿ ಎಷ್ಟು ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಸ್ಪಷ್ಟವಾಗುತ್ತದೆ.

ಬಿಹಾರ : ಉತ್ತರ ಬಿಹಾರದ ಮುಝಫರ್ಪುರ ಜಿಲ್ಲೆಯ ದುಮ್ರಿ ಕಾವತ್ ತೊಲಾ ಪ್ರಾಥಮಿಕ ಶಾಲೆ ಬಹುತೇಕ ಕುಸಿಯುವ ಹಂತ ತಲುಪಿದೆ. ಎರಡು ತರಗತಿ ಕೊಠಡಿಗಳ ಹೊರಭಾಗದಲ್ಲಿ ಗೋಡೆಯ ಪ್ಲಾಸ್ಟರ್ ನಿರಂತರವಾಗಿ ಉದುರಿಬೀಳುತ್ತಿದ್ದು ಈ ಶಾಲೆಯ 119 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಕೊಠಡಿಗಳಲ್ಲೇ ಕುಳಿತು ಪಾಠ ಕೇಳುತ್ತಾರೆ. ಹೊರಗಿನ ಅಂಗಳದಲ್ಲಿ ಕುರಿಗಳು ಓಡಾಡುತ್ತಿರುತ್ತವೆ, ಕೆಲವೊಮ್ಮೆ ತರಗತಿಯ ಒಳಗೂ ಪ್ರವೇಶಿಸುವುದುಂಟು.1982ರಲ್ಲಿ ಸ್ಥಾಪನೆಯಾದ ಈ ಶಾಲೆಗೆ ಕಾಂಪೌಂಡ್ ಇಲ್ಲ, ಶೌಚಾಲಯ ಅಥವಾ ಆಟದ ಮೈದಾನ ಇಲ್ಲ. ಬಿಸಿಯೂಟದ ಪದಾರ್ಥಗಳನ್ನು ಶೇಖರಿಸಿಡಲು ಸ್ಥಳಾವಕಾಶವೇ ಇಲ್ಲ.ಶಿಕ್ಷಕರು ಪಕ್ಕದ ಕಟ್ಟಡದ ಶೌಚಾಲಯ ಬಳಸುತ್ತಾರೆ, ಮಕ್ಕಳಿಗೆ ಬಯಲೇ ಶೌಚಾಲಯ. ಹೊಸ ಕಟ್ಟಡ ನಿರ್ಮಿಸಲು ಜಾಗವೂ ಲಭ್ಯವಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ.

CJP Ashutosh Ranka Exclusive Karnataka : KPSC ಹಗರಣದಲ್ಲಿ ನೊಂದ ವಿದ್ಯಾರ್ಥಿಗಳ ಬೆನ್ನಿಗೆ CJP ಯಾವತ್ತೂ ಇದೆ..

ಇಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿ ಬುಧ್ನಗರ ಜಗನ್ನಾಥ್ ಮಾಲಿಕಾನಾ ತೊಲಾ ಮಾಧ್ಯಮಿಕ ಶಾಲೆಯಲ್ಲಿ 283 ಶಿಕ್ಷಣಾರ್ಥಿಗಳಿದ್ದಾರೆ. 10 ಮಂದಿ ಶಿಕ್ಷಕರು, ಈ ಶಾಲೆಯ ಎರಡು ಕೊಠಡಿಗಳಲ್ಲಿ ಎಲ್ಲರನ್ನೂ ಕೂರಿಸಬೇಕಾಗುತ್ತದೆ. 1 ಮತ್ತು 2ನೆ ತರಗತಿಯ ಮಕ್ಕಳಿಗೆ ಹೊರವಲಯದ ದೊಡ್ಡ ಮರವೇ ತರಗತಿ. ಮಳೆ ಹೆಚ್ಚಾಗಿ ಪ್ರವಾಹ ಬಂದಾಗ ಈ ಶಾಲೆಯೂ ಹೊಳೆಯಾಗುತ್ತದೆ. ಪಕ್ಕದ ವೈಶಾಲಿ ಜಿಲ್ಲೆಯ ಮಿರ್ಪುರ ಪಥಡ್ ರಾಜದೇವ್ ತೊಲಾ ಶಾಲೆಗೆ ಸ್ವಂತ ಕಟ್ಟಡವೇ ಇಲ್ಲ. 2014ರಲ್ಲಿ ನಿರ್ಮಿಸಿರುವ ಸಮುದಾಯ ಭವನದಲ್ಲಿ ಶಾಲೆ ನಡೆಯುತ್ತಿದೆ. 1 ರಿಂದ 5ನೆ ತರಗತಿಯ ಮಕ್ಕಳು ಒಂದೇ ಕೋಣೆಯಲ್ಲಿ ಕೂರುತ್ತಾರೆ.

