ಕೇಂದ್ರ ಸರ್ಕಾರ 2019ರಲ್ಲಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಅಫ್ಘಾನಿಸ್ತಾನದ ಬಿಕ್ಕಟ್ಟನ್ನು ಬಳಸಿಕೊಂಡಿದ್ದಾರೆ. ಪೌರತ್ವ ಕಾಯ್ದೆಯಲ್ಲಿ ತಿದ್ದುಪಡಿ ತರಲು ಕಾರಣವೇನು ಎಂಬದನ್ನು ವಿವರಿಸಲು ಅಫ್ಘಾನ್ ಉದಾಹರಣೆಯನ್ನು ನೀಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಹರ್ದೀಪ್ ಸಿಂಗ್ ಅವರು, ನಮ್ಮ ನೆರೆಯ ರಾಷ್ಟ್ರದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನಿಸಿದಾಗ ಪೌರತ್ವ ತಿದ್ದುಪಡಿ ಕಾಯ್ದೆಯ ಮಹತ್ವ ತಿಳಿಯುತ್ತದೆ ಎಂದು ಹೇಳಿದ್ದಾರೆ.
“ನಮ್ಮ ನೆರೆ ರಾಷ್ಟ್ರದಲ್ಲಿ ಘಟಿಸಿರುವ ಇತ್ತೀಚಿನ ಬೆಳವಣಿಗೆಗಳು ಹಾಗೂ ಅಲ್ಲಿನ ಸಿಖ್ ಮತ್ತು ಹಿಂದೂ ಸಮುದಾಯದ ಜನರು ಪಡುತ್ತಿರುವ ಕಷ್ಟಗಳನ್ನು ನೋಡುತ್ತಿದ್ದರೆ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಬೇಕಾದ ಅನಿವಾರ್ಯತೆಯ ಕುರಿತು ನಮಗೆ ತಿಳಿಯುತ್ತದೆ,” ಎಂದು ಅವರು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ 1996ರಿಂದ 2001ರ ತನಕ ತಾಲಿಬಾನ್ ಆಡಳಿತವಿದಾಗ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ದ ತಾಲಿಬಾನ್ ಅತ್ಯಂತ ಕಠೋರ ರೀತಿಯಲ್ಲಿ ವ್ಯವಹರಿಸಿತ್ತು. ವಿದೇಶಿಗರು ಹಾಗೂ ಪ್ರಾದೇಶಿಕ ಅಲ್ಪಸಂಖ್ಯಾತರು ಕೂಡಾ ಈ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಒಳಪಟ್ಟಿದ್ದರು.
ಈಗ ಮತ್ತೆ ಅಂತುಹುದೇ ಪರಿಸ್ಥಿತಿ ಮರುಕಳಿಸುವ ಆತಂಕ ಎದುರಾಗಿದೆ. ಈಗಾಗಲೇ ನೂರಾರು ಭಾರತೀಯರನ್ನು ಹಾಗೂ ಅಲ್ಲಿನ ಹಿಂದೂ, ಸಿಖ್ಖರನ್ನು ಭಾರತಕ್ಕೆ ಕರೆತರಲಾಗಿದೆ.
ಸಿಎಎ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಆಯಾ ದೇಶಗಳ ಅಲ್ಪಸಂಖ್ಯಾತ
ಸಮುದಾಯಗಳಾದ ಹಿಂದೂ, ಜೈನ, ಬೌಧ, ಪಾರ್ಸಿ ಹಾಗೂ ಕ್ರೈಸ್ತ ಧರ್ಮದ ನಾಗರಿಕರಿಗೆ ಭಾರತದ ಪೌರತ್ವ ನೀಡುತ್ತದೆ. ಈ ಕಾಯ್ದೆಯ ಅಡಿಯಲ್ಲಿ ಡಿಸೆಂಬರ್ 31,2014ರ ವರೆಗೆ ಭಾರತಕ್ಕೆ ಆಗಮಿಸಿರುವ ಜನರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸದೇ, ಭಾರತೀಯ ನಾಗರಿಕರು ಎಂದು ಪರಿಗಣಿಸಲಾಗುತ್ತಿತ್ತು. ಈ ಕಾಯ್ದೆಯು ಭಾರತದ ಸಾಂವಿಧಾನಿಕ ಆಶಯಗಳಿಗೆ ವಿರುದ್ದವಾದದ್ದು ಎಂಬ ಕಾರಣಕ್ಕೆ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸಂವಿಧಾನಕ್ಕೆ ವಿರುದ್ದವಾದದ್ದು ಎಂಬುದು ಹಲವರ ಅಭಿಪ್ರಾಯವಾಗಿದೆ