ಬಿಜೆಪಿಯು ಇವತ್ತು ತನ್ನ ಏಳನೇ ಪಟ್ಟಾಭಿಷೇಕೋತ್ಸವನ್ನು ಸರಳವಾಗಿ ಮತ್ತು ಭಿನ್ನವಾಗಿ ಆಚರಿಸಿಕೊಳ್ಳುತ್ತಿರುವಾಗ ಅದರ ಹಿಂದಿನ ವೈಭವಗಳೆಲ್ಲ ಇಷ್ಟು ಬೇಗ ಕಳೆದು ಹೋದುವೇ ಎಂದು ಅನ್ನಿಸಲು ಶುರುವಾಯಿತು. ಕೊರೋನಾದ ಸಂಕಟಗಳು, ಬಂಗಾಳ ಚುನಾವಣೆಯ ಸೋಲು, ಬಗೆಹರಿಯದ ರೈತರ ಸಮಸ್ಯೆ, ನೆಲ ಕಚ್ಚಿದ ಆರ್ಥಿಕತೆ, ಮೊದಲಾದುವು ಬಿಜೆಪಿಯನ್ನು ತೀವ್ರವಾದ ಒತ್ತಡಗಳಿಗೆ ಸಿಲುಕಿಸಿದೆ. ಅದರ ಟೂಲ್ಕಿಟ್ ಈಗ ಹಳತಾಗಿದೆ. ಟೂಲ್ ಕಿಟ್ ಒಳಗಿರುವ ʼದೇಶದ್ರೋಹಿ, ಪಾಕಿಸ್ತಾನಿ ಏಜೆಂಟ್, ಅರ್ಬನ್ ನಕ್ಸಲ್, ಆಂದೋಲನ ಜೀವಿ, ಕಮ್ಮಿ, ಗಂಜಿ ಗಿರಾಕಿ, ಮೊದಲಾದ ಶಸ್ತ್ರಾಸ್ತ್ರಗಳು ಮೊಂಡಾಗಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶವನ್ನು ನೀಡದಿರುವುದು ಅದರ ಚಿಂತೆಗೆ ಕಾರಣವಾಗಿದೆ.
ಕೋಮುವಾದವನ್ನು ಮಾತ್ರ ಮುಂದಿನ ನೂರು ವರ್ಷಗಳಿಗಾಗುವಷ್ಟು ಈ ನೆಲದಲ್ಲಿ ಬಿತ್ತಲಾಗಿದೆ. ಇದಿರಾಳಿಗಳ ಮಾನ ಕಳೆಯಲು ಯತೇಚ್ಛವಾಗಿ ನಕಲಿ ಸುದ್ದಿಗಳನ್ನು ಹಂಚಲು ದೇಶದ ಯುವಜನರಿಗೆ ಕಲಿಸಿಕೊಡಲಾಗಿದೆ. ಇದಕ್ಕೆ ಗಾಂಧೀಜಿ, ನೆಹರೂ ಅಂಥವರೇ ಬಲಿಯಾಗಿರುವಾಗ ಉಳಿದವರ ಪಾಡೇನು? ಆದರೆ ಯಾಕೋ ಇದೂ ಪಕ್ಷಕ್ಕೆ ಈಗ ಮುಜುಗರ ತರುತ್ತಿದೆಯಾದ್ದರಿಂದ ಟ್ವಿಟರ್, ಫೇಸ್ ಬುಕ್, ವಾಟ್ಸಪ್ ಗಳ ಜೊತೆ ಗುದ್ದಾಡುವ ಪರಿಸ್ಥಿತಿ ಅದಕ್ಕೆ ಒದಗಿಬಂದಿದೆ. ಪೊಸಿಟಿವ್ ಮೆಸೇಜುಗಳ ಬಗ್ಗೆ ಏಳು ವರ್ಷದ ಬಳಿಕ ಬಿಜೆಪಿ ಮಾತಾಡಲು ಸುರುಮಾಡಿದೆ ಎಂದರೆ ಅದರ ಮೇಲೆ ಎಷ್ಟು ಒತ್ತಡಗಳಿರಬಹುದು ಎಂದು ಯಾರಾದರೂ ಊಹಿಸಿಕೊಳ್ಳಬಹುದು.
ಆದರೂ ವ್ಯಕ್ತಿ ಪೂಜೆ ಎಗ್ಗಿಲ್ಲದೆ ಮುಂದುವರೆಯುತ್ತಿದೆ. ಅಂಬೇಡ್ಕರ್ ಒಮ್ಮೆ ಹೇಳಿದ್ದರು- ʼ ಧಾರ್ಮಿಕ ಪರಂಪರೆಯಲ್ಲಿ ಭಕ್ತಿಯು ಮನುಷ್ಯರಿಗೆ ಬಿಡುಗಡೆಯ ಹಾದಿಯನ್ನು ತೋರಿಸುತ್ತದೆ, ಆದರೆ ರಾಜಕಾರಣದಲ್ಲಿ ಅದು ನಾಯಕತ್ವದ ಆರಾಧನೆಗೆ ಎಡೆ ಮಾಡಿಕೊಟ್ಟು ಸಾಮಾಜಿಕ ಮೌಲ್ಯಗಳನ್ನು ಅಧಪತನಕ್ಕೆ ತಳ್ಳುತ್ತದೆ ಮತ್ತು ಸರ್ವಾಧಿಕಾರಕ್ಕೆ ಎಡೆಮಾಡಿಕೊಡುತ್ತದೆʼ ಅಂತ. 2019ರಲ್ಲಿ ಸ್ಮೃತಿ ಇರಾನಿಯವರು ʼ ಪ್ರಧಾನ ಸೇವಕರು ನಿವೃತ್ತರಾದ ದಿನ ತಾನೂ ರಾಜಕೀಯದಿಂದ ನಿವೃತ್ತನಾಗುತ್ತೇನೆʼ ಎಂದಿದ್ದರು. ಇದು ಇವತ್ತಿನ ರಾಜಕೀಯ ಭಕ್ತಿಯ ಒಂದು ಮಾದರಿ. ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಕೊಡುವ ಸರ್ಟಿಫಿಕೇಟುಗಳಲ್ಲಿ ಭಾರತದ ಬಾವುಟ ಅಥವಾ ರಾಷ್ಟ್ರ ಚಿಹ್ನೆ ಇರುವ ಬದಲು ಪ್ರಧಾನಿಗಳ ಭಾವಚಿತ್ರ ಕಾಣಿಸಿಕೊಂಡದ್ದು ಈ ಏಕವ್ಯಕ್ತಿ ಪೂಜೆಯ ಸಂಕೇತ.
ವಿಶ್ವದ ಯಾವ ದೇಶದಲ್ಲಿಯೂ ಹೀಗೆ ಮಾಡಲಾಗಿಲ್ಲ. ೨೦೧೪ರ ಬಿಜೆಪಿಯ ಮ್ಯಾನಿಫೆಸ್ಟೋದಲ್ಲಿ ಅದರ ೧೦ ನಾಯಕರ ಚಿತ್ರವಿತ್ತು. ೨೦೧೯ರ ಮ್ಯಾನಿಫೆಸ್ಟೋದಲ್ಲಿ ಮೋದಿಯವರ ಚಿತ್ರ ಮಾತ್ರ ಕಾಣಿಸಿದೆ. ಏರ್ ಇಂಡಿಯಾದ ಬೋರ್ಡಿಂಗ್ ಪಾಸ್ ನಿಂದ ಬೇಟಿ ಬಚಾವೋ ಆಂದೋಲನದವರೆಗೆ ಪ್ರಧಾನಿಗಳದೇ ಚಿತ್ರ. ಇದು ಬಿಜೆಪಿಯ ಇತರ ನಾಯಕರನ್ನು ಲೆಕ್ಕಕ್ಕಿಲ್ಲದಂತೆ ಮಾಡಿದೆ. ಸಾಮೂಹಿಕ ನಾಯಕತ್ವದ ಬಗ್ಗೆ ಹೆಚ್ಚು ಮಾತಾಡುವ ಆರ್ ಎಸ್ ಎಸ್ ಕೂಡಾ ಈ ವಿಷಯದಲ್ಲಿ ಮೌನವಾಗಿರಲೇ ಬೇಕಾದ ಒತ್ತಡಕ್ಕೆ ಸಿಲುಕಿಕೊಂಡಿದೆ. ಇಂಥ ರಾಜಕೀಯ ಭಕ್ತಿ ಪರಂಪರೆಯು ಇವತ್ತು ಭಾರತದ ನ್ಯಾಯ ವ್ಯವಸ್ಥೆ, ಚುನಾವಣಾ ವ್ಯವಸ್ಥೆ, ಉನ್ನತ ಶಿಕ್ಷಣ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ, ಫೆಡರಲ್ ವ್ಯವಸ್ಥೆ ಮತ್ತಿತರವುಗಳನ್ನು ರಾಜಕೀಯ ವ್ಯವಸ್ಥೆಯ ಅಡಿಯಾಳಾಗಿ ಮಾಡಿ, ಅವುಗಳ ಸ್ವಾಯತ್ತೆಯನ್ನು ಜನರು ಸಂಶಯದಿಂದ ನೋಡುವಂತೆ ಮಾಡಿದೆ. ಪ್ರಖ್ಯಾತ ಅರ್ಥಶಾಸ್ತ್ರಜ್ಞರನ್ನು ದೂರವಿಟ್ಟು, ನಡುರಾತ್ರಿಯಲ್ಲಿ ಘೋಷಿಸಿದ ಡಿ ಮಾನಿಟೈಸೇಷನ್ ಭಾರತದ ಅರ್ಥ ವ್ಯವಸ್ಥೆಯನ್ನೇ ಮುಳುಗಿಸಿತು.
ಕಳೆದ ೭೦ ವರ್ಷದ ಭಾರತವನ್ನು ದಿನನಿತ್ಯವೆಂಬಂತೆ ಅಪಹಾಸ್ಯ ಮಾಡುತ್ತಾ, ತನ್ನ ಪಕ್ಷದವರನ್ನು ಬಿಟ್ಟರೆ ಬೇರೆ ಎಲ್ಲರನ್ನೂ ದೂರ ಮಾಡುತ್ತಲೇ ಏಳು ಅಮೂಲ್ಯ ವರ್ಷಗಳನ್ನು ವ್ಯರ್ಥ ಮಾಡಿಕೊಂಡ ಬಿಜೆಪಿ ಸರಕಾರ ಇವತ್ತು ಒಂಟಿಯಾಗಿದೆ. ಈ ಹಂತದಲ್ಲಿ ನಿಜವಾಗಿ ಅದಕ್ಕೆ ಎದುರಾದ ಏಕೈಕ ಸಮಸ್ಯೆಯೆಂದರೆ ಕೊರೋನಾ. ಅದನ್ನು ಅದು ಸರಿಯಾಗಿ ನಿಭಾಯಿಸಲಿಲ್ಲ ಎಂಬುದಕ್ಕೆ ಗಂಗೆಯಲ್ಲಿ ತೇಲಿದ ಹೆಣಗಳೇ ಸಾಕ್ಷಿ. ಕೊರೋನಾಕ್ಕೂ ಹಿಂದಿನ ಸರಕಾರಗಳನ್ನು ಹೊಣೆ ಮಾಡುವ ಅದರ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಇದನ್ನೆಲ್ಲ ಗಮನಿಸಿ ಸರಕಾರವನ್ನು ಎಚ್ಚರಿಸಬೇಕಾಗಿದ್ದ ಬಹುತೇಕ ಮಾಧ್ಯಮಗಳು ಬೆನ್ನುಲುಬೇ ಕಳಕೊಂಡಿವೆ. ನಿರಂತರವಾಗಿ ಪ್ರಧಾನಿಗಳನ್ನು ಕೊಂಡಾಡುತ್ತಿದ್ದರೂ ಅವಕ್ಕೆ ಕಳೆದ ಏಳು ವರ್ಷಗಳಲ್ಲಿ ಒಮ್ಮೆಯೂ ಪ್ರಧಾನಿಗಳನ್ನು ಸಂದರ್ಶನ ಮಾಡಲಾಗಲೇ ಇಲ್ಲ. ರಾಷ್ಟ್ರವಾದೀ ಪತ್ರಕರ್ತರುಗಳಿಗೆ ಸ್ಥಳೀಯ ಸಮಸ್ಯೆಗಳು ತಿಳಿಯದೇ ಹೋದುವು.
ಕಳೆದ ಏಳು ವರ್ಷಗಳಲ್ಲಿ ಪ್ರಜಾಪ್ರಭುತ್ವದ ಭಾಷೆ ಕಳೆಗುಂದಿದೆ. ಇದು ಹೇಗೆ ಮತ್ತೆ ಉಜ್ವಲಗೊಳ್ಳುವುದೆಂಬುದನ್ನು ಕಾದು ನೋಡಬೇಕಾಗಿದೆ.
ಲೇಖಕರು -ಪುರುಷೋತ್ತಮ ಬಿಳಿಮಲೆ