ಇವರ ಜೊತೆ ಬಿಸಿಯೂಟದ ಪಾತ್ರೆ ಪಡಗು ಪದಾರ್ಥಗಳು ಮತ್ತು ಕಪಾಟುಗಳು ಎಲ್ಲವೂ ಇರುತ್ತವೆ. ಒಟ್ಟು 91 ಮಕ್ಕಳು ವ್ಯಾಸಂಗ ಮಾಡುತ್ತಾರೆ. ಈ ಶಾಲೆಯಲ್ಲೂ ಶೌಚಾಲಯ ಸೌಲಭ್ಯ ಇಲ್ಲ. ರೋಹ್ತಾಸ್ನಲ್ಲಿರುವ ಮಾಧ್ಯಮಿಕ ಶಾಲೆಯಲ್ಲಿ ನಾಲ್ಕು ತರಗತಿಗಳಿದ್ದು ಒಂದೇ ಕೊಠಡಿಯಲ್ಲಿ ಕೂರುತ್ತಾರೆ. ಇರುವ ಮೂರು ಕೋಣೆಗಳಲ್ಲಿ ಎರಡನ್ನು ಸ್ಥಳೀಯ ನಿವಾಸಿಯೊಬ್ಬರು ಅತಿಕ್ರಮಿಸಿದ್ದು ತನ್ನ ಕೃಷಿ ಉಪಕರಣ, ಜಾನುವಾರುಗಳ ಮೇವು ಇತ್ಯಾದಿಗಳನ್ನು ಸಂಗ್ರಹಿಸಿಡುತ್ತಾರೆ.

ರಾಜಸ್ಥಾನ : ಡೀಗ್ ಜಿಲ್ಲೆಯ ಉಂಚ್ಕಿ ಗ್ರಾಮದಲ್ಲಿರುವ ರಾಜಕೀಯ ಪ್ರಾಥಮಿಕ್ ವಿದ್ಯಾಲಯಕ್ಕೆ ತಲುಪಲು ಸರಿಯಾದ ರಸ್ತೆಯೇ ಇಲ್ಲ. ಒಂದು ಬದಿಯಲ್ಲಿ ಸ್ಮಶಾನ ಮತ್ತೊಂದು ಬದಿಯಲ್ಲಿ ಎತ್ತರದ ಗೋಡೆ, ಇದರ ನಡುವೆ ಮಕ್ಕಳು ,ಅನಿವಾರ್ಯವಾಗಿ ಸ್ಮಶಾನವನ್ನು ಹಾದುಕೊಂಡೇ ಹೋಗಬೇಕಾಗುತ್ತದೆ. ರಸ್ತೆಯ ಕೆಸರು ಮತ್ತು ಸುತ್ತಲೂ ಬೆಳೆದಿರುವ ಕುರುಚಲು ಗಿಡಗಳು, ಪೊದೆಗಳು ಈ ಮಕ್ಕಳು ನಡೆಯುವ ಹಾದಿಯ ನೈಸರ್ಗಿಕ ಸಂಗಾತಿಗಳು.

