ಬೆಣ್ಣೆ ತಿಂದ ಕೋತಿ ಮೇಕೆ ಮೂತಿಗೆ ಒರೆಸಿತು – ಬೆಡ್ ದಂಧೆಯಲ್ಲಿ ಬಿಜೆಪಿ ಶಾಸಕ ಶಾಮೀಲು?

ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ  ಬೆಡ್‌ ಬುಕಿಂಗ್‌ ದಂಧೆಯಲ್ಲಿ ಇದೀಗ ಬಿಜೆಪಿ ಶಾಸಕರ ಪಾತ್ರದ ಕುರಿತು ಆರೋಪ ಎದ್ದಿದೆ. ಅವ್ಯವಹಾರ ಬಯಲಿಗೆಳೆಯುವ ವೇಳೆ  ತೇಜಸ್ವಿ ಸೂರ್ಯ ಅವರ ತಂಡದಲ್ಲಿದ್ದ ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಅವರ ಹೆಸರೇ ದಂಧೆಯಲ್ಲಿ ಕೇಳಿಬಂದಿದೆ.

ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ

ಬಿಬಿಎಂಪಿ ದಕ್ಷಿಣ ವಲಯದ ವಾರ್‌ ರೂಮ್‌ಗೆ ಮಂಗಳವಾರ ಭೇಟಿ ನೀಡಿದ್ದ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್‌ ರೆಡ್ಡಿ, ಎಲ್‌.ಎ.ರವಿ ಸುಬ್ರಹ್ಮಣ್ಯ ಹಾಗೂ ಉದಯ್‌ ಗರುಡಾಚಾರ್‌ ಅವರ ತಂಡವು ವಾರ್‌ ರೂಂನಲ್ಲಿ ಮುಸ್ಲಿಂ ಸಿಬ್ಬಂದಿಯನ್ನು ನೇಮಿಸಿಕೊಂಡ ಬಗ್ಗೆ ಪ್ರಶ್ನೆ ಮಾಡಿತ್ತು. 206 ಸಿಬ್ಬಂದಿಗಳಿರುವ ವಾರ್‌ರೂಮಿನಲ್ಲಿ ಕೇವಲ 17 ಮುಸ್ಲಿಂ ಸಿಬ್ಬಂದಿಯ ಹೆಸರುಗಳನ್ನು ಓದಿದ್ದ ತೇಜಸ್ವಿ ಸೂರ್ಯ, ‘ಇವರನ್ನೆಲ್ಲ ಹೇಗೆ ನೇಮಿಸಿಕೊಂಡಿರಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ತಂಡದಲ್ಲಿದ್ದ ರವಿಸುಬ್ರಹ್ಮಣ್ಯ ಅವರಂತೂ ‘ನೀವೇನು ಮದರಸಾ ನಡೆಸುತ್ತಿದ್ದೀರಾ, ಕಾರ್ಪೊರೇಷನ್‌ ನಡೆಸುತ್ತಿದ್ದೀರಾ’ ಎಂದೂ ಪ್ರಶ್ನಿಸಿದ್ದರು.

ಅದಾದ ಬೆನ್ನಿಗೆ, ಬಿಜೆಪಿ ಐಟಿ ಸೆಲ್‌ ʼಜಿಹಾದಿ, ಉಗ್ರರುʼ ಎಂದು ವಾರ್‌ ರೂಮಿನ ಮುಸ್ಲಿಂ ಸಿಬ್ಬಂದಿಗಳ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿತ್ತು. ಬಿಜೆಪಿಯ ಅದೀಕೃತ ಟ್ವಿಟರ್‌ ಖಾತೆಯಲ್ಲಿ ಬೆಂಗಳೂರಿನ ಬುಕಿಂಗ್‌ ಮಾಫಿಯಾ  ಜಾಗತಿಕ ಭಯೋತ್ಪಾದನೆಯ ಹೊಸ ರೂಪ ಎಂದು ಟ್ವೀಟ್‌ ಮಾಡಿತ್ತು.

ʼಸೇವೆಯ ಹೆಸರಿನಲ್ಲಿ ವ್ಯವಸ್ಥೆಯ ಒಳನುಸುಳಿರುವ ಉಗ್ರರು ಬಾಂಬ್‌ ಸ್ಪೋಟಿಸದೆ ಜನರ ಪ್ರಾಣ ತೆಗೆದಿದ್ದಾರೆʼ ಎಂದು ಬಿಜೆಪಿ ಆರೋಪಿಸಿ ಕೋವಿಡ್‌ ಸಂಕಷ್ಟದ ಸಂಧರ್ಭದಲ್ಲಿ ಸೇವೆ ಮಾಡಿದ ಸಮಸ್ತ ಮುಸ್ಲಿಮರನ್ನು ಪರೋಕ್ಷವಾಗಿ  ಅವಮಾನಗೊಳಿಸಿತ್ತು. ಅವರ ಸೇವೆಯನ್ನು ಉಗ್ರಗಾಮಿ ಚಟುವಟಿಕೆಗೆ ಹೋಲಿಸಿತ್ತು.

ಬಿಜೆಪಿ ಐಟಿ ಸೆಲ್‌ ಮಾತ್ರವಲ್ಲದೆ, ಬಿಜೆಪಿ ಹಿರಿಯ ನಾಯಕ, ಸಚಿವ ಕೆ ಎಸ್‌ ಈಶ್ವರಪ್ಪ ಕೂಡಾ ಬೆಡ್‌ ಬುಕಿಂಗ್‌ ದಂಧೆಯಲ್ಲಿ ಮುಸ್ಲಿಂ ಸಂಘಟನೆಯ ಕೈವಾಡವಿದೆಯೆಂದು ಅನುಮಾನ ವ್ಯಕ್ತಪಡಿಸಿದ್ದರು. ಸರ್ಕಾರಕ್ಕೆ ಕಳಂಕ ತರಲು ಮುಸ್ಲಿಂ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿದೆಯೆಂದು ಆರೋಪಿಸಿದ್ದರು.

ಬಿಜೆಪಿಯ ಈ ವರಸೆ ಹೊಸದಲ್ಲದ್ದರಿಂದ ತೇಜಸ್ವಿ ಸೂರ್ಯನ ʼಬೆಡ್‌ ಬುಕಿಂಗ್‌ ದಂಧೆʼ ಬಯಲಿಗೆಳೆಯುವ ಪ್ರಹಸನದ ಆರಂಭದಲ್ಲೇ ಅನುಮಾನ ಮೂಡಿಸುವಂತಿದ್ದವು. ಅಲ್ಪಸಂಖ್ಯಾತ ಸಮುದಾಯದ ಸಿಬ್ಬಂದಿಗಳನ್ನೇ ಗುರಿ ಮಾಡಿಕೊಂಡ ತೇಜಸ್ವಿ ಮತ್ತು ಪಟಾಲಂ, ಕ್ರೈಸ್ತ ಸಮುದಾಯದ ವೈದ್ಯರ ಹೆಸರನ್ನೂ ಉಲ್ಲೇಖಿಸಿತ್ತು. ಆ ಮೂಲಕ ಅದುವರೆಗೂ ಚರ್ಚೆಯಾಗುತ್ತಿದ್ದ, ಚಾಮರಾಜನಗರ ಆಮ್ಲಜನಕ ಕೊರತೆಯಿಂದ 28 ಮಂದಿ ಮೃತಪಟ್ಟ ಸುದ್ದಿ ತಣ್ಣಗಾಗಿ ಚರ್ಚಾ ವಿಷಯವೇ ತಿರುವು ಪಡೆಯಿತು.

ಇದರ ಜೊತೆಗೆ ಆಮ್ಲಜನಕ, ರೆಮಿಡಿಸಿವಿರ್‌, ಕರೋನಾ ಲಸಿಕೆ ಕೊರತೆ, ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯ, ಕೇರಳ-ಬಂಗಾಳ-ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಅವಮಾನ ಮೊದಲಾದ ಎಲ್ಲವನ್ನೂ ಬಿಜೆಪಿ ಯಶಸ್ವಿಯಾಗಿ ಮರೆ ಮಾಚಿತು. ತೇಜಸ್ವಿಯ ಒಂದೇ ಒಂದು ಪ್ರಹಸನದ ಮೂಲಕ ಬಿಜೆಪಿ ಹಲವಾರು ಲಾಭಗಳನ್ನು ಪಡೆದುಕೊಂಡಿತು.

ಮೊದಲಿಗೆ ಮುಸ್ಲಿಮರ ಮೇಲೆ ಬೆಡ್‌ ಬುಕಿಂಗ್‌ ದಂಧೆಯ ಆರೋಪವನ್ನು ಬಿಜೆಪಿ ಹೊರಿಸಿದರೂ, ಬಂಧನಕ್ಕೊಳಗಾದವರೆಲ್ಲಾ ಮುಸ್ಲಿಮೇತರರು ಎಂದು ತಿಳಿಯುತ್ತಿದ್ದಂತೆಯೇ ಈ ದಂಧೆಯ ಆರೋಪವನ್ನು ಕಾಂಗ್ರೆಸ್‌ ಮೇಲೆ ಹೊರಿಸಿತು. ಕಾಂಗ್ರೆಸ್‌ ನಾಯಕರೇ ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಬಿಜೆಪಿ ಐಟಿ ಸೆಲ್‌ ಪ್ರಚಾರ ಮಾಡಿತು.

ಆದರೆ ಇದೀಗ, ತನ್ನ ಉರುಳಿನಲ್ಲಿ ತನ್ನದೇ ಸಾಕು ಸಿಲುಕಿಕೊಂಡಂತ ಪರಿಸ್ಥಿತಿಗೆ ಬಿಜೆಪಿ ಬಂದಿದೆ. ಹಾಸಿಗೆ ದಂಧೆ ಪ್ರಕರಣದಲ್ಲಿ ತನ್ನ ಶಾಸಕನೇ, ಅದರಲ್ಲೂ ದಂಧೆ ಬಯಲಿಗೆಳೆಯುವ ನಾಟಕದ ತಂಡದಲ್ಲಿದ್ದ ಶಾಸಕನ ಹೆಸರೇ ಕೇಳಿ ಬರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ತೇಜಸ್ವಿ ಸೂರ್ಯಗಿಂತಲೂ ಜೋರಾಗಿ ಆಟೋಟೋಪ ಪ್ರದರ್ಶಿಸಿದ್ದ ಶಾಸಕ ಸತೀಶ್‌ ರೆಡ್ಡಿಯೇ ತನ್ನ ಬೆಂಬಲಿಗರ ಮೂಲಕ ಅಕ್ರಮವಾಗಿ ಬೆಡ್‌ ಬುಕಿಂಗ್‌ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬರುತ್ತಿವೆ. ಬಿಬಿಎಂಪಿ ಅಧಿಕಾರಿಗಳು ಪಾರದರ್ಶಕವಾಗಿ ಬೆಡ್ ಹಂಚಲು ಸತೀಶ್ ರೆಡ್ಡಿಯವರೇ ದೊಡ್ಡ ತೊಡಕಾಗಿದ್ದಾರೆ. ತಮ್ಮ ಬೆಂಬಲಿಗರ ಮೂಲಕ ಸತೀಶ್ ರೆಡ್ಡಿ ಬೆಡ್ ಹಂಚಿಕೆ ಮಾಡುತ್ತಿದ್ದರು. ಇದಕ್ಕೆ ಅಡ್ಡಿಯಾದರೆ, ವಾರ್ ರೂಂನವರ ಜೊತೆ ಜಗಳವಾಡುತ್ತಿದ್ದರು ಎನ್ನುವ ಮಾಹಿತಿ ಹೊರಬಂದಿದೆ.

ಅಷ್ಟೇ ಅಲ್ಲದೆ, ಬೊಮ್ಮನಹಳ್ಳಿ ವಲಯದ ಉಸ್ತುವಾರಿ ವಹಿಸಿಕೊಂಡಿರುವ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ಇತ್ತೀಚೆಗೆ ವಾರ್‌ ರೂಂಗೆ ಭೇಟಿ ನೀಡಿದಾಗ ಅನ್ಯ ವ್ಯಕ್ತಿಯೊಬ್ಬರು ಹಾಸಿಗೆಗಳನ್ನು ಬ್ಲಾಕ್‌ ಮಾಡಿಸುತ್ತಿರುವುದು ಕಂಡುಬಂದಿದೆ. ತಕ್ಷಣವೇ ಆ ವ್ಯಕ್ತಿಯನ್ನು ವಾರ್‌ ರೂಂನಿಂದ ಹೊರ ಹಾಕಲಾಗಿದೆ. ಈ ವಿಷಯ ತಿಳಿದ ಶಾಸಕರು ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ವಾರ್‌ ರೂಮ್‌ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ವಾರ್‌ ರೂಂನಲ್ಲಿ ತಮ್ಮವರು ಇರಲೇಬೇಕು ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಜತೆ ಜಗಳ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ʼವಿಜಯ ಕರ್ನಾಟಕʼ ವರದಿ ಮಾಡಿದೆ.

ಆದರೆ, ಯಥಾಪ್ರಕಾರ ಈ ಆರೋಪವನ್ನು ನಿರಾಕರಿಸಿದ ಸತೀಶ್‌ ರೆಡ್ಡಿ, ತನ್ನ ಕ್ಷೇತ್ರದ ಜನತೆಗೆ ಬೆಡ್‌ ಸಿಗುತ್ತಿರಲಿಲ್ಲ. ಆಂಬ್ಯುಲೆನ್ಸ್‌ ಇಲ್ಲದೆ ಎರಡು ದಿನಗಳ ಕಾಲ ಶವವನ್ನು ಮನೆಯಲ್ಲಿಯೇ ಇಡುವ ಪರಿಸ್ಥಿತಿ ಬಂದಿತ್ತು, ಹೀಗಾಗಿ, ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡುವಂತೆ ಪ್ರತಿಭಟನೆ ನಡೆಸಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ.  ಸಹಾಯವಾಣಿಗೆ ಸಂಪರ್ಕ ಸಿಗದ ಸಂದರ್ಭದಲ್ಲಿ ನನಗೆ ಮತ್ತು ಕಚೇರಿಗೆ ಕರೆ ಮಾಡಿ ಸೋಂಕಿತರ ಸಂಬಂಧಿಕರು ಹಾಸಿಗೆ ಒದಗಿಸುವಂತೆ ಮನವಿ ಮಾಡಿಕೊಂಡವರಿಗೆ ಆದ್ಯತೆ ಮೇಲೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ನಮ್ಮ ಕಚೇರಿ ಸಿಬ್ಬಂದಿಯು ವಾರ್‌ ರೂಂಗೆ ಹೋಗಿ ಕೋರಿಕೊಂಡಿದ್ದಾರೆ, ಆದರೆ, ಬೆಡ್‌ಗಳನ್ನು ಕಾಯ್ದಿರಿಸಿಕೊಂಡಿಲ್ಲ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.  ‌

ಇನ್ನೊಂದು ಮೂಲದ ಪ್ರಕಾರ, ತೇಜಸ್ವಿ ಸೂರ್ಯ ಹಾಗೂ ತಂಡ ನಡೆಸಿದ ಕಾರ್ಯಾಚರಣೆ ಸಂಪೂರ್ಣ ಪೂರ್ವ ಯೋಜಿತ. ತೇಜಸ್ವಿ ತಂಡ ಬೆಡ್‌ ಬುಕಿಂಗ್‌ ಮಾಡುವ ಮೊದಲೇ ʼಟೈಮ್ಸ್‌ ಆಫ್‌ ಇಂಡಿಯಾʼದಲ್ಲಿ ಬೆಡ್‌ ಬುಕಿಂಗ್‌ ದಂಧೆಯ ಕುರಿತಂತೆ ವರದಿ ಪ್ರಕಟವಾಗಿತ್ತು. ಬೆಡ್ ಬ್ಲಾಕಿಂಗ್ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರನ್ನು ಸಂಪರ್ಕಿಸಿ ಬಿಬಿಎಂಪಿ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆಯೇ ಎಂದು ವಿಚಾರಣೆ ನಡೆಸಿ ಎಂದು ಕಮಲ್ ಪಂಥ್ ಅವರಿಗೆ ತಿಳಿಸಿದ್ದರು. ಈ ಎಲ್ಲಾ ಬೆಳವಣಿಗೆಗಳು ತೇಜಸ್ವಿ ಸೂರ್ಯ ಬಿಬಿಎಂಪಿ ವಾರ್‌ ರೂಮ್‌ ಕಚೇರಿಗೆ ದಾಳಿ ನಡೆಸುವ ಮುನ್ನ ನಡೆದಿರುವುದು.!

ಹಾಗೆ ನೋಡುವುದಾದರೆ, ಬೆಡ್‌ ಬುಕಿಂಗ್‌ ದಂಧೆ ತೇಜಸ್ವಿ ಸೂರ್ಯ ಬಯಲಿಗೆಳೆಯದಿದ್ದರೂ ದೊಡ್ಡ ಸುದ್ದಿಯಾಗುತ್ತಿತ್ತು. ವಿಚಾರಣೆ ನಡೆದ ಬಳಿಕ ದಂಧೆಯ ಕರಿನೆರಳು ತನ್ನ ಕಾಲ ಬುಡಕ್ಕೂ ಬರಬಹುದೆಂಬ ಆತಂಕ ಬಿಜೆಪಿ ನಾಯಕರಲ್ಲೂ ಇತ್ತು. ಆ ಕಾರಣಕ್ಕೇ, ದಂಧೆ ಬಯಲಿಗೆಳೆಯುವ ಪ್ರಹಸನ ನಡೆಸಿ ಮುಸ್ಲಿಮರ ತಲೆಗೆ ಎಲ್ಲಾ ಕಳಂಕವನ್ನು ಹೊರಿಸಲಾಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಹೇಳಿದಂತೆ, ದೊಡ್ಡ ಮಿಕಗಳನ್ನು ಉಳಿಸಲು ಸಣ್ಣ ಮಿಕಗಳ ಬಲಿ ನಡೆಯಿತೆ ಎನ್ನುವುದು ವಿಚಾರಣೆಯಿಂದಷ್ಟೇ ತಿಳಿದು ಬರಬೇಕಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...