ಬೆಂಗಳೂರು : ರಾಜ್ಯದ ಶಾಲಾ – ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿಗೆ ತರುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ, ರಾಜ್ಯಾದ್ಯಂತ ಎಲ್ಲ ಶಾಲಾ ಕಾಲೇಜುಗಳಲ್ಲಿ ಸಾಂಪ್ರದಾಯಿಕ ಧಿರಿಸುಗಳನ್ನು ಧರಿಸಬಹುದು ಎಂದು ಹೇಳಿದ್ದಾರೆ.

ಯಾವುದೇ ಧರ್ಮದ ಸಾಂಪ್ರದಾಯಿಕ ವಸ್ಥ್ರಗಳನ್ನು ಧರಿಸಬಹುದು, ಆದರೆ ರಾಜ್ಯದ ಸರ್ಕಾರಿ ಶಾಲಾ – ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸುವುದನ್ನ ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ. ಕೇಸರಿ ಶಾಲು ಧಾರ್ಮಿಕತೆಯಡಿಯಲ್ಲಿ ಬರುವುದಿಲ್ಲ, ಆದ್ದರಿಂದ ಕೇಸರಿ ಶಾಲಿಗೆ ಶಾಲಾ – ಕಾಲೇಜುಗಳಲ್ಲಿ ಅವಕಾಶ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಇನ್ನೂ ಪ್ರಮುಖವಾಗಿ ಹಿಜಾಬ್ ನಿರ್ಬಂಧಿಸಿ ಕಳೆದ 2022 ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನ ಹಿಂಪಡೆದ ಸರ್ಕಾರ, ಹಿಜಾಬ್ ಧರಿಸಲು ಅವಕಾಶ ಕಲ್ಪಿಸಿ ಹೊಸ ಆದೇಶ ಜಾರಿಮಾಡಿದೆ.
ಸಾಮಾನ್ಯವಾಗಿ ವಿದ್ಯಾರ್ಥಿಗಳು ಜನಿವಾರ, ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ಪೇಟ ಅಥವಾ ಟರ್ಬನ್, ತಲೆ ವಸ್ತ್ರ ಅಥವಾ ಹಿಜಾಬ್ ಇತರೆ ಯಾವುದೇ ಸ್ವರೂಪದ ಸಾಂಪ್ರದಾಯಿಕ ಸಂಕೇತವನ್ನು ನಿಗದಿಪಡಿಸಲಾದ ಸಮವಸ್ತ್ರ ಜೊತೆಗೆ ಧರಿಸಬಹುದು. ಸಾಂಪ್ರದಾಯಿಕ ಮತ್ತು ಪದ್ಧತಿ ಆಧಾರಿತ ಸಂಕೇತ ಸಮವಸ್ತ್ರಕ್ಕೆ ಪೂರಕವಾಗಿರಬೇಕು. ಸಮವಸ್ತ್ರ ಬದಲಿಸುವ, ಮಾರ್ಪಡಿಸುವ ಅಥವಾ ವಿಫಲಗೊಳಿಸುವಂತಿರಬಾರದು ಎಂದು ಹೇಳಲಾಗಿದೆ.