ಕಾರಿಡಾರ್ಗಳೇ ಶಾಲಾ ಕೊಠಡಿಗಳಾಗಿದ್ದು 4 ಮತ್ತು 5ನೆ ತರಗತಿಯ ಮಕ್ಕಳು ಒಂದೆಡೆ ಕೂರುತ್ತಾರೆ. ಈ ಶಾಲೆ ಎನ್ಸಿಆರ್ (National Capital Region) ದೆಹಲಿಯಿಂದ 165 ಕಿಲೋಮೀಟರ್ ದೂರದಲ್ಲಿದೆ. ಈ ಶಾಲೆಯಲ್ಲೂ ಶೌಚಾಲಯ ಇಲ್ಲ. ಮಕ್ಕಳು ಮಧ್ಯಾಹ್ನ ಊಟಕ್ಕೆ ಮನೆಗೇ ಹೋಗಬೇಕಾಗುತ್ತದೆ ಸಮೀಪದಲ್ಲೇ ಇರುವ ಅಮರೂಕ ಗ್ರಾಮದ ಪ್ರಾಥಮಿಕ ಶಾಲೆಯಲ್ಲೂ ಸಹ ಕಾರಿಡಾರ್ನಲ್ಲೇ ಪಾಠ ಮಾಡಲಾಗುತ್ತದೆ. ಶಾಲಾ ಕೊಠಡಿಗೆ ವಿದ್ಯುತ್ ಸೌಲಭ್ಯ ಇರುವುದಿಲ್ಲ. ಈ ಶಾಲೆಯಲ್ಲಿ 85 ಮಕ್ಕಳು ವ್ಯಾಸಂಗ ಮಾಡುತ್ತಾರೆ. ಮಾಧ್ಯಮಗಳೊಡನೆ ಮಾತನಾಡದಂತೆ ಈ ಶಾಲೆಯ ಶಿಕ್ಷಕರಿಗೆ ಆಜ್ಞೆ ಮಾಡಲಾಗಿದೆ !!

ಮಧ್ಯ ಪ್ರದೇಶ : ರಾಜಧಾನಿ ಭೂಪಾಲ್ನಿಂದ 40 ಕಿಲೋಮೀಟರ್ ದೂರದಲ್ಲಿರುವ ಸೆಹೋರ್ ಜಿಲ್ಲೆಯ ಹಿರಾಪುರ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆ ಗ್ರಾಮಪಂಚಾಯತ್ ಕಚೇರಿ ಇರುವ ಕಟ್ಟಡದಲ್ಲೇ ನಡೆಯುತ್ತದೆ. ನಾಲ್ಕು ಕೋಣೆಗಳ ಶಾಲೆಯಲ್ಲಿ ಕೇವಲ 22 ಮಕ್ಕಳು ವ್ಯಾಸಂಗ ಮಾಡುತ್ತಾರೆ. ಮಳೆ ಬಂದಾಗ ತಾರಸಿಯಿಂದ, ಗೋಡೆಯಿಂದ ನೀರು ಸೋರುವುದು ಒಂದು ಸಮಸ್ಯೆಯಾದರೆ ಮತ್ತೊಂದೆಡೆ , ಪಕ್ಕದಲ್ಲೇ ಇರುವ ಹೊಂಡದಲ್ಲಿ ಕೆಸರು, ಜಾನುವಾರುಗಳ ತ್ಯಾಜ್ಯ, ಕಸಕಡ್ಡಿ ಎಲ್ಲವೂ ಸಂಗ್ರಹವಾಗಿರುತ್ತದೆ. ಎಲ್ಲ ಮಕ್ಕಳೂ ಅಂಚಿನಲ್ಲಿರುವ ಸಮುದಾಯಗಳಿಗೆ (Marginalised Communities) ಸೇರಿದವರಾಗಿದ್ದು ಬೇರೆ ಆಯ್ಕೆ ಇಲ್ಲದೆ ಈ ಶಾಲೆಗೆ ಬರುತ್ತಾರೆ.

ಭೂಪಾಲ್ ಬಳಿಯ ಕೋಲಾರದಲ್ಲಿರುವ ಶಾಲೆಯಲ್ಲಿ 70 ಮಕ್ಕಳು ಒಬ್ಬ ಶಿಕ್ಷಕರು ಇದ್ದಾರೆ. ಮಾಂಡ್ಲಾದಲ್ಲಿರುವ ಬಿಲಗಾಂವ್ ಗ್ರಾಮದ ಪಿಎಮ್ ಶ್ರೀ ಉನ್ನತ ಪ್ರೌಢಶಾಲೆಯಲ್ಲಿ 11 ಮತ್ತು 12ನೆ ತರಗತಿಯ ಕಲೆ ಮತ್ತು ವಿಜ್ಞಾನ ಓದುವ ಶಿಕ್ಷಣಾರ್ಥಿಗಳು ವರ್ಷವಿಡೀ ಶಿಕ್ಷಕರಿಲ್ಲದೆ ಸ್ವತಃ ತಾವೇ ಓದಿಕೊಳ್ಳಬೇಕಾಗಿದೆ. ಆಗಸ್ಟ್ 2025ರಿಂದಲೂ ಇಲ್ಲಿ ಶಿಕ್ಷಕರನ್ನು ನೇಮಿಸಲಾಗಿಲ್ಲ.

