ಕರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ತೀವ್ರತೆಯ ಸಂಕಷ್ಟಕ್ಕೆ ಇಡೀ ದೇಶವೇ ನಲುಗಿದೆ. ದೇಶಾದ್ಯಂತ ಹಾಸಿಗೆಗಳಿಲ್ಲದೆ, ಆಮ್ಲಜನಕ, ವೆಂಟಿಲೇಟರ್ ಇಲ್ಲದೆ ಸೋಮಿತರು ನರಳುತ್ತಿದ್ದರೆ, ಔಷಧ ಪ್ರಮಾಣದ ಕೊರತೆಯೂ ಎದುರಾಗಿದೆ. ಈ ಸಂಕಷ್ಟಕ್ಕೆ ತತ್ತರಿಸಿರುವ ಜನರಿಗೆ ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಮೂರನೇ ಅಲೆಯ ಎಚ್ಚರಿಕೆಯೂ ನೀಡಿದ್ದು, ಮಹಾರಾಷ್ಟ್ರ ಸರ್ಕಾರ ಅದರ ನಿರೀಕ್ಷೆಯಲ್ಲಿದೆ ಎಂದಿದ್ದಾರೆ.
ಕೋವಿಡ್ ಮೂರನೇ ಅಲೆಯೂ ಶೀಘ್ರದಲ್ಲೇ ಬರಲಿದೆ. ಆದರೆ, ಅದರ ತೀವ್ರತೆಯ ಪ್ರಮಾಣ ಎರಡನೇ ಅಲೆಯಷ್ಟು ಭೀಕರವಾಗಿರಲಿದೆಯೇ ಇಲ್ಲವೇ ಎಂದು ಈಗಲೇ ತೀರ್ಮಾನಿಸಲಾಗುವುದಿಲ್ಲ ಎಂದಿದ್ದಾರೆ. ಅಲ್ಲದೆ, ಲಸಿಕೆ ಈಗ ಪ್ರಯೋಜನಕ್ಕೆ ಬಾರದಿದ್ದರೂ, ಮುಂದಿನ ತಯಾರಿಗೆ ಅದು ಉಪಯೋಗಕ್ಕೆ ಬರಬಹುದು ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ತಯಾರಿಸಿದ ಕಾರ್ಯಪಡೆಯ ಆಧಾರದ ಮೇಲೆ ಪ್ರಸ್ತುತ ಪ್ರತಿ ನಿರ್ಧಾರವೂ ತೆಗೆಯಲಾಗುತ್ತಿದೆ. ವೈದ್ಯಕೀಯ ಮತ್ತು ವೈಜ್ಞಾನಿಕ ಸಂಗತಿಗಳ ಆಧಾರದ ಮೇಲೆಯೇ ಹೊರತು ರಾಜಕೀಯ ಸಂಗತಿಗಳ ಆಧಾರದ ಮೇಲೆ ಅಲ್ಲ ಎಂದು ಅವರು ಹೇಳಿದ್ದಾರೆ.
ನಾವು ಈಗ ಮೂರನೇ ಅಲೆಯ ನಿರೀಕ್ಷೆಯಲ್ಲಿದ್ದೇವೆ. 5 ಲಕ್ಷ ಹಾಸಿಗೆಗಳನ್ನು ತಯಾರಿಸಿಕೊಂಡಿದ್ದೇವೆ. ಅದರಲ್ಲಿ 70% ಆಮ್ಲಜನಕಯುಕ್ತವಾಗಿರುವುದು ಎಂದು ಠಾಕ್ರೆ ತಿಳಿಸಿದ್ದಾರೆ.
ಆರೋಗ್ಯ ವಲಯದ ಸೌಲಭ್ಯಗಳ ಕೊರತೆ ಕುರಿತು ಜನರು ಭಯಭೀತಿಗೊಳ್ಳಬಾರದು. ಈ ವೈರಸ್ ರೂಪಾಂತರಗೊಂಡಿದೆ. ಯಾರೋ ಒಬ್ಬರ ತಪ್ಪು ನಿರ್ದೇಶನಗಳನ್ನು ಪಡೆಯುವ ಬದಲು ವೈದ್ಯರ ನಿರ್ದೇಶನಗಳನ್ನು ಪಡೆಯಿರಿ ಎಂದು ಜನರಿಗೆ ಕರೆ ನೀಡಿದ್ದಾರೆ.
ತಂತ್ರಜ್ಞಾನ ಆಧಾರಿತ ಊಹೆಯ ಪ್ರಕಾರ 10-15 ದಿನಗಳಲ್ಲಿ ಸಾಂಕ್ರಾಮಿಕ ಹರಡುವಿಕೆಯ ಸರಪಳಿ ಮುರಿಯಬಹುದು ಎಂದು ಅವರು ಹೇಳಿದ್ದಾರೆ.





