ಕೋವಿಡ್ ಎರಡನೇ ಅಲೆಯ ಉತ್ತುಂಗದ ವೇಳೆ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿದ ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ ಸತೀಶ್ ರೆಡ್ಡಿ ಅವರ ಆಪ್ತ ಸಹಾಯಕ ಬಾಬು ಸೇರಿದಂತೆ ನೇತ್ರಾವತಿ ಹಾಗೂ ರೋಹಿತ್ ಎಂಬವರ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಸಿಸಿಬಿ ಇನ್ಸ್ಪೆಕ್ಟರ್ ಶ್ರೀಧರ್ ಪೂಜಾರ ನೇತೃತ್ವದ ತಂಡವು, 250 ಪುಟಗಳ ಚಾರ್ಜ್ಶೀಟ್ ಅನ್ನು ACMM ನ್ಯಾಯಾಲಯಕ್ಕೆ ಸಲ್ಲಿಸಿದೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ ಹಾಗೂ ಸತೀಶ್ ರೆಡ್ಡಿ ಬೆಡ್ ಬ್ಲಾಕಿಂಗ್ ಹಗರಣ ಬಯಲಿಗೆಳೆದ ಬೆನ್ನಲ್ಲೇ ಇದೇ ಪ್ರಕರಣದಲ್ಲಿ ಸತೀಶ್ ರೆಡ್ಡಿ ಆಪ್ತ ಬಾಬುವನ್ನು ಪೊಲೀಸರು ಬಂಧಿಸಿದ್ದರು.
ಸಿಸಿಬಿ ಮೂಲಗಳ ಪ್ರಕಾರ ಈ ಹಗರಣದ ಮುಖ್ಯ ರುವಾರಿ ಬಾಬು. ಆತನ ನಿರ್ದೇಶನದ ಪ್ರಕಾರ ಬೇಗೂರು ನಿವಾಸಿ ನೇತ್ರಾವತಿ ಹಾಗೂ ಆಕೆಯ ಗೆಳೆಯ ರೋಹಿತ್ ಕುಮಾರ್ ಹಗರಣದಲ್ಲಿ ತೊಡಗಿಸಿಕೊಂಡಿದ್ದರು.
ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಕೋಟಾದಲ್ಲಿ ನಿಶ್ಚಯಿಸಲಾಗಿದ್ದ ಹಾಸಿಗೆಗಳನ್ನು ಮೊದಲೇ ಬುಕ್ ಮಾಡುತ್ತಿದ್ದ ಇವರು, ನಂತರ ಅದನ್ನು ಮಾರಾಟ ಮಾಡುತ್ತಿದ್ದರು. ನಲ್ವತ್ತು ಮಂದಿ ಸಾಕ್ಷ್ಯಗಳು ಹಾಗೂ ಬ್ಯಾಂಕ್ ವಹಿವಾಟಿನ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.
ಕೋವಿಡ್ ಬೆಡ್ ಲಭ್ಯವಿದೆಯೆಂದು ನೇತ್ರಾವತಿ ಮತ್ತು ರೋಹಿತ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸುತ್ತಿದ್ದರು. ನಾಗರಿಕರೊಂದಿಗೆ ನೇತ್ರಾವತಿಯೇ ಕರೆಯಲ್ಲಿ ಮಾತನಾಡುತ್ತಿದ್ದರು. ಬಳಿಕ ಬಾಬು ಅವರಲ್ಲಿ ಬೆಡ್ ಇರುವಂತೆ ಧೃಡೀಕರಿಸುತ್ತಿದ್ದಳು.
ಒಬ್ಬರಿಂದ ಆಕೆ 80000 ರುಪಾಯಿಗಳನ್ನು ಪಡೆದಿದ್ದು, ಇನ್ನು ಇಬ್ಬರಿಂದ 25000 ಹಾಗೂ 50000 ರುಪಾಯಿಗಳಂತೆ ವಸೂಲಿ ಮಾಡಿದ್ದರು. ಬಳಿಕ ಅದನ್ನು ಬಾಬು ಅವರಿಗೆ ಗೂಗಲ್ ಪೆ, ಫೋನ್ ಪೆ ಮುಖಾಂತರ ವರ್ಗಾಯಿಸುತ್ತಿದ್ದಳು. ನೇತ್ರಾವತಿ ಹಾಗೂ ರೋಹಿತ್ ಕೆಲಸಗಳಿಗೆ ಕಮಿಷನ್ ರೂಪದಲ್ಲಿ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತೊಂದು ರೋಗಿಗೆ ಹಾಸಿಗೆ ಮಾರಾಟ ಮಾಡುತ್ತಿರುವಾಗ ಹಗರಣವನ್ನು ಪತ್ತೆಹಚ್ಚಿದ್ದು ಚಾರ್ಜ್ ಶೀಟ್ನಲ್ಲಿ ಆ ರೋಗಿಯ ಹೇಳಿಕೆಯನ್ನೂ ದಾಖಲಿಸಲಾಗಿದೆ.