Centre for the Study of Marginalised Communities (Tala Samudaya) - National  Law School of India University

ಛತ್ತಿಸ್‌ಗಢ 1856 ಶಾಲೆಗಳ ಪೈಕಿ 222 ಶಾಲಾ ಕಟ್ಟಡಗಳು ಕುಸಿಯುವ ಹಂತದಲ್ಲಿದ್ದು, 43 ಶಾಲೆಗಳನ್ನು ಕೂಡಲೇ ಸ್ಥಳಾಂತರಿಸಬೇಕಿದೆ. ಉತ್ತರಖಾಂಡದ ಪಿತೋರ್ಘರ್ ಸಮೀಪ ಗಂಗೊಲಿಹತ್ನಲ್ಲಿರುವ ಹೆಣ್ಣು ಮಕ್ಕಳ ಶಾಲೆಯಲ್ಲಿ 130 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಮಳೆಗಾಲದಲ್ಲಿ ತರಗತಿಯ ಒಳಗೆ ಬಕೆಟ್ ಮತ್ತು ಛತ್ರಿಗಳನ್ನು ಹಿಡಿದು ಕೂರಬೇಕಾಗುತ್ತದೆ. 5000ಕ್ಕೂ ಹೆಚ್ಚು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10ಕ್ಕಿಂತಲೂ ಕಡಿಮೆ ಇದೆ. ಗೋವಾದ ಶೇಕಡಾ 45ರಷ್ಟು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಬಿಹಾರದ ರೋಹ್ತಾಸ್ನಲ್ಲಿ 200 ಮಕ್ಕಳು ಒಂದೇ ಕೊಠಡಿಯಲ್ಲಿ ಕೂರುತ್ತಾರೆ. ಛತ್ತಿಸ್ಘಡದ 1000 ಶಾಲೆಗಳಲ್ಲಿ ಶೌಚಾಲಯ ಸೌಲಭ್ಯಗಳಿಲ್ಲ. ಕೇರಳಂನಲ್ಲೂ 1157 ಶಾಲೆಗಳು ಕುಸಿಯುವ ಹಂತದಲ್ಲಿದ್ದು ದುರಸ್ತಿಯಾಗಬೇಕಿದೆ.

(ರಾಜ್ಯಾವಾರು ಸಮೀಕ್ಷಾ ವರದಿಗಳಿಗೆ ಆಧಾರ ದ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯಾ
Missing: boundary walls, bathrooms, blackboards
https://www.thehindu.com/news/national/missing-from-hindi-heartland-schools-boundary-walls-bathrooms-blackboards/article71429291.ece
TOI ground report from across India: When school means .https://timesofindia.indiatimes.com/india/toi-ground-report-from-across-india-when-school-means-buffaloes-and-buckets/articleshow/133673875.cms)

ವಿಕಾಸದ ಹಾದಿಯ ಕಂದಕಗಳು

ಈ ದುರವಸ್ಥೆ ಮತ್ತು ನಿರ್ಲಕ್ಸ್ಯದ ನಡುವೆಯೂ ಕೇರಳಂ, ಉತ್ತರ ಪ್ರದೇಶ ಮತ್ತು ಕೆಲವು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳನ್ನು ಉನ್ನತ ದರ್ಜೆಗೇರಿಸುವ ಪ್ರಯತ್ನಗಳು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೆ ಸರ್ಕಾರಗಳು ಪ್ರಾಥಮಿಕ ಹಂತದಿಂದಲೇ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತಿರುವುದರಿಂದ, ಗ್ರಾಮೀಣ ಮಕ್ಕಳೂ ಸಹ ಸರ್ಕಾರಿ ಶಾಲೆಗಳನ್ನು ತೊರೆಯುತ್ತಿದ್ದಾರೆ. ಆಂಗ್ಲ ಭಾಷಾ ಶಿಕ್ಷಣ ಒಂದು ಕಾರಣವಾದರೆ ಮತ್ತೊಂದು ಉತ್ತಮ ಸೌಕರ್ಯಗಳು ಪೋಷಕರನ್ನು ಅಕರ್ಷಿಸುತ್ತವೆ. ಕರ್ನಾಟಕ ಸರ್ಕಾರ ಕೆಪಿಎಸ್-ಮ್ಯಾಗ್ನೆಟ್ ಯೋಜನೆಯಲ್ಲಿ ಆಂಗ್ಲ ಭಾಷಾ ಕಲಿಕೆಯನ್ನು ಅಳವಡಿಸಿದೆ. ಆದರೆ ಸಾವಿರಾರು ಸರ್ಕಾರಿ ಶಾಲೆಗಳು ಇಲ್ಲವಾಗುತ್ತವೆ.

ಇತ್ತೀಚೆಗೆ ತಾನೇ ಶಿಕ್ಷಕರ ದಿನಾಚರಣೆಯನ್ನು ಆಚರಿಸಿರುವ ನವ ಭಾರತ, ಶಿಕ್ಷಣದ ಸಂಪೂರ್ಣ ಖಾಸಗೀಕರಣ ಮತ್ತು ಕಾರ್ಪೋರೇಟೀಕರಣಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ನವ ಉದಾರವಾದಿ ಆರ್ಥಿಕತೆಯಲ್ಲಿ ನಗರೀಕರಣ, ನಗರ ವಿಸ್ತರಣೆ, ಬೃಹತ್ ನಗರಗಳ ಯೋಜನೆ ಮತ್ತು ಸಣ್ಣ ಪಟ್ಟಣಗಳನ್ನೂ ಉನ್ನತೀಕರಿಸುವ ಯೋಜನೆಯೊಂದಿಗೆ, ಎಲ್ಲ ಊರುಗಳಲ್ಲೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಉತ್ತೇಜನ ನೀಡುತ್ತಿರುವುದನ್ನೂ ಗಮನಿಸಬೇಕಿದೆ.

ಹಾಗಾಗಿಯೇ ದೇಶಾದ್ಯಂತ ಸಾವಿರಾರು ಶಾಲೆಗಳಲ್ಲಿ, ಸಾವಿರಾರು ಬೋಧಕರ ಹುದ್ದೆಯನ್ನು ಖಾಲಿ ಬಿಡಲಾಗಿದೆ. ಸರಿಯಾದ ರಸ್ತೆ ಸಂಪರ್ಕವಿಲ್ಲದ, ಸರ್ಕಾರಿ ಸಾರಿಗೆ ಸೌಕರ್ಯ ಇಲ್ಲದ ಗ್ರಾಮೀಣ, ಅರಣ್ಯದಂಚಿನ ಶಾಲೆಗಳು ಹಂತಹಂತವಾಗಿ ಅವಸಾನ ಹೊಂದುತ್ತಿವೆ.

ವಿಕಸಿತ ಭಾರತದ 2047ರ ಕನಸು ಕೈಗೂಡುವ ವೇಳೆಗೆ 1947ರ ಸಾರ್ವತ್ರಿಕ ಉಚಿತ ಕಡ್ಡಾಯ ಶಿಕ್ಷಣದ ಕನಸು ಬಹುಶಃ ಚರಿತ್ರೆಯ ಪುಟಗಳಿಗೆ ಸೇರಿರುತ್ತದೆ. ವಿಕಾಸವನ್ನು ಸಂಭ್ರಮಿಸುವ ನವ ಭಾರತ, ಈ ನೂರು ವರ್ಷಗಳಲ್ಲಿ ಭಾರತವನ್ನು ಸಮೃದ್ಧ ದೇಶವನ್ನಾಗಿ ಕಟ್ಟಲು ಅಡಿಪಾಯ ಒದಗಿಸಿದ ಸಾರ್ವತ್ರಿಕ ಸಾರ್ವಜನಿಕ ಶಿಕ್ಷಣವನ್ನು ಸಾಂಸ್ಥಿಕವಾಗಿ ಸಮಾಧಿ ಮಾಡಿರುತ್ತದೆ. ಮೈಸೂರಿನಲ್ಲಿ ರಾಜಪ್ರಭುತ್ವ ಕಾಲದ 142 ವರ್ಷಗಳ ಹೆಣ್ಣುಮಕ್ಕಳ ಶಾಲೆಯ ಸಮಾಧಿಯ ಮೇಲೆ ʼ ವಿವೇಕ ಸ್ಮಾರಕ ʼ ನಿರ್ಮಿಸಿರುವುದು ಭವಿಷ್ಯ ಭಾರತದ ಶೈಕ್ಷಣಿಕ ಪಯಣದ ಮುನ್ಸೂಚನೆಯನ್ನು ನೀಡಿದೆ. ಬಹುಶಃ ಕಾರ್ಪೋರೇಟ್ ಬಂಡವಾಳದ ಸ್ಥಾವರಗಳು ಭಾರತದ ಶೈಕ್ಷಣಿಕ ಜಗತ್ತಿನಲ್ಲಿ ರಾರಾಜಿಸುತ್ತವೆ.

