ಬಾವಿವುಡ್ನ ಜನಪ್ರಿಯ ನಟ ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷಿತ ಓ ಮೈ ಗಾಡ್ 2 (ಒಎಂಜಿ 2) ಟ್ರೈಲರ್ ಗುರುವಾರ (ಆಗಸ್ಟ್ 3) ಬಿಡುಗಡೆಯಾಗಿದೆ. ಹಲವು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ಅಕ್ಷಯ್ ಈ ಸಿನಿಮಾ ಗೆಲುವಿನ ಚಿಲುಮೆ ನೀಡಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಎರಡನೇ ಆವೃತ್ತಿನ ಒಎಂಜಿ ಚಲನಚಿತ್ರ ಕೆಲವು ದೃಶ್ಯಗಳಿಂದ ಸುದ್ದಿಯಲ್ಲಿದೆ. ಅಲ್ಲದೆ ಸಿನಿಮಾಗೆ ಎ ಪ್ರಮಾಣಪತ್ರ ನೀಡಿರುವುದೂ ಕುತೂಹಲ ಉಂಟು ಮಾಡಿದೆ.
ಪಂಕಜ್ ತ್ರಿಪಾಠಿ ಅವರು ಒಎಂಜಿ 2 ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಲೈಂಗಿಕ ಶಿಕ್ಷಣದ ಬಗ್ಗೆ ಇದೆ ಎಂಬುದನ್ನು ಟ್ರೈಲರ್ ಹೇಳಿದೆ. ಟ್ರೈಲರ್ ಉದ್ದಕ್ಕೂ ಶಿವನ ಅವತಾರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಅವರು ಬೆಳಿಗ್ಗೆ 11.02ಕ್ಕೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಿನಿಮಾದ ಟ್ರೈಲರ್ ಹಂಚಿಕೊಂಡಿದ್ದಾರೆ. “ಸಿನಿಮಾದ ಸ್ವಾಗತಕ್ಕೆ ತಯಾರಿ ಮಾಡಿಕೊಳ್ಳಿ. ಆಗಸ್ಟ್ 11 ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ” ಎಂದು ಬರೆದುಕೊಂಡಿರುವ ಅಕ್ಷಯ್ ಟ್ರೈಲರ್ ಹಂಚಿಕೊಂಡಿದ್ದಾರೆ.
ವಯೋಕಾಂ 18 ಸ್ಟುಡಿಯೋಸ್ ಸಂಸ್ಥೆಯು ತನ್ನ ಅಧಿಕೃತ ಯೂಟ್ಯೂಬ್ ವಾಹಿನಿಯಲ್ಲಿ ಒಎಂಜಿ 2 ಟ್ರೈಲರ್ ಬಿಡುಗಡೆಯಾಗಿದೆ. 3.12 ನಿಮಿಷದ ಅವಧಿಯ ಈ ಸಿನಿಮಾ ಟ್ರೈಲರ್ನಲ್ಲಿ ಅಕ್ಷಯ್ ಕುಮಾರ್ ಸಂಪೂರ್ಣ ಶಿವನ ವೇಷಧಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಲೈಂಗಿಕ ವಿಚಾರಗಳನ್ನು ಹೇಳುವಾಗ ಹೆಚ್ಚು ಎಚ್ಚರಿಕೆ ಬೇಕು. ಹೀಗಾಗಿ, ಒಎಂಜಿ 2 ಸಿನಿಮಾ ವಿವಾದ ಸೃಷ್ಟಿ ಮಾಡಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈಗಾಗಲೇ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಎ ಪ್ರಮಾಣಪತ್ರ ನೀಡಿದೆ. ವಯಸ್ಕರು ಮಾತ್ರ ಈ ಚಿತ್ರ ವೀಕ್ಷಿಸಬಹುದು ಎಂದು ಈ ಪ್ರಮಾಣಪತ್ರ ಹೇಳುತ್ತದೆ.
ನಾಗ ಸಾಧುಗಳ ದೃಶ್ಯವೊಂದು ʼಒಎಂಜಿ 2ʼ ಸಿನಿಮಾದಲ್ಲಿ ಬರುತ್ತದೆ. ನಾಗ ಸಾಧುಗಳು ಬಟ್ಟೆ ಹಾಕುವುದಿಲ್ಲ. ಆ ದೃಶ್ಯವನ್ನು ತೋರಿಸದಂತೆ ಸೆನ್ಸಾರ್ ಮಂಡಳಿಯವರು ಸೂಚಿಸಿದ್ದಾರೆ. ದೃಶ್ಯವೊಂದರ ಹಿನ್ನೆಲೆಯಲ್ಲಿ ಕಾಂಡೋಮ್ ಜಾಹೀರಾತು ಕಾಣಿಸುತ್ತದೆ. ಅದನ್ನು ತೆರವುಗೊಳಿಸುವಂತೆಯೂ ಸೂಚಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ನಟ ಲಿಖಿತ್ ಶೆಟ್ಟಿ ಹುಟ್ಟು ಹಬ್ಬಕ್ಕೆ ‘ಫುಲ್ ಮೀಲ್ಸ್’ ಪೋಸ್ಟರ್ ಬಿಡುಗಡೆ
ಒಎಂಜಿ 2 ಸಿನಿಮಾದಲ್ಲಿ 25 ಕಡೆಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ ಸೂಚಿಸಲಾಗಿದೆ. ಇದು ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ ‘ಆದಿಪುರುಷ್’ ಚಿತ್ರ ಸಾಕಷ್ಟು ವಿವಾದ ಮಾಡಿತ್ತು. ಈ ವಿವಾದದಿಂದ ಪ್ರಮಾಣೀಕರಣ ಮಂಡಳಿ ಎಚ್ಚೆತ್ತುಕೊಂಡಿದೆ. ಈ ಕಾರಣದಿಂದಲೇ ಸಿನಿಮಾವನ್ನು ಮರುಪರಿಶೀಲನಾ ಸಮಿತಿಗೆ ಕಳುಹಿಸಲಾಗಿತ್ತು.
ಅಮಿತ್ ರೈ ಸಿನಿಮಾ ನಿರ್ದೇಶಿಸಿದ್ದಾರೆ. ಅರುಣ್ ಭಾಟಿಯಾ ಮತ್ತು ಇತರರು ಸಿನಿಮಾ ನಿರ್ಮಿಸಿದ್ದಾರೆ. ವಿಕ್ರಮ್ ಮ್ಯಾಂಟ್ರೋಸ್ ಮತ್ತು ಇತರರ ಸಂಗೀತ ಚಿತ್ರಕ್ಕಿದೆ.