ಗಣಿಗಾರಿಕೆ ಕಂಪನಿ ಅದಾನಿ ಅವರು ಕಲ್ಲಿದ್ದಲ ಗಣಿಗಾರಿಕಾ ವಿರೋಧಿ ಹೋರಾಟಗಾರರೊಬ್ಬರಿಗೆ 2,000 ಡಾಲರ್ ಪಾವತಿಸಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
53 ರ ಹರೆಯದ ಸ್ಕಾಟ್ ಡೈನ್ಸ್ ವಿರುದ್ಧ ಅದಾನಿ ಕಂಪೆನಿಯು ‘ಕಲ್ಲೆಸೆದ’ ಮತ್ತು ಅವರ ವಾಹನಗಳಿಗೆ ‘ಒದ್ದ’ ಆರೋಪ ಹೊರಿಸಿತ್ತು.
37,000 ಕ್ಕೂ ಹೆಚ್ಚು ಅನುಯಾಯಿಗಳಿರುವ ಅದಾನಿ ಕಂಪೆನಿಯ ಫೇಸ್ಬುಕ್ ಪೇಜ್ನಲ್ಲಿ ಡೈನ್ಸ್ ಮತ್ತವರು ಕಾರ್ಯ ನಿರ್ವಹಿಸುತ್ತಿರುವ ‘ಫ್ರಂಟ್ಲೈನ್ ಆಕ್ಷನ್ ಆನ್ ಕೋಲ್ ಗ್ರೂಪ್’ ಬಗ್ಗೆ ಸುಳ್ಳು ವದಂತಿ ಹರಡಲಾಗಿತ್ತು.
ಅದಾನಿ ಕಂಪೆನಿಯು “ಅಕ್ಟೋಬರ್ 8, 2020 ರಂದು, ನಾವು ಸ್ಕಾಟ್ ಡೈನ್ಸ್ ಬಗ್ಗೆ ಒಂದು ಪೋಸ್ಟ್ ಅನ್ನು ಪ್ರಕಟಿಸಿದ್ದೇವೆ, ಅದರಲ್ಲಿ ಅವರು ಅದಾನಿ ಆಸ್ತಿಗೆ ಹಾನಿ ಮಾಡಿದ್ದಾರೆ ಎಂಬ ಆರೋಪವಿದೆ. ಈ ಆರೋಪಗಳು ತಪ್ಪಾಗಿದ್ದು, ಪೋಸ್ಟ್ ಅನ್ನು ತೆಗೆದುಹಾಕಲಾಗಿದೆ” ಎಂದು ಕ್ಷಮೆ ಯಾಚಿಸಿದೆ. “ಅದಾನಿ ಆಸ್ಟ್ರೇಲಿಯಾವು ಈ ಪೋಸ್ಟ್ನಿಂದ ಉಂಟಾದ ಯಾವುದೇ ನೋವು ಅಥವಾ ಯಾತನೆಗಾಗಿ ಡೈನ್ಸ್ ಅವರಲ್ಲಿ ಕ್ಷಮೆಯಾಚಿಸುತ್ತದೆ.” ಎಂದು ಪೋಸ್ಟ್ ಮಾಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕ್ವೀನ್ಸ್ಲ್ಯಾಂಡ್ನ ಗೆಲಿಲೀ ಜಲಾನಯನ ಪ್ರದೇಶದಲ್ಲಿ ವಿದ್ಯುತ್ ಕೇಂದ್ರಗಳಿಗೆ ರಫ್ತು ಮಾಡಲು ಕಲ್ಲಿದ್ದಲನ್ನು ಅದಾನಿ ಕಂಪೆನಿಯು ಅಗೆಯುತ್ತಿದೆ. ಅಲ್ಲೇ ಹತ್ತಿರದಲ್ಲಿರುವ ಪ್ರತಿಭಟನಾ ಶಿಬಿರದಲ್ಲಿ ಮೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಡೈನ್ಸ್ ನೆಲೆಸಿದ್ದಾರೆ.
“ಕಲ್ಲಿದ್ದಲ ಗಣಿಕಾರಿಕಾ ವಿರೋಧಿ ಹೋರಾಟಗಾರರು ನಮ್ಮ ಕೆಲಸಗಾರರ ಕಾರಿನ ಮೇಲೆ ಕಲ್ಲೆಸೆದಿದ್ದಾರೆ ಮತ್ತು ಕಾರಿನ ಬಾಗಿಲುಗಳನ್ನು ಪುಡಿ ಮಾಡಿದ್ದಾರೆ” ಎಂದು ಮೂಲ ಫೇಸ್ಬುಕ್ ಪೋಸ್ಟಿನ ಸ್ಕ್ರೀನ್ಶಾಟ್ಗಳನ್ನು ಉಲ್ಲೇಖಿಸಿ ‘ಗಾರ್ಡಿಯನ್ ಆಸ್ಟ್ರೇಲಿಯಾ’ ವರದಿ ಮಾಡಿದೆ. ಸ್ಕ್ರೀನ್ ಶಾಟ್ಗಳಲ್ಲಿ ಸ್ಪಷ್ಟವಾಗಿ ಹೋರಾಟಗಾರರಿಗೆ ಬೆದರಿಕೆ ಒಡ್ಡಿರುವುದು ಗೋಚರಿಸುತ್ತವೆ.
ಪೋಸ್ಟ್ನಲ್ಲಿ ಹೆಸರಿಸಲಾಗಿರುವ ಏಕೈಕ ವ್ಯಕ್ತಿಯಾಗಿರುವ ಡೈನ್ಸ್ “ನಾವು ಅಹಿಂಸಾತ್ಮಕ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ. ಹಾಗಿರುವಾಗ ಇಂತಹ ಆರೋಪಗಳನ್ನು ಕೇಳಬೇಕಾಗಿ ಬಂದಾಗ ನೋವಾಗುತ್ತದೆ” ಎಂದು ‘ಗಾರ್ಡಿಯನ್ ಆಸ್ಟ್ರೇಲಿಯಾ’ಕ್ಕೆ ಹೇಳಿಕೆ ನೀಡಿದ್ದಾರೆ.
ಕ್ಷಮೆಯಾಚಿಸುವಂತೆ ಮತ್ತು ಫೇಸ್ಬುಕ್ ಪೋಸ್ಟ್ ಅನ್ನು ತೆಗೆದುಹಾಕುವಂತೆ ಕೋರಿ ಡೇನ್ಸ್ ಅದಾನಿ ಕಂಪೆನಿಗೆ ಪತ್ರ ಬರೆದಿದ್ದರು. ಡಿಸೆಂಬರ್ 23 ರಂದು ಅದಾನಿಯು ಡೇನ್ಸ್ ಅವರಿಗೆ ವೆಚ್ಚಗಳಿಗೆ ಪರಿಹಾರ್ಥವಾಗಿ 2,000 ಡಾಲರ್ ಪಾವತಿಸಲು ಮತ್ತು ಮೂಲ ಪೋಸ್ಟ್ ಅನ್ನು ಅಳಿಸಿ ಕ್ಷಮೆಯಾಚಿಸಲು ಒಪ್ಪಿಕೊಂಡಿತು.
ಅದಾನಿಯು ಡಿಸೆಂಬರ್ 25, 2020ರಂದು 100 ಕ್ಕಿಂತ ಕಡಿಮೆ ಅನುಯಾಯಿಗಳನ್ನು ಹೊಂದಿರುವ ಬೇರೊಂದು ಫೇಸ್ಬುಕ್ ಪುಟದಲ್ಲಿ ಕ್ಷಮೆಯಾಚನೆಯ ಪೋಸ್ಟ್ ಮಾಡಿದ್ದರು. ಆದರೆ 37,000 ಅನುಯಾಯಿಗಳನ್ನು ಹೊಂದಿರುವ ಮೂಲ ಪುಟದಲ್ಲಿ ಆರೋಪಗಳನ್ನು ಮಾಡಲಾಗಿತ್ತು.
ಈ ಬಗ್ಗೆ ಅದಾನಿಯ ಅಧಿಕಾರಿಗಳಿಗೆ ಡೈನ್ಸ್ ಮತ್ತೆ ಪತ್ರ ಬರೆದು ದೂರು ಸಲ್ಲಿಸಿದ ನಂತರ, ಜನವರಿ 28, 2021 ರಂದು ಮೂಲ ಪುಟದಲ್ಲಿ ಕ್ಷಮೆ ಯಾಚನೆಯ ಪೋಸ್ಟ್ ಅಪ್ಲೋಡ್ ಮಾಡಲಾಯಿತು.
ಪರಿಹಾರದ ಹಣವು ಅದಾನಿ ಕಂಪೆನಿಯ ವಿರುದ್ಧ ನಡೆಯುತ್ತಿರುವ ಅಭಿಯಾನದಲ್ಲಿ ಬಳಕೆಯಾಗಲಿದೆ ಎಂದು ಡೈನ್ಸ್ ಹೇಳುತ್ತಾರೆ. “ಅದಾನಿಯನ್ನು ತಡೆಯುವ ಅಭಿಯಾನವು ಬಹಳ ಮುಖ್ಯ” ಎಂದು ಅಭಿಪ್ರಾಯ ಪಡುವ ಅವರು, “ಜನರು ಇದು ಕೇವಲ ಒಂದು ಗಣಿ ಎಂದು ಹೇಳುತ್ತಾರೆ, ಆದರೆ ಇದು ಗಲಿಲೀ ಜಲಾನಯನ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಗಣಿಗಳನ್ನು ಆರಂಭಿಸುವುದರ ಬಗೆಗಿನ ಒಪ್ಪಂದವೂ ಹೌದು” ಎನ್ನುತ್ತಾರೆ. “ಹವಾಮಾನ ಬದಲಾವಣೆಯ ಬಗ್ಗೆ ನಮಗೆ ತಿಳಿದಿರುವಾಗ ಜಲಾನಯನ ಪ್ರದೇಶದಲ್ಲಿ ಸಂಪೂರ್ಣವಾಗಿ ಹೊಸ ಕಲ್ಲಿದ್ದಲ ಗಣಿಕಾರಿಕೆ ತೆರೆಯುವುದು ಮೂರ್ಖತನವಾಗಿದೆ” ಎನ್ನುತ್ತಾರೆ ಡೈನ್ಸ್.
ಅದಾನಿಯ ವಿರುದ್ಧ ಈಗ ಬ್ರಿಸ್ಬೇನ್ ಮೂಲದ ಹೋರಾಟಗಾರ ಬೆನ್ ಪೆನ್ನಿಂಗ್ಸ್ ಕೂಡ ಮೊಕದ್ದಮೆ ಹೂಡಿದ್ದಾರೆ. ಭಾರತ ಮೂಲದ ಕಂಪನಿಯು ಪೆನ್ನಿಂಗ್ಸ್ ವಿರುದ್ಧದ ಪ್ರಕರಣದ ಭಾಗವಾಗಿ, ಅವರ ಕುಟುಂಬದ ಛಾಯಾಚಿತ್ರಗಳನ್ನು ತೆಗೆಯಲು ಖಾಸಗಿ ತನಿಖಾಧಿಕಾರಿಗಳನ್ನೂ ನೇಮಿಸಿದ ಬಗ್ಗೆ ಆರೋಪಗಳಿವೆ.
ಫೇಸ್ಬುಕ್ ಪುಟದಲ್ಲಿ ಮಾಡಿದ ಕ್ಷಮೆಯಾಚನೆ, ಮೂಲ ಆರೋಪ ಮತ್ತು ಬೆದರಿಕೆಯೊಡ್ಡುವ ಕಾಮೆಂಟ್ಗಳ ಬಗ್ಗೆ ‘ಗಾರ್ಡಿಯನ್ ಆಸ್ಟ್ರೇಲಿಯಾ’ ಅದಾನಿಗೆ ಪ್ರತಿಕ್ರಿಯೆ ಗೆ ಒತ್ತಾಯಿಸಿದಾಗ ಅದಾನಿ ವಕ್ತಾರರು “ಅದಾನಿ ಡೈನ್ಸ್ ಬಗ್ಗೆ ಮಾಡಿರುವ ಪೋಸ್ಟ್ನಲ್ಲಿರುವ ಆರೋಪಗಳು ತಪ್ಪಾಗಿದೆ, ಮತ್ತು ಅದರಲ್ಲಿನ ತಪ್ಪುಗಳ ಬಗ್ಗೆ ಅರಿವಾದ ನಂತರ ಅದಾನಿ ಆ ಪೋಸ್ಟ್ ಅನ್ನು ತೆಗೆದುಹಾಕಿದೆ ಮತ್ತು ಡೈನ್ಸ್ ಅವರಲ್ಲಿ ಕ್ಷಮೆಯಾಚನೆ ಮಾಡಿದೆ ” ಎಂದು ಪ್ರತಿಕ್ರಿಯಿಸಿದ್ದಾರೆ.