ಹೊಸ ಆಲೋಚನೆಯ ಕಡೆಗೆ

ಕಾಕ್ರೋಚ್ ಜನತಾ ಪಕ್ಷದ ಯುವಸಮೂಹ ಆಗಸ್ಟ್ 15ರಂದು ಆರಂಭಿರುವ “ ಸ್ಕೂಲ್ ಠೀಕ್ ಕರೋ ” (ಶಾಲೆಗಳನ್ನು ಸರಿಪಡಿಸಿ) ಅಭಿಯಾನವನ್ನು ಭಾರತದ ಎಡಪಕ್ಷಗಳು, ದಲಿತ ಚಳುವಳಿಗಳು, ಪ್ರಗತಿಪರ ಸಂಘಟನೆಗಳು ಎರಡು ದಶಕದ ಮುನ್ನವೇ ಆರಂಭಿಸಿದ್ದಲ್ಲಿ ಬಹುಶಃ ಈ ವೇಳೆಗೆ ಸರ್ಕಾರಿ ಶಾಲೆಗಳು ಐಸಿಯು (ICU)ಗಳಿಂದ ಹೊರಗಿರುತ್ತಿದ್ದವು. ಸಮಾಜದ ಕೊರತೆಗಳನ್ನು ಮತ್ತು ನ್ಯೂನತೆಗಳನ್ನು ಸರಿಪಡಿಸುವ ಜನಧ್ವನಿ ನಿರ್ಣಾಯಕ ಸಮಯದಲ್ಲಿ ಸ್ಫೋಟಿಸುವುದು ಚಾರಿತ್ರಿಕವಾಗಿ ಕಾಣಬಹುದಾದ ವಿದ್ಯಮಾನ. ಬಹುಶಃ ಸಿಜೆಪಿ ಈ ಧ್ವನಿಯನ್ನು ಪ್ರತಿನಿಧಿಸುತ್ತದೆ.

ಇದಕ್ಕೆ ದನಿಗೂಡಿಸುವ ಇಚ್ಛಾಶಕ್ತಿ ವರ್ತಮಾನದ ಫಲಾನುಭವಿ ಸಮಾಜಗಳಿಗೆ ಇದ್ದರೆ, ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳನ್ನು ದನದ ಕೊಟ್ಟಿಗೆಗಳಿಂದ ಹೊರತರಬಹುದು. ವಿದ್ಯೆ ಕಲಿಯುವ ಮಕ್ಕಳು ಶಾಲೆಗಳಲ್ಲಿ “ ಸ್ವಚ್ಛ ಭಾರತದ ” ಅನುಭವ ಪಡೆಯಬಹುದು. ಶಾಲಾ ಕಟ್ಟಡಗಳು ತಲೆಗಳ ಮೇಲೆ ಕುಸಿಯುವ ಮುನ್ನ, ಸುಸಜ್ಜಿತ ಕೊಠಡಿಗಳಿಗೆ ತೆರಳಿ, ವಿದ್ಯಾರ್ಜನೆಯನ್ನು ಮುಂದುವರೆಸಬಹುದು.

-೦-೦-೦-೦-೦-೦-

Tags: AccountibilityBiharCJPCockroach Janata PartyEducation ReformsEducation SystemIndian PoliticsMadhya PradeshMarginalised CommunitiesNa Divakar ArticleNarendra ModiPratidhvaniRahul Gandhi
Previous Post

‘ನೈಸ್ ಬಿಗ್ಗೆಸ್ಟ್ ಫ್ರಾಡ್’; ದೇವೇಗೌಡರ ತೀವ್ರ ವಿರೋಧ, ಸಿಎಂಗೆ ಬಹಿರಂಗ ಪತ್ರ

Next Post

ಏಷ್ಯಾಕಪ್‌ನಲ್ಲಿ ಭಾರತ-ಪಾಕ್ ಮತ್ತೆ ಮುಖಾಮುಖಿಯಾಗುತ್ತಾ? ಸೆಮಿಫೈನಲ್‌ ಲೆಕ್ಕಾಚಾರ ಹೀಗಿದೆ!

Related Posts

ಸತೀಶ್ ಜಾರಕಿಹೊಳಿ ವಿರುದ್ಧದ ED ದಾಳಿ ಹಿಂದೆ ಕಾಂಗ್ರೆಸ್ ಕೈವಾಡ? ಕುಮಾರಸ್ವಾಮಿ ಆರೋಪ; ಡಿಕೆಶಿ ಸವಾಲು
Top Story

ಸತೀಶ್ ಜಾರಕಿಹೊಳಿ ವಿರುದ್ಧದ ED ದಾಳಿ ಹಿಂದೆ ಕಾಂಗ್ರೆಸ್ ಕೈವಾಡ? ಕುಮಾರಸ್ವಾಮಿ ಆರೋಪ; ಡಿಕೆಶಿ ಸವಾಲು

by ಪ್ರತಿಧ್ವನಿ
September 16, 2026
0

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಸಂಬಂಧಿತ...

Read moreDetails
ಬಿಗ್‌ಬಾಸ್ ಮನೆಯಲ್ಲಿ ಓಂ ಪ್ರಕಾಶ್ ಆರೋಗ್ಯ ಕೈಕೊಟ್ಟಿದ್ದೇಕೆ?‌ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಕಾಶ್!

ಬಿಗ್‌ಬಾಸ್ ಮನೆಯಲ್ಲಿ ಓಂ ಪ್ರಕಾಶ್ ಆರೋಗ್ಯ ಕೈಕೊಟ್ಟಿದ್ದೇಕೆ?‌ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಕಾಶ್!

September 16, 2026
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ನಿಯಮ ಉಲ್ಲಂಘನೆ? ಪ್ರದೋಷ್ ವಿರುದ್ಧ ಪೊಲೀಸರಿಗೆ ದೂರು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ನಿಯಮ ಉಲ್ಲಂಘನೆ? ಪ್ರದೋಷ್ ವಿರುದ್ಧ ಪೊಲೀಸರಿಗೆ ದೂರು

September 16, 2026
‘ಮುಡಾ ದೂರು ಕೊಟ್ಟಿದ್ದು ಕಾಂಗ್ರೆಸ್‌ನವರೇ’! ಸ್ವಪಕ್ಷೀಯರ ವಿರುದ್ಧ ರಾಜಣ್ಣ ಸ್ಫೋಟಕ ಹೇಳಿಕೆ

‘ಮುಡಾ ದೂರು ಕೊಟ್ಟಿದ್ದು ಕಾಂಗ್ರೆಸ್‌ನವರೇ’! ಸ್ವಪಕ್ಷೀಯರ ವಿರುದ್ಧ ರಾಜಣ್ಣ ಸ್ಫೋಟಕ ಹೇಳಿಕೆ

September 15, 2026
100 ದಿನಗಳ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಗೈರು: ಸಿಎಂ ಡಿಕೆಶಿ ಕೊಟ್ಟ ಸ್ಪಷ್ಟನೆ ಏನು?

100 ದಿನಗಳ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಗೈರು: ಸಿಎಂ ಡಿಕೆಶಿ ಕೊಟ್ಟ ಸ್ಪಷ್ಟನೆ ಏನು?

September 15, 2026
Next Post
ಏಷ್ಯಾಕಪ್‌ನಲ್ಲಿ ಭಾರತ-ಪಾಕ್ ಮತ್ತೆ ಮುಖಾಮುಖಿಯಾಗುತ್ತಾ? ಸೆಮಿಫೈನಲ್‌ ಲೆಕ್ಕಾಚಾರ ಹೀಗಿದೆ!

ಏಷ್ಯಾಕಪ್‌ನಲ್ಲಿ ಭಾರತ-ಪಾಕ್ ಮತ್ತೆ ಮುಖಾಮುಖಿಯಾಗುತ್ತಾ? ಸೆಮಿಫೈನಲ್‌ ಲೆಕ್ಕಾಚಾರ ಹೀಗಿದೆ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada