ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಹಿನ್ನಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ಚಾಟಿಬೀಸಿದ್ದಾರೆ.
ಕೋವಿಡ್ನ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ವೈಜ್ಞಾನಿಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ನಿಯಮ ಮಾರ್ಗಸೂಚಿ ನಿರ್ಬಂಧ ಅಂತಹ ಉಪದೇಶವನ್ನು ನೀಡುತ್ತಿರುವ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕರೋನಾದಿಂದ ರಕ್ಷಿಸಿಕೊಳ್ಳಲು ಜನತೆಗೆ ನಿಯಮ-ನಿರ್ಬಂಧ-ಮಾರ್ಗಸೂಚಿಗಳ ಉಪದೇಶ ಮಾಡುವುದರ ಜೊತೆಗೆ, ಕರೋನಾ ಎದುರಿಸಲು ಸರ್ಕಾರ ಏನು ಮಾಡಿದೆ ಎನ್ನುವುದನ್ನು ಜನತೆಗೆ ತಿಳಿಸಲು ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ಬರೆದುಕೊಂಡಿದ್ದಾರೆ.

ಕರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಮಾರಣಾಂತಿಕವಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಯಲಿಕ್ಕಾಗದ ರಾಜ್ಯ ಸರ್ಕಾರ ಜನತೆಯ ಮುಂದೆ ಬೆತ್ತಲಾಗುತ್ತಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ವಿಫಲ ಪ್ರಯತ್ನದಲ್ಲಿ ತೊಡಗಿದೆ ಎಂದಿದ್ದಾರೆ.
ಕರೋನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕ ತೆರುವ ಶಕ್ತಿ ಜನರಿಗೆ ಇಲ್ಲ. ಆಮ್ಲಜನಕದ ದಾಸ್ತಾನಿಲ್ಲ, ರೆಮಿಡಿಸಿವಿರ್ ನಂತಹ ಜೀವರಕ್ಷಕ ಔಷಧಿಯಕೊರತೆ ಇದೆ. ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದಾರೆ, ರಾಜ್ಯ ಸರ್ಕಾರ ಐ.ಸಿ.ಯು ನಲ್ಲಿದೆ ಎಂದು ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.

ವರ್ಷದ ಹಿಂದೆ ಮೊದಲ ಬಾರಿ ಕರೋನಾ ದಾಳಿ ಇಟ್ಟಾಗ ಅದು ಅನಿರೀಕ್ಷಿತ ಆಘಾತ. ಒಂದು ವರ್ಷದ ಅನುಭವದಿಂದ ರಾಜ್ಯ ಸರ್ಕಾರ ಕರೋನಾ ಎದುರಿಸಲು ತನ್ನನ್ನು ಇನ್ನಷ್ಟು ಸಜ್ಜುಗೊಳಿಸಬೇಕಾಗಿತ್ತು. ಕರೋನಾವನ್ನೂ ತನ್ನ ಭ್ರಷ್ಟತೆಗೆ ಬಳಸಿಕೊಂಡ ರಾಜ್ಯ ಬಿಜೆಪಿ ಸರ್ಕಾರ ಈಗ ಕೈಚೆಲ್ಲಿ ಕೂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರೇ ಬಹಿರಂಗವಾಗಿ ಉಲ್ಲಂಘಿಸುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಸಚಿವರ ಮೇಲಾಗಲಿ, ಶಾಸಕರ ಮೇಲಾಗಲಿ ನಿಯಂತ್ರಣವೇ ಇಲ್ಲದೆ ನಿರ್ಮಾಣಗೊಂಡಿರುವ ಅರಾಜಕತೆಯೇ ಇಂದಿನ ದುಸ್ಥಿತಿಗೆ ಕಾರಣ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.





