ನವದೆಹಲಿ: ದೇಶದ ಆರ್ಥಿಕತೆ ಬಲಪಡಿಸುವ ಉದ್ದೇಶದಿಂದ ಅನಗತ್ಯ ಚಿನ್ನ ಖರೀದಿಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಭಾರತ ಕನಿಷ್ಠ ಒಂದು ವರ್ಷ ಚಿನ್ನ ಖರೀದಿಯನ್ನು ಗಣನೀಯವಾಗಿ ಕಡಿಮೆ ಮಾಡಿದರೆ ವಿದೇಶಿ ವಿನಿಮಯ ಉಳಿತಾಯವಾಗುವುದರ ಜೊತೆಗೆ ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಬಲಿಷ್ಠವಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಖರೀದಿ ಮತ್ತು ಬಳಕೆ ಮಾಡುವ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರತಿವರ್ಷ ಸುಮಾರು 700ರಿಂದ 800 ಟನ್ ಚಿನ್ನವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಸುಮಾರು ಶೇ.90ರಷ್ಟು ಚಿನ್ನ ವಿದೇಶಗಳಿಂದಲೇ ಬರುತ್ತದೆ. ಇದಕ್ಕಾಗಿ ಭಾರತ ಸಾವಿರಾರು ಕೋಟಿ ರೂಪಾಯಿ ವಿದೇಶಿ ವಿನಿಮಯ ವೆಚ್ಚ ಮಾಡುತ್ತಿದೆ.

ಆರ್ಥಿಕ ತಜ್ಞರ ಅಂದಾಜಿನ ಪ್ರಕಾರ, ಭಾರತ ಒಂದು ವರ್ಷ ಚಿನ್ನದ ಆಮದು ಶೇ.50ರಷ್ಟು ಕಡಿಮೆ ಮಾಡಿದರೆ ಸುಮಾರು 30 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ವಿನಿಮಯ ಉಳಿತಾಯವಾಗಬಹುದು. ಶೇ.75ರಷ್ಟು ಆಮದು ಕಡಿತಗೊಂಡರೆ ಸುಮಾರು 44 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಉಳಿಸಬಹುದು ಎಂದು ಹೇಳಲಾಗುತ್ತಿದೆ.

ಭಾರತ ಮುಖ್ಯವಾಗಿ ಸ್ವಿಟ್ಜರ್ಲೆಂಡ್, ಯುಎಇ, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದಿಂದ ಚಿನ್ನ ಆಮದು ಮಾಡಿಕೊಳ್ಳುತ್ತದೆ. ಭಾರತದಲ್ಲಿ ಚಿನ್ನದ ಖರೀದಿ ಗಣನೀಯವಾಗಿ ಇಳಿಕೆಯಾಗಿದರೆ ಈ ರಾಷ್ಟ್ರಗಳ ಚಿನ್ನ ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀಳಬಹುದು ಎನ್ನಲಾಗುತ್ತಿದೆ.ಪ್ರಧಾನಿ ಮೋದಿ ನೀಡಿರುವ ಈ ಕರೆಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ದೇಶದ ಹಿತದೃಷ್ಟಿಯಿಂದ ಅನಗತ್ಯ ಖರೀದಿಯನ್ನು ನಿಯಂತ್ರಿಸುವುದು ಉತ್ತಮ ಕ್ರಮ ಎಂದು ಕೆಲ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಚಿನ್ನ ವ್ಯಾಪಾರ ಮತ್ತು ಆಭರಣ ಉದ್ಯಮದ ಮೇಲೆ ಅವಲಂಬಿತವಾಗಿರುವ ಸಾವಿರಾರು ವ್ಯಾಪಾರಿಗಳು ಹಾಗೂ ಕುಟುಂಬಗಳಿಗೆ ಇದರಿಂದ ಹೊಡೆತ ಬೀಳಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

ಇದೇ ವೇಳೆ ದೇಶದ ಆರ್ಥಿಕತೆ, ಹಣದುಬ್ಬರ ನಿಯಂತ್ರಣ ಹಾಗೂ ವಿದೇಶಿ ವಿನಿಮಯ ಉಳಿತಾಯಕ್ಕಾಗಿ ಪ್ರಧಾನಿ ಮೋದಿ ಹಲವು ಸಲಹೆಗಳನ್ನು ನೀಡಿದ್ದಾರೆ. ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸುವುದು, ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡುವುದು, ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ ಮಾಡುವುದು ಹಾಗೂ ವರ್ಕ್ ಫ್ರಮ್ ಹೋಮ್ ವ್ಯವಸ್ಥೆಗೆ ಉತ್ತೇಜನ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